ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉರ್ದುವಿನಲ್ಲಿ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ; ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲೂ ಮುದ್ರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಹಾಗೂ ವಿಪಕ್ಷಗಳು ಆಕ್ರೋಶ ಹೊರಹಾಕಿವೆ.

ಉರ್ದುವಿನಲ್ಲಿ ಆಹ್ವಾನ ಪತ್ರಿಕೆ; ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಉರ್ದುವಿನಲ್ಲಿ ರಾಜ್ಯ ಸರ್ಕಾರದ ಕಾರ್ಯಕ್ರಮದ ಆಹ್ವಾನ ಪತ್ರಿಕೆ. -

Prabhakara R
Prabhakara R Feb 25, 2026 8:46 PM

ಬೆಂಗಳೂರು, ಫೆ.25: ಆರೋಗ್ಯ ಇಲಾಖೆಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದು ಭಾಷೆಯಲ್ಲಿ (Urdu invitation card) ಮುದ್ರಿಸಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಹಾಗೂ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ, ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಏನಿದು ವಿವಾದ?

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಮಹತ್ವದ ಕಾರ್ಯಕ್ರಮದ (ಫೆ.25) ಆಹ್ವಾನ ಪತ್ರಿಕೆಯನ್ನು ಕನ್ನಡ ಮಾತ್ರವಲ್ಲದೇ ಪ್ರತ್ಯೇಕವಾಗಿ ಉರ್ದು ಭಾಷೆಯಲ್ಲೂ ಮುದ್ರಿಸಲಾಗಿದೆ. ಸರ್ಕಾರದ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ಯಾವುದೇ ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆಯನ್ನು ಬಳಸಿದ ಉದಾಹರಣೆಗಳಿಲ್ಲ. ಈಗ ದಿಢೀರನೆ ಉರ್ದು ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸರ್ಕಾರದ ಈ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುವಾಗ ಉರ್ದು ಭಾಷೆಯ ತುಷ್ಟೀಕರಣದ ಅಗತ್ಯವೇನಿತ್ತು? ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.

ಸಚಿವ ದಿನೇಶ್‌ ಗುಂಡೂರಾವ್‌ ಸಮರ್ಥನೆ

ಈ ಬಗ್ಗೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಪ್ರತಿಕ್ರಿಯಿಸಿ, ಉರ್ದು ಕೂಡ ಒಂದು ಭಾಷೆ ತಾನೇ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲೂ ಪ್ರಕಟವಾಗಿದೆ. ಉರ್ದು ಓದುವವರು ಇದ್ದಾರೆ, ಹೀಗಾಗಿ ಉರ್ದುವಿನಲ್ಲಿ ಆಹ್ವಾನ ಪತ್ರಿಕೆ ಪ್ರಕಟವಾಗಿದೆ ಎಂದು ಉರ್ದು ಭಾಷೆ ಬಳಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಊರ್ದು ಓದುವವರು ಬೆಂಗಳೂರಲ್ಲೂ ಇದ್ದಾರೆ, ಕರ್ನಾಟಕದಲ್ಲೂ ಇದ್ದಾರೆ. ಅದರಲ್ಲಿ ಏನು ತಪ್ಪಿದೆ. ಓಲೈಕೆ ಮಾಡೋದು ಏನಿದೆ? ಹಿಂದಿಯಲ್ಲಿ ಬರೆದರೆ ಹಿಂದಿ ಓಲೈಕೆನಾ?, ಇಂಗ್ಲಿಷ್ ಕೊಟ್ಟರೆ ಇಂಗ್ಲಿಷ್ ಓಲೈಕೆನಾ?, ಜಾಹೀರಾತು ಕೋಡೋಕೆ ಕಾರಣ ಎಲ್ಲರಿಗೂ ಮಾಹಿತಿ ತಲುಪಲಿ ಅಂತ ಅಷ್ಟೇ ಎಂದು ಸಚಿವರು ತಿಳಿಸಿದ್ದಾರೆ.

ಇಂತಹ ತಪ್ಪುಗಳನ್ನು ಸಹಿಸಲ್ಲ; ಕರವೇ ನಾರಾಯಣಗೌಡ ಎಚ್ಚರಿಕೆ

ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಪ್ರತಿಕ್ರಿಯಿಸಿ, ಕರ್ನಾಟಕದ ಆಡಳಿತ ಭಾಷೆ ಕನ್ನಡ. ಸರ್ಕಾರದ ಯಾವುದೇ ಕಾರ್ಯಕ್ರಮ, ಜಾಹೀರಾತು, ನಾಮಫಲಕ ಆಗಲಿ, ಕನ್ನಡದಲ್ಲೇ ಮುದ್ರಿಸಬೇಕು. ಕೇಂದ್ರ ಸರ್ಕಾರದ ಕಾರ್ಯಕ್ರಮವಿದ್ದರೆ ಬೇಕಾದರೆ ಇಂಗ್ಲಿಷ್‌ ಬಳಸಬಹುದು. ಆದರೆ, ಕರ್ನಾಟಕದ ಆಡಳಿತ ಭಾಷೆ ಕನ್ನಡ ಎಂದು ಸರ್ಕಾರ ಘೋಷಿಸಿದೆ. ಮಾನ್ಯ ಸಿದ್ದರಾಮಯ್ಯ ಅವರು ನಿಮ್ಮ ಆಡಳಿತದಲ್ಲಿ ಉರ್ದು ಭಾಷೆಯನ್ನು ಬಳಸಿರುವುದು ಯಾಕೆ ಎಂಬುವುದು ನಮಗೆ ಅರ್ಥ ಆಗಿಲ್ಲ.

ಈಗ ಉರ್ದು ಭಾಷಿಕರನ್ನು ಓಲೈಸಲು ಉರ್ದು ಆಹ್ವಾನ ಪತ್ರಿಕೆ ಮುದ್ರಿಸಿದ್ದು, ನಾಳೆ, ತೆಲುಗು, ತಮಿಳು, ಮರಾಠಿ ಭಾಷಿಕರನ್ನು ಓಲೈಸಲು ಅವರವರ ಭಾಷೆಯಲ್ಲೇ ಮುದ್ರಿಸುವುದಾದರೆ, ನಿಮ್ಮ ಸರ್ಕಾರದ ಆಡಳಿತ ಭಾಷೆ ಯಾವುದು ಎಂಬುವುದು ಗೊತ್ತಾಗಬೇಕು. ಸಿದ್ದರಾಮಯ್ಯನವರಿಗೆ ಕನ್ನಡ ಎಂದರೆ ಭಾರಿ ಕಾಳಜಿ, ಕನ್ನಡರಾಮಯ್ಯ ಎಂದು ಕರೆಸಿಕೊಳ್ಳುವ ಅವರು ತಕ್ಷಣವೇ ಎಚ್ಚೆತ್ತುಕೊಂಡು, ಇದಕ್ಕೆ ಕಾರಣವಾದವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು.

ಇದು ಆರೋಗ್ಯ ಇಲಾಖೆಯ ಆಹ್ವಾನ ಪತ್ರಿಕೆಯಾಗಿದ್ದರಿಂದ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಮನವರಿಕೆ ಮಾಡುತ್ತೇವೆ. ನೀವು ಯಾರನ್ನೋ ಓಲೈಸಲು ಈ ರೀತಿ ಬೇರೆ ಭಾಷೆ ಬಳಕೆ ಮಾಡಬಾರದು. ಇನ್ನುಮುಂದೆ ಇಂತಹ ತಪ್ಪುಗಳಾದರೆ ಕರ್ನಾಟಕ ರಕ್ಷಣಾ ವೇದಿಕೆ ಸಹಿಸಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.



ಬಾಲಕಿ ಜತೆ ಅನುಚಿತ ವರ್ತನೆ; ಸ್ವಯಂ ಘೋಷಿತ ದೇವ ಮಾನವ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ದೂರು

ಉರ್ದುವಿನಲ್ಲಿ ಯಾಕೆ ಪತ್ರ?; ರೂಪೇಶ್‌ ರಾಜಣ್ಣ ಆಕ್ರೋಶ

ಉರ್ದುವಿನಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಹೋರಾಟಗಾರ ರೂಪೇಶ್‌ ರಾಜಣ್ಣ ಕಿಡಿಕಾರಿದ್ದಾರೆ. ಕರ್ನಾಟಕ ಸರ್ಕಾರ ಕನ್ನಡ ಮರೆತುಬಿಟ್ರಾ?ಯಾಕೆ ಉರ್ದುವಿನಲ್ಲಿ ಪತ್ರ?, ಕರ್ನಾಟಕದ ಆಡಳಿತ ಭಾಷೆ ಕನ್ನಡವೇ ಹೊರೆತು ಉಳಿದ್ಯಾವ ಭಾಷೆಗಳಲ್ಲ. ನಾವು ಯಾವ ಭಾಷೆಯ ವಿರೋಧಿಗಳಲ್ಲ ಆದ್ರೆ ಈ ರೀತಿ ನಮ್ಮ ಮೇಲೆ ಹೇರಿಕೆ ಮಾಡೋದು ನಾವು ಖಂಡಿಸುತ್ತೇವೆ. ಕೂಡಲೇ ಇದನ್ನ ಹಿಂಪಡೆದು ಕನ್ನಡ ಪತ್ರಕ್ಕಾಗಿ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.