Cauvery Water Dispute: ಕರ್ನಾಟಕಕ್ಕೆ ಮತ್ತೆ ಹಿನ್ನಡೆ; ನಿತ್ಯ 9000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWRC ಶಿಫಾರಸು
ಸಿಡಬ್ಲ್ಯುಆರ್‌ಸಿ ನಿರ್ದೇಶನದ ಪ್ರಕಾರ, ಆಗಸ್ಟ್ 25ರ ಬೆಳಗ್ಗೆ 8 ಗಂಟೆಯಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಅಂತಾರಾಜ್ಯ ಗಡಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರಿನ ಹರಿವನ್ನು ಕಾಯ್ದುಕೊಳ್ಳಬೇಕಿದೆ. ಮುಂದಿನ 15 ದಿನಗಳ ಅವಧಿಯಲ್ಲಿ ಒಟ್ಟು 11.66 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ಹರಿದುಬರುವಂತೆ ನೋಡಿಕೊಳ್ಳುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.
-
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿನಿತ್ಯ 9,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಶಿಫಾರಸ್ಸು ಮಾಡಿದೆ. ನವದೆಹಲಿಯಲ್ಲಿ ನಡೆದ ಸಮಿತಿಯ 141ನೇ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಿಡಬ್ಲ್ಯುಆರ್‌ಸಿ ನಿರ್ದೇಶನದ ಪ್ರಕಾರ, ಆಗಸ್ಟ್ 25ರ ಬೆಳಗ್ಗೆ 8 ಗಂಟೆಯಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಅಂತಾರಾಜ್ಯ ಗಡಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರಿನ ಹರಿವನ್ನು ಕಾಯ್ದುಕೊಳ್ಳಬೇಕಿದೆ. ಆ ಮೂಲಕ ಮುಂದಿನ 15 ದಿನಗಳ ಅವಧಿಯಲ್ಲಿ ಒಟ್ಟು 11.66 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ಹರಿದುಬರುವಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
ಇತ್ತೀಚೆಗೆ ಮೊದಲ ಬಾರಿ 3 ಸಾವಿರ ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಆದೇಶಿಸಲಾಗಿತ್ತು. ಎರಡನೇ ಬಾರಿಗೆ 12 ಸಾವಿರ, ಈಗ ಮೂರನೇ ಬಾರಿಗೆ 9 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸಲಾಗಿದೆ. ಸಿಡಬ್ಲ್ಯೂಆರ್‌ಸಿಯ ಈ ಆದೇಶದ ಕುರಿತು ನಾಳೆ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎನ್ನುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿತ್ತು. ಆಗಸ್ಟ್ 12ರಿಂದಲೇ ಪ್ರತಿದಿನ 12 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು, 15 ದಿನಗಳಲ್ಲಿ 15.50 ಟಿಎಂಸಿ ನೀರು ಹರಿಸಬೇಕು ಎಂದು ಪ್ರಾಧಿಕಾರ ಕರ್ನಾಟಕಕ್ಕೆ ನಿರ್ದೇಶಿಸಿತ್ತು.
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ತೀವ್ರ ಕ್ಷೀಣಿಸಿದ್ದು, ಪ್ರಮುಖ ಜಲಾಶಯಗಳಲ್ಲಿನ ನೀರು ರಾಜ್ಯದ ಜನರ ಕುಡಿಯುವ ಅಗತ್ಯಕ್ಕೆ ಸಾಕಾಗುತ್ತಿಲ್ಲ ಎಂಬ ನೈಜ ಪರಿಸ್ಥಿತಿಯನ್ನು ಸಭೆಯಲ್ಲಿ ರಾಜ್ಯದ ಅಧಿಕಾರಿಗಳು ಸುದೀರ್ಘವಾಗಿ ವಿವರಿಸಿದ್ದಾರೆ. ಆದರೂ ಕೃಷಿ ಚಟುವಟಿಕೆಗಳ ನೆಪವೊಡ್ಡಿ ನೀರಿಗಾಗಿ ಪಟ್ಟು ಹಿಡಿದಿರುವ ತಮಿಳುನಾಡಿನ ಪರವಾಗಿಯೇ ಈ ಬಾರಿಯೂ ಸಮಿತಿ ತೀರ್ಮಾನ ಕೈಗೊಂಡಿದೆ.