RCB vs LSG: ಎರಡನೇ ಐಪಿಎಲ್ ಶತಕ ಸಿಡಿಸಿ ಫಾರ್ಮ್ಗೆ ಮರಳಿದ ರಿಷಭ್ ಪಂತ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್ ಶತಕ ಬಾರಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಇವರ ಎರಡನೇ ಶತಕ ಇದಾಗಿದೆ. ಈ ಋತುವಿನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಪಂತ್, ಆರ್ಸಿಬಿ ಎದುರು ಫಾರ್ಮ್ ಕಂಡುಕೊಂಡರು.



ಆರ್ಸಿಬಿ VS ಎಲ್ಎಸ್ಜಿ
ಲಖನೌದ ಏಕನಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಆರ್ಸಿಬಿ ನಾಯಕ ಜಿತೇಶ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಸತತ ವೈಫಲ್ಯ ಅನುಭವಿಸಿದ್ದ ಪಂತ್
27 ಕೋಟಿ ರೂ. ಗಳ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರನಾಗಿ ಕಣಕ್ಕೆ ಬಂದಿದ್ದ ರಿಷಭ್ ಪಂತ್, ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಪಂತ್ ಅವರಿಂದ ಒಂದೇ ಒಂದು ಅರ್ಧಶತಕ ಮಾತ್ರ ಮೂಡಿಬಂದಿತ್ತು.

ಎರಡನೇ ಶತಕ ಬಾರಿಸಿದ ರಿಷಭ್
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ರಿಷಭ್ ಪಂತ್ ಸ್ಪೋಟಕ ಬ್ಯಾಟ್ ಮಾಡಿದ್ದರು. ಅವರು 54 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿ ಜೀವನದ ಎರಡನೇ ಶತಕವನ್ನು ಬಾರಿಸಿದ್ದರು. ಇವರು ಒಟ್ಟು 61 ಎಸೆತಗಳಲ್ಲಿ ಅಜೇಯ 118 ರನ್ ಗಳಿಸಿದರು. ಇದರಲ್ಲಿ ಅವರು 11 ಬೌಂಡರಿಗಳು ಹಾಗೂ 8 ಸಿಕ್ಸರ್ ಸಿಡಿಸಿದ್ದಾರೆ.

2018ರಲ್ಲಿ ಶತಕ ಸಿಡಿಸಿದ್ದ ಪಂತ್
ರಿಷಭ್ ಪಂತ್ ಅವರು ತಮ್ಮ ಐಪಿಎಲ್ ವೃತ್ತಿ ಜೀವನದ ಮೊದಲನೇ ಶತಕವನ್ನು 2018ರಲ್ಲಿ ಸಿಡಿಸಿದ್ದರು. ಅಂದು ಅವರು ಡೆಲ್ಲಿ ಕ್ಯಾಪಿಟಲ್ಸ್ ಪರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 128 ರನ್ಗಳನ್ನು ಬಾರಿಸಿದ್ದರು. ಈ ಪಂದ್ಯ ಹೈದರಾಬಾದ್ನಲ್ಲಿ ನಡೆದಿತ್ತು.

152 ರನ್ ಜೊತೆಯಾಟ
25 ರನ್ಗಳಿಗೆ ಮ್ಯಾಥ್ಯೂ ಬ್ರಿಟ್ಜ್ ವಿಕೆಟ್ ಒಪ್ಪಿಸಿದರು. ಬಳಿಕ ಎರಡನೇ ವಿಕೆಟ್ಗೆ ಜೊತೆಯಾದ ಮಿಚೆಲ್ ಮಾರ್ಷ್ ಹಾಗೂ ರಿಷಭ್ ಪಂತ್ ಜೋಡಿ 152 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಆಡಿತು. ಆ ಮೂಲಕ ತಂಡದ ಮೊತ್ತವನ್ನು200ರ ಗಡಿ ದಾಟಿಸಲು ನೆರವು ನೀಡಿತ್ತು. ಮಾರ್ಷ್ 37 ಎಸೆತಗಳಲ್ಲಿ 67 ರನ್ ಸಿಡಿಸಿದ್ದರು.

ಎಲ್ಎಸ್ಜಿ: 227-3
ರಿಷಭ್ ಪಂತ್ ಶತಕ ಹಾಗೂ ಮಿಚೆಲ್ ಮಾರ್ಷ್ ಅರ್ಧಶತಕದ ಬಲದಿಂದ ಲಖನೌ ಸೂಪರ್ ಜಯಂಟ್ಸ್ ತಂಡ, ತನ್ನ ಪಾಲಿನ 20 ಓವರ್ಗಳಿಗೆ 3 ವಿಕೆಟ್ಗಳ ನಷ್ಟಕ್ಕೆ 227 ರನ್ಗಳನ್ನು ಕಲೆ ಹಾಕಿದೆ. ಆ ಮೂಲಕ ಆರ್ಸಿಬಿಗೆ 228 ರನ್ಗಳ ಗುರಿಯನ್ನು ನೀಡಿತು.