Chalavadi Narayanaswamy: ಪ್ರಿಯಾಂಕ್ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ದಲಿತರ ನೆನಪು: ಛಲವಾದಿ ನಾರಾಯಣಸ್ವಾಮಿ
Priyank Kharge: ಪ್ರಿಯಾಂಕ್ ಖರ್ಗೆ ಅವರು ಇರಲಾರದೆ ಇರುವೆ ಬಿಟ್ಟುಕೊಂಡ ರೀತಿ ಮಾಡುತ್ತಿದ್ದಾರೆ. ಅದಕ್ಕೆ ಯಾವ ಸಂಘಟನೆಗಳು ಅವರ ಬೆಂಬಲಕ್ಕೆ ಬಂದಿರುವುದಿಲ್ಲ. ಆದರೆ ಅವರೇ ಅದಕ್ಕಾಗಿಯೇ ಕೆಲವು ಸಂಘಟನೆಗಳನ್ನು ಸೃಷ್ಟಿಸಿದ್ದು, ದಲಿತ ಸಂಘಟನೆಗಳಿಗೆ ಮುಜುಗರ ಉಂಟುಮಾಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
-
ಬೆಂಗಳೂರು: ಪ್ರಿಯಾಂಕ್ ಅವರ (Priyank Kharge) ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ದಲಿತರು ನೆನಪಾಗುತ್ತಾರೆ. ಅವರು ಎತ್ತಿರುವ ವಿಚಾರಕ್ಕೆ ಮಾತ್ರ ಇಂದು ದಲಿತ ಸಂಘಟನೆಗಳು ಬೆಂಬಲ ನೀಡಿರುವುದು ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನ.2 ರಂದು ಹಲವು ಸಂಘಟನೆಗಳು ಪಥಸಂಚಲನ ಮಾಡುತ್ತೇವೆ ಎಂದು ನ್ಯಾಯಾಲಯದಲ್ಲಿ ಅನುಮತಿಗೆ ಅರ್ಜಿಯನ್ನು ಹಾಕಿವೆ. ಆ ಕಾರಣದಿಂದಾಗಿ ಶಾಂತಿ ಸಭೆ ಮಾಡಲು ನ್ಯಾಯಾಲಯವು ಆದೇಶ ನೀಡಿರುವುದು ಸ್ವಾಗತಾರ್ಹ. ಬಿಜೆಪಿ ಯಾವ ರೀತಿ ಐ ಲವ್ ಆರ್.ಎಸ್.ಎಸ್ ಎನ್ನುತ್ತೇವೆಯೋ ಹಾಗೆಯೇ ಡಿ.ಎಸ್.ಎಸ್. ಸಂಘಟನೆಯನ್ನು ಕಾಣುತ್ತದೆ ಎಂದು ತಿಳಿಸಿದರು.
ದಲಿತ ಸಂಘಟನೆಗಳ ಮುಖಂಡರು ಹಲವು ವರ್ಷಗಳಿಂದ ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯದಲ್ಲಿ ಹೋರಾಟ ಮಾಡುತ್ತಿದ್ದು, ಅದನ್ನು ನಾವು ಗೌರವಿಸುತ್ತೇವೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ದಲಿತ ಸಂಘಟನೆಗಳನ್ನು ಬದಿಗಿಟ್ಟು ತಮಗೆ ಬೇಕಾದ ದಲಿತ ಮುಖಂಡರನ್ನು ಎತ್ತಿಕಟ್ಟಿ ಈ ರೀತಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಯಾವ ಸಂಘಟನೆಗಳು ಮೊದಲಿನಿಂದ ಪಥ ಸಂಚಲನ ಮಾಡಿರುವವರಲ್ಲ. ಆದರೆ ಪ್ರಸ್ತುತ ನಾವು ಮಾಡುತ್ತೇವೆ ಎಂದಿದ್ದು ಏಕೆ ಎಂದು ಪ್ರಶ್ನಿಸಿದರು. ಇವರು ಯಾವುದಾದರು ಧರ್ಮದ ಪರವೇ ಅಥವಾ ದಲಿತ ಸಮುದಾಯಗಳ ಪರವೇ ಅಥವಾ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬದ ಪರವೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಪಥ ಸಂಚಲನಕ್ಕೆ ಪೈಪೋಟಿ ಏಕೆ
ದಲಿತ ಸಂಘಟನೆಗಳು ಯಾವಾಗಲಾದರೂ ಪಥ ಸಂಚಲನ ಮಾಡಲಿ, ಶಿಸ್ತು, ಸಂಯಮ ಸಂಘಟನೆಗಳಲ್ಲಿ ಬರಬೇಕು, ಅದನ್ನು ಅವರು ಮೈಗೂಡಿಸಿಕೊಂಡಿರುವುದು ನಮಗೆ ಸಂತೋಷವಿದೆ. ಆದರೆ ಪಥ ಸಂಚಲನಕ್ಕೆ ಪೈಪೋಟಿ ಏಕೆ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಕೇಳಿದರು.
ಪ್ರಿಯಾಂಕ್ ಖರ್ಗೆ ಅವರು ಇರಲಾರದೆ ಇರುವೆ ಬಿಟ್ಟುಕೊಂಡ ರೀತಿ ಮಾಡುತ್ತಿದ್ದಾರೆ. ಅದಕ್ಕೆ ಯಾವ ಸಂಘಟನೆಗಳು ಅವರ ಬೆಂಬಲಕ್ಕೆ ಬಂದಿರುವುದಿಲ್ಲ. ಆದರೆ ಅವರೇ ಅದಕ್ಕಾಗಿಯೇ ಕೆಲವು ಸಂಘಟನೆಗಳನ್ನು ಸೃಷ್ಟಿಸಿದ್ದು, ದಲಿತ ಸಂಘಟನೆಗಳಿಗೆ ಮುಜುಗರ ಉಂಟುಮಾಡಿದ್ದಾರೆ ಎಂದು ದೂರಿದರು.
ಇಂದು ಪ್ರಿಯಾಂಕ್ ಅವರು ದಲಿತ ಸಂಘಟನೆಗಳನ್ನು ನಮ್ಮ ಸಹಕಾರಕ್ಕೆ ನಿಲ್ಲಿ ಎಂದು ಕೇಳುತ್ತಿದ್ದಾರೆ. ಸಹಕಾರ ಕೇಳುವುದು ಸಹಜ, ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಯಾವುದೇ ದಲಿತರನ್ನು ಬೆಳೆಸಿಲ್ಲ ಮತ್ತು ದಲಿತರ ಸಮಸ್ಯೆಗೆ ಹೋರಾಟ ಮಾಡಲಿಲ್ಲ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | ಗೊಂದಲಗಳ ಸೃಷ್ಟಿಸುವುದರಲ್ಲಿ ಕಾಂಗ್ರೆಸ್ ನಾಯಕರೇ ಮುಂಚೂಣಿಯಲ್ಲಿದ್ದಾರೆ: ಛಲವಾದಿ ನಾರಾಯಣಸ್ವಾಮಿ
ಪ್ರಿಯಾಂಕ್ ಅವರು ಯಾರನ್ನು ಬೇಕಾದರು ಪ್ರಶ್ನಿಸಲಿ, ಅದು ಅವರ ಹಕ್ಕು, ಅದನ್ನು ನಾವು ವಿರೋಧಿಸುವುದಿಲ್ಲ. 100 ವರ್ಷಗಳಿಂದ ದೇಶಕ್ಕಾಗಿ ಮತ್ತು ಸಮಾಜಕ್ಕಾಗಿ ಕೆಲಸ ಮಾಡಿರುವ ಸಂಘಟನೆಯನ್ನು ಗುರಿ ಮಾಡಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.