ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BJP Protest: ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಸಿಎಂಗೆ ಬಿ.ವೈ. ವಿಜಯೇಂದ್ರ ಆಗ್ರಹ

BY Vijayendra: ಬೆಂಗಳೂರಿನ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ವತಿಯಿಂದ ಬುಧವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ, ದಿವಾಳಿ ಆಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಜಾಹೀರಾತುಗಳನ್ನು ನೀಡಿ, ಇಂದು ದಿನಗಳನ್ನು ಕಳೆಯುತ್ತಿದ್ದಾರೆ ಎಂದು ದೂರಿದ್ದಾರೆ.

ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಬಿ.ವೈ. ವಿಜಯೇಂದ್ರ

-

Profile
Siddalinga Swamy Sep 23, 2026 2:49 PM

ಬೆಂಗಳೂರು‌, ಸೆ.23: ಮುಖ್ಯಮಂತ್ರಿಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲೇಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ. ಬುಧವಾರ ಬೆಳಗ್ಗೆ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 4 ಲಕ್ಷಕ್ಕೂ ಹೆಚ್ಚು ಕೋಟಿ ಹೊಸ ಸಾಲವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ 8 ಲಕ್ಷ ಕೋಟಿ ರೂಪಾಯಿಗಳು ಸಾಲ ಆಗಿದೆ. ಸಾಲ ಮಾಡಿರುವುದನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ನೋಡೋದಕ್ಕೆ ಸಾಧ್ಯ ಆಗಿಲ್ಲ ಎಂದು ಟೀಕಿಸಿದರು.

ಮೊನ್ನೆ ಮುಖ್ಯಮಂತ್ರಿಗಳು ಕರಾವಳಿಗೆ ಭೇಟಿ ನೀಡಿದ್ದರು. ಇವರ ಯೋಗ್ಯತೆಗೆ ಖಜಾನೆಯಲ್ಲಿ ಒಂದು ರೂಪಾಯಿ ಹಣ ಇಲ್ಲ. ನಿನ್ನೆ ಹಣಕಾಸಿನ ಇಲಾಖೆಯಿಂದ ಪತ್ರ ಬರೆದಿದ್ದಾರೆ; ಮುಖ್ಯಮಂತ್ರಿಗಳೇ ಪುಕ್ಕಟೆ ಯಾವುದೇ ಹೊಸ ಘೋಷಣೆಗಳನ್ನು ಮಾಡಬೇಡಿ. ಬರ ಪರಿಹಾರ ಕೊಡುವುದಕ್ಕೂ ಕೂಡ ನಮ್ಮ ಜತೆಯಲ್ಲಿ ಹಣ ಇಲ್ಲ ಖಜಾನೆಯಲ್ಲಿ ಅಂತ ಹೇಳಿ ಇವತ್ತು ಆರ್ಥಿಕ ಇಲಾಖೆಯವರು ನೇರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರು.

BY Vijayendra

ಘೋಷಣೆಗೆ ಕೊರತೆ ಇಲ್ಲ

ಇವತ್ತು 32000 ಕೋಟಿ ಕೊಡುತ್ತೇನೆ, 10,000 ಕೋಟಿ ಕೊಡುತ್ತೇನೆ ಅಂತ ಹೇಳಿ ಹೋದಲ್ಲೆಲ್ಲ ಕೇವಲ ಘೋಷಣೆ ಮಾಡುತ್ತಿದ್ದಾರೆ. ವಾಸ್ತವಿಕ ಸತ್ಯ ಏನೆಂದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಇಂದು ಕುಲಗೆಟ್ಟು ಹೋಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರವೇ ಐಸಿಯುನಲ್ಲಿದೆ

ಒಂದೇ ಮಾತಿನಲ್ಲಿ ಹೇಳಬೇಕು ಅಂತ ಹೇಳಿದರೆ ಈ ಕಾಂಗ್ರೆಸ್ ಸರ್ಕಾರವೇ ಐಸಿಯುನಲ್ಲಿದೆ ಅಭಿವೃದ್ಧಿಗೆ ಒಂದು ರೂಪಾಯಿ ಇಲ್ಲ ಬಡವರಿಗೆ ಇವತ್ತು ಪರಿಹಾರ ಕೊಡೋದಕ್ಕೆ ರೈತರಿಗೆ ಪರಿಹಾರ ಕೊಡೋದಕ್ಕೆ ಯಾವುದೇ ಹಣ ಇಲ್ಲ. ದಿವಾಳಿ ಆಗಿರತಕ್ಕಂತಹ ಕಾಂಗ್ರೆಸ್ ಸರ್ಕಾರ ಕೇವಲ ಜಾಹೀರಾತುಗಳನ್ನು ಕೊಟ್ಟುಕೊಂಡು ಇಂದು ದಿನಗಳನ್ನು ಕಳೆಯುತ್ತಿದ್ದಾರೆ ಎಂದು ದೂರಿದರು.

ಪಿಂಚಣಿ- ಮಾಸಾಶನ ಕೊಡುತ್ತಿಲ್ಲ

ಕರ್ನಾಟಕ ರಾಜ್ಯದಲ್ಲಿ ಇಂದು ವಿಕಲಚೇತನರಿಗೆ ಪಿಂಚಣಿ, ವೃದ್ದಾಪ್ಯ ವೇತನ, ವಿಧವಾ ವೇತನ ಕೊಡೋದಕ್ಕೆ ಸಾಧ್ಯ ಆಗುತ್ತಿಲ್ಲ ಎಂದು ಟೀಕಿಸಿದರು.

ಕೇಂದ್ರದ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ

ಶಿಕ್ಷಕರ ನೇಮಕಾತಿಯನ್ನು ಕೂಡ ಮಾಡೋದಕ್ಕೆ ಆಗುತ್ತಿಲ್ಲ. ಹಣಕಾಸಿನ ಸಮಸ್ಯೆಯಿಂದ ಶಿಕ್ಷಕರಿಗೆ ಸಂಬಳವನ್ನು ಕೂಡ ನೀಡುತ್ತಿಲ್ಲ. ಒಟ್ಟಾರೆಯಾಗಿ ಯುವಕರಿಗೂ ಕೂಡ ಉದ್ಯೋಗವನ್ನು ಕೊಡದೆ ಇರತಕ್ಕಂತಹ ಈ ಒಂದು ದಿವಾಳಿ ಆಗಿರುವಂತ ಕಾಂಗ್ರೆಸ್ ಸರ್ಕಾರ ಕೇವಲ ವಿಶೇಷ ಅಧಿವೇಶನವನ್ನು ಕರೆದು ಕೇಂದ್ರ ಸರ್ಕಾರಕ್ಕೆ ಗೂಬೆ ಕೂರಿಸಿ ತಾನು ಕೈತೊಳೆದುಕೊಳ್ಳುವ ಕುತಂತ್ರ-ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

ವಾಸ್ತವಿಕ ಸ್ಥಿತಿಯನ್ನು ತಿಳಿಸಿ

ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೊಳ್ಳೆ ಹೊಡೆದಿದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿಯನ್ನು ನಿರೀಕ್ಷೆ ಮಾಡೋದಕ್ಕೆ ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ನೀವು ಇರೋದೇ ಇನ್ನು ಒಂದು ವರ್ಷ ಅಧಿಕಾರದಲ್ಲಿ. ಇದ್ದಷ್ಟು ದಿನ ಪುಕ್ಸಟ್ಟೆ ಭಾಷಣ ಮಾಡೋದನ್ನು ಬಿಟ್ಟು ರಾಜ್ಯದ ವಾಸ್ತವಿಕ ಸ್ಥಿತಿ ಏನಿದೆ ಎಂದು ತಿಳಿಸಿ ಎಂದು ಆಗ್ರಹಿಸಿದರು.

KPSC Recruitment Scam: ನೇಮಕಾತಿ ಅಕ್ರಮ; ಕೆಪಿಎಸ್‌ಸಿಯನ್ನೇ ಮುಚ್ಚುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದ ಸಿಎಂ

ನೀವು ಬರೀ ಜಾಹೀರಾತನ್ನು ಕೊಡುತ್ತ ಜನರಿಗೆ ಮರಳು ಮಾಡೋದಕ್ಕೆ ಹೊರಟಿದ್ದೀರಿ, ಇದರಿಂದ ನೀವು ಏನು ಕೂಡ ಸಾಧನೆ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಶಾಸಕರು, ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.