ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pralhad Joshi: ಜಮೀರ್ ಬಾಂಬ್ ಬೆನ್ನಿಗೆ ಕಟ್ಟಿಕೊಂಡು ಪಾಕ್‌ಗೆ ಹೋಗಬೇಕಿಲ್ಲ.. ಸುಮ್ಮನಿದ್ದರೆ ಸಾಕು, ಅದೇ ದೊಡ್ಡ ದೇಶ ಸೇವೆ: ಜೋಶಿ

Pralhad Joshi: ಪ್ರಧಾನಿ ಮೋದಿ ಅವರು ಅವಕಾಶ ಕೊಟ್ಟರೆ ಪಾಕ್‌ ವಿರುದ್ಧ ಯುದ್ಧಕ್ಕೆ ನಾನು ರೆಡಿʼ ಎಂದಿರುವ ಜಮೀರ್‌ ಅಹ್ಮದ್‌ ದೊಡ್ಡ ತ್ಯಾಗಿ ಎನ್ನುವುದು ಗೊತ್ತಿದೆ. ಅವರಂಥ ಮಹಾನ್‌ ತ್ಯಾಗಿ ಯಾರೂ ಇಲ್ಲ. ನಮ್ಮ ಸೈನ್ಯದ ಮೇಲೆ ನಂಬಿಕೆಯಿಟ್ಟು ಸುಮ್ಮನಿದ್ದರೆ ಸಾಕಷ್ಟೇ ಎಲ್ಲವನ್ನೂ ಸೈನ್ಯವೇ ನಿಭಾಯಿಸುತ್ತದೆ ಎಂದು ಅವರು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದ್ದಾರೆ.

ಜಮೀರ್ ಸುಮ್ಮನಿದ್ದರೆ ಸಾಕು, ಅದೇ ದೊಡ್ಡ ದೇಶ ಸೇವೆ: ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

Profile Siddalinga Swamy May 3, 2025 5:04 PM

ವಿಜಯಪುರ: ಜಮೀರ್ ಅಹ್ಮದ್ ಬಾಂಬ್ ಬೆನ್ನಿಗೆ ಕಟ್ಟಿಕೊಂಡು ಪಾಕ್‌ಗೆ ಹೋಗಬೇಕಿಲ್ಲ. ಭಾರತೀಯ ಸೇನೆ ಮೇಲೆ ವಿಶ್ವಾಸವಿರಿಸಿ ಸುಮ್ಮನಿದ್ದರೆ ಸಾಕು. ದೇಶಕ್ಕೆ ಅದೇ ಅವರ ದೊಡ್ಡ ಸೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ತಿಳಿಸಿದರು. ವಿಜಯಪುರದ ತೊರವಿ ಶ್ರೀ ಲಕ್ಷ್ಮೀ ನರಸಿಂಹ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್‌ ಪಾಕಿಸ್ತಾನದ ಜತೆ ಯುದ್ಧಕ್ಕೆ ಹೋಗಬೇಕಿಲ್ಲ. ಬದಲಾಗಿ ನಮ್ಮ ದೇಶದ ಸೇನೆ ಮೇಲೆ ನಂಬಿಕೆಯಿಟ್ಟು ಶಾಂತವಾಗಿದ್ದರೆ ಅದೇ ದೇಶಕ್ಕೆ ಸಲ್ಲಿಸುವ ಅತಿ ದೊಡ್ಡ ಸೇವೆ ಎಂದು ಟಾಂಗ್‌ ಕೊಟ್ಟರು.

ಪಹಲ್ಗಾಮ್‌ ಭಯೋತ್ಪಾದನಾ ದಾಳಿ ಬಳಿಕ ಕಾಂಗ್ರೆಸ್ಸಿಗರ ಹೇಳಿಕೆಗಳನ್ನು ಗಮನಿಸುತ್ತಿದ್ದೇವೆ. ಒಬ್ಬೊಬ್ಬರು ಒಂದೊಂದು ವಿಧದಲ್ಲಿ ಮಾತನಾಡುತ್ತಿದ್ದಾರೆ. ರಾಬರ್ಟ್‌ ವಾದ್ರಾ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಸಂತೋಷ್‌ ಲಾಡ್‌, ಆರ್.ಬಿ. ತಿಮ್ಮಾಪುರ, ಜಮೀರ್‌ ಅಹ್ಮದ್‌ ಹೀಗೆ ಒಬ್ಬೊಬ್ಬರೇ ಒಂದೊಂದು ರೀತಿ ರಾಗ ಎಳೆಯುತ್ತಿದ್ದಾರೆ. ತಮಗೆ ತೋಚಿದಂತೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.

ಜಮೀರ್‌ ದೊಡ್ಡ ತ್ಯಾಗಿ ಅನ್ನೋದು ಗೊತ್ತಿದೆ

ಪ್ರಧಾನಿ ಮೋದಿ ಅವರು ಅವಕಾಶ ಕೊಟ್ಟರೆ ಪಾಕ್‌ ವಿರುದ್ಧ ಯುದ್ಧಕ್ಕೆ ನಾನು ರೆಡಿʼ ಎಂದಿರುವ ಜಮೀರ್‌ ಅಹ್ಮದ್‌ ದೊಡ್ಡ ತ್ಯಾಗಿ ಎನ್ನುವುದು ಗೊತ್ತಿದೆ. ಅವರಂಥ ಮಹಾನ್‌ ತ್ಯಾಗಿ ಯಾರೂ ಇಲ್ಲ. ನಮ್ಮ ಸೈನ್ಯದ ಮೇಲೆ ನಂಬಿಕೆಯಿಟ್ಟು ಸುಮ್ಮನಿದ್ದರೆ ಸಾಕಷ್ಟೇ ಎಲ್ಲವನ್ನೂ ಸೈನ್ಯವೇ ನಿಭಾಯಿಸುತ್ತದೆ ಎಂದು ಅವರು ತಿರುಗೇಟು ನೀಡಿದರು.

ಭಯೋತ್ಪಾದಕರನ್ನ ಬ್ರದರ್ಸ್‌ ಅನ್ನದಿದ್ರೆ ಸಾಕು

ನಮ್ಮ ದೇಶದ ಸೇನೆ ಬಲಿಷ್ಠವಾಗಿದೆ. ಭಾರತೀಯ ಸೈನ್ಯದ ಶಕ್ತಿ, ಗುಪ್ತಚರ ದಳದ ಬಗ್ಗೆ ವಿಶ್ವಾಸವಿಡಬೇಕು. ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನು ಬಿಟ್ಟು ಕಾಂಗ್ರೆಸ್‌ ಪಕ್ಷದವರು ಮೊದಲು ಶಾಂತವಾಗಿದ್ದರೆ ದೇಶಕ್ಕೆ ಅದೇ ದೊಡ್ಡ ಸೇವೆ, ತ್ಯಾಗ. ಜಮೀರ್, ಸಂತೋಷ ಲಾಡ್, ಖರ್ಗೆ, ಸಿದ್ದರಾಮಯ್ಯ ಸುಮ್ಮನಿದ್ದರೆ, ಡಿ.ಕೆ. ಶಿವಕುಮಾರ್‌ ಭಯೋತ್ಪಾದಕರನ್ನು ಬ್ರದರ್ಸ್ ಅನ್ನದಿದ್ರೆ ಅಷ್ಟೇ ಸಾಕು. ಸೇನೆ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಹೇಳಿದರು.

ಪಹಲ್ಗಾಮ್‌ ದಾಳಿಯಾಗುತ್ತಲೇ ಪಾಕಿಸ್ತಾನದ ವರಸೆಯಲ್ಲಿ ಮಾತನಾಡಿದ ಕಾಂಗ್ರೆಸ್ಸಿಗರು, ಜನರ ಬಾಯಿಗೆ ಆಹಾರವಾದರು. ಈಗ ಪಾಕಿಸ್ತಾನದ ಮೇಲೆ ಅಟ್ಯಾಕ್ ಮಾಡಬೇಕು ಅಂತಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸರ್ಕಾರದ ನಿಲುವಿಗೆ ಬದ್ಧ ಎಂದರೆ, ಇಲ್ಲಿ ಗುಪ್ತಚರ ದಳ ವೈಫಲ್ಯ ಎಂದು ದೂರುತ್ತಿದ್ದಾರೆ. ಆದರೆ, ಯುಪಿಎ ಅವಧಿಯಲ್ಲಾದ ಮುಂಬೈ ದಾಳಿಯಂತಹ ಭಯೋತ್ಪಾದನಾ ಚಟುವಟಿಕೆ ದೇಶದಲ್ಲೆಲ್ಲೂ ನಡೆಯಲು ಬಿಟ್ಟಿಲ್ಲ. ಸಂಪೂರ್ಣ ನಿಗ್ರಹಿಸುತ್ತಿದ್ದೇವೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ತೇವೆ

ದೇಶದಲ್ಲಿ ಭಯೋತ್ಪಾದನೆ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಪಾಕಿಸ್ತಾನಕ್ಕೆ ರಾಜತಾಂತ್ರಿಕ ನಿಲುವು ಮುಖೇನ ಸ್ಟ್ರೋಕ್‌ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್‌ನವರು ಸಿಂಧು ನದಿ ನೀರು ಎಲ್ಲಿ ಹಿಡಿದಿಟ್ಟುಕೊಳ್ಳುತ್ತೀರಿ? ಎನ್ನುತ್ತ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಬಿಡುವಂತೆ ಹೇಳುತ್ತಿದ್ದಾರೆ. ಸಿಂಧು ನದಿ ನೀರಿಲ್ಲದಿದ್ರೆ ಏನಾಗುತ್ತದೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಿದೆ. ಆದರೆ ಈ ಕಾಂಗ್ರೆಸ್‌ನವರಿಗೆ ಗೊತ್ತಾಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನೂ ಓದಿ | Pralhad Joshi: ಕೆಪಿಎಸ್‌ಸಿ ದೇಶಕ್ಕೆ ಕಪ್ಪು ಚುಕ್ಕೆಯಾಗಿರುವುದು ಅತ್ಯಂತ ದುರಾದೃಷ್ಟಕರ- ಪ್ರಲ್ಹಾದ್‌ ಜೋಶಿ

ಕರ್ನಾಟಕದಲ್ಲಿ ಪ್ರಕ್ಷುಬ್ಧತೆ

ರಾಜ್ಯದಲ್ಲಿ ಸದ್ಯಕ್ಕೆ ಪ್ರಕ್ಷುಬ್ದತೆ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ಯೆ, ಕೊಲೆ-ಸುಲಿಗೆ, ಅತ್ಯಾಚಾರ, ಗುಂಪು ಘರ್ಷಣೆಯಿಂದಾಗಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದೆಲ್ಲ ವೋಟ್‌ ಬ್ಯಾಂಕ್‌ ರಾಜಕಾರಣ ಮತ್ತು ರಾಜ್ಯ ಸರ್ಕಾರದ ತುಷ್ಟೀಕರಣದ ಪ್ರಭಾವ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದರು.