ICC Test rankings: ಅಗ್ರ 10ರ ಸನಿಹ ಬಂದ ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್‌ಗೆ ಹಿನ್ನಡೆ!
ವೆಸ್ಟ್ ಇಂಡೀಸ್ ವಿರುದ್ದದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮಾರಕ ಬೌಲಿಂಗ್ ನಡೆಸಿ 7 ವಿಕೆಟ್‌ಗಳನ್ನು ಕಬಳಿಸಿದ್ದ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಸಿರಾಜ್, ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅಗ್ರ ಐದರಿಂದ ಹೊರ ಬಿದ್ದಿದ್ದಾರೆ.

ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಏರಿಕೆ ಕಂಡ ಮೊಹಮ್ಮದ್ ಸಿರಾಜ್. -

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ (IND vs WI) ಮ್ಯಾಚ್ ವಿನ್ನಿಂಗ್ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ (ICC Test rankings) ಪ್ರಗತಿ ಕಂಡಿದ್ದಾರೆ. ಅಕ್ಟೋಬರ್ 8 ರಂದು ಐಸಿಸಿ ಪರಷ್ಕರಿಸಿರುವ ಶ್ರೇಯಾಂಕದಲ್ಲಿ ಸಿರಾಜ್ ಮೂರು ಸ್ಥಾನಗಳಲ್ಲಿ ಏರಿಕೆ ಕಂಡು 12ನೇ ಶ್ರೇಯಾಂಕಕ್ಕೆ ಲಗ್ಗೆ ಇಟ್ಟಿದ್ದಾರೆ. ಆ ಮೂಲಕ ಅಗ್ರ 10ರ ಸನಿಹದಲ್ಲಿದ್ದಾರೆ. ಮತ್ತೊಂದು ಕಡೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರು ಟೆಸ್ಟ್ ಬ್ಯಾಟ್ಸ್‌ಮನ್ ಶ್ರೇಯಾಂಕದಲ್ಲಿ ಅಗ್ರ 5ರಿಂದ ಹೊರ ಬಿದ್ದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ಅಹಮದಾಬಾದ್ ಟೆಸ್ಟ್‌ನಲ್ಲಿ ವಿಫಲವಾದ ಕಾರಣ 5ನೇ ಸ್ಥಾನದಿಂದ 7ಕ್ಕೆ ಕುಸಿದಿದ್ದಾರೆ.
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಸಿರಾಜ್, ಅಹಮದಾಬಾದ್ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ 4 ವಿಕೆಟ್ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ಇದೀಗ ಅವರು 700ಕ್ಕೂ ಅಧಿಕ ರೇಟಿಂಗ್ ಪಾಯಿಂಟ್ಸ್ ಮೂಲಕ ಮೂರು ಸ್ಥಾನಗಳನ್ನು ಜಿಗಿದು 12ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇದು ಅವರ ವೃತ್ತಿ ಜೀವನದ ಶ್ರೇಷ್ಠ ಶ್ರೇಯಾಂಕವಾಗಿದೆ. ಇವರ ಬೌಲಿಂಗ್ ಪ್ರದರ್ಶನದ ಬಲದಿಂದ ಭಾರತ ಇನಿಂಗ್ಸ್ ಹಾಗೂ 140 ರನ್‌ಗಳಿಂದ ಗೆಲುವು ಪಡೆದಿತ್ತು.
IND vs WI 2nd Test: ದಿಲ್ಲಿಯಲ್ಲಿ ಬ್ಯಾಟಿಂಗ್ ಪಿಚ್ ನಿರೀಕ್ಷೆ
ಇದಕ್ಕೂ ಮುನ್ನ ಅವರು ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿಯೂ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದರು. ಅವರು ಅಂದು ಆಡಿದ್ದ ಐದು ಪಂದ್ಯಗಳಿಂದ 23 ವಿಕೆಟ್‌ಗಳನ್ನು ಕಬಳಿಸಿದ್ದರು. ಐದನೇ ಹಾಗೂ ದಿ ಓವಲ್ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ವಿಭಾಗವನ್ನು ಸಿರಾಜ್ ಮುನ್ನಡೆಸಿದ್ದರು. ಆ ಮೂಲಕ ಭಾರತ ತಂಡದ ಐತಿಹಾಸಿಕ ಗೆಲುವಿಗೆ ನೆರವು ನೀಡಿದ್ದರು. ಇದೀಗ ವಿಂಡೀಸ್ ಎದುರು ಅಕ್ಟೋಬರ್ 10 ರಂದು ದಿಲ್ಲಿಯಲ್ಲಿ ಆರಂಭವಾಗಲಿರುವ ಎರಡನೇ ಟಸ್ಟ್‌ನಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಸಿರಾಜ್ ಎದುರು ನೋಡುತ್ತಿದ್ದಾರೆ.
ಅಹಮದಾಬಾದ್‌ನಲ್ಲಿ ಶತಕ ಸಿಡಿಸಿದ್ದ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಅವರು ತಮ್ಮ ವೃತ್ತಿ ಜೀವನದ ಶ್ರೇಷ್ಠ 25ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ 36ನೇ ವಯಸ್ಸಿನ ಆಟಗಾರ ಅಜೇಯ 104 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಫಲವಾಗಿ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ.
IND vs WI: ಮೊದಲನೇ ಟೆಸ್ಟ್ ಗೆದ್ದರೂ ಒಂದು ವಿಚಾರದ ಬಗ್ಗೆ ಶುಭಮನ್ ಗಿಲ್ ಬೇಸರ!
ಈ ವರ್ಷ ಜುಲೈನಲ್ಲಿ ರವೀಂದ್ರ ಜಡೇಜಾ ಅವರು 29ನೇ ಶ್ರೇಯಾಂಕಕ್ಕೆ ಲಗ್ಗೆ ಇಟ್ಟಿದ್ದರು. ಆದರೆ, ಇದೀಗ ಅದನ್ನು ಮೀರಿ 25ನೇ ಸ್ಥಾನಕ್ಕೆ ಬಂದಿದ್ದಾರೆ. ಇವರು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಅವರು 516 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ ಟೆಸ್ಟ್ ಸರಣಿಯನ್ನು 2-2 ಅಂತರದಲ್ಲಿ ಡ್ರಾ ಸಾಧಿಸಲು ನೆರವು ನೀಡಿತ್ತು. ಇದರ ಜತೆಗೆ ಅವರು ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ 125 ಅಂಕಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
ಭಾರತ ತಂಡದ ಕೆಎಲ್ ರಾಹುಲ್ ಹಾಗೂ ಧ್ರುವ್ ಜುರೆಲ್ ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸುಧಾರಣೆ ಕಂಡಿದ್ದಾರೆ. ಈ ಇಬ್ಬರೂ ಮೊದಲನೇ ಶತಕ ಸಿಡಿಸಿದ ಬಳಿಕ ಈ ಪ್ರಗತಿ ಕಂಡಿದ್ದಾರೆ. ಕೆಎಲ್ ರಾಹುಲ್ ನಾಲ್ಕು ಸ್ಥಾನಗಳಲ್ಲಿ ಏರಿಕೆ ಕಂಡಿದ್ದು, 35ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇನ್ನು ಧ್ರುವ್ ಜುರೆಲ್ ಅವರು 20 ಸ್ಥಾನಗಳಲ್ಲಿ ಏರಿಕೆ ಕಂಡು 65ನೇ ಸ್ಥಾನಕ್ಕೆ ಬಂದಿದ್ದಾರೆ.