Viral Video: ನೇಪಾಳದ ಅತಿ ದೊಡ್ಡ ಧಾರ್ಮಿಕ ಹಬ್ಬ ಇಂದ್ರ ಜಾತ್ರೆ; ಕುಮಾರಿ ದೇವತೆ ವಿಶಿಷ್ಟ ಆಚರಣೆಯೇ ಪ್ರಮುಖ ಆಕರ್ಷಣೆ
Nepal’s Biggest Religious Festival: ನೇಪಾಳದ ರಾಜಧಾನಿ ಕಠ್ಮಂಡುವಿನ ಅತಿ ದೊಡ್ಡ ಧಾರ್ಮಿಕ ಹಬ್ಬದ ಋತು ಪ್ರಾರಂಭವಾಗಿದೆ. ಈ ಇಂದ್ರ ಜಾತ್ರೆಯ ಭಾಗವಾಗಿ ಕುಮಾರಿ ದೇವತೆಯನ್ನು ಆಯ್ಕೆ ಮಾಡಲಾಗುತ್ತದೆ. ಕುಮಾರಿ ಎಂದು ಕರೆಯುವ ದೇವತೆಯನ್ನು ಇಲ್ಲಿನ ಹಿಂದೂಗಳು ಪೂಜಿಸುತ್ತಾರೆ.

-

ಕಠ್ಮಂಡು: ನೆರೆಯ ದೇಶ ನೇಪಾಳ (Nepal)ದ ಕಠ್ಮಂಡುವಿನ ಹೃದಯಭಾಗದಲ್ಲಿರುವ ಹಳೆಯ ಅರಮನೆಯಲ್ಲಿ ತಿಂಗಳುಗಳ ಕಾಲ ನಡೆಯುವ ಹಬ್ಬದ ಋತುವಿಗೆ ಚಾಲನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ಅರಮನೆಗೆ ಆಗಮಿಸಿದರು. ನೇಪಾಳದ ಹಬ್ಬದ ಋತುವು ದೇವತೆಯ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಅತಿ ದೊಡ್ಡ ಧಾರ್ಮಿಕ ಹಬ್ಬವಾದ ಈ ಇಂದ್ರ ಜಾತ್ರೆಯ ಭಾಗವಾಗಿ ಕುಮಾರಿ (Kumari) ದೇವತೆಯನ್ನು ಆಯ್ಕೆ ಮಾಡುವುದು ಇಲ್ಲಿನ ವಿಶೇಷ. ಮಾನವ ರೂಪದಲ್ಲಿರುವ ದೇವತೆಗಳಾದ ಕುಮಾರಿ, ಗಣೇಶ, ಮತ್ತು ಭೈರಬ್ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಇದನ್ನು ವೀಕ್ಷಿಸಲು ಭಕ್ತರು ಕಠ್ಮಂಡುವಿನ ಬಸಂತಪುರ ದರ್ಬಾರ್ ಚೌಕದಲ್ಲಿ ಜಮಾಯಿಸಿದ್ದರು.
ಈ ಹಬ್ಬವು ನೇಪಾಳದ ಹಬ್ಬದ ಋತುವಿಗೆ ಅಧಿಕೃತವಾಗಿ ಚಾಲನೆ ನೀಡುತ್ತದೆ. ಬಸಂತಪುರ ದರ್ಬಾರ್ ಚೌಕ, ಕಠ್ಮಂಡುವಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ಸ್ಥಳದಲ್ಲಿ ಭಕ್ತರ ಮಹಾಸಾಗರ ಕಂಡುಬಂತು. ಈ ಸಂದರ್ಭ ದೇವತೆಗಳ ರಥೋತ್ಸವ, ಸಾಂಪ್ರದಾಯಿಕ ನೃತ್ಯಗಳು, ವಾದ್ಯಮೇಳಗಳು, ಧಾರ್ಮಿಕ ಆಚರಣೆಗಳು ನಡೆದವು. ಇಂದ್ರ ಜಾತ್ರೆ ಹಬ್ಬವು ದೇವೇಂದ್ರನಿಗೆ ಸಮರ್ಪಿತವಾಗಿದ್ದು, ಉತ್ತಮ ಬೆಳೆಗಾಗಿ ಹಾಗೂ ಜನತೆಗೆ ಸುಖ-ಶಾಂತಿ ನೆಮ್ಮದಿ ನೀಡುವಂತೆ ಪ್ರಾರ್ಥಿಸಲಾಗುತ್ತದೆ.
ಕುಮಾರಿ ದೇವತೆ ಅಂದರೆ ಏನು?
ಕುಮಾರಿ ದೇವಿಯ ಆಯ್ಕೆ ಇದು ಒಂದು ವಿಶಿಷ್ಟ ಆಚರಣೆ. ಉತ್ಸವದ ಸಮಯದಲ್ಲಿ ಅನೇಕ ಪುಟ್ಟ ಹುಡುಗಿಯರು ಜೀವಂತ ದೇವತೆ ಕುಮಾರಿ ಹಂಗ್ ಚುಂಗ್ ಚಿಹ್ ಆಗಿ ವೇಷ ಧರಿಸುತ್ತಾರೆ. ಕುಮಾರಿ ಎಂದು ಕರೆಯುವ ದೇವತೆಯನ್ನು ಇಲ್ಲಿನ ಹಿಂದೂಗಳು ಪೂಜಿಸುತ್ತಾರೆ. ಶಿವನ ಪತ್ನಿ ಪಾರ್ವತಿಯ ರೂಪ ಎಂದೇ ಆಕೆಯನ್ನು ಜನರು ನಂಬುತ್ತಾರೆ. ಆಕೆ ಚಿಕ್ಕ ಮಗುವಿನ ಅವತಾರವಾಗಿ ಜನಿಸಿದ್ದಾಳೆ ಎಂಬ ನಂಬಿಕೆ ಇದೆ. ಈ ಸಂಪ್ರದಾಯ ಎರಡು ಶತಮಾನಗಳಿಗೂ ಹೆಚ್ಚು ಕಾಲದಿಂದ ಮುಂದುವರಿದಿದೆ.
ವಿಡಿಯೊ ವೀಕ್ಷಿಸಿ:
#WATCH | Nepal: Devotees gathered to watch the chariot procession of deities in human form- the Kumari, Ganesh and Bhairab at Basantapur Durbar Square in Kathmandu as a part of Indra Jatra, an eight-day festival celebrated in Kathmandu. Prime Minister of Nepal, KP Sharma Oli also… pic.twitter.com/t8ydZtcCwd
— ANI (@ANI) September 7, 2025
ಬಾಲಕಿಯನ್ನು ಕಠಿಣ ಷರತ್ತುಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. ಕುಮಾರಿ ದೇವತೆಯಾಗಿ ಆಯ್ಕೆಯಾಗಲು 32 ಗುಣಲಕ್ಷಣಗಳು ಇರಬೇಕಾಗುತ್ತದೆ. ಕಪ್ಪು ಅಥವಾ ನೀಲಿ ಕಣ್ಣುಗಳು, ಬಲಕ್ಕೆ ತಿರುಗುವ ಸುರುಳಿಯಾಕಾರದ ಕೂದಲು, ಹಸುವಿನಂತಹ ರೆಪ್ಪೆಯ ಕೂದಲು, ಜಿಂಕೆಯಂತಹ ತೊಡೆಗಳು ಇತ್ಯಾದಿ ಸೇರಿವೆ. ದೇವತೆಯಾಗಿ ಆಯ್ಕೆಯಾದ ಬಾಲಕಿಯು ದೇವಾಲಯದಲ್ಲಿ ಸ್ಥಾನ ಪಡೆದ ನಂತರ ಪ್ರಮುಖ ಧಾರ್ಮಿಕ ಸಂಪ್ರದಾಯಗಳನ್ನು ಕೈಗೊಳ್ಳುತ್ತಾಳೆ. ಪ್ರಧಾನ ಅರ್ಚಕರು ಪ್ರತಿದಿನ ದೇವಿಯನ್ನು ಪೂಜಿಸುತ್ತಾರೆ. ಈ ಆಚರಣೆಯಿಂದ ಅದೃಷ್ಟ ಮತ್ತು ಸಂಪತ್ತು ಒಲಿಯುತ್ತದೆ ಎಂಬ ನಂಬಿಕೆಯಿದೆ.
ದೇವತೆಯಾಗಿ ಆಯ್ಕೆಯಾದ ಕುಮಾರಿಗೆ ಸೂಕ್ತ ಆರೈಕೆ ನೀಡಲಾಗುತ್ತದೆ. ಮುಂದಿನ ಕುಮಾರಿಯಾಗಿ ಮತ್ತೊಂದು ಬಾಲಕಿ ಆಯ್ಕೆಯಾಗುವವರೆಗೆ ಆಕೆಗೆ ದೇವಾಲಯದೊಳಗೆ ಶಿಕ್ಷಣ, ಸೇವಕರ ಮಕ್ಕಳೊಂದಿಗೆ ಆಟ ಇತ್ಯಾದಿ ಅತ್ಯುನ್ನತ ಗೌರವಗಳನ್ನು ನೀಡಲಾಗುತ್ತದೆ. ಒಂದು ವೇಳೆ ಆಕೆ ಗಾಯಗೊಂಡರೆ ಅಥವಾ ಬಾಲಕಿ ಋತುಮತಿಯಾದರೆ, ತಕ್ಷಣ ಆಕೆಯನ್ನು ಇದರಿಂದ ಹೊರಗುಳಿಸಿ, ಬೇರೆ ಕುಮಾರಿಯನ್ನು ಆಯ್ಕೆ ಮಾಡಲಾಗುತ್ತದೆ.
ಈ ಪ್ರಾಚೀನ ಆಚರಣೆ ಹಿಂದೂ ಮತ್ತು ಬೌದ್ಧ ಸಮುದಾಯಗಳಲ್ಲಿ ಸಮಾನವಾಗಿ ಗೌರವ ಪಡೆದಿದೆ. ಈ ಆಚರಣೆಯು ಕೆಲವೇ ದಿನಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂದುವರೆಯಲಿದೆ. ನೇಪಾಳದ ಜನತೆ ಹಾಗೂ ಪ್ರವಾಸಿಗರು ಇದನ್ನು ಉತ್ಸವದಂತೆ ಆಚರಿಸುತ್ತಾರೆ. ಇದರ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿ: Viral News: ತಾತ್ಕಾಲಿಕ ಪತ್ನಿ ಬೇಕಾ? ಹಾಗಿದ್ದರೆ ಈ ದೇಶದಲ್ಲಿ ಸಂಗಾತಿಯನ್ನು ಬಾಡಿಗೆಗೆ ಪಡೆಯಬಹುದು!