ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

AI University in Bengaluru: ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಘೋಷಣೆ

Google I/O Connect India 2026: ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದಾರೆ. ಗೂಗಲ್ ಜೊತೆಗಿನ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು, ಬಯಸುತ್ತೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸರ್ಕಾರಿ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಘೋಷಣೆ

ಬೆಂಗಳೂರಿನಲ್ಲಿ ನಡೆದ ಗೂಗಲ್ ಐಓ ಕನೆಕ್ಟ್ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್. -

Prabhakara R
Prabhakara R Jul 14, 2026 3:56 PM

ಬೆಂಗಳೂರು, ಜು. 14: ಬೆಂಗಳೂರಿನಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ (AI University in Bengaluru) ಆರಂಭಿಸುವುದಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಂಗಳವಾರ ನಡೆದ ಗೂಗಲ್ ಐಓ ಕನೆಕ್ಟ್ (Google I/O Connect India 2026 ) ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

"ಕರ್ನಾಟಕವನ್ನು 'ಎಐ-ನೇಟಿವ್' ರಾಜ್ಯವನ್ನಾಗಿ ರೂಪಿಸುವುದು ಮತ್ತು ಆಡಳಿತ ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಎಐ ತಂತ್ರಜ್ಞಾನವನ್ನು ಸಂಯೋಜಿಸುವುದು. ಎಐ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು, ಸುಧಾರಿತ ಸಂಶೋಧನೆಯನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಸಹಯೋಗವನ್ನು ಬೆಳೆಸಲು ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು" ಎಂದು ಹೇಳಿದರು.

"ಎಐ-ಸಹಾಯದ ಬೋಧನೆಯ ಮೂಲಕ ಶಿಕ್ಷಣ ಕ್ಷೇತ್ರ, ರೋಗಗಳ ಮುಂಚಿತ ಪತ್ತೆ ಮತ್ತು ಉತ್ತಮ ವೈದ್ಯಕೀಯ ಬೆಂಬಲದ ಮೂಲಕ ಆರೋಗ್ಯ ಕ್ಷೇತ್ರ, ರೈತರಿಗೆ ಎಐ-ಚಾಲಿತ ಸಲಹಾ ಸೇವೆಗಳ ಮೂಲಕ ಕೃಷಿ ಕ್ಷೇತ್ರ, ವೇಗದ ಮತ್ತು ಜನಸ್ನೇಹಿ ವಿತರಣೆಯ ಮೂಲಕ ಸರ್ಕಾರಿ ಸೇವೆಗಳು, ಎಐ ಪರಿಕರಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಸಣ್ಣ ಉದ್ಯಮಗಳಲ್ಲಿ ಬದಲಾವಣೆ ತರಲಾಗುವುದು" ಎಂದು ತಿಳಿಸಿದರು.

Google IO Connect India 2026  (2)

ತಂತ್ರಜ್ಞಾನ ಬೆಂಗಳೂರಿನ ದೈನಂದಿನ ಭಾಗ

"ಭಾರತದ ನಾವೀನ್ಯತೆಯ ರಾಜಧಾನಿ ಮತ್ತು ವಿಶ್ವದ ಅತ್ಯಂತ ರೋಮಾಂಚಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ನಡೆಯುತ್ತಿರುವ ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸಲು ನಾನು ಅತ್ಯಂತ ಹೆಮ್ಮೆಪಡುತ್ತೇನೆ. ಇಂತಹ ಒಂದು ಕಾರ್ಯಕ್ರಮವು ಇಷ್ಟು ಸಹಜವಾಗಿ ಮೂಡಿಬರಲು ವಿಶ್ವದಲ್ಲೇ ಕೆಲವೇ ಕೆಲವು ಸ್ಥಳಗಳಿವೆ. ಬೆಂಗಳೂರಿನಲ್ಲಿ ತಂತ್ರಜ್ಞಾನ ಎಂಬುದು ದೈನಂದಿನ ಜೀವನದ ಭಾಗವಾಗಿದೆ" ಎಂದರು.

"ಪ್ರತಿ ಪೀಳಿಗೆಯೂ ಮಾನವ ನಾಗರಿಕತೆಯ ಹಾದಿಯನ್ನೇ ಬದಲಾಯಿಸುವ ಒಂದು ತಂತ್ರಜ್ಞಾನವನ್ನು ಬಳುವಳಿಯಾಗಿ ಪಡೆಯುತ್ತದೆ. ಸ್ಟೀಮ್ ಇಂಜಿನ್ ಕೈಗಾರಿಕಾ ರಂಗವನ್ನು ಕ್ರಾಂತಿಗೊಳಿಸಿತು. ವಿದ್ಯುತ್ ನಗರಗಳನ್ನು ಮಾರ್ಪಡಿಸಿತು. ಇಂಟರ್ನೆಟ್ ಸಂಪರ್ಕ ಮಾಧ್ಯಮವನ್ನೇ ಬದಲಾಯಿಸಿತು. ಮೊಬೈಲ್ ತಂತ್ರಜ್ಞಾನವು ಎಲ್ಲವನ್ನೂ ಸುಲಭವಾಗಿ ಲಭ್ಯವಾಗುವಂತೆ ಮಾಡಿತು. ಇಂದು, ಕೃತಕ ಬುದ್ಧಿಮತ್ತೆಯು (AI) ಸ್ವತಃ ಮಾನವ ಸಾಮರ್ಥ್ಯವನ್ನೇ ಮಾರ್ಪಡಿಸುವ ಭರವಸೆ ನೀಡುತ್ತಿದೆ. ನಾನು ಹೋದಲ್ಲೆಲ್ಲಾ ಜನರು ಕೇವಲ ಮತ್ತೊಂದು ತಂತ್ರಜ್ಞಾನವಾಗಿ ಮಾತ್ರವಲ್ಲದೆ, ಬಹುಶಃ ನಮ್ಮ ಪೀಳಿಗೆಯನ್ನು ವ್ಯಾಖ್ಯಾನಿಸುವ ಪ್ರಮುಖ ಶಕ್ತಿಯಾಗಿ AI ಬಗ್ಗೆ ಮಾತನಾಡುತ್ತಾರೆ" ಎಂದರು.

Google IO Connect India 2026  (3)

"ಕರ್ನಾಟಕದ ಮುಖ್ಯಮಂತ್ರಿಯಾಗಿ, ನಾನು ನಿಮ್ಮ ಮುಂದೆ ಅಪಾರ ಹೆಮ್ಮೆಯಿಂದ ನಿಂತಿದ್ದೇನೆ. ಏಕೆಂದರೆ ಅಂತಹ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತಿರುವ ಪ್ರಮುಖ ಸ್ಥಳಗಳಲ್ಲಿ ನಮ್ಮ ಸ್ವಂತ ರಾಜ್ಯವೂ ಒಂದಾಗಿದೆ. ಬೆಂಗಳೂರಿನಲ್ಲಿ ತಂತ್ರಜ್ಞಾನವು ಕೇವಲ ಕಚೇರಿ ಕಟ್ಟಡಗಳಿಗೆ ಸೀಮಿತವಾಗಿಲ್ಲ. ಇದು ಕಾಫಿ ಶಾಪ್‌ಗಳ ಸಂಭಾಷಣೆಗಳಲ್ಲಿ, ನಮ್ಮ ತರಗತಿ ಕೋಣೆಗಳಲ್ಲಿ ಮತ್ತು ಸಂಶೋಧನಾ ಪ್ರಯೋಗಾಲಯಗಳಲ್ಲಿ ಪ್ರಾರಂಭವಾಗುತ್ತದೆ. ಮುಂದೆ ಅದು ಒಂದು ನವೋದ್ಯಮವಾಗಿ ರೂಪುಗೊಳ್ಳುತ್ತದೆ. ಕೆಲವು ಬಾರಿ ಯುನಿಕಾರ್ನ್ (ಪ್ರತಿಷ್ಠಿತ ಕಂಪನಿ) ಆಗುತ್ತದೆ ಮತ್ತು ಅಪರೂಪಕ್ಕೆ ಇಡೀ ಪ್ರಪಂಚವನ್ನೇ ಬದಲಾಯಿಸುತ್ತದೆ. ಇದು ಬೆಂಗಳೂರಿನ ಮನೋಭಾವ ಮತ್ತು ಇದು ಕರ್ನಾಟಕದ ಚೈತನ್ಯ" ಎಂದು ಬಣ್ಣಿಸಿದರು.

"ಒಂದು ಆಲೋಚನೆಯನ್ನು ತೆಗೆದುಕೊಳ್ಳಿ. ಆ ಒಂದು ಆಲೋಚನೆಯನ್ನೇ ನಿಮ್ಮ ಜೀವನವಾಗಿಸಿಕೊಳ್ಳಿ" ಎಂದು ಸ್ವಾಮಿ ವಿವೇಕಾನಂದರು ನಮಗೆ ಸಂದೇಶವನ್ನು ನೀಡಿದ್ದಾರೆ. ಕರ್ನಾಟಕಕ್ಕೆ ಆ ಆಲೋಚನೆ ಅತ್ಯಂತ ಸ್ಪಷ್ಟವಾಗಿದೆ. ಇಂದು ನಮ್ಮ ರಾಜ್ಯವು ಭಾರತದ ಸಾಫ್ಟ್‌ವೇರ್ ರಫ್ತಿನ 40% ರಷ್ಟು ಕೊಡುಗೆ ನೀಡುತ್ತಿದೆ. ಬೆಂಗಳೂರು 17,000 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ನೆಲೆಯಾಗಿದೆ, ಇದು ಭಾರತದ ಸ್ಟಾರ್ಟ್‌ಅಪ್ ರಾಜಧಾನಿಯಾಗಿದೆ. ಇಡೀ ಪ್ರಪಂಚಕ್ಕಾಗಿ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು, ಇಂಜಿನಿಯರಿಂಗ್ ಮತ್ತು ಹೊಸ ಆವಿಷ್ಕಾರಗಳನ್ನು ಮಾಡಲು ಸಾವಿರಾರು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಕರ್ನಾಟಕವನ್ನು ಆರಿಸಿಕೊಂಡಿವೆ" ಎಂದು ವಿವರಿಸಿದರು.

ಗೂಗಲ್ ಅತ್ಯದ್ಭುತ ಪಾಲುದಾರ:

ಆ ಪ್ರಯಾಣದಲ್ಲಿ ಗೂಗಲ್ ಅತ್ಯದ್ಭುತ ಪಾಲುದಾರನಾಗಿದೆ. ಕಳೆದ ಎರಡು ದಶಕಗಳಿಂದ, ಗೂಗಲ್ ಬೆಂಗಳೂರನ್ನು ಕೇವಲ ಒಂದು ಕಚೇರಿಯ ಸ್ಥಳವಾಗಿ ಮಾತ್ರವಲ್ಲದೆ, ಇಂಜಿನಿಯರಿಂಗ್, ಸಂಶೋಧನೆ ಮತ್ತು ನಾವೀನ್ಯತೆಗಾಗಿ ತನ್ನ ಅತ್ಯಂತ ಪ್ರಮುಖ ಜಾಗತಿಕ ಕೇಂದ್ರಗಳಲ್ಲಿ ಒಂದಾಗಿ ಆಯ್ಕೆ ಮಾಡಿಕೊಂಡಿದೆ.

Google IO Connect India 2026  (4)

"ಭಾರತದಲ್ಲಿ ಗೂಗಲ್ 18 ಸಾವಿರ ಸಿಬ್ಬಂದಿ ಹೊಂದಿದ್ದು, ಅದರಲ್ಲಿ 12 ಸಾವಿರ ಸಿಬ್ಬಂದಿ ಬೆಂಗಳೂರಿನಲ್ಲಿದ್ದಾರೆ. ಇದರೊಂದಿಗೆ ಭಾರತದಲ್ಲಿ ಗೂಗಲ್ ನ ಸಿಬ್ಬಂದಿಯ 2/3 ಪ್ರಮಾಣ ಬೆಂಗಳೂರಿನಲ್ಲಿದೆ. ಇದು ನಮ್ಮ ನಗರದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನಮ್ಮ ಜೊತೆಗೆ ಇಷ್ಟು ಉತ್ತಮ ಸಂಬಂಧ ಹೊಂದಿರುವ ಗೂಗಲ್ ನಾಯಕರು, ನೀತಿ ರೂಪಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದರು.

"ಗೂಗಲ್ ಜೊತೆಗಿನ ಈ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೋಯ್ಯಲು, ಬಯಸುತ್ತೇವೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ. ಎಐ ತಂತ್ರಜ್ಞಾನ ಮೂಲಕ ನಮ್ಮ ನಗರದ ಸಂಚಾರ ಸಮಸ್ಯೆಗಳನ್ನು ನಿವಾರಿಸೋಣ. 25 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 70 ಲಕ್ಷ ಜನಸಂಖ್ಯೆ ಇತ್ತು. ಈಗ 1.40 ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ಸಂಚಾರ ದಟ್ಟಣೆ ಸಮಸ್ಯೆ ಇದ್ದು, ಇದನ್ನು ನಿವಾರಿಸಲು ನಾವು ಪರಿಹಾರ ಹುಡುಕುತ್ತಿದ್ದೇವೆ" ಎಂದು ಭರವಸೆ ನೀಡಿದರು.

ರಾಜ್ಯಾದ್ಯಂತ 10 ಸಾವಿರ ʻಭಾರತ್ ಜೋಡೋ ಯುವ ಸಂಘಗಳʼ ಸ್ಥಾಪನೆಗೆ ಸರ್ಕಾರ ಆದೇಶ; ಏನಿದರ ಉದ್ದೇಶ?

"ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕರ್ನಾಟಕ ಹಾಗೂ ದೇಶದ ಪ್ರಗತಿಗೆ ಶ್ರಮಿಸೋಣ. ಕರ್ನಾಟಕ ಸರ್ಕಾರ ನಿಮ್ಮ ಜೊತೆಗೆ ನಿಲ್ಲಲಿದೆ" ಎಂದು ಕರೆ ನೀಡಿದರು.