Viral Video: ಸತ್ತ ಸಾಕು ಬೆಕ್ಕನ್ನು ಫ್ರೀಜರ್‌ನಲ್ಲಿಟ್ಟ ಮಹಿಳೆ; ಶಾಕಿಂಗ್ ವಿಡಿಯೊ ವೈರಲ್
Woman Freeze-Dries Dead Pet Cat: ಸಾಕುಪ್ರಾಣಿಗಳು ಕುಟುಂಬದ ಸದಸ್ಯರಂತೆಯೇ ಇರುತ್ತವೆ. ಬಹುತೇಕ ಮಂದಿ ಅವುಗಳನ್ನು ತಮ್ಮ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುತ್ತಾರೆ. ಅದು ಮೃತಪಟ್ಟರೆ ದುಃಖ ಹೇಳತೀರದು. ಅವುಗಳನ್ನು ಮಣ್ಣು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲೊಬ್ಬ ಮಹಿಳೆ ಸತ್ತ ಬೆಕ್ಕನ್ನು ಸಂರಕ್ಷಿಸಿದ್ದಾಳೆ.


ನ್ಯೂಯಾರ್ಕ್: ಸಾಕುಪ್ರಾಣಿಗಳು ಕುಟುಂಬದ ಸದಸ್ಯರಂತೆಯೇ ಇರುತ್ತವೆ. ಬಹುತೇಕ ಮಂದಿ ಅವುಗಳನ್ನು ತಮ್ಮ ಸ್ವಂತ ಮಕ್ಕಳ ಹಾಗೆ ನೋಡಿಕೊಳ್ಳುತ್ತಾರೆ. ಆದರೆ, ಇವುಗಳ ಜೀವಿತಾವಧಿ ಮಾತ್ರ ಕಡಿಮೆ ಇರುತ್ತದೆ. ಬೇಗನೆ ಮೃತಪಡುವ ಈ ಪ್ರಾಣಿಗಳಿಗೆ ವಿದಾಯ ಹೇಳುವುದು ಅಷ್ಟು ಸುಲಭದ ಕೆಲಸವಲ್ಲ. ಅದೇ ರೀತಿ, ಇಲ್ಲೊಬ್ಬ ಮಹಿಳೆಯು ತನ್ನ ಸಾಕು ಬೆಕ್ಕು (pet cat) ಸತ್ತರೂ ಅದಕ್ಕೆ ವಿದಾಯ ಹೇಳಿಲ್ಲ. ಬದಲಾಗಿ ತನ್ನ ಬೆಕ್ಕನ್ನು ಶಾಶ್ವತವಾಗಿ ತನ್ನ ಜೊತೆಗೇ ಇಟ್ಟುಕೊಳ್ಳಲು ಬೇರೊಂದು ಮಾರ್ಗವನ್ನು ಆರಿಸಿಕೊಂಡಳು. ಅದು ಹೇಗೆ ಅಂತೀರಾ? ಇಲ್ಲಿದೆ ಸ್ಟೋರಿ.
ಅಮೆರಿಕದ ನ್ಯೂಯಾರ್ಕ್ (New York) ಮೂಲದ ಮಹಿಳೆ ಮೇಘನ್ ರಿಲೇ, ತನ್ನ ಪ್ರೀತಿಯ ಬೆಕ್ಕನ್ನು ತನ್ನೊಂದಿಗೆ ಹೇಗೆ ಇರಿಸಿದರು ಎಂಬ ಬಗೆಗಿನ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಮೃತಪಟ್ಟ ಬೆಕ್ಕಿಗೆ ವಿದಾಯ ಹೇಳುವ ಬದಲು, ಬೆಕ್ಕು ತನ್ನೊಂದಿಗೆ ಇರಲು ಅದನ್ನು ಫ್ರೀಜ್ ಮಾಡಿ ಒಣಗಿಸಿ ಸಂರಕ್ಷಿಸಲಾಗಿದೆ. ರಿಲೇ ಒಂದು ಪ್ಯಾಕೇಜ್ ಅನ್ನು ಬಿಚ್ಚುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ಒಳಗೆ ಕಪ್ಪು ಬೆಕ್ಕು ಇತ್ತು. ಅದನ್ನು ಸಂಪೂರ್ಣವಾಗಿ ಸಂರಕ್ಷಿಸಲಾಗಿದೆ ಎಂದು ವಿವರಿಸಿದ್ದಾಳೆ.
ಅವಳು ಕಣ್ಣೀರು ಸುರಿಸುತ್ತಾ ಮೃತಪಟ್ಟ ಬೆಕ್ಕನ್ನು ತಬ್ಬಿಕೊಂಡು ಅದರ ತುಪ್ಪಳವನ್ನು ಸವರುತ್ತಿರುವುದು ಕಂಡುಬಂದಿದೆ. ನಂತರ ರಿಲೇ ಅದನ್ನು ತನ್ನ ಮನೆಯ ಕಪಾಟಿನಲ್ಲಿ ಇಟ್ಟು ಅದರ ತಲೆಗೆ ಮುತ್ತಿಟ್ಟಳು. ವಿಡಿಯೊದ ಶೀರ್ಷಿಕೆಯಲ್ಲಿ, ರಿಲೇ ಮೃತಪಟ್ಟ ಬೆಕ್ಕಿನ ದೇಹದ ಸಂರಕ್ಷಣೆಯನ್ನು ಏಕೆ ಆರಿಸಿಕೊಂಡಳು ಎಂಬುದಾಗಿ ವಿವರಿಸಿದ್ದಾಳೆ. “ನೀವು ಏನನ್ನಾದರೂ ತುಂಬಾ ಪ್ರೀತಿಸಿದಾಗ, ನೀವು ಅದನ್ನು ಹೂತುಹಾಕುವುದಿಲ್ಲ. ನೀವು ಅದನ್ನು ಸಂರಕ್ಷಿಸುತ್ತೀರಿ. ಅವನು ಫ್ರೀಜ್-ಡ್ರೈಡ್ ಆಗಿದ್ದಾನೆ” ಎಂದು ಹೇಳಿದ್ದಾಳೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಭಾರಿ ವೈರಲ್ (Viral Video) ಆಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕೆಯ ಆಯ್ಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ನಾನು ನೋಡಿದ ಅತ್ಯಂತ ಭಯಾನಕ ವಿಷಯ ಇದು ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೃತಪಟ್ಟ ಬೆಕ್ಕಿಗೆ ಹೀಗೆ ಮಾಡುವುದು ಯಾವ ಸ್ವಾರ್ಥಕ್ಕಾಗಿ? ಸತ್ತವರನ್ನು ಸಮಾಧಿ ಮಾಡಿ, ಅವುಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅಂದರೆ ಏನು? ನೀವು ಅವುಗಳನ್ನು ಪ್ರಕೃತಿಗೆ ಹಿಂತಿರುಗಲು ಬಿಡಿ ಎಂದು ಮತ್ತೊಬ್ಬ ಬಳಕೆದಾರರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ನನ್ನ ಬೆಕ್ಕುಗಳನ್ನು ಪ್ರೀತಿಸುತ್ತೇನೆ, ಆದರೆ ನಾನು ಅವುಗಳ ಶವವನ್ನು ಟ್ರೋಫಿಯಂತೆ ಪ್ರದರ್ಶನಕ್ಕೆ ಇಡುವುದಿಲ್ಲ ಎಂದು ಮಗದೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral News: ನೀವು ಹೀಗೆ ರಾತ್ರಿ 12 ಗಂಟೆಯ ನಂತರ ತಿರುಗಾಡಿದರೆ ಕಿರುಕುಳ ಆಗುತ್ತೆ; ಚನ್ನೈ ಪೊಲೀಸರಿಂದ ಮಹಿಳೆಗೆ ತರಾಟೆ!
ಅನೇಕರು ಅವಳನ್ನು ಟೀಕಿಸಿದರೆ, ಕೆಲವು ಬಳಕೆದಾರರು ರಿಲೇ ನಿರ್ಧಾರವನ್ನು ಅರ್ಥಮಾಡಿಕೊಂಡಂತೆ ಕಂಡುಬಂದಿತು. ಸಾಕುಪ್ರಾಣಿ ಮಾಲೀಕರು ಹೀಗೆ ಮಾಡುವುದು ಅಸಾಮಾನ್ಯವೇನಲ್ಲ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ರಿಲೇ ಕೂಡ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ.
ಮಹಿಳೆಯು ಬೆಕ್ಕಿನ ಸಂರಕ್ಷಣೆಯ ಪ್ರಕ್ರಿಯೆಯ ವಿವರಗಳನ್ನು ಹಂಚಿಕೊಂಡಿದ್ದಾಳೆ. ಅವಳ ಬೆಕ್ಕನ್ನು ಅನಿಮಲ್ ಫ್ಯಾಮಿಲಿ ಪೆಟ್ ಪ್ರಿಸರ್ವೇಶನ್ ಸಂರಕ್ಷಿಸಿದೆ ಎಂದು ತಿಳಿಸಿದ್ದಾಳೆ. “ಇದು ನನಗೆ ಶಾಂತಿಯನ್ನು ತರುತ್ತದೆ, ನೋವನ್ನಲ್ಲ. ಅವನಿಗೆ ಗೌರವವಿದೆ. ನಾನು ಸತ್ತಾಗ ಅವನು ಕಸದ ಬುಟ್ಟಿಗೆ ಹೋಗುವುದಿಲ್ಲ. ನೀವು ಎಂದಿಗೂ ಪ್ರಾಣಿಯೊಂದಿಗೆ ಇಷ್ಟು ಆಳವಾದ ಸಂಬಂಧವನ್ನು ಹೊಂದಿಲ್ಲದಿದ್ದರೆ, ಕೃತಜ್ಞರಾಗಿರಿ. ಆದರೆ ನಿಮಗೆ ಅರ್ಥವಾಗದಿದ್ದರೆ ನಿರ್ಣಯಿಸಬೇಡಿ” ಎಂದು ರಿಲೇ ಹೇಳಿದರು.