US Open 2025: ಸಿನ್ನರ್ ಮಣಿಸಿ ಎರಡನೇ ಬಾರಿ ಯುಎಸ್ ಓಪನ್ ಗೆದ್ದ ಅಲ್ಕರಾಜ್
ಈ ಗೆಲುವಿನೊಂದಿಗೆ ಅಲ್ಕರಾಜ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಫೈನಲ್ ತಲುಪುವ ಹಾದಿಯಲ್ಲಿ 22 ವರ್ಷದ ಅಲ್ಕರಾಜ್ ಒಂದೂ ಸೆಟ್ ಕಳೆದುಕೊಂಡಿಲ್ಲ. ಆದರೆ ಫೈನಲ್‌ನಲ್ಲಿ ಒಂದು ಸೆಟ್ ಸೋಲು ಕಂಡರು. ಈ ವರ್ಷ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಗೆದ್ದಿದ್ದ ಇಟಲಿಯ 24 ವರ್ಷದ ಸಿನ್ನರ್ 6ನೇ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದರು. ಆದರೆ ಇಲ್ಲಿ ಸೋಲು ಕಂಡರು.

-

ನ್ಯೂಯಾರ್ಕ್: ಜಾನಿಕ್ ಸಿನ್ನರ್ ಮತ್ತು ಕಾರ್ಲೋಸ್ ಅಲ್ಕರಾಜ್(Sinner vs Alcaraz) ನಡುವಣ ಯುಎಸ್ ಓಪನ್ ಟೆನಿಸ್(US Open 2025) ಟೂರ್ನಿಯ ‘ಬ್ಲಾಕ್‌ಬಸ್ಟರ್’ ಫೈನಲ್ ಸೆಣಸಾಟದಲ್ಲಿ ಅಲ್ಕರಾಜ್ ಮೆಲುಗೈ ಸಾಧಿಸಿದರು. 6-2, 3-6, 6-1, 6-4 ಸೆಟ್ ಅಂತರದಿಂದ ಗೆದ್ದು ಎರಡನೇ ಬಾರಿಗೆ ಯುಎಸ್ ಓಪನ್ ಟ್ರೋಫಿಗೆ ಮುತ್ತಿಕ್ಕಿದರು. 2022ರಲ್ಲಿ ಅವರು ಇಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದರು. ಒಟ್ಟಾರೆ ಇದು ಅಲ್ಕರಾಜ್‌ಗೆ ಒಲಿದ 6ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ.
ಅಲ್ಕರಾಜ್ ಮತ್ತು ಸಿನ್ನರ್ ನಡುವಣ ಈ ವರ್ಷದ ಸತತ ಮೂರನೇ ಗ್ರ್ಯಾನ್‌ಸ್ಲಾಮ್ ಫೈನಲ್ ಪಂದ್ಯ ಇದಾಗಿತ್ತು. ಹೀಗಾಗಿ ಪಂದ್ಯ ಭಾರೀ ಕುತೂಹಲ ಕೆರಳಿಸಿತ್ತು. ಅಲ್ಲದೆ ಈ ಪೈಪೋಟಿಗೆ ಸಾಕ್ಷಿ ಆದ 23000 ಪ್ರೇಕ್ಷಕರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಒಬ್ಬರಾಗಿದ್ದರು.
ಈ ಗೆಲುವಿನೊಂದಿಗೆ ಅಲ್ಕರಾಜ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಫೈನಲ್ ತಲುಪುವ ಹಾದಿಯಲ್ಲಿ 22 ವರ್ಷದ ಅಲ್ಕರಾಜ್ ಒಂದೂ ಸೆಟ್ ಕಳೆದುಕೊಂಡಿಲ್ಲ. ಆದರೆ ಫೈನಲ್‌ನಲ್ಲಿ ಒಂದು ಸೆಟ್ ಸೋಲು ಕಂಡರು. ಈ ವರ್ಷ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಗೆದ್ದಿದ್ದ ಇಟಲಿಯ 24 ವರ್ಷದ ಸಿನ್ನರ್ 6ನೇ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದರು. ಆದರೆ ಇಲ್ಲಿ ಸೋಲು ಕಂಡರು.
ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದ ಸಿನ್ನರ್, ಟೆನಿಸ್ ಇತಿಹಾಸದಲ್ಲಿ ಒಂದೇ ವರ್ಷ ನಾಲ್ಕೂ ಗ್ರ್ಯಾನ್‌ಸ್ಲಾಮ್ ಫೈನಲ್ ತಲುಪಿದ ಕೇವಲ ನಾಲ್ಕನೇ ಆಟಗಾರ ಎನಿಸಿದರು. ಆದರೆ ಫೈನಲ್‌ನಲ್ಲಿ ಎಡವಿದರು. ಈ ಹಿಂದೆ ಆಸ್ಟ್ರೇಲಿಯಾದ ರಾಡ್ ಲೇವರ್, ರೋಜರ್ ಫೆಡರರ್ ಮತ್ತು ಜೊಕೊವಿಕ್ ಒಂದೇ ವರ್ಷ ನಾಲ್ಕೂ ಗ್ರ್ಯಾನ್‌ಸ್ಲಾಮ್ ಫೈನಲ್ ತಲುಪಿದ್ದರು.
ಚಾಂಪಿಯನ್ ಅಲ್ಕರಾಜ್‌ಗೆ ₹44 ಕೋಟಿ ನಗದು ಬಹುಮಾನ ಲಭಿಸಿತು.
ರನ್ನರ್-ಅಪ್ ಸಿನ್ನರ್ ₹22 ಕೋಟಿ ನಗದು ಬಹುಮಾನ ಪಡೆದರು.