Cloudbursts: ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ; 4 ಮಂದಿ ಸಾವು, ಬೀದಿಗೆ ಬಿದ್ದ ಹಲವು ಕುಟುಂಬ
ಉತ್ತರಾಖಂಡದ ಚಾಮೋಲಿ, ರುದ್ರಪ್ರಯಾಗ, ಮತ್ತು ಉತ್ತರಕಾಶಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೇಘಸ್ಫೋಟ ಮತ್ತು ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹ ಉಂಟಾಗಿದ್ದು, ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ, ರಸ್ತೆಗಳು ಬಂದ್ ಆಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.ಬದರಿನಾಥ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಮುಚ್ಚಿಹೋಗಿವೆ, ಇದು ಸಂಚಾರಕ್ಕೆ ಅಡ್ಡಿಯಾಗಿದೆ.

ಘಟನೆಯ ದೃಶ್ಯ -

ಡೆಹ್ರಾಡೂನ್: ಉತ್ತರಾಖಂಡದ (Uttarakhand) ಚಮೋಲಿ, ರುದ್ರಪ್ರಯಾಗ (Rudraprayag), ತೆಹ್ರಿ ಮತ್ತು ಬಾಗೇಶ್ವರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮೇಘಸ್ಫೋಟಗಳಿಂದ (Cloudbursts) ಭೂಕುಸಿತ (Landslides) ಉಂಟಾಗಿದ್ದು, ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಅಷ್ಟೇಅಲ್ಲದೇ ಇಬ್ಬರು ನಾಪತ್ತೆಯಾಗಿದ್ದು, ಸುಮಾರು 40 ಕುಟುಂಬಗಳು ಅವಶೇಷಗಳ ಅಡಿ ಸಿಲುಕಿಕೊಂಡಿವೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದು, “ರುದ್ರಪ್ರಯಾಗದ ಬಸುಕೇದಾರ್ ತಹಶಿಲ್‌ನ ಬರೆತ್ ದುಂಗರ್ ಟೋಕ್ ಮತ್ತು ಚಮೋಲಿಯ ದೇವಾಲ್ ಪ್ರದೇಶಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಯಲ್ಲಿ ಕೆಲ ಕುಟುಂಬಗಳು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯ ಆಡಳಿತ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ನಾನು ಕೂಡ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಮತ್ತು ವಿಪತ್ತು ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದೇನೆ”ಎಂದು ಅವರು ಹೇಳಿದ್ದಾರೆ.
ಇನ್ನೂ ರುದ್ರಪ್ರಯಾಗದ ಬರೆತ್ ತಾಲ್ಜಮನ್‌ನಲ್ಲಿ ಕೆಸರು ಮತ್ತು ಅವಶೇಷಗಳು ಚದರಿರುವ ದೃಶ್ಯಗಳು ಘಟನೆಯ ಭಯಾನಕತೆ, ತೀವ್ರತೆಯನ್ನು ತೋರಿಸುತ್ತಿವೆ. ದೇವಾಲ್ ಪ್ರದೇಶದಲ್ಲಿ ಇಬ್ಬರು ನಾಪತ್ತೆಯಾಗಿದ್ದು, ಹಲವು ಪ್ರಾಣಿಗಳು ಶಿಥಿಲಗಳಡಿಯಲ್ಲಿ ಸಿಲುಕಿವೆ ಎಂದು ತಿಳಿಸಿದ್ದಾರೆ. ಭಾರೀ ಮಳೆಯಿಂದ ಜಿಲ್ಲೆಯ ಹಲವು ರಸ್ತೆಗಳು ಮುಚ್ಚಿವೆ. ರುದ್ರಪ್ರಯಾಗದಲ್ಲಿ ಅಲಕನಂದ ಮತ್ತು ಮಂದಾಕಿನಿ ನದಿಗಳ ನೀರಿನ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಸ್ಥಳೀಯ ರಸ್ತೆಗಳು ಶಿಥಿಲಗಳಿಂದ ಮುಚ್ಚಿಹೋಗಿವೆ ಎಂದು ಚಮೋಲಿ ಜಿಲ್ಲಾಧಿಕಾರಿ ಸಂದೀಪ್ ತಿವಾರಿ ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಎಲಾನ್ ಮಸ್ಕ್ ಜೊತೆ ಬೆಂಗಳೂರು ಮೂಲದ ಉದ್ಯಮಿಯ ಸೆಲ್ಫಿ-ಈ ಫೋಟೋದ ಅಸಲಿಯತ್ತೇನು?
ಈ ವರ್ಷದ ಮಾನ್ಸೂನ್ ಆರಂಭದಿಂದಲೂ ಉತ್ತರಾಖಂಡದಲ್ಲಿ ಮೇಘಸ್ಫೋಟ ಮತ್ತು ಆಕಸ್ಮಿಕ ಪ್ರವಾಹಗಳು ಸಾಮಾನ್ಯವಾಗಿದ್ದು, ವಿಪತ್ತಿನ ಕಾರಣಗಳನ್ನು ಅಧ್ಯಯನ ಮಾಡಲು ಮುಖ್ಯಮಂತ್ರಿ ಧಾಮಿ ತಜ್ಞರ ತಂಡವನ್ನು ಕಳುಹಿಸಲು ಸೂಚಿಸಿದ್ದರು. ಈ ಬಗ್ಗೆ ರಾಜ್ಯ ವಿಪತ್ತು ನಿರ್ವಹಣೆ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಮಾಹಿತಿ ನೀಡಿ, ಈ ಘಟನೆಗಳು ಹಿಮಾಲಯದಲ್ಲಿ ಪುನರಾವರ್ತನೆಯಾಗುತ್ತಿರುವುದರಿಂದ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಸೇರಿದಂತೆ ತಜ್ಞರು ಥರಾಲಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.