ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su From So Movie: ಭಾಷೆ, ರಾಜ್ಯ, ದೇಶ ಗಡಿ ದಾಟುತ್ತಿದ್ದಾಳೆ ಸುಲೋಚನಾ; ವಿದೇಶದಲ್ಲಿ ʼಸು ಫ್ರಮ್‌ ಸೋʼ ರಿಲೀಸ್‌

J.P. Tuminad: ಸೋತು ಸೊರಗಿದ್ದ ಸ್ಯಾಂಡಲವುಡ್‌ನಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳಿದೆ. ರಂಗಭೂಮಿ ಹಿನ್ನೆಲೆಯ ಜೆ.ಪಿ. ತುಮಿನಾಡ್‌ ಚೊಚ್ಚಲ ನಿರ್ದೇಶನದ ಕನ್ನಡ ಚಿತ್ರ ʼಸು ಫ್ರಮ್‌ ಸೋʼ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುವ ಜತೆಗೆ ಪರಭಾಷೆ, ವಿದೇಶಗಳಲ್ಲಿಯೂ ರಿಲೀಸ್‌ ಆಗುವತ್ತ ಹೆಜ್ಜೆ ಇಟ್ಟಿದೆ.

ವಿದೇಶದಲ್ಲೂ ಮೋಡಿ ಮಾಡಲು ಸಜ್ಜಾದ ʼಸು ಫ್ರಮ್‌ ಸೋʼ ರಿಲೀಸ್‌

Ramesh B Ramesh B Jul 29, 2025 2:26 PM

ಬೆಂಗಳೂರು: ರಾಜ್‌ ಬಿ. ಶೆಟ್ಟಿ, ಶಶಿಧರ್‌ ಶೆಟ್ಟಿ, ರವಿ ರೈ ನಿರ್ಮಾಣದ, ಜೆ.ಪಿ. ತುಮಿನಾಡ್‌ (J.P. Tuminad) ನಿರ್ದೇಶನದ ಚೊಚ್ಚಲ ಕನ್ನಡ ಚಿತ್ರ ʼಸು ಫ್ರಮ್‌ ಸೋʼ (Su From So Movie) ಸದ್ಯ ಟಾಕ್‌ ಆಫ್‌ ಟೌನ್‌ ಆಗಿದೆ. ಸಿದ್ಧಸೂತ್ರಗಳನ್ನೆಲ್ಲ ಗಾಳಿಗೆ ತೂರಿ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದ ಈ ಚಿತ್ರ ಇದೀಗ ಪರ ಭಾಷೆ, ಪರ ರಾಜ್ಯದ ಜತೆಗೆ ವಿದೇಶಕ್ಕೂ ತನ್ನ ಜೈತ್ರಯಾತ್ರೆ ವಿಸ್ತರಿಸಿದೆ. ಹೌದು, ಈ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ವಿದೇಶದಿಂದಲೂ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಚಿತ್ರತಂಡ ವಿದೇಶದಲ್ಲಿಯೂ ರಿಲೀಸ್‌ ಮಾಡುವುದಾಗಿ ಘೋಷಿಸಿದೆ.

ಯಾವುದೇ ಸ್ಟಾರ್‌ಗಳಿಲ್ಲದೆ, ಅಬ್ಬರದ ಪ್ರಚಾರವಲ್ಲದೆ, ಕಡಿಮೆ ಬಜೆಟ್‌ನಲ್ಲಿ ತಯಾರಾದ ʼಸು ಫ್ರಮ್‌ ಸೋʼ ವೀಕೆಂಡ್‌ ಮಾತ್ರದ ವಾರದ ದಿನಗಳಲ್ಲಿಯೂ ಉತ್ತಮ ಕಲೆಕ್ಷನ್‌ ಮಾಡುತ್ತಿದೆ. ಈಗಾಗಲೇ 10 ಕೋಟಿ ರೂ.ಗಿಂತ ಅಧಿಕ ದೋಚಿಕೊಂಡಿರುವ ಸಿನಿಮಾ ವಿದೇಶದಲ್ಲಿಯೂ ಮೋಡಿ ಮಾಡಲು ಮುಂದಾಗಿದೆ.

ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಮ್ಯಾಜಿಕ್‌; ಗೆಲುವಿಗೆ ಕಾರಣವೇನು?

ಎಲ್ಲೆಲ್ಲ ರಿಲೀಸ್‌?

ಜರ್ಮನಿ, ಇಂಗ್ಲೆಂಡ್‌, ಗಲ್ಫ್‌ನಲ್ಲಿಯೂ ಸಿನಿಮಾ ತೆರೆಗೆ ಬರಲಿದೆ. ಜರ್ಮನಿಯಲ್ಲಿ ಆಗಸ್ಟ್‌ 1ರಿಂದ ಪ್ರದರ್ಶನ ಕಾಣಲಿದ್ದು, ರಾಜ್‌ ಬಿ. ಶೆಟ್ಟಿ ಈಗಾಗಲೇ ಥಿಯೇಟರ್‌ ಲಿಸ್ಟ್‌ ಹಂಚಿಕೊಂಡಿದ್ದಾರೆ. ಜರ್ಮನಿಯ ಬರೋಬ್ಬರಿ 17 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿ. ಇಂಗೆಂಡ್‌ನಲ್ಲಿ ಯಾವಾಗ, ಎಲ್ಲಿ ರಿಲೀಸ್‌ ಆಗಲಿದೆ ಎನ್ನುವ ವಿವರ ಇನ್ನೂ ಹೊರಬಿದ್ದಿಲ್ಲ.

ಮಲಯಾಳಂ ಹಿಂದಿ ಬಳಿಕ ತೆಲುಗಿಗೂ ಡಬ್‌?

ʼಸು ಫ್ರಮ್‌ ಸೋʼ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದರಿಂದ ಪರಭಾಷಿಕರೂ ಆಕರ್ಷಿತರಾಗಿದ್ದಾರೆ. ಮಲಯಾಳಂ ಆವೃತ್ತಿ ಆಗಸ್ಟ್‌ 1ರಂದು ತೆರೆಗೆ ಬರಲಿದ್ದು, ಹಿಂದಿಗೂ ಡಬ್‌ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಮಧ್ಯೆ ಚಿತ್ರದ ತೆಲುಗು ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಬಂದಿದೆ. ಕೆಲವು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಚಿತ್ರದ ಡಬ್ಬಿಂಗ್ ಹಕ್ಕಿಗೆ ಬೇಡಿಕೆ ಇಟ್ಟಿವೆ ಎನ್ನಲಾಗಿದೆ. ಜತೆಗೆ ತಮಿಳಿನ ಕೆಲ ಸಂಸ್ಥೆಗಳು ಸಿನಿಮಾದ ರಿಮೇಕ್ ಹಕ್ಕಿಗೆ ಮುಂದೆ ಬಂದಿವೆಯಂತೆ.

ಸೋಮವಾರವೂ ಹೌಸ್‌ಫುಲ್‌

ವಿಶೇಷ ಎಂದರೆ ಭಾನುವಾರದಂತೆ ಸೋಮವಾರವೂ ʼಸು ಫ್ರಮ್‌ ಸೋʼ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಅಲ್ಲದೆ ಭಾನುವಾರಕ್ಕಿಂತ ಸೋಮವಾರ ಹೆಚ್ಚು ಕಲೆಕ್ಷನ್‌ ಮಾಡಿದೆ. ಮೂಲಗಳ ಪ್ರಕಾರ ಮೊದಲ ಭಾನುವಾರವಾದ ಜುಲೈ 27ರಂದು 3.50 ಕೋಟಿ ರೂ. ಗಳಿಸಿದ್ದರೆ ಸೋಮವಾರ 3.55 ಕೋಟಿ ಬಾಚಿಕೊಂಡಿದೆ. ಇನ್ನು ಮಂಗಳವಾರ ನಾಗರ ಪಂಚಮಿ ಹಿನ್ನೆಲೆಯಲ್ಲಿ ಕಲೆಕ್ಷನ್‌ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ವಾರದ ಮಧ್ಯದಲ್ಲಿಯೂ ಹಲವರು ಟಿಕೆಟ್‌ ಸಿಗದೆ ಒದ್ದಾಡುತ್ತಿರುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ʼಸು ಫ್ರಮ್‌ ಸೋʼ ಎಂದರೆ ಸುಲೋಚನಾ ಫ್ರಮ್‌ ಸೋಮೇಶ್ವರ. ಕರಾವಳಿಯ ಹಳ್ಳಿಯೊಂದರಲ್ಲಿ ನಡೆಯುವ ಘಟನೆಯನ್ನು ಬಹಳ ನೈಜವಾಗಿ ಜೆ.ಪಿ. ತುಮಿನಾಡ್‌ ತೆರೆಮೇಲೆ ತಂದಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ. ಜೆ.ಪಿ. ತುಮಿನಾಡ್ ಜತೆಗೆ ರಾಜ್‌ ಬಿ. ಶೆಟ್ಟಿ, ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್‌, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.