MLA Rahul Mamkootathil: ಮಹಿಳೆಯರಿಗೆ ಕಿರುಕುಳ ಆರೋಪ: ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಪಕ್ಷದಿಂದ ಅಮಾನತು
ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಮಹಿಳೆಯರು ಕಿರುಕುಳದ ಆರೋಪಗಳನ್ನು ಹೊರಿಸಿದ್ದರಿಂದ ಸೋಮವಾರ ಕಾಂಗ್ರೆಸ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ಅವರು ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ಅವರನ್ನು ಪಕ್ಷದಿಂದಲೂ ಹೊರಹಾಕಲಾಗಿದೆ.


ತಿರುವನಂತಪುರಂ: ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪದ (harassment row) ಹಿನ್ನೆಲೆಯಲ್ಲಿ ಪಾಲಕ್ಕಾಡ್ ಕಾಂಗ್ರೆಸ್ ಶಾಸಕ (Palakkad MLA) ರಾಹುಲ್ ಮಮ್‌ಕೂಟತಿಲ್ (MLA Rahul Mamkootathil) ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಹಲವು ಮಹಿಳೆಯರು ರಾಹುಲ್ ಮಮ್‌ಕೂಟತಿಲ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಕಾಂಗ್ರೆಸ್ (Congress) ಪ್ರಾಥಮಿಕ ಸದಸ್ಯತ್ವದಿಂದಲೂ ರಾಹುಲ್ ಮಮ್‌ಕೂಟತಿಲ್ ಅನ್ನು ಅಮಾನತುಗೊಳಿಸಲಾಗಿದೆ. ಈ ಹಿಂದೆ ಕೇರಳ ಯುವ ಕಾಂಗ್ರೆಸ್ (Kerala Youth Congress) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಹೆಚ್ಚುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಹಲವು ಮಹಿಳೆಯರು ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಕಿರುಕುಳದ ಆರೋಪಗಳನ್ನು ಹೊರಿಸಿದ್ದರಿಂದ ಸೋಮವಾರ ಕಾಂಗ್ರೆಸ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ. ಪಕ್ಷದ ಒಳಗೆ ಹಾಗೂ ಹೊರಗೆ ಹೆಚ್ಚುತ್ತಿದ್ದ ಒತ್ತಡದ ಹಿನ್ನೆಲೆಯಲ್ಲಿ ಅವರು ಕೆಲವು ದಿನಗಳ ಹಿಂದೆಯಷ್ಟೇ ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ಅವರನ್ನು ಪಕ್ಷದಿಂದಲೂ ಹೊರಹಾಕಲಾಗಿದೆ.
ಶಾಸಕರ ಅಮಾನತಿಗೆ ಪಕ್ಷವು ತ್ವರಿತವಾಗಿ ಕಾರ್ಯನಿರ್ವಹಿಸಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಕೆ. ಮುರಳೀಧರನ್ ಹೇಳಿದ್ದಾರೆ. ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಯಾವುದೇ ಲಿಖಿತ ದೂರು ಇಲ್ಲ. ಯಾವುದೇ ದೂರು ಅಥವಾ ಆಡಿಯೊ ಹೊರಬಂದರೆ ಪಕ್ಷವು ಕಠಿಣ ಕ್ರಮ ಕೈಗೊಳ್ಳುತ್ತದೆ. ಇದೀಗ ನಾವು ಅವರ ವಿರುದ್ಧ ಪ್ರಾಥಮಿಕ ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮಲಯಾಳಂ ನಟಿ ಮತ್ತು ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್ ಕಳೆದ ವಾರ ಪ್ರಮುಖ ರಾಜಕೀಯ ಪಕ್ಷದ ನಾಯಕರೊಬ್ಬರು ಪದೇ ಪದೆ ತನಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾರೆ ಮತ್ತು ಹೊಟೇಲ್‌ಗೆ ಆಹ್ವಾನಿಸಿದ್ದಾರೆ ಎಂದು ಆರೋಪಿಸಿದಾಗ ಈ ವಿವಾದ ಆರಂಭವಾಗಿತ್ತು.
ಅವರು ಯಾರನ್ನೂ ಹೆಸರಿಸದಿದ್ದರೂ ಬಿಜೆಪಿ ಪಾಲಕ್ಕಾಡ್‌ನಲ್ಲಿರುವ ಮಮ್‌ಕೂಟತಿಲ್ ಅವರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿ ಅವರೇ ಆರೋಪಿ ಎಂದು ಹೇಳಿ ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಸಿಪಿಐ(ಎಂ)ನ ಯುವ ಘಟಕ ಡಿವೈಎಫ್‌ಐ ಕೂಡ ಅವರ ರಾಜೀನಾಮೆಗೆ ಒತ್ತಾಯಿಸಿ ಮೆರವಣಿಗೆ ನಡೆಸಿತು.
ಇದಾದ ಬಳಿಕ ಬರಹಗಾರ್ತಿ ಹನಿ ಭಾಸ್ಕರನ್ ಕೂಡ ಮಮ್‌ಕೂಟತಿಲ್ ವಿರುದ್ಧ ಆರೋಪ ಮಾಡಿದರು. ಯುವ ಕಾಂಗ್ರೆಸ್‌ನಲ್ಲಿ ಅವರ ವಿರುದ್ಧ ಹಲವಾರು ದೂರುಗಳು ಬಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದರು.
ಅವಂತಿಕಾ ಎಂಬ ಟ್ರಾನ್ಸ್ ಮಹಿಳೆ ಕೂಡ ಮಮ್‌ಕೂಟತಿಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶ ಕಳುಹಿಸಿದ್ದಾರೆ. ಚುನಾವಣಾ ಚರ್ಚೆಯ ಸಮಯದಲ್ಲಿ ಅವರನ್ನು ಮೊದಲು ಭೇಟಿಯಾಗಿದ್ದೆ. ಬಳಿಕ ಅವರ ಸಂದೇಶಗಳಿಂದ ಅಸಹ್ಯದ ಅನುಭವವಾಗಿದೆ ಎಂದು ದೂರಿದ್ದಾರೆ.
ಈ ಎಲ್ಲ ಆರೋಪಗಳ ಬಳಿಕ ಮಮ್‌ಕೂಟತಿಲ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ತಾನು ಯಾವುದೇ ತಪ್ಪು ಮಾಡಿಲ್ಲ. ಇದು ತನ್ನ ವೈಯಕ್ತಿಕ ನಿರ್ಧಾರ ಎಂದು ಅವರು ಹೇಳಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಸಮರ್ಥಿಸಿಕೊಳ್ಳಲು ಸಮಯ ವ್ಯರ್ಥ ಮಾಡಬಾರದು. ನಾನು ಅವರ ಸಮಯವನ್ನು ಗೌರವಿಸುತ್ತೇನೆ ಎಂದು ಅವರು ಹೇಳಿದ್ದರು. ಇದಾದ ಬಳಿಕ ಅವರ ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆಗಳು ತೀವ್ರಗೊಂಡವು. ಆದರೆ ರಾಹುಲ್ ಮಮ್‌ಕೂಟತಿಲ್ ಇದೆಲ್ಲವೂ ರಾಜಕೀಯ ಪಿತೂರಿ ಎಂದು ತಿಳಿಸಿದ್ದಾರೆ.