ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pramila Tayi Medhe: ರಾಷ್ಟ್ರ ಸೇವಿಕಾ ಸಮಿತಿಯ ಸಂಚಾಲಿಕರಾಗಿದ್ದ ಪ್ರಮೀಳಾ ತಾಯಿ ಮೇಢೆ ನಿಧನ; ದೇಹ ದಾನ

Rashtra Sevika Samiti: ರಾಷ್ಟ್ರ ಸೇವಿಕಾ ಸಮಿತಿಯ ನಾಲ್ಕನೇ ಪ್ರಮುಖ ಸಂಚಾಲಿಕರಾಗಿದ್ದ ಪ್ರಮೀಳಾ ತಾಯಿ ಮೇಢೆ ಗುರುವಾರ (ಜು. 31) ಬೆಳಗ್ಗೆ ನಿಧನ ಹೊಂದಿದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಅವರ ಆಶಯದಂತೆ, ಅವರ ದೇಹವನ್ನು ಏಮ್ಸ್‌ ಆಸ್ಪತ್ರೆಗೆ ದಾನ ಮಾಡಲಾಗುತ್ತದೆ.

ರಾಷ್ಟ್ರ ಸೇವಿಕಾ ಸಮಿತಿಯ ಸಂಚಾಲಿಕರಾಗಿದ್ದ ಪ್ರಮೀಳಾ ತಾಯಿ ಮೇಢೆ ನಿಧನ

Ramesh B Ramesh B Jul 31, 2025 9:05 PM

ಮುಂಬೈ: ರಾಷ್ಟ್ರ ಸೇವಿಕಾ ಸಮಿತಿಯ (Rashtra Sevika Samiti) ನಾಲ್ಕನೇ ಪ್ರಮುಖ ಸಂಚಾಲಿಕರಾಗಿದ್ದ ಪ್ರಮೀಳಾ ತಾಯಿ ಮೇಢೆ (Pramila Tayi Medhe) ಗುರುವಾರ (ಜು. 31) ಬೆಳಗ್ಗೆ ನಿಧನ ಹೊಂದಿದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. ಮಹಾರಾಷ್ಟ್ರದ ನಾಗ್ಪುರ ಅಹಲ್ಯಾಬಾಯಿ ಮಂದಿರದಲ್ಲಿ ಅವರು ಅಸುನೀಗಿದರು. ಅವರ ಆಶಯದಂತೆ, ಅವರ ದೇಹವನ್ನು ಏಮ್ಸ್‌ (AIMS) ಆಸ್ಪತ್ರೆಗೆ ದಾನ ಮಾಡಲಾಗುತ್ತದೆ. ಗುರುವಾರ ದಿನವಿಡೀ ಅಹಲ್ಯಾ ಮಂದಿರದ ನೆಲ ಮಹಡಿಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್‌ (Mohan Bhagwat) ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಹಿಳಾ ವಿಭಾಗ ರಾಷ್ಟ್ರ ಸೇವಿಕಾ ಸಮಿತಿಯ ಧೀಮಂತ ನಾಯಕಿಯಾಗಿದ್ದ ಅವರು ಇದೀಗ ತಮ್ಮ ದೇಹವನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.



ಪ್ರಮೀಳಾ ತಾಯಿ ಮೇಢೆ 1929ರ ಜೂ. 8ರಂದು ಜನಿಸಿದರು. ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಅಖಿಲ ಭಾರತೀಯ ಪ್ರಮುಖ್‌ ಕಾರ್ಯವಾಹಿಕರಾಗಿ 1978ರಿಂದ 2003ರ ನಡುವೆ ಕಾರ್ಯ ನಿರ್ವಹಿಸಿದ್ದರು. 2006ರಿಂದ 2012ರಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ 4ನೇ ಪ್ರಮುಖ ಸಂಚಾಲಿಕರಾಗಿದ್ದರು. ಅವರು 1965ರಿಂದ ನಾಗ್ಪುರ ದೇವಿ ಅಹಲ್ಯಾ ಮಂದಿರದಲ್ಲಿ ವಾಸವಾಗಿದ್ದರು. ಕಳೆದ 3 ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರ ದೇಹಸ್ಥಿತಿ 15 ದಿನಗಳಿಂದ ಗಂಭೀರವಾಗಿತ್ತು.

ಮೋಹನ್‌ ಭಾಗವತ್ ಕಂಬನಿ

"ಮೇಢೆ ಅವರ ನಿಧನದೊಂದಿಗೆ ಪ್ರೀತಿಯ ಸೆಲೆಯೊಂದು ನಮ್ಮಿಂದ ದೂರವಾಗಿದೆ. ಈಶಾನ್ಯದ ಕಠಿಣ ಪರಿಸ್ಥಿತಿಗಳಲ್ಲೂ ಅವರು ಸಂಘಟನೆಗಾಗಿ ತುಂಬಾ ಶ್ರಮಿಸಿದ್ದರು. ಈ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ. ಅವರ ಜೀವನವು ನಮಗೆ ಸ್ಫೂರ್ತಿ" ಎಂದು ಮೋಹನ್‌ ಭಾಗವತ್ ಅಂತಿಮ ನಮನ ಸಲ್ಲಿಸಿ ತಿಳಿಸಿದರು.

ದೇಶವು ಪ್ರಮೀಳಾ ತಾಯಿಯ ಆಶ್ರಯ ಮತ್ತು ನಿಸ್ವಾರ್ಥ ಸೇವೆಯ ಜ್ಯೋತಿಯನ್ನು ಕಳೆದುಕೊಂಡಿದೆ ಎಂದು ಭಾಗವತ್ ಹೇಳಿದರು. "ಅವರು ಸಮಿತಿಗಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿದರು. ತಮ್ಮ ದೇಹ ದಾನ ಮಾಡುವ ಮೂಲಕ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ" ಎಂದು ಭಾಗವತ್ ಬಣ್ಣಿಸಿದರು. ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರೂ ಸಂತಾಪ ಸೂಚಿಸಿದರು.

ರಾಷ್ಟ್ರ ಸೇವಿಕಾ ಸಮಿತಿ ಎನ್ನುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮಹಿಳಾ ವಿಭಾಗ. ರಾಷ್ಟ್ರ ಸೇವಿಕಾ ಸಮಿತಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಅತಿದೊಡ್ಡ ಹಿಂದೂ ಸಂಘಟನೆ ಎನಿಸಿಕೊಂಡಿದೆ. ಭಾರತದಾದ್ಯಂತ ಮಹಿಳೆಯರನ್ನು ಉನ್ನತೀಕರಿಸಲು ಮತ್ತು ಸಬಲೀಕರಣಗೊಳಿಸುವ ಕೆಲಸವನ್ನು ಇದು ಮಾಡುತ್ತಿದೆ. ಮೇಢೆ ಈ ಸಮಿತಿ ಸ್ಥಾಪನೆಯಾದಾಗಿನಿಂದಲೂ ಸಂಘಟನೆಯಲ್ಲಿ ತೊಡಿಸಿಕೊಂಡಿದ್ದು ದೇಶಾದ್ಯಂತ ಅದರ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರ ಸೇವಿಕಾ ಸಮಿತಿಯನ್ನು ಆರ್‌ಎಸ್‌ಎಸ್‌ನ ಸಹೋದರಿ ಎಂದೇ ಕರೆಯಲಾಗುತ್ತದೆ.