ಆನ್‌ಲೈನ್ ತರಗತಿಯ ಮಧ್ಯೆ ಅಶ್ಲೀಲ ವಿಡಿಯೊ ಪ್ರಸಾರ; ದೂರು ನೀಡಿದ ವಿದ್ಯಾರ್ಥಿನಿಗೆ ಕಿರುಕುಳ
Himachal Pradesh News: ಆನ್‌ಲೈನ್ ತರಗತಿ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೊ ಪ್ರಸಾರವಾಗಿದ್ದು, ಈ ಬಗ್ಗೆ ದೂರು ನೀಡಿದ ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿ ಕಿರುಕುಳ ನೀಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದೆ. ಸದ್ಯ ಈ ಘಟನೆ ಸದ್ಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ -

ಶಿಮ್ಲಾ: ಆನ್‌ಲೈನ್ ತರಗತಿ ನಡೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೊ ಪ್ರಸಾರವಾಗಿದ್ದು, ಈ ಬಗ್ಗೆ ದೂರು ನೀಡಿದ ವಿದ್ಯಾರ್ಥಿನಿಗೆ ಶಾಲಾ ಆಡಳಿತ ಮಂಡಳಿ ಕಿರುಕುಳ ನೀಡಿದೆ ಎನ್ನುವ ಆರೋಪ ಕೇಳಿ ಬಂದಿದೆ (Himachal Pradesh News). ಹಿಮಾಚಲ ಪ್ರದೇಶದಲ್ಲಿ ನಡೆದ ಈ ಘಟನೆ ಸದ್ಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಎಚ್ಚೆತ್ತ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಹಮೀರ್‌ಪುರ್ (Hamirpur) ಜಿಲ್ಲೆಯ ಕಾಕ್ಡಿಯಾರ್ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಭಾರಿ ಮಳೆಯ ಕಾರಣದಿಂದ ಸೆಪ್ಟೆಂಬರ್ 4ರಂದು ಶಾಲೆಗಳಿಗೆ ರಜೆ ಸಾರಲಾಗಿತ್ತು. ಹೀಗಾಗಿ ಶಾಲಾಡಳಿತ ಮಂಡಳಿ ಆನ್‌ಲೈನ್ ತರಗತಿ ನಡೆಸಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೊ ಪ್ರಸಾರವಾಗಿದ್ದು, ಇದನ್ನು ಕಂಡು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಆಘಾತಕ್ಕೊಳಗಾದರು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Murder Case: ಆನ್‌ಲೈನ್ ಗೇಮ್ ಗೀಳು ಹತ್ತಿಸಿಕೊಂಡ ಬಾಲಕನ ಕತ್ತು ಸೀಳಿ ಹತ್ಯೆಗೈದ ಸೋದರಮಾವ
ಘಟನೆಯ ವಿವರ
ಬೆಳಗ್ಗೆ 10:30ಕ್ಕೆ ಪಾಲಿಟಿಕಲ್ ಸೈನ್ಸ್ ತರಗತಿ ಆರಂಭವಾಯಿತು. ಶಿಕ್ಷಕರು ಪಾಠ ಮಾಡುತ್ತಿದ್ದಾಗ 11:15ರ ವೇಳೆಗೆ ಅಶ್ಲೀಲ ವಿಡಿಯೊ ಪರದೆ ಮೇಲೆ ಮೂಡಿಬಂತು. ಈ ವೇಳೆ ತರಗತಿಯನ್ನು ಗಮನಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ತಾಯಿ ಈ ವಿಚಾರವನ್ನು ಪ್ರಾಂಶುಪಾಲರ ಗಮನಕ್ಕೆ ತಂದರು.
ʼʼದೂರು ನೀಡಿದರೂ ಪ್ರಾಂಶುಪಾಲರು, ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ದೂರು ನೀಡಿದ್ದಕ್ಕೆ ತಮ್ಮ ಮಗಳ ಮೇಲೆಯೇ ದ್ವೇಷ ತೀರಿಸಿಕೊಂಡಿದ್ದಾರೆʼʼ ಎಂದು ಆಕೆಯ ತಾಯಿ ದೂರಿದ್ದಾರೆ. ಹೀಗಾಗಿ ಅವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಇದೀಗ ಶಾಲಾ ಆಡಳಿತ ಸಿಬ್ಬಂದಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಯತ್ನಿಸುತ್ತಿದ್ದಾರೆ. ಆದರೆ ಈಗಾಗಲೇ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಾಂಶುಪಾಲೆ ಅಂಜಲಿ ಶರ್ಮಾ ಈ ಬಗ್ಗೆ ಮಾತನಾಡಿ, ʼʼಶಾಲೆಯ ಶಿಸ್ತು ಸಮಿತಿ ಪ್ರಕರಣದ ತನಿಖೆ ನಡೆಸಿದೆ. ಆದರೆ ವಿಡಿಯೊ ಹರಿಯಬಿಟ್ಟಿದ್ದು ಯಾರು ಎನ್ನುವುದು ಪತ್ತೆಯಾಗಿಲ್ಲ. ಹೀಗಾಗಿ ಪ್ರಕರಣದ ಬಗ್ಗೆ ಶಿಕ್ಷಣ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆʼʼ ಎಂದು ವಿವರಿಸಿದ್ದಾರೆ.
ವಿದ್ಯಾರ್ಥಿನಿಯ ತಾಯಿಯ ಆರೋಪವೇನು?
ವಿದ್ಯಾರ್ಥಿನಿಯ ತಾಯಿ ರೀನಾ ಶರ್ಮಾ ಶಾಲೆಯ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ʼʼದೂರು ನೀಡಿದರೂ ಶಾಲಾ ಸಿಬ್ಬಂದಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಪ್ರಕರಣವನ್ನು ಮುಚ್ಚಿ ಹಾಕಲು ನೋಡಿದ್ದಾರೆ. ಅಲ್ಲದೆ ದೂರು ನೀಡಿದ ಕಾರಣಕ್ಕೆ ಮಗಳಿಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ಪೊಲೀಸರು ಲಿಖಿತ ದೂರು ಸಲ್ಲಿಸಿದ್ದೇವೆʼʼ ಎಂದು ಹೇಳಿದ್ದಾರೆ.
ಕಾರ್ಯ ಪ್ರವೃತ್ತವಾದ ಸೈಬರ್ ಸೆಲ್
ʼʼಈ ಪ್ರಕರಣವನ್ನು ಬಗೆಹರಿಸಲು, ಅಪರಾಧಿಯನ್ನು ಪತ್ತೆಹಚ್ಚಲು ಸೈಬರ್ ಸೆಲ್ ಕಾರ್ಯ ನಿರತವಾಗಿದೆʼʼ ಎಂದು ಶಿಕ್ಷಣ ಉಪ ನಿರ್ದೇಶಕ ಅಭಿಯಾನ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಅಪರಾಧಿಯನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.