Pralhad Joshi: ಹಿಂದೂಗಳ ಗುಡಿ ಗುಂಡಾರ ಹೊಡೆಯುತ್ತಿದ್ದರೆ ಸಮ್ಮನಿರಬೇಕಾ?: ಪ್ರಲ್ಹಾದ್ ಜೋಶಿ ಕಿಡಿ
Dharmasthala Case: ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಒಂದೆಡೆ SIT ರಚನೆಯಲ್ಲಿ ಪ್ರಮುಖ ಭಾಗವಾಗಿದ್ದರೆ, ಈಗ 'ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ' ಎನ್ನುತ್ತಿದ್ದಾರೆ. ಹೀಗೆ ಎರೆಡು ದೋಣಿ ಮೇಲೆ ಕಾಲಿಟ್ಟು ಸಾಗುವ ಪ್ರಯತ್ನ ಮಾಡುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಟಿ ಬೀಸಿದರು.


ಹುಬ್ಬಳ್ಳಿ: ಧರ್ಮಸ್ಥಳ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಎರಡು ದೋಣಿ ಮೇಲೆ ಕಾಲಿಟ್ಟು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿರುಗೇಟು ನೀಡಿದರು. ಹುಬ್ಬಳ್ಳಿಯ ವರೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜೋಶಿ, "ಧರ್ಮಸ್ಥಳ ಏನು ಬಿಜೆಪಿಯವರ ಮನೆಯ ಸ್ವತ್ತಲ್ಲ" ಎಂಬ ಡಿಸಿಎಂ ಡಿಕೆಶಿ ಹೇಳಿಕೆಗೆ ತುಸು ಖಡಕ್ ಆಗೇ ಪ್ರತಿಕ್ರಿಯೆ ನೀಡಿದರು.
ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದು, ಒಂದೆಡೆ SIT ರಚನೆಯಲ್ಲಿ ಪ್ರಮುಖ ಭಾಗವಾಗಿದ್ದರೆ, ಈಗ 'ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ' ಎನ್ನುತ್ತಿದ್ದಾರೆ. ಹೀಗೆ ಎರೆಡು ದೋಣಿ ಮೇಲೆ ಕಾಲಿಟ್ಟು ಸಾಗುವ ಪ್ರಯತ್ನ ಮಾಡುತ್ತಿದ್ದಾರೆಂದು ಚಾಟಿ ಬೀಸಿದರು.
ಧರ್ಮಸ್ಥಳ ಬಿಜೆಪಿ ಸ್ವತ್ತೆಂದು ನಾವೆಲ್ಲಿ ಹೇಳಿದ್ದೇವೆ? ತಮ್ಮ ಸರ್ಕಾರ ಹಿಂದೂಗಳ ಗುಡಿ-ಗುಂಡಾರ ಹೊಡೆಯುವ ಕೆಲಸ ಮಾಡಿದ್ರೆ ಸುಮ್ಮನಿರಬೇಕಾ? ಎಂದು ಜೋಶಿ ಪ್ರಶ್ನಿಸಿದರು.
ಹಿಂದೂ ಸಮಾಜದ ಸ್ವತ್ತಿಗೆ 'ಕೈ'
ಸಮಸ್ತ ಹಿಂದೂ ಸಮಾಜದ ಸ್ವತ್ತಿನೊಳಗೆ ಕೈ ಹಾಕುವ ಕೆಲಸವನ್ನು ನೀವು ಮಾಡುತ್ತಿದ್ದೀರಿ. ನಮ್ಮ ದೇಶದ ವಿವಿಧ ಗುಡಿ ಗುಂಡಾರಗಳ ದುಡ್ಡನ್ನು ಹೊಡೆಯುವ ಪ್ರಯತ್ನ ಮಾಡಿದಿರಿ. ಬಾಹುಬಲಿ ಬೆಟ್ಟ ಅಗೆದಿರಿ, ನಾಚಿಕೆ ಆಗುವುದಿಲ್ಲವೇ? ಎಂದು ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.
ಸೌಜನ್ಯ ಕೊಲೆ ಪ್ರಕರಣದ ನಂತರ ತನಿಖೆ ಮಾಡುತ್ತೇವೆ ಎಂದಿದ್ಧೀರಿ. ಹಾಗಾಗಿ ನಾವು ಅತ್ಯಂತ ಶಾಂತ ರೀತಿಯಲ್ಲೇ ಇದ್ದೆವು. ಆದರೆ ಈಗ 'ಧರ್ಮಸ್ಥಳ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ' ಎಂಬ ಹೇಳಿಕೆ ಕೊಟ್ಟವರು ತಾವೇ ಅಲ್ಲವೇ? ತಾವ್ಯಾರ ಬಗ್ಗೆ ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.
ಧರ್ಮಸ್ಥಳ ಪ್ರಕರಣದಲ್ಲಿ ಪ್ರಹಸನ ತೀರಾ ಅತಿರೇಖಕ್ಕೆ ಹೋಗುತ್ತಿದೆ. ಹೇಳೋರು-ಕೇಳೋರು ಯಾರೂ ಇಲ್ಲ ಎನ್ನುವ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದೆ ಈ ಸರ್ಕಾರ. ಹಾಗಾಗಿ ಬಿಜೆಪಿ ಧರ್ಮದ ಪರ, ಒಂದು ಪವಿತ್ರ ಕ್ಷೇತ್ರದ ಪರ ನಿಂತು ಪ್ರತಿಕ್ರಿಯಿಸುತ್ತಿದೆ ಎಂದು ಸಚಿವರು ಹೇಳಿದರು.
ದರ್ಗಾವನ್ನೂ ಹೀಗೆ ಅಗೆಸುತ್ತೀರಾ?
ಯಾರೋ ಅನಾಮಿಕ ನೂರಾರು ಹೆಣ ಹೂತಿದ್ದೇನೆ ಎಂದಿದ್ದಕ್ಕೆ ಇವತ್ತು ಬಾಹುಬಲಿ ಬೆಟ್ಟ ಸಹ ಅಗೆದಿರಿ. ನಾಳೆ ಮತ್ತಿನ್ಯಾರೋ ಬಂದು ದರ್ಗಾದಲ್ಲಿ ಹೆಣ ಹೂತಿದ್ದಾಗಿ ಹೇಳುತ್ತಾನೆ. ಅವನ್ನೂ ಹೀಗೇ ಅಗೆಸುತ್ತೀರಾ? ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದರು ಸಚಿವ ಪ್ರಲ್ಹಾದ ಜೋಶಿ.
ಕೆಲವರು ಪವಿತ್ರ ಧರ್ಮಸ್ಥಳ ಶ್ರೀಕ್ಷೇತ್ರದ ಬಗ್ಗೆ ತೀರಾ ಅಸಭ್ಯ ರೀತಿ ಮಾತನಾಡುತ್ತಿದ್ದಾರೆ. ಇದುವರೆಗೂ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದ ಜೋಶಿ, ಅತ್ಯಂತ ನಂಬಿಕೆಯ ಕ್ಷೇತ್ರಕ್ಕೆ, ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿರುವವರಿಗೆ ರಾಜ್ಯ ಸರ್ಕಾರ ಹಾಸಿ ಕೊಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನವರು ಅಯೋಗ್ಯರು
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರವಿಲ್ಲ ಎನ್ನುವ ಕಾಂಗ್ರೆಸ್‌ನವರು ಅಯೋಗ್ಯರು. ಅವರು ಆಡಳಿತ ನಡೆಸಲು ಯೋಗ್ಯರಲ್ಲ ಎಂದು ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಮೂಲ ಕಾಂಗ್ರೆಸ್ ಅನ್ನು ಕಬಳಿಸಿಕೊಂಡಿದ್ದಾರೆ. ಈಗಿರುವವರಿಗೆ ಇತಿಹಾಸ ಗೊತ್ತಿಲ್ಲ. ಇದು ನಿಜವಾದ ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ಅಂದರೆ ನೀವೇನಾ? ಇದೇನಾ? ಎನ್ನುವಂತಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | CT Ravi: ಧರ್ಮಸ್ಥಳ ಕುರಿತ ಷಡ್ಯಂತ್ರ ಬಹಿರಂಗಪಡಿಸಿ: ಸಿಎಂ, ಡಿಸಿಎಂಗೆ ಸಿಟಿ ರವಿ ಆಗ್ರಹ
ಯೋಜನೆಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಷ್ಟೇ ಇಟ್ಟಿದ್ದೀರಿ
ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರನ್ನು ಕಾಂಗ್ರೆಸ್ ಅದ್ಯಾವ ರೀತಿ ನಡೆಸಿಕೊಂಡಿದೆ ಎಂಬುದು ಗೊತ್ತಿದೆ. ದೇಶಕ್ಕೆ ಇಂದಿರಾ ಗಾಂಧಿಗಿಂತ ಹತ್ತುಪಟ್ಟು ಹೆಚ್ಚು ತ್ಯಾಗ ಮಾಡಿದ್ದಾರೆ ನೇತಾಜಿ. ಆದರೆ, ಸರ್ಕಾರಿ ಯೋಜನೆಗಳಿಗೆ ಇಂಥ ಎಷ್ಟು ಜನರ ಹೆಸರು ಇಟ್ಟಿದ್ದೀರಿ? ಬರೀ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿಟ್ಟಿದ್ದೀರಿ ಎಂದು ಕುಟುಕಿದರು.