Viral Post: ಈ ದೇಶದಲ್ಲಿ ಬರ್ತ್‌ಡೇ ಪಾರ್ಟಿಗೆ ಹೋಗೋ ಮುನ್ನ ಮನೆಯಲ್ಲೇ ಊಟ ಮಾಡಿ ಹೋಗ್ಬೇಕಂತೆ!
Dutch birthday rule: ನೆದರ್ಲ್ಯಾಂಡ್ಸ್‌ನಲ್ಲಿ ವಾಸಿಸುವ ಭಾರತೀಯ ಮೂಲದ ಮಹಿಳೆ ರಾಶಿ ಅಗರ್ವಾಲ್ ಎಂಬ ಕಂಟೆಂಟ್ ಕ್ರಿಯೇಟರ್, ವಿದೇಶದಲ್ಲಿ ತಮ್ಮ ಜೀವನದ ಅನುಭವಗಳನ್ನು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಡಚ್ ಸಂಸ್ಕೃತಿಯಲ್ಲಿ ಹುಟ್ಟುಹಬ್ಬದ ಪಾರ್ಟಿಯನ್ನು ಯಾವ ರೀತಿ ಆಚರಿಸಲಾಗುತ್ತದೆ ಎಂಬ ಬಗ್ಗೆ ವಿವರಿಸಿದ್ದಾರೆ.


ಆಮ್ಸ್ಟರ್‌ಡ್ಯಾಮ್: ವಿದೇಶದಲ್ಲಿ ವಾಸಿಸುವ ಭಾರತೀಯ ಮೂಲದ ಮಹಿಳೆ ರಾಶಿ ಅಗರ್ವಾಲ್ ಎಂಬುವವರು ನೆದರ್ಲ್ಯಾಂಡ್ಸ್‌ನಲ್ಲಿ (Netherlands) ತಮ್ಮ ಜೀವನದ ಅನುಭವಗಳನ್ನು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ (social media) ಹಂಚಿಕೊಳ್ಳುತ್ತಾರೆ. ತಮ್ಮ ಇತ್ತೀಚಿನ ವಿಡಿಯೊದಲ್ಲಿ, ಭಾರತದಲ್ಲಿ ಸಾಮಾನ್ಯವಾಗಿ ಆಚರಿಸುವ ಹುಟ್ಟುಹಬ್ಬವನ್ನು, ಡಚ್ ಸಮಾಜದಲ್ಲಿ ಹೇಗೆ ಸಂಪೂರ್ಣವಾಗಿ ವಿಭಿನ್ನವಾಗಿ ಆಚರಿಸುತ್ತಾರೆ ಎಂಬುದರ ಕುರಿತು ಅವರು ಮಾತನಾಡಿದ್ದಾರೆ.
ಹುಟ್ಟುಹಬ್ಬದ ಪಾರ್ಟಿ ಎಂದರೆ, ಬಗೆ-ಬಗೆಯ ಭಕ್ಷ್ಯಗಳು, ಅಲಂಕಾರಗೊಂಡ ಸ್ಟೇಜ್, ವಿಭಿನ್ನ ಥೀಮ್‍ನ ಕೇಕ್ ಇತ್ಯಾದಿಗಳನ್ನೊಳಗೊಂಡಿರುತ್ತದೆ. ಆದರೆ ನೆದರ್‌ಲ್ಯಾಂಡ್ಸ್‌ನಲ್ಲಿ, ಜನರನ್ನು ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನಿಸಿದಾಗ, ಅವರು ಹಾಜರಾಗುವ ಮೊದಲು ತಮ್ಮ ಮನೆಯಲ್ಲಿ ಊಟ ಮಾಡಿಬರಬೇಕು. ಏಕೆಂದರೆ ಪಾರ್ಟಿಗಳಲ್ಲಿ ಕೇವಲ ಸ್ನಾಕ್ಸ್ ಅಷ್ಟೇ ನೀಡಲಾಗುತ್ತದೆಯಂತೆ.
ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡ ಕಂಟೆಂಟ್ ಕ್ರಿಯೇಟರ್ ರಾಶಿ ಅಗರ್ವಾಲ್, ನೆದರ್‌ಲ್ಯಾಂಡ್ಸ್‌ನ ವಿಚಾರ ಕೇಳಿದರೆ ಭಾರತೀಯರಿಗೆ ಅಕ್ಷರಶಃ ಶಾಕ್ ಆಗಬಹುದು. ಇಲ್ಲಿ ಪಾರ್ಟಿಯಲ್ಲಿ ಭಾರತದಂತೆ ಭೋಜನ ವ್ಯವಸ್ಥೆಯನ್ನು ಮಾಡಲಾಗುವುದಿಲ್ಲ. ಕೆಲವೇ ಬಗೆಯ ಸ್ನಾಕ್ಸ್‌ಗಳನ್ನು ಮಾತ್ರ ನೀಡಲಾಗುತ್ತದೆ. ಭಾರತದಲ್ಲಾದರೆ, ಪಾರ್ಟಿಗೆ ಹೋಗುವಾಗ ಮನೆಯಲ್ಲಿ ಅಡುಗೆ ಮಾಡಬೇಕೆಂದಿಲ್ಲ. ಹೊಟ್ಟೆ ಬಿರಿಯುವಷ್ಟು ಊಟ ಮಾಡಿ ಬರಬಹುದು. ಆದರೆ, ಇಲ್ಲಿ ಅದರ ತದ್ವಿರುದ್ಧ ಎಂದು ಅವರು ವಿವರಿಸಿದರು.
ವಿಡಿಯೊ ವೀಕ್ಷಿಸಿ:
ಈ ಪೋಸ್ಟ್‌ಗೆ ಇದೀಗ ವೈರಲ್ ಆಗಿದ್ದು (Viral Post), ಹಲವಾರು ಮಂದಿ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಕೂಡ ಇದೇ ರೀತಿಯ ಅನುಭವವನ್ನು ತೆರೆದಿಟ್ಟಿದ್ದಾರೆ. “ಇದು ನಿಜ, ತನಗೆ ಒಮ್ಮೆ ವಿರುದ್ಧವಾದ ಘಟನೆ ಸಂಭವಿಸಿತು. ನಾನು ಒಬ್ಬ ಭಾರತೀಯ. ನನ್ನ 30ನೇ ಹುಟ್ಟುಹಬ್ಬದ ಪಾರ್ಟಿಗೆ ನನ್ನ ಡಚ್ ಸ್ನೇಹಿತರ ದೊಡ್ಡ ಗುಂಪನ್ನು ಮನೆಗೆ ಆಹ್ವಾನಿಸಿದೆ. ಅವರಿಗಾಗಿ ನಾನು ಬಿರಿಯಾನಿ, ಸಮೋಸಾ, ಕೇಕ್, ಪಿಜ್ಜಾ, ಚೀಸ್, ಕ್ರಿಸ್ಪ್ಸ್, ಪಕೋಡಾ, ಪಾನೀಯಗಳು ಹೀಗೆ ಹಲವಾರು ಭಕ್ಷ್ಯಗಳನ್ನು ತಯಾರಿಸಿದ್ದೆ. ಪಾರ್ಟಿ ಶನಿವಾರ ಸಂಜೆ 7 ಗಂಟೆಗೆ ನಿಗದಿಯಾಗಿತ್ತು. ಆದರೆ, ಸ್ನೇಹಿತರು ಮನೆಯಿಂದ ಊಟ ಮಾಡಿ ತನ್ನ ಬರ್ತ್ ಡೇ ಪಾರ್ಟಿಗೆ ಬಂದಿದ್ದರು. ಅಷ್ಟೂ ಆಹಾರವನ್ನು ಒಂದು ವಾರ ಇಟ್ಟು ತಾನೇ ತಿನ್ನಬೇಕಾಯಿತು” ಎಂದು ತಮಗಾದ ಅನುಭವವನ್ನು ತಿಳಿಸಿದ್ದಾರೆ.
ಮತ್ತೊಂದು ವಿಡಿಯೊದಲ್ಲಿ ರಾಶಿ ಅಗರ್ವಾಲ್, ನೆದರ್‌ಲ್ಯಾಂಡ್ಸ್‌ನಲ್ಲಿ ಹುಟ್ಟುಹಬ್ಬದ ಸಂಪ್ರದಾಯಗಳು ಹೇಗೆ ವಿಭಿನ್ನವಾಗಿ ಆಚರಿಸಲಾಗುತ್ತದೆ ಎಂಬುದನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ, ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳು ಹುಟ್ಟುಹಬ್ಬದ ವ್ಯಕ್ತಿಗೆ ಕೇಕ್ ಅಥವಾ ಇತ್ಯಾದಿಯೊಂದಿಗೆ ಸರ್ಪೈಸ್ ನೀಡುತ್ತಾರೆ. ಆದರೆ, ಡಚ್ ಸಂಸ್ಕೃತಿಯಲ್ಲಿ ಇದು ಉಲ್ಟಾ. ಯಾರದ್ದು ಹುಟ್ಟುಹಬ್ಬ ಇದೆಯೊ ಅವರೇ ಕೇಕ್ ಅಥವಾ ತಿಂಡಿ ತರುತ್ತಾರೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Viral Post: ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ!? ಮಕ್ಕಳಂತೆ ಆಡಲು ಜಾರುಬಂಡಿ ಆಡಲು ಹೋಗಿ ಪೇಚಿಗೆ ಸಿಲುಕಿದ ಭೂಪ