ಕೆಜಿಬಿ ಎಂಬ ಜಾದೂಗಾರ !
ಯಾವುದೇ ಗಿಮಿಕ್ಕಿಲ್ಲದ, ಶುದ್ಧ ವ್ಯಾವಹಾರಿಕ ಪ್ರಜ್ಞೆಯ ಪತ್ರಕರ್ತ ಕೆಬಿಜಿ. ತಮ್ಮ ‘ Abrakadabra’ ಮತ್ತು ಛೂ ಮಂತ್ರ’ ಜನಪ್ರಿಯ ಅಂಕಣದಲ್ಲಿ ತಮ್ಮ ಹರಿತವಾದ ಬರವಣಿಗೆಯ ಮೂಲಕ ಮ್ಯಾಜಿಕ್ ಮಾಡಿದ ಜಾದುಗಾರ, ಅಜಾತ ಶತ್ರು. ನಿಸ್ಸಂದೇಹವಾಗಿ ಅವರೊಬ್ಬ ‘ಜಂಟಲ್ ಮ್ಯಾನ್ ಟು ದಿ ಕೋರ್’.


ನಂಜನಗೂಡು ಮೋಹನ್
ವಿಶ್ವವಾಣಿ ಸಂಪಾದಕೀಯ ಸಲಹೆಗಾರ
ತಿದ್ದಿ ಬಾಚಿದ ದಟ್ಟ ತಲೆಗೂದಲು, ಟ್ರಿಮ್ ಮಾಡಿದ ಮೀಸೆ, ದಿನನಿತ್ಯ ಸವರಿದ ದಾಡಿ. ದಪ್ಪ ಗಾಜಿನ ಚಷ್ಮಾದ ಒಳಗೆ ತೇಲುವ ಕಣ್ಣು. ಕೊರಳಿಗೆ ಟೈ, ಸೂಟು - ಬೂಟು. ಖಡಕ್ ಸೇನಾಧಿಕಾರಿಯ ನಡಿಗೆ. ಗಟ್ಟಿದೇಹ, ಒಟ್ಟಾರೆ ವೀರ ಕೊಡವನೊಬ್ಬನ ಗತ್ತು - ಗೈರತ್ತು.
90ರ ದಶಕದಲ್ಲಿ ಪತ್ರಿಕೋದ್ಯಮಕ್ಕೆ ನಾನು ಅಂಬೆಗಾಲಿಟ್ಟಾಗ, ನನ್ನೆದುರಿಗೆ ಕಂಡ ಕೆಬಿಜಿ (ಕೆ. ಬಿ . ಗಣಪತಿ) ಅವರ ವ್ಯಕ್ತಿ ಚಿತ್ರಣ ಇದು. ಭಾನುವಾರ ಬೆಳೆಗ್ಗೆ ಕೆಬಿಜಿ ಅವರ ನಿಧನ ವಾರ್ತೆ ಕಿವಿಗೆ ಬಿದ್ಡೊಡನೆಯೇ ಮನಸ್ಸು ಮುದುಡಿ, ಕಣ್ಣು ಮಂಜಾಯಿತು. ಕಳೆದ ಕೆಲವು ದಿನಗಳ ಹಿಂದಷ್ಟೇ, ಸಂಪಾದಕರಾದ ವಿಶ್ವೇಶ್ವರ ಭಟ್ಟರು, ‘ಒಮ್ಮೆ ಮೈಸೂರಿಗೆ ಹೋಗಿ ಗಣಪತಿಯವರನ್ನು ಭೇಟಿ ಮಾಡಿ ಬರೋಣ’ ಎಂದು ಅಭಿಲಾಷೆ ವ್ಯಕ್ತಪಡಿಸಿದ್ದರು.
ಅದೂ ಹೋಗಲಿ, ನಿನ್ನೆ ಅಂದರೆ ಶನಿವಾರ ನನ್ನ ಮತ್ತು ಭಟ್ಟರ ನಡುವೆ ನಡೆದ ಹಗ್ಗ ಜಗ್ಗಾಟ ಹೇಳಲೇಬೇಕು. ವಾರಕ್ಕೊಮ್ಮೆ ಪತ್ರಿಕೆಗೆ ಬರೆಯಲೇಬೇಕು ಎಂದು ಅಭಿಮಾನದ ಕಟ್ಟಪ್ಪಣೆ ವಿಧಿಸಿದ್ದರು ಭಟ್ಟರು. ನಾನು ಇಲ್ಲಸಲ್ಲದ ನೆಪ ಹೇಳಿ ಹಿಂದೆ ಏಮಾರಿಸಿದಂತೆ ಜಾರಿಕೊಳ್ಳಲು ಪ್ರಯತ್ನಿಸಿದೆ. ಆದರೆ ಅದಾಗಲೇ ಅವರು, ಇನ್ನು ಮುಂದೆ ವಾರ ವಾರ ‘ನಂಜನಗೂಡು ಮೋಹನ್ ಬರೆಯಲಿದ್ದಾರೆ’ ಎಂದು ಪ್ರೋಮೊ ಸಿದ್ದಪಡಿಸಿ ನಮ್ಮವೇ ಗ್ರೂಪ್ ಗಳಲ್ಲಿ ಹರಿಬಿಟ್ಟಾಗಿತ್ತು.
ಇದನ್ನೂ ಓದಿ: Vishweshwar Bhat Column: ಮಾಯವಾದ ಮ್ಯಾಜಿಷಿಯನ್ ಸಂಪಾದಕ
ಆದರೆ, ನನ್ನ ಬಹುದಿನಗಳ ಬರವಣಿಗೆಯ ವಿಘ್ನಕ್ಕೆ ಉಪಶಮನ ಎಂಬಂತೆ ನನ್ನ ಪತ್ರಿಕೋದ್ಯಮದ ಗುರುವಿಗೆ, ಗುರು ನಮನ ಸಲ್ಲಿಸುವ ಇಂತಹ ನೋವಿನ ಸನ್ನಿವೇಶ ನಿರೀಕ್ಷಿಸಿರಲಿಲ್ಲ. ಎಪ್ಪತ್ತರ ದಶಕದಲ್ಲಿ ಮೈಸೂರು ಪತ್ರಿಕೋದ್ಯಮಕ್ಕೆ ‘ಸ್ಟಾರ್’ಎಂಟ್ರಿ ಕೊಟ್ಟ ಕೆಬಿಜಿ ಅವರದ್ದು ಕಳೆದ ಸುಮಾರು ಐದು ದಶಕಗಳಲ್ಲಿ ವಿಶಿಷ್ಟ ಹೆಜ್ಜೆ.
ಜಾಹೀರಾತನ್ನು ಧಿಕ್ಕರಿಸಿ ಮಡಿವಂತಿಕೆಯ ಪತ್ರಿಕೋದ್ಯಮದ ಬಿರುಗಾಳಿಯ ನಡುವೆ, ಜಾಹೀರಾತೇ ಪತ್ರಿಕೆಯ ಬೆನ್ನೆಲುಬು ಎಂಬ ಸಿದ್ಧಾಂತವನ್ನು ಭದ್ರಗೊಳಿಸಿ ‘ಸ್ಟಾರ್ ಆಫ್ ಮೈಸೂರು ’ಎಂಬ ಸಂಜೆ ಇಂಗ್ಲಿಷ್ ದಿನಪತ್ರಿಕೆಯನ್ನು ಮನೆ ಮಾತಾಗಿಸಿ ಜಾಗತಿಕ ಮಟ್ಟದಲ್ಲೂ ಕ್ರೆಡಿಬಿಲಿಟಿ ತಂದುಕೊಟ್ಟವರು ಕೆಬಿಜಿ.
ಯಾವುದೇ ಗಿಮಿಕ್ಕಿಲ್ಲದ, ಶುದ್ಧ ವ್ಯಾವಹಾರಿಕ ಪ್ರಜ್ಞೆಯ ಪತ್ರಕರ್ತ ಕೆಬಿಜಿ. ತಮ್ಮ ‘ Abrakadabra’ ಮತ್ತು ಛೂ ಮಂತ್ರ’ ಜನಪ್ರಿಯ ಅಂಕಣದಲ್ಲಿ ತಮ್ಮ ಹರಿತವಾದ ಬರವಣಿಗೆಯ ಮೂಲಕ ಮ್ಯಾಜಿಕ್ ಮಾಡಿದ ಜಾದುಗಾರ, ಅಜಾತ ಶತ್ರು. ನಿಸ್ಸಂದೇಹವಾಗಿ ಅವರೊಬ್ಬ ‘ಜಂಟಲ್ ಮ್ಯಾನ್ ಟು ದಿ ಕೋರ್’.
ಅಂದಿನ ಕಪ್ಪು ಬಿಳುಪಿನ ‘ಸ್ಟಾರ್ ಆಫ್ ಮೈಸೂರು’ ಮತ್ತು ’ಮೈಸೂರು ಮಿತ್ರ’ ಪತ್ರಿಕೆ ನ ಭೂತೋ. ..ಎಂಬಂತೆ ಪತ್ರಿಕೋದ್ಯಮದಲ್ಲಿ ಬೇರುಬಿಟ್ಟಿದ್ದು ಈಗ ಇತಿಹಾಸ. ತಾವು ಕಂಡದ್ದನ್ನು, ಓದಿದ್ದನ್ನು ಒಬ್ಬ ಪತ್ರಕರ್ತನ ಚೌಕಟ್ಟಿನ ಅಳೆಯುತ್ತಿದ್ದ ಕೆಬಿಜಿ ಅವರ ಬರವಣಿಗೆಯಲ್ಲಿ ಅಧಿಕಪ್ರಸಂಗತನವಾಗಲಿ, ಆತ್ಮಪ್ರಶಂಸೆಯಾಗಲಿ, ಸಣ್ಣತನವಾಗಲಿ, ಆಟಾಟೋಪವಾಗಲಿ, ಇಲ್ಲವೇ ಮತ್ತೊಬ್ಬರನ್ನು ಹಣಿ ಯುವಗುರಾಣಿಯಾಗಿ ಬಳಸಿಕೊಂಡ ನಿದರ್ಶನ ಕಾಣಬರಲೇ ಇಲ್ಲ. ಹಾಗಾಗಿಯೇ ಮೈಸೂರು ಪತ್ರಿಕೋದ್ಯಮವನ್ನು ಸರಿ ಸುಮಾರು ಅರ್ಧ ಶತಮಾನಗಳಷ್ಟು ಕಾಲ ಆಳಿ ಅಸ್ತಂಗತರಾದರು.
ಗಾಂಭಿರ್ಯ ನಡೆ-ನುಡಿಯ ಕೆಬಿಜಿ, ಕೊನೆಯವರೆಗೂ ತಮ್ಮಿಷ್ಟದಂತೆಯೇ ಬರೆದರು. ಮುಂದೆ ಬಂದರೆ ಹಾಯಬೇಡ; ಹಿಂದೆ ಬಂದರೆ ಒದೆಯ ಬೇಡ ಎಂಬ ಸಿದ್ಧಾಂತ ಅವರದ್ದು. ನಾವು ನೋಡಿರದ ಓದಿನಿಂದಷ್ಟೇ ಅರಿತಿರುವ ಖುಷ್ವಂತ್ ಸಿಂಗ್, ಎಂ.ಜೆ.ಅಕ್ಬರ್ ಮುಂತಾದ ಹಿರಿಯ ಪತ್ರಕರ್ತರ ಬಗ್ಗೆ ಅವರನ್ನು ಹತ್ತಿರದಿಂದ ಕಂಡಿರುವ ರವಿ ಬೆಳೆಗೆರೆ ಮತ್ತು ವಿಶ್ವೇಶ್ವರ ಭಟ್ ಅವರುಗಳು ಮನತುಂಬಿ ಮಾತನಾಡುವಾಗಲೆಲ್ಲ ನನ್ನ ಕಣ್ಣ ಮುಂದೆ ಕೆಬಿಜಿ ಅವರ ವ್ಯಕ್ತಿತ್ವ ಹಾದು ಹೋಗಿದೆ.
ಕೆಬಿಜಿ ಅವರೂ ಸಹ ಇವರಂತೆಯೇ ರೀತಿ-ರಿವಾಜು, ಯಶಸ್ಸು, ಹಣ, ಜೀವನ ಪ್ರೇಮ ದೊಂದಿಗೆ ಕೀರ್ತಿಯ ಪರಾಕಾಷ್ಠೆಯನ್ನು ತಮ್ಮ ಕೊನೆಯ ದಿನಗಳವರೆಗೂ ಕಾಪಾಡಿ ಕೊಂಡು ಬಂದ ನಮ್ಮ ನಡುವಿನ ಅಪರೂಪದ ಪತ್ರಕರ್ತ. ಅವರ ಶಿಸ್ತು, ಬಿಸಿನೆಸ್ ಮೈಂಡ್, ಪ್ರತಿಭೆ, ಅಗಾಧ ಓದು ಇವೆಲ್ಲವೂ ಸೇರಿ ಕೆಬಿಜಿ ಅವರಿಗೆ ಯಶಸನ್ನು ತಂದು ಕೊಟ್ಟಿತು.
ಪತ್ರಿಕೆ ಪ್ರಾರಂಭಿಸಿದಂದಿನಿಂದ ಕಣ್ಣು ಮುಚ್ಚುವವರೆಗೂ ಕೆಬಿಜಿ, ಓರ್ವ ಓದುಗ ಮತ್ತು ನಿರಂತರ ಬರೆಯುವ ಸಂಪಾದಕನಾಗಿ ಕ್ರಿಯಾ ಶೀಲತೆಯನ್ನು ಕಾಪಾಡಿಕೊಂಡು ಬಂದದ್ದು ವಿಸ್ಮಯ. ಪತ್ರಿಕೆಗೆ ಯಾವುದೇ ಇಸಂ ಗಳ ಹೊರೆ ಹೊರಿಸದೆ, ಲೆಫ್ಟ್ ಇಲ್ಲವೇ ರೈಟ್ ಎಂಬ ಜಂಜಾಟಕ್ಕೆ ಸಿಲುಕಿಸದೆ ಸಾಮಾನ್ಯ ನಾಗರಿಕನ ದನಿಯನ್ನಾಗಿ ರೂಪಿಸಿ ಇಂದಿ ನವರೆಗೂ ಅದನ್ನು ಕಾಪಾಡಿಕೊಂಡು ಬಂದದ್ದು ಗಣಪತಿಯವರ ಅಚಲ ನಿಲುವು ಮೆಚ್ಚುವಂಥದ್ದು.
ಮೈಸೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವರದಿ, ಚಿತ್ರಗಳು ‘ಮೈಸೂರು ಮಿತ್ರ’ ‘ಸ್ಟಾರ್ ಆಫ್ ಮೈಸೂರ್’ನಲ್ಲಿ ಬಂದರಷ್ಟೇ ಅವುಗಳಿಗೆ ಮಹತ್ವ ಎನ್ನುವ ಮಟ್ಟಿಗೆ ಪತ್ರಿಕೆ ಮೈಸೂರಿನಲ್ಲಿ ಬೆಳೆದು ನಿಂತಿದೆ. ಕೆಬಿಜಿ ಅವರನ್ನು ಮೆಚ್ಚುವವರು, ಅವರ ಪತ್ರಿಕೋ ದ್ಯಮ ಶೈಲಿಯ ಬಗ್ಗೆ ಮೂಗು ಮುರಿಯುವವರು ಇಂದಿಗೂ ಇದ್ದಾರೆ.
ಆದರೆ ಅವರ ಸಂಪಾದಕತ್ವದ ’ಸ್ಟಾರ್ ಆಫ್ ಮೈಸೂರ್’ ಮತ್ತು ‘ಮೈಸೂರು ಮಿತ್ರ’ ಪತ್ರಿಕೆಯ ಬುಡವನ್ನು ಕಿಂಚಿತ್ತೂ ಅಲುಗಾಡಿಸಲು ಈವರೆಗೆ ಯಾರಿಗೂ ಸಾಧ್ಯವಾಗಲಿಲ್ಲ. ರಾಜ್ಯಮಟ್ಟದ ದೊಡ್ಡ ದೊಡ್ಡ ಇಂಗ್ಲಿಷ್ ಪತ್ರಿಕೆಗಳಿಗೂ ಜಾಹೀರಾತು ಪೈಪೋಟಿ ನೀಡಿ ಮೆರೆ ಯುತ್ತಲೇ ಬಂದಿದೆ ಸ್ಟಾರ್ ಆಫ್ ಮೈಸೂರ್. ಯಾರ‍್ಯಾರದ್ದೋ, ಎಂತೆಂಥದ್ದೋ ಪ್ರಯತ್ನಗಳು ಕೈಗೂಡಲೇ ಇಲ್ಲ.
ಇಂದಿಗೂ ‘ಸ್ಟಾರ್ ಆಫ್ ಮೈಸೂರ್’, ‘ಸ್ಟಾರ್ ಆಫ್ ಮೈಸೂರ್ ’ಆಗೇ ಉಳಿದಿದೆ. ಕೆಬಿಜಿ ಅವರ ಗರಡಿಯಲ್ಲಿ ಪಳಗಿದ ಅನೇಕರು ಇಂದು ಸೆಲೆಬ್ರಿಟಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಬೆಳಗುತ್ತಿದ್ದಾರೆ. ಅಮೆಜಾನ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಚೇತನ್ ಕೃಷ್ಣ ಸ್ವಾಮಿ, ಪಬ್ಲಿಕ್ ಟಿವಿಯ ಹೆಚ್.ಆರ್. ರಂಗನಾಥ್, ಪ್ರಜಾವಾಣಿಯಲ್ಲಿ ಕೆಲಸ ಮಾಡಿದ ಎಂ.ನಾಗರಾಜ್ ಮತ್ತು ನಂಜುಂಡೇಗೌಡ, ಹಿರಿಯ ಐ ಎ ಎಸ್ ಅಧಿಕಾರಿ ಎಂ.ಆರ್.ರವಿ, ಹಿರಿಯ ಪತ್ರಕರ್ತರಾದ ಗಿರೀಶ್ ನಿಕ್ಕಂ, ಕೃಷ್ಣವಟ್ಟಂ ಮುಂತಾದವರೆಲ್ಲರೂ ಇಲ್ಲಿ ಸಾಮು ಮಾಡಿದವರೇ.
ಅಷ್ಟೇ ಏಕೆ ಆಂದೋಲನ ಪತ್ರಿಕೆಯ ರಾಜಶೇಖರ ಕೋಟಿ ಅವರೂ ಆರಂಭದ ಹಲವು ತಿಂಗಳು ಕೆಬಿಜಿ ಅವರ ಬಳಿ ಪತ್ರಿಕೋದ್ಯಮದ ಪಾಠ ಒಪ್ಪಿಸಿದವರೇ. ನಾನು ‘ಮೈಸೂರು ಮಿತ್ರ’ ಸೇರುವ ಹೊತ್ತಿಗೆ ಪತ್ರಿಕೆಗೆ ಹದಿನೈದರ ತಾರುಣ್ಯ. ಆಗ ಎಂ. ಆರ್ . ಶಿವಣ್ಣ ಸುದ್ದಿ ಸಂಪಾದಕರು.
ಆರ್‌ಎಸ್‌ಎಸ್‌ನ ಸಾಮರಸ್ಯ ವಾದಿರಾಜ, ಅನಂತ ಚಿನಿವಾರ, ಟಿ.ಗುರುರಾಜ್ ಮುಂತಾ ದವರೆಲ್ಲ ನನ್ನ ಸಹೋದ್ಯೋಗಿಗಳು. ಕೆಬಿಜಿ ಸಿಬ್ಬಂದಿಗಳನ್ನು ಪ್ರೀತಿಯಿಂದ ಕಾಣುತ್ತಿದ್ದರು. ಅರ್ಹತೆಗೆ ತಕ್ಕ ಸಂಬಳ, ವರ್ಷಕ್ಕೊಮ್ಮೆ ಬೋನಸ್ ಸಿಗುತಿತ್ತು. ಯಾವುದೇ ರಾಜ್ಯಮಟ್ಟದ ಪತ್ರಿಕೆಗಳಿಗಿಂತಲೂ ಕಡಿಮೆ ಇಲ್ಲದಂತೆ ಪತ್ರಿಕೆಯ ಗುಣಮಟ್ಟ ಮತ್ತು ಆಡಳಿತ ವ್ಯವಸ್ಥೆ ಗಟ್ಟಿಯಾಗಿತ್ತು.
ಬೆಳಗ್ಗೆ ೮.೧೫ಕ್ಕೆ ಕಚೇರಿಗೆ ಬರುತ್ತಿದ್ದ ಸಂಪಾದಕ ಗಣಪತಿಯವರು ಮಧ್ಯಾಹ್ನ ‘ಸ್ಟಾರ್ ಆಫ್ ಮೈಸೂರ್’ನ್ನು ಪ್ರಿಂಟ್ ಗೆ ಕಳಿಸಿ, ನಂತರ ೩ಕ್ಕೆ ‘ಮೈಸೂರುಮಿತ್ರ’ ಪತ್ರಿಕೆಯ ಸಂಪಾದಕೀಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ಮನೆಗೆ ತೆರಳುತ್ತಿದ್ದರು. ಸಣ್ಣ ಪುಟ್ಟ ಒಳ ರಾಜಕೀಯಗಳ ನಡುವೆಯೂ ಪತ್ರಿಕಾಲಯ ಒಂದು ಮನೆಯಂತಿತ್ತು.
ಸಾಧನೆಗಳ ಮೂರ್ತಿವೆತ್ತಂತಿದ್ದ ಕೆಬಿಜಿ ಅವರ ನೆನಪು ಅಮರ. ಅದರಲ್ಲೂ ಅವರ ಕೈ ಅನ್ನ ಉಂಡಿರುವ ನನ್ನಂತಹ ನೂರಾರು ಮಂದಿಗೆ ಅವರು ಪ್ರಾತಃಸ್ಮರಣೀಯರು. ಅವರ ಎಂಬತ್ತೈದು ವರ್ಷಗಳ ಸಾಧನೆಯ ಸಾರ್ಥಕ ಬದುಕು ಸರ್ವ ಮಾನ್ಯ. ಪತ್ರಿಕೋದ್ಯಮ ವನ್ನೇ ಕೊನೆಯವರೆವಿಗೂ ಉಸಿರಾಡಿದ ಕೆಬಿಜಿ ಶ್ರೇಷ್ಠ ಪತ್ರಕರ್ತರೊಬ್ಬರು.