Bihar Election ground Report from Raghav Sharma Nidle: ಮಹುವಾದಲ್ಲಿ ತೇಜ್ ಪ್ರತಾಪ್ ಬಗ್ಗೆ ಒಲವು
ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಳೆದ ಬಾರಿ ಸೋತಿದ್ದ ಎಲ್‌ಜೆಪಿಯ ಸಂಜಯ್ ಸಿಂಗ್ ಕಣದಲ್ಲಿದ್ದರೆ, 2020ರಲ್ಲಿ ಜೆಡಿಯುನಿಂದ ಸ್ಫರ್ಧಿಸಿದ್ದ ಆಸ್ಮಾ ಪರ್ವೀನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆಸ್ಮಾ ಕಳೆದ ಬಾರಿ ೨ನೇ ಸ್ಥಾನದಲ್ಲಿದ್ದರು. ಈ ಬಾರಿ ಟಿಕೆಟ್ ಸಿಗದೆ ಪಕ್ಷೇತರ ಸ್ಪರ್ಧೆಗೆ ಮುಂದಾಗಿದ್ದರಿಂದ ಅವರನ್ನು ಜೆಡಿಯುನಿಂದ ಉಚ್ಚಾಟಿಸಲಾಗಿದೆ.
-
Ashok Nayak
Oct 30, 2025 8:05 AM
ಉಪಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಾಗಿದ್ದ ತೇಜ್ ಪ್ರತಾಪ್‌ರಿಂದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮ
ಪಟನಾ: ಬಿಹಾರ ಚುನಾವಣೆಯಲ್ಲಿ ವೈಶಾಲಿ ಜಿಲ್ಲೆಯ ಮಹುವಾ ವಿಧಾನಸಭೆ ಸಾಕಷ್ಟು ಗಮನ ಸೆಳೆಯುತ್ತಿದೆ. ಇಲ್ಲಿ ನಾವು ಜನರೊಂದಿಗೆ ಚುನಾವಣೆ ಚರ್ಚೆ ಆರಂಭಿಸುತ್ತಿದ್ದಂತೆಯೇ ಹೊಸದಾಗಿ ಸ್ಥಾಪನೆಗೊಂಡಿರುವ ಮಹುವಾ ಮೆಡಿಕಲ್ ಕಾಲೇಜಿನ ಬಗ್ಗೆಯೇ ಅನೇಕ ಮತದಾರರು ಪ್ರಸ್ತಾಪಿಸ ತೊಡಗಿದರು.
ಒಂದೊಮ್ಮೆ ಯಾರಿಗೂ ಬೇಡವಾಗಿದ್ದ ಮಹುವಾ ಬಗ್ಗೆ ಪಕ್ಕದ ಮುಜ-ರಜಿಲ್ಲೆಯ ಜನರೂ ಮಾತನಾಡುತ್ತಿದ್ದಾರೆ, ಇದಕ್ಕೆ ಕಾರಣವೇ ಮೆಡಿಕಲ್ ಕಾಲೇಜು. ಮಹುವಾದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕು ಮತ್ತು ಜನ ಚಿಕಿತ್ಸೆಗಾಗಿ ದೂರದ ಪಟನಾಕ್ಕೆ ಹೋಗುವಂತಾಗ ಬಾರದು ಎಂದೇ ಲಾಲೂ ಪ್ರಸಾದ್ ಯಾದವ್ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು.
2015ರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಮೈತ್ರಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಾಗಿದ್ದ ತೇಜ್ ಪ್ರತಾಪ್, ನಿತೀಶರ ಬೆನ್ನು ಬಿದ್ದು ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ಪಡೆದುಕೊಂಡಿದ ರು. ಅದರ ಫಲವಾಗಿಯೇ ಈಗ ಈ ಕಾಲೇಜು ಮತ್ತು ಆಸ್ಪತ್ರೆ ತಲೆ ಎತ್ತಿ ನಿಂತಿದೆ. ಏಮ್ಸ್ ಮಾದರಿಯ ಗುಣಮಟ್ಟದ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ರಸ್ತೆಗಳ ಅಭಿವೃದ್ಧಿ ಪ್ರಾಶಸ್ತ್ಯ ನೀಡಿದ್ದ ತೇಜ್ ಪ್ರತಾಪ್, ಕ್ಷೇತ್ರದಲ್ಲಿ ಪರಿವರ್ತನೆಗೆ ಮುನ್ನುಡಿ ಬರೆದಿದ್ದಾರೆ.
ವೈದ್ಯಕೀಯ ಕಾಲೇಜು, ಆಸ್ಪತ್ರೆಯಿಂದ ಸಾವಿರಾರು ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗುವುದಲ್ಲದೆ, ಸ್ಥಳೀಯರ ಜೀವನಮಟ್ಟವೂ ಸುಧಾರಿಸುವ ನಿರೀಕ್ಷೆ ಇದೆ. ಕೆಲವೇ ತಿಂಗಳಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ.
ಇದನ್ನೂ ಓದಿ: Raghav Sharma Nidle Column: ಪಾಸ್ವಾನ್ ಭದ್ರಕೋಟೆಯಲ್ಲಿ ಪರಿವರ್ತನೆಗೆ ಮತವೇ ?
೨೦ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಆಸ್ಪತ್ರೆ ಸುಮಾರು 462 ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಶೈಕ್ಷಣಿಕ ಬ್ಲಾಕ್‌ಗಳು, ಸಿಬ್ಬಂದಿ ವಸತಿಗೃಹಗಳು ಮತ್ತು ಮನರಂಜನಾ ಸ್ಥಳಗಳನ್ನು ಹೊಂದಿದೆ. ವೈಶಾಲಿ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಜಿಪುರದಲ್ಲಿ ರಾಮ್ ವಿಲಾಸ್ ಪಾಸ್ವಾನ್ ೯ ಬಾರಿ ಸಂಸದ, ಹಲವು ಬಾರಿ ಕೇಂದ್ರ ಮಂತ್ರಿ ಮತ್ತು ಈಗ ಅವರ ಪುತ್ರ ಚಿರಾಗ್ ಪಾಸ್ವಾನ್ ಅಲ್ಲಿನ ಸಂಸದ ಮತ್ತು ಕೇಂದ್ರಮಂತ್ರಿಯಾಗಿದ್ದರೂ, ಮಹುವಾ ರೀತಿಯ ಅಭಿವೃದ್ಧಿ ಅವರಿಂದ ಸಾಧ್ಯವಾಗಿಲ್ಲ. ಆದರೆ ಮಹುವಾ ಮೆಡಿಕಲ್ ಕಾಲೇಜಿನಿಂದಾಗಿ ವೈಶಾಲಿ ಜಿಲ್ಲೆ ಮತ್ತು ಪಕ್ಕದ ಮುಜಫರಪುರ ಜಿಲ್ಲೆಯ ಜನರು ಚಿಕಿತ್ಸೆಗಾಗಿ ರಾಜಧಾನಿ ಪಟನಾವನ್ನು ಅವಲಂಬಿಸ ಬೇಕಿಲ್ಲ.
ಮಹುವಾದಲ್ಲಿ ಜನ ನಿರೀಕ್ಷಿಸಿದ ಸಾಧನೆ ಮಾಡಿರುವ ತೇಜ್ ಪ್ರತಾಪ್ ಇಲ್ಲಿಂದಲೇ ತಮ್ಮ ಹೊಸ ಜನಶಕ್ತಿ ಜನತಾದಳ ಪಕ್ಷ’ದಿಂದ ಸ್ಪರ್ಧಿಸುತ್ತಿದ್ದಾರೆ. 2020ರಲ್ಲಿ ಅವರು ಹಸನ್‌ಪುರ ವಿಧಾನಸಭೆ ಯಿಂದ ಸ್ಪರ್ಧಿಸಿ ಗೆದ್ದಿದ್ದರು. 2015 ಮತ್ತು ೨೦ರಲ್ಲಿ ಅವರಿಗೆ ಆರ್.ಜೆ.ಡಿ.ಯ ಭಾರೀ ಬೆಂಬಲ ಇತ್ತು, ಆದರೆ ಈ ಬಾರಿ ಹಾಗಿಲ್ಲ. ಕೆಲ ದಿನಗಳ ಹಿಂದೆ ತೇಜ್ ಪ್ರತಾಪ್ ನಾಮಪತ್ರ ಸಲ್ಲಿಕೆ ಮಾಡುವಾಗ ಅವರೊಂದಿಗೆ ಲಾಲೂ ಕುಟುಂಬದ ಒಬ್ಬರೂ ಇರಲಿಲ್ಲ.
ಹೀಗಾಗಿ ತೇಜ್ ಪ್ರತಾಪ್ ತಮ್ಮ ಸ್ವಂತ ವರ್ಚಸ್ಸಿನಿಂದ ಚುನಾವಣೆ ಗೆಲ್ಲಬೇಕಾದ ಸವಾಲಿನ ಸ್ಥಿತಿ ಎದುರಿಸುತ್ತಿದ್ದಾರೆ. ಮಾಧ್ಯಮದ ಮುಂದೆ ಮಾತನಾಡುವಾಗ ತೇಜ್ ಪ್ರತಾಪ್ ಕೆಲವೊಮ್ಮೆ ಜೋಕರ್‌ನಂತೆ ಕಂಡುಬಂದರೂ, ಅವರು ಕೆಲಸ ಮಾಡುವುದರಲ್ಲಿ ಮುಂದೆ ಇದ್ದಾರೆ. ನಮಗೆ ಅವರ ಕೆಲಸಗಳಷ್ಟೇ ಮುಖ್ಯ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಸ್ವಭಾವ ಎಂದು ಸ್ಥಳೀಯರೇ ಸಮರ್ಥಿಸುತ್ತಾರೆ.
ಮಹುವಾದಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ ನಂತರ ಅಲ್ಲಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುವುದು ನನ್ನ ಗುರಿ ಎಂದು ಭರವಸೆ ನೀಡಿರುವ ತೇಜ್ ಪ್ರತಾಪ್, ಕ್ರಿಕೆಟ್ ಸ್ಟೇಡಿಯಂ ಒಂದನ್ನೂ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಳೆದ ಬಾರಿ ಸೋತಿದ್ದ ಎಲ್‌ಜೆಪಿಯ ಸಂಜಯ್ ಸಿಂಗ್ ಕಣದಲ್ಲಿದ್ದರೆ, 2020ರಲ್ಲಿ ಜೆಡಿಯುನಿಂದ ಸ್ಫರ್ಧಿಸಿದ್ದ ಆಸ್ಮಾ ಪರ್ವೀನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಆಸ್ಮಾ ಕಳೆದ ಬಾರಿ ೨ನೇ ಸ್ಥಾನದಲ್ಲಿದ್ದರು. ಈ ಬಾರಿ ಟಿಕೆಟ್ ಸಿಗದೆ ಪಕ್ಷೇತರ ಸ್ಪರ್ಧೆಗೆ ಮುಂದಾ ಗಿದ್ದರಿಂದ ಅವರನ್ನು ಜೆಡಿಯುನಿಂದ ಉಚ್ಚಾಟಿಸಲಾಗಿದೆ.
ಮುಖೇಶ್ ರೋಶನ್ ಪ್ರತಿಸ್ಪರ್ಧಿ: ಮಹುವಾಕ್ಕೆ ತೇಜ್ ಪ್ರತಾಪ್ ಮರು ಪ್ರವೇಶ ಮಾಡಿರುವುದು ಹಾಲಿ ಶಾಸಕ ಆರ್ ಜೆಡಿ ಪಕ್ಷದ ಮುಖೇಶ್ ರೋಶನ್ ಎದೆಬಡಿತ ಹೆಚ್ಚಿಸಿದೆ. ಮುಖೇಶ್ ರೋಶನ್ ಕಚೇರಿ ಎದುರು ದೊಡ್ಡದಾದ ಪೋಸ್ಟರ್ ನಲ್ಲಿ ಲಾಲೂ ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ ಮತ್ತು ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ರ ಚಿತ್ರಗಳು ಕಾಣುತ್ತವೆ. ಈ ಮೂವರ ಹೆಸರಲ್ಲಿ ಮತ ಕೇಳುತ್ತಿರುವ ಮುಖೇಶ್ ರೋಶನ್, ತೇಜಸ್ವಿ ಯಾದವರನ್ನು ಸಿಎಂ ಮಾಡಲು ಆರ್ ಜೆಡಿಗೇ ಮತ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ.
ಮುಖೇಶ್ ತಮ್ಮ ಪ್ರಚಾರದಲ್ಲಿ ಎಲ್ಲೂ ತೇಜ್ ಪ್ರತಾಪ್ ಯಾದವ್ ವಿರುದ್ಧ ವಾಗ್ದಾಳಿ ನಡೆಸುತ್ತಿಲ್ಲ. ತೇಜ್ ಪ್ರತಾಪ್ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಮಾಧ್ಯಮದವರು ಪ್ರಶ್ನೆ ಕೇಳಿದರೆ, ಅವರು ಕೈ ಮುಗಿಯುತ್ತಾ ನಗುವುದನ್ನೇ ಉತ್ತರ ಎಂದು ಭಾವಿಸಬೇಕು.
ತೇಜ್ ಪ್ರತಾಪ್‌ಗೆ ಮತ ನೀಡುವುದೋ ಅಥವಾ ತೇಜಸ್ವಿಯವರನ್ನು ಸಿಎಂ ಮಾಡಲು ಮುಖೇಶ್ ರೋಶನ್‌ಗೆ ವೋಟು ಹಾಕುವುದೋ ಎಂಬ ಗೊಂದಲದಲ್ಲಿರುವ ಯಾದವ-ಮುಸ್ಲಿಂ ಮತ್ತಿತರ ಸಮುದಾಯಗಳ ಮತದಾರರನ್ನು ತಲುಪುತ್ತಿರುವ ತೇಜ್ ಪ್ರತಾಪರ ಬೆಂಬಲಿಗರು, ‘ನೋಡಿ, ತೇಜ್ ಪ್ರತಾಪ್ ಲಾಲೂ ಯಾದವರ ಹಿರಿಯ ಪುತ್ರ. ಅವರು ಆರ್‌ಜೆಡಿ ಪಕ್ಷದಲ್ಲಷ್ಟೇ ಇಲ್ಲ, ಅಗತ್ಯ ಬಿದ್ದರೆ ಚುನಾವಣೋತ್ತರದಲ್ಲಿ ಮಹಾಘಟಬಂಧನಕ್ಕೆ ಬೆಂಬಲ ನೀಡುತ್ತಾರೆ. ಈ ಕ್ಷೇತ್ರದಲ್ಲಿ ಬದಲಾವಣೆ ಮಾಡಿದ್ದು ಯಾರೆಂಬುದು ಗೊತ್ತಿರುವಾಗ ನೀವು ತೇಜ್ ಪ್ರತಾಪ್‌ಗೇ ಮತಹಾಕಬೇಕು’ ಎಂದು ಅಭಿಯಾನ ನಡೆಸುತ್ತಿದ್ದಾರೆ.
ರಾಬ್ರಿಗೆ ತೇಜ್ ಮೇಲೆ ಒಲವು
ಒಂದರ್ಥದಲ್ಲಿ ಮಹುವಾ ವಿಚಿತ್ರ ರಾಜಕೀಯ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ. ತೇಜ್ ಪ್ರತಾಪ್ ತಾಯಿ ರಾಬ್ರಿ ದೇವಿ ಆರ್.ಜೆ.ಡಿ. ನಾಯಕಿಯಾಗಿದ್ದರೂ, ಮಹುವಾದಲ್ಲಿ ಪುತ್ರ ತೇಜ್ ಪ್ರತಾಪ್‌ನನ್ನು ಗೆಲ್ಲಿಸಬೇಕು ಎಂಬ ಆಂತರಿಕ ಸಂದೇಶ ರವಾನೆ ಮಾಡಿದ್ದಾರೆ ಎಂದೇ ಚರ್ಚೆಯಾಗುತ್ತಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ಹಿರಿಮಗ ಸೋಲುವುದನ್ನು ತಾಯಿಯಿಂದ ನೋಡಲು ಸಾಧ್ಯ ಇದೆಯೇ? ಮೇಲಾಗಿ, ತೇಜಸ್ವಿ ಯಾದವ್‌ಗಿಂತ ತೇಜ್ ಪ್ರತಾಪ್ ಯಾದವ್ ಮೇಲೆಯೇ ರಾಬ್ರಿ ದೇವಿಗೆ ಹೆಚ್ಚು ಪ್ರೀತಿ ಎಂದು ಇಲ್ಲಿ ಜನ ಮಾತನಾಡಿಕೊಳ್ಳುತ್ತಾರೆ.
ತೇಜ್ ಪ್ರತಾಪ್‌ಗೆ ೭ ಮಂದಿ ಸೋದರಿಯರು ಇದ್ದು, ಅವರಲ್ಲಿ ಕೆಲವರು ತೇಜ್ ಪ್ರತಾಪ್ ಗೆಲುವಿಗಾಗಿ ಒಳಗಿಂದೊಳಗೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹಾಲಿ ಶಾಸಕ ಮುಖೇಶ್ ರೋಷನ್ ಆರ್.ಜೆ.ಡಿ. ಯಿಂದ ಟಿಕೆಟ್ ಪಡೆದಿದ್ದರೂ, ಲಾಲು ಕುಟುಂಬದ ಅರ್ಧ ಮಂದಿ ಆರ್.ಜೆ.ಡಿ. ಅಭ್ಯರ್ಥಿಯ ಸೋಲನ್ನೇ ಬಯಸುತ್ತಿದ್ದಾರೆ..!
ಅಣ್ಣ-ತಮ್ಮ ಮುಖ ನೋಡುತ್ತಿಲ್ಲ
ತೇಜ್ ಪ್ರತಾಪ್ ಮತ್ತು ತೇಜಸ್ವಿ ನಡುವೆ ಈಗಲೂ ಮಾತುಕತೆ ಇಲ್ಲ. ಒಬ್ಬರು ಇನ್ನೊಬ್ಬರನ್ನು ನೋಡಲೂ ಬಯಸುತ್ತಿಲ್ಲ. ‘ತಂದೆಯ ಉತ್ತರಾಧಿಕಾರಿ ನಾನಾಗಬೇಕಿತ್ತು, ಆದರೆ ತೇಜಸ್ವಿ ಮೇಲೆ ಅಪ್ಪನಿಗೆ ವಿಶೇಷ ಪ್ರೀತಿ. ಅವನಿಗೇ ಅಧಿಕಾರ ಕೊಟ್ಟಿದ್ದಾರೆ’ ಎಂಬ ಮುನಿಸು ತೇಜ್ ಪ್ರತಾಪ್‌ಗೆ ಮೊದಲಿನಿಂದಲೂ ಇತ್ತು. ಆದರೆ ಯಾವಾಗ ಪಕ್ಷದಿಂದ ಉಚ್ಚಾಟನೆ ಮಾಡಲಾಯಿತೋ, ನಂತರ ಸ್ವಂತ ಪಕ್ಷ ಕಟ್ಟಿಕೊಳ್ಳಲು ತೀರ್ಮಾನಿಸಿದರು.
ಹಿರಿಯಣ್ಣನ ಸಾಮರ್ಥ್ಯ ಏನು ಎಂಬುದನ್ನು ತೇಜಸ್ವಿಗೆ ಗೊತ್ತು ಮಾಡಲೆಂದೇ ಮಹುವಾದಲ್ಲಿ ಆರ್.ಜೆ.ಡಿ. ವಿರುದ್ಧ ತೊಡೆ ತಟ್ಟಿದ್ದಾರೆ. ರಾಜ್ಯದ ಒಟ್ಟು ೪೪ ಕ್ಷೇತ್ರಗಳಲ್ಲಿ ಜನಶಕ್ತಿ ನತಾದಳದಿಂದ
ಅಭ್ಯರ್ಥಿಗಳಿದ್ದಾರೆ. ಅಧಿಕಾರಕ್ಕಾಗಿ ಅಣ್ಣ-ತಮ್ಮಂದಿರ ಮಧ್ಯೆ ವೈಮನಸ್ಸು ಬರುವುದು ಸಹಜ. ತೇಜ್ ಪ್ರತಾಪ್ ನೇರ ನಿಷ್ಠುರವಾದಿ. ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಾರೆ, ಅದು ಅನೇಕರಿಗೆ ಇಷ್ಟವಾಗುವುದಿಲ್ಲ. ಅಷ್ಟಕ್ಕೂ ಇದು ಅವರ ಕುಟುಂಬದೊಳಗಿನ ಸಮಸ್ಯೆ. ಅವರೇ ಸರಿ ಮಾಡಿ ಕೊಳ್ಳುತ್ತಾರೆ. ನಮಗೆ ಇಲ್ಲಿ ಕೆಲಸವಷ್ಟೇ ಮುಖ್ಯ ಎಂದು ತೇಜ್ ಪ್ರತಾಪ್ ಪ್ರಚಾರ ಉಸ್ತುವಾರಿ ಸತ್ಯೇಂದ್ರ ಕುಮಾರ್ ಯಾದವ್ ವಿಶ್ವವಾಣಿ ಜತೆ ಅನಿಸಿಕೆ ಹಂಚಿಕೊಂಡರು.
ವೈಯಕ್ತಿಕ ಜೀವನ ವಿವಾದ
ಬಿಹಾರದ ಮಾಜಿ ಸಿಎಂ ದರೋಗಾ ರಾಯ್ ಅವರ ಮೊಮ್ಮಗಳು ಮತ್ತು ಚಂದ್ರಿಕಾ ರಾಯ್ ಪುತ್ರಿ ಐಶ್ವರ್ಯಾ ರಾಯ್ ಅವರನ್ನು ತೇಜ್ ಪ್ರತಾಪ್ ವಿವಾಹವಾಗಿದ್ದರು. ಆದರೆ ಕೆಲವೇ ದಿನಗಳಲ್ಲಿ ಈ ವಿವಾಹ ಮುರಿದುಬಿದ್ದಿತ್ತು. ಗಂಡ-ಹೆಂಡತಿ ಇಬ್ಬರೂ ಪರಸ್ಪರ ಆರೋಪ ಮಾಡಿಕೊಂಡು ಈಗ ಕೇಸ್ ಕೋರ್ಟ್‌ನಲ್ಲಿದೆ. ಮಗಳಿಗೆ ಅನ್ಯಾಯ ಆಗಿದೆ ಎಂದು ತಾಯಿ ಚಂದ್ರಿಕಾ ರಾಯ್ ಆರ್. ಜೆ.ಡಿ.ಗೆ ರಾಜೀನಾಮೆ ನೀಡಿ, ಕಾನೂನು ಹೋರಾಟ ಕೆಲ ತಿಂಗಳುಗಳ ಹಿಂದೆ, ತೇಜ್ ಪ್ರತಾಪ್ ಯಾದವ್ ಫೇಸ್ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿ, ಅನುಷ್ಕಾ ಯಾದವ್ ನನ್ನ ೧೨ ವರ್ಷದ ಪ್ರೀತಿಯ ಗೆಳತಿ ಎಂದು ಬರೆದುಕೊಂಡಿದ್ದರು.
ಇದು ಭಾರಿ ವಿವಾದ ಸೃಷ್ಟಿಸಿ, ತೇಜ್ ಪ್ರತಾಪ್‌ರನ್ನು ಅಪ್ಪ ಲಾಲೂ ಯಾದವ್ ಪಕ್ಷದಿಂದ ಉಚ್ಛಾಟನೆ ಮಾಡಿದ್ದರು. ಇದರಿಂದ ಸಿಟ್ಟಾದ ತೇಜ್ ಪ್ರತಾಪ್ ಈಗ ಹೊಸ ಪಕ್ಷ ಕಟ್ಟಿ ಅಪ್ಪ ಮತ್ತು ತಮ್ಮನಿಗೆ ತನ್ನ ಚುನಾವಣಾ ಸಾಮರ್ಥ್ಯ ತೋರಿಸಲು ಮುಂದಾಗಿದ್ದಾರೆ.
*
ನಮ್ಮದು ಮುಜ-ರಪುರ-ಮಹುವಾದ ಗಡಿಯಲ್ಲಿ ಇರುವ ಹಳ್ಳಿ. ನಾವು ಎನ್ಡಿಎ ಬೆಂಬಲಿಸಿಕೊಂಡು ಬಂದಿದ್ದೇವೆ. ಹಾಗಂತ ಮಹುವಾದಲ್ಲಿ ಮೆಡಿಕಲ್ ಕಾಲೇಜು ಮಾಡಿದ ತೇಜ್ ಪ್ರತಾಪ್ ಕೆಲಸವನ್ನು ಮೆಚ್ಚದೆ ಇರಲಾಗುತ್ತದಾ? ನಮ್ಮ ಹಳ್ಳಿಯವರೂ ಇನ್ನು ಉತ್ತಮ ಚಿಕಿತ್ಸೆಗಾಗಿ ಮಹುವಾ ಮೆಡಿಕಲ್ ಆಸ್ಪತ್ರೆಗೆ ಹೋಗುತ್ತಾರೆ
- ಸುಧೀರ್ ಕುಮಾರ್ ಮತ್ತು ಸತೀಶ್ ಕುಮಾರ್, ಅಂಗಡಿ ವ್ಯಾಪಾರಿಗಳು
*
2020ರಲ್ಲಿ ಹಸನ್‌ಪುರದಿಂದ ತೇಜ್ ಪ್ರತಾಪ್ ಸ್ಪರ್ಧೆ
ಈ ಸಲ ಜನಶಕ್ತಿ ಜನತಾದಳ ಪಕ್ಷದ ಅಭ್ಯರ್ಥಿ
ಮುಖೇಶ್ ರೋಶನ್ ಪ್ರತಿಸ್ಪರ್ಧಿ
ತೇಜ್ ಪ್ರತಾಪ್ ಗೆಲುವಿಗೆ ರಾಬ್ರಿದೇವಿ ಸಂದೇಶ