Shrawan Kumar: ಬಿಹಾರ ಸಿಎಂ ನಿತೀಶ್ ತವರಲ್ಲಿ ಸಚಿವ, ಶಾಸಕನನ್ನು ಅಟ್ಟಾಡಿಸಿದ ಗ್ರಾಮಸ್ಥರು; ಜೀವ ಉಳಿಸಲು 1 ಕಿ.ಮೀ. ಓಡಿದ ಜನಪ್ರತಿನಿಧಿಗಳು
Viral Video: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತವರು ಜಿಲ್ಲೆ ನಳಂದದಲ್ಲಿ ಸಚಿವ ಶ್ರವಣ್ ಕುಮಾರ್ ಮತ್ತು ಶಾಸಕ ಕೃಷ್ಣ ಮುರಾರಿ ಶರಣ್ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಲು ಮುಂದಾದ ಘಟನೆ ಆಗಸ್ಟ್ 27ರಂದು ನಡೆದಿದೆ. ಇಬ್ಬರೂ ಸುಮಾರು 1 ಕಿ.ಮೀ. ಓಡಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಸದ್ಯ ಘಟನೆಯ ವಿಡೊಯೊ ವೈರಲ್ ಆಗಿದೆ.


ಪಾಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆಯ ಕಣ ರಂಗೇರಿದೆ. ಈ ಮಧ್ಯೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತವರು ಜಿಲ್ಲೆ ನಳಂದದಲ್ಲಿ ಸಚಿವ ಶ್ರವಣ್ ಕುಮಾರ್ (Shrawan Kumar) ಮತ್ತು ಶಾಸಕ ಕೃಷ್ಣ ಮುರಾರಿ ಶರಣ್ (Krishna Murari Sharan) ಮೇಲೆ ಸಾರ್ವಜನಿಕರು ಹಲ್ಲೆ ನಡೆಸಲು ಮುಂದಾದ ಘಟನೆ ಆಗಸ್ಟ್ 27ರಂದು ನಡೆದಿದೆ. ಬಳಿಕ ಇಬ್ಬರೂ ಸುಮಾರು 1 ಕಿ.ಮೀ. ಓಡಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಲು ತೆರಳಿದಾಗ ಉದ್ರಕ್ತರಾದ ಜನರ ಗುಂಪು ಹಲ್ಲೆ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಆಗಸ್ಟ್ 23ರಂದು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಹೋಗುತ್ತಿದ್ದ ಭಕ್ತರನ್ನೊಳಗೊಂಡ ಆಟೋರಿಕ್ಷಾಕ್ಕೆ ನಳಂದದಲ್ಲಿ ಟ್ರಕ್ ಡಿಕ್ಕಿ ಹೊಡೆದು 8 ಮಹಿಳೆಯರು ಸೇರಿದಂತೆ ಕನಿಷ್ಠ 9 ಜನರು ಮೃತಪಟ್ಟಿದ್ದರು. ಈ ಸಂತ್ರಸ್ತರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಜೋಗಿಪುರ ಮಲವಾನ್ ಗ್ರಾಮಕ್ಕೆ ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಮತ್ತು ಶಾಸಕ ಕೃಷ್ಣ ಮುರಾರಿ ತೆರಳಿದ್ದರು.
ವೈರಲ್ ವಿಡಿಯೊ ಇಲ್ಲಿದೆ:
बिहार: नालंदा में मंत्री श्रवण कुमार पर ग्रामीणों ने हमला किया, सुरक्षाकर्मी घायल
— बाबा टुल्लू जी (@abhaysingh147) August 27, 2025
◆ मंत्री जी को भीड़ ने दौड़ाया, धोती पकड़कर भागते दिखे श्रवण कुमार #Nalanda #NitishKumar #ShrawanKumar || Shrawan Kumar Bihar Minister pic.twitter.com/7fZgwpbbxe
ಈ ವೇಳೆ ಗ್ರಾಮಸ್ಥರು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಧನ ನೀಡುವಂತೆ ಆಗ್ರಹಿಸಿದರು. ಇದನ್ನು ನಂತರ ಚರ್ಚಿಸಲಾಗುವುದು ಎಂದು ಸಚಿವರು ಉತ್ತರಿಸಿದಾಗ, ಸ್ಥಳೀಯರ ಕೋಪ ಭುಗಿಲೆದ್ದಿತು. ಬಿದಿರಿನ ಕೋಲು ಮತ್ತು ಕಲ್ಲುಗಳನ್ನು ಹಿಡಿದು ನೂರಾರು ಗ್ರಾಮಸ್ಥರು ಸಚಿವರು ಮತ್ತು ಶಾಸಕರನ್ನು ಸುಮಾರು 1 ಕಿ.ಮೀ. ದೂರ ಬೆನ್ನಟ್ಟಿದರು. ಈ ವೇಳೆ ಸಚಿವರು 3 ಬಾರಿ ಕಾರುಗಳನ್ನು ಬದಲಾಯಿಸಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮಸ್ಥರಿಂದ ತಪ್ಪಿಸಿಕೊಳ್ಳಲು ಸಚಿವ ಮತ್ತು ಶಾಸಕ ಓಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
माननीय मुख्यमंत्री नीतीश जी के गृह जिले में उनके दुलरुआ मंत्री श्रवण कुमार को ग्रामीणों ने दौड़ा-दौड़ा कर के भगा दिया। इसमें भी पुलिस कहेगी कि भाड़े पर उपद्रवीं भी बुलाए गए थे!! pic.twitter.com/79x8ZhmIQT
— Amit Vikram (@amitkvikram) August 27, 2025
ಘಟನೆಯಲ್ಲಿ ಸಚಿವ ಶ್ರವಣ್ ಕುಮಾರ್ ಮತ್ತು ಶಾಸಕ ಕೃಷ್ಣ ಮುರಾರಿ ಅವರಿಗೆ ಯಾವುದೇ ಅಪಾಯವಾಗಿಲ್ಲ. ಅದಾಗ್ಯೂ ಅವರ ಬೆಂಗಾವಲು ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪಾಟ್ನಾದಲ್ಲಿ ಬಿಹಾರದ ಆರೋಗ್ಯ ಸಚಿವ ಮತ್ತು ಬಿಜೆಪಿ ನಾಯಕ ಮಂಗಲ್ ಪಾಂಡೆ ಅವರ ಕಾರಿನ ಮೇಲೆ ಉದ್ರಕ್ತರ ಗುಂಪೊಂದು ದಾಳಿ ಮಾಡಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ: Landslide: ಜಮ್ಮು-ಕಾಶ್ಮೀರದಲ್ಲಿ ಭಾರೀ ಭೂ ಕುಸಿತ; ಸಾವಿನ ಸಂಖ್ಯೆ 30ಕ್ಕೆ ಏರಿಕೆ
ಸಚಿವ ಶ್ರವಣ್ ಕುಮಾರ್ ಹೇಳಿದ್ದೇನು?
ಘಟನೆ ಬಗ್ಗೆ ಸಚಿವ ಶ್ರವಣ್ ಕುಮಾರ್ ಪ್ರತಿಕ್ರಿಯಿಸಿ, ʼʼನಳಂದದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದರು. ಸಂತ್ರಸ್ತರ ಕುಟುಂಬವನ್ನು ಭೇಟಿಯಾಗಲು ಬುಧವಾರ ಬೆಳಗ್ಗೆ ತೆರಳಿದ್ದೆ. ಪ್ರತಿ ಸಂತ್ರಸ್ತರ ಕುಟುಂಬಕ್ಕೂ ಸೂಕ್ತ ಪರಿಹಾರ ಧನ ಒದಗಿಸಲು ಅಧಿಕಾರಿಗಳ ತಂಡದೊಂದಿಗೆ ಹೋಗಿದ್ದೆʼʼ ಎಂದು ತಿಳಿಸಿದ್ದಾರೆ.
ತಾವು ಹೊರಡುವ ಹಂತದಲ್ಲಿದ್ದಾಗ, ಕೆಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ. "ಕೆಲವರು ವಿವಾದ ಉಂಟಾಗಬೇಕೆಂಬ ಉದ್ದೇಶದಿಂದಲೇ ಅಲ್ಲಿಗೆ ಬಂದಿದ್ದರು. ಆದರೆ ನಾನು ಯಾವುದೇ ಗಲಾಟೆಗೆ ಆಸ್ಪದ ನೀಡದೆ ಶಾಂತವಾಗಿಯೇ ಹೊರಟೆʼʼ ಎಂದು ವಿವರಿಸಿದ್ದಾರೆ.