BJP Padayatra: ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: ಸಿಎಂ ಡಿಕೆಶಿಗೆ ಬಿ.ವೈ. ವಿಜಯೇಂದ್ರ ಸವಾಲು
BY Vijayendra: ಡಿಕೆಶಿ ಸರ್ಕಾರದ ಇನ್ನೂ ಎರಡು ಮೂರು ವಿಕೆಟ್‍ಗಳು ಬೀಳಲು ತಯಾರು ಆದಂತೆ ಇದೆ. ಈ ಎಲ್ಲರಿಗೂ ಭ್ರಷ್ಟಾಚಾರ ಉರುಳಾಗಲಿದೆ. ಲಜ್ಜೆಗೆಟ್ಟ ಕಾಂಗ್ರೆಸ್‍ನವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಆನೆ ನಡೆದಿದ್ದೇ ದಾರಿ ಎಂದುಕೊಂಡಿದ್ದವರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಾರಂಭಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ದೂರಿದ್ದಾರೆ.
-
ರಾಯಚೂರು/ಮಸ್ಕಿ, ಸೆ.02: ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಈ ಸರ್ಕಾರ ನ್ಯಾಯ ಕೊಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ. ಆಗ ಜನರೇ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಸವಾಲು ಹಾಕಿದ್ದಾರೆ. ʼಬಳ್ಳಾರಿ ಚಲೋʼ ಪಾದಯಾತ್ರೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಅವರು ಬುಧವಾರ ಮಾತನಾಡಿದ್ದಾರೆ.
ದಲಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಳೆದ ಮೂರೂವರೆ ವರ್ಷದಲ್ಲಿ ಅವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ವಾಲ್ಮೀಕಿ ನಿಗಮದಲ್ಲಿ ರೂ. 187 ಕೋಟಿ ಹಗರಣ ಮಾಡಿದರು. ಮೀಸಲಾತಿಯನ್ನು ಸರಿಯಾಗಿ ಅನುಷ್ಠಾನ ಮಾಡಲಿಲ್ಲ. ಮೀಸಲಾತಿ ನೆಪ ಹೇಳಿಕೊಂಡು ಯುವಕರಿಗೆ ಉದ್ಯೋಗ ನೀಡಲಿಲ್ಲ. ಕೇವಲ ದಲಿತರು ಮಾತ್ರವಲ್ಲ ಎಲ್ಲಾ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರು. ಒಟ್ಟಾರೆ ಅಖಂಡ ಕರ್ನಾಟಕವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
ಇನ್ನಷ್ಟು ವಿಕೆಟ್ ಬೀಳಲಿವೆ
ಡಿಕೆಶಿ ಸರ್ಕಾರದ ಇನ್ನೂ ಎರಡು ಮೂರು ವಿಕೆಟ್‍ಗಳು ಬೀಳಲು ತಯಾರು ಆದಂತೆ ಇದೆ. ಈ ಎಲ್ಲರಿಗೂ ಭ್ರಷ್ಟಾಚಾರ ಉರುಳಾಗಲಿದೆ. ಲಜ್ಜೆಗೆಟ್ಟ ಕಾಂಗ್ರೆಸ್‍ನವರಿಗೆ ಮಾನ, ಮರ್ಯಾದೆ ಏನೂ ಇಲ್ಲ. ಆನೆ ನಡೆದಿದ್ದೇ ದಾರಿ ಎಂದುಕೊಂಡಿದ್ದವರ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಾರಂಭಿಸಿದೆ. ನಮ್ಮೊಂದಿಗೆ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅನ್ನದಾತರ ಸಮಸ್ಯೆಗಳನ್ನು ಆಲಿಸುವ ಕನಿಷ್ಠ ಸೌಜನ್ಯವನ್ನೂ ಸಿಎಂ ತೋರುತ್ತಿಲ್ಲ ಎಂದು ದೂರಿದರು.
ಈಗ ಕಾಟಾಚಾರದ ಬರವೀಕ್ಷಣೆ
ಬಿಜೆಪಿ ವತಿಯಿಂದ ರಾಜ್ಯದಲ್ಲಿ ಈಗಾಗಲೇ ಬರ ವೀಕ್ಷಣೆ ಮಾಡಿದ್ದೇವೆ. ಈವರೆಗೆ ಬರಗಾಲ ಪರಿಶೀಲನೆಗೆ ಹೋಗದ ಸಿಎಂ ಮತ್ತು ಡಿಸಿಎಂ ಈಗ ಬರ ವೀಕ್ಷಣೆ ಆರಂಭಿಸಿದ್ದಾರೆ. ಎ.ಸಿ. ಹಾಲಿನಲ್ಲೇ ಕುಳಿತಿದ್ದವರು ಈಗ ಅನಿವಾರ್ಯವಾಗಿ ರೈತರ ಸಮಸ್ಯೆ ಆಲಿಸಲು ಮುಂದಾಗಿದ್ದಾರೆ. ಇವರು ಹೀಗೆ ಮಾಡಲು ನಮ್ಮ ಹೋರಾಟವೇ ಕಾರಣ ಎಂದು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಜಾನುವಾರುಗಳಿಗೆ ಮೇವು ಇಲ್ಲದಾಗಿದೆ. ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲ. ಆದರೆ ಮುಖ್ಯಮಂತ್ರಿಗಳು ಮಾತ್ರ ರಿಯಲ್ ಎಸ್ಟೇಟ್ ಮಾಡಿಕೊಂಡು ಬೆಂಗಳೂರಿನಲ್ಲಿ ಕೂತಿದ್ದಾರೆ. ಅವರಿಗೆ ಬೆಂಗಳೂರೇ ಎಲ್ಲವೂ ಆಗಿದೆ. ಇಂತಹ ನಿರ್ಲಜ್ಜ ಧೋರಣೆಯನ್ನು ಸರಕಾರ ಬದಲಾಯಿಸಿಕೊಳ್ಳದಿದ್ದರೆ ಜನರೇ ಈ ಸರ್ಕಾರವನ್ನು ಬಡಿಗೆ ಹಿಡಿದು ಓಡಿಸಲಿದ್ದಾರೆ ಎಂದು ಎಚ್ಚರಿಸಿದರು.
BJP Padayatra: ಬರಪೀಡಿತ ಪ್ರದೇಶ ಘೋಷಿಸಲು ಲಂಚ ಬಯಸುವ ಸರ್ಕಾರ: ಬಿ.ವೈ. ವಿಜಯೇಂದ್ರ ವಾಗ್ದಾಳಿ
ಈ ಸರ್ಕಾರದಲ್ಲಿ ಎಲ್ಲಕ್ಕೂ ಲಂಚ ಕೊಡಬೇಕು
ಈ ಸರ್ಕಾರದಲ್ಲಿ ಎಲ್ಲಕ್ಕೂ ಲಂಚ ಕೊಡಬೇಕು. ಅದು ವಾಸ್ತವಿಕ ಸತ್ಯ. ಲಂಚ ಕೊಡದೆ ಏನೂ ಆಗಲ್ಲ. ಈಗ ಕೇವಲ 101 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದ್ದಾರೆ. ಇನ್ನೂ ಹಲವು ತಾಲೂಕುಗಳು ಬರಪೀಡಿತವಾಗಿವೆ. ಅವುಗಳನ್ನೂ ಬರಪೀಡಿತ ಎಂದು ಘೋಷಣೆ ಮಾಡಲು ರೈತರು ಲಂಚ ಕೊಡಬೇಕಾದ ಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದರು.