Chinnaswamy Stadium: ಯಾರದೋ ತಪ್ಪಿಗೆ ನನಗೇಕೆ ಈ ಶಿಕ್ಷೆ ?
ಐಪಿಎಲ್ ಟ್ರೋಫಿ ಗೆದ್ದು ಬೆಂಗಳೂರಿಗೆ ಕೀರ್ತಿ ತಂದ ಎಲ್ಲಾ ಆಟಗಾರರನ್ನು ಬೆಂಗಳೂರಿನಲ್ಲಿ ಸತ್ಕರಿಸುವುದು ಕರ್ತವ್ಯವೂ ಆಗಿತ್ತು. ಆದರೆ ಆರ್‌ಸಿಬಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಮತ್ತು ರಾಜ್ಯ ಸರಕಾರ ಜಂಟಿಯಾಗಿ ದಿಢೀರನೆ ಆ ಕಾರ್ಯಕ್ರಮ ಏರ್ಪಡಿಸಿದ್ದರಿಂದ, 11 ಮಂದಿಯ ಸಾವಿಗೆ ಕಾರಣವಾದ ಭಯಾನಕ ಕಾಲ್ತುಳಿತದ ಘಟನೆ ಇತಿಹಾಸದಲ್ಲೇ ಕಪ್ಪುಚುಕ್ಕೆ ಎನಿಸಿತು.


ನಿರೂಪಣೆ: ನರೇಂದ್ರ ಪಾರೆಕಟ್
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೆಸರು ಕೇಳದವರು ಯಾರಿದ್ದಾರೆ ಹೇಳಿ? ಸರಿಸುಮಾರು ಐವತ್ತು ವರ್ಷಗಳಿಂದ ರಾಜ್ಯದ, ರಾಷ್ಟ್ರದ ಅಷ್ಟೇ ಏಕೆ, ವಿಶ್ವದಲ್ಲೇ ವಿಶಿಷ್ಟ ಸೌಕರ್ಯ ಹೊಂದಿರುವ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಗಳಿಸಿದ ಖ್ಯಾತಿ ಅದಕ್ಕಿದೆ. ವಿಶ್ವದ ಕ್ರಿಕೆಟ್ ದಿಗ್ಗಜರ ಮತ್ತು ಅಭಿಮಾನಿಗಳ ಹೃದಯ ಗೆದ್ದಿರುವ ಈ ಸ್ಟೇಡಿಯಂ ಉದ್ಯಾನನಗರಿ ಗೊಂದು ವಿಶಿಷ್ಟ ಕಳೆ. ಆದರೆ ಕಳೆದ ಜೂನ್-4ರಂದು ಆರ್ ಸಿಬಿ ವಿಜಯೋತ್ಸವ ವೇಳೆ ಸ್ಟೇಡಿಯಂನ ಹೊರಭಾಗದಲ್ಲಿ ನಡೆದ ಕಾಲ್ತುಳಿತದಿಂದ 11 ಮಂದಿ ತಮ್ಮ ಪ್ರಾಣ ಕಳೆದು ಕೊಂಡರು. ಘಟನೆ ಸಂಬಂಧ ವಿಚಾರಣೆಯನ್ವಯ ಸದ್ಯ ಸ್ಟೇಡಿಯಂ ಚಟುವಟಿಕೆ ಸ್ಥಬ್ಧ ಪರಿಸ್ಥಿತಿ ಯನ್ನೆದುರಿಸುತ್ತಿದೆ. ಸದಾ ಲವಲವಿಕೆಯಿಂದ ಕೂಡಿದ್ದ ಕ್ರೀಡಾಂಗಣದ ಈಗಿನ ಕಾಲ್ಪನಿಕ ಸ್ವಗತದ ಮಾತು ಇಲ್ಲಿದೆ.
ನನ್ನ ಆತ್ಮೀಯ ಕ್ರಿಕೆಟ್ ಪ್ರೇಮಿಗಳೇ,
ಮಹಿಳಾ ಏಕದಿನ ವಿಶ್ವಕಪ್ ಇನ್ನೇನು ಬಹಳ ಹತ್ತಿರ ಬರ‍್ತಿದೆ. ಮುಂದಿನ ತಿಂಗಳು ಕೊನೆಯಲ್ಲಿ ಪ್ರಾರಂಭವಾಗುವ ಮತ್ತೊಂದು ಮಹತ್ತರ ಟೂರ್ನಿ ಅದಾಗಿದೆ. ನನ್ನ ಹಣೆಬರಹ ಸರಿಯಾಗಿಯೇ ಇದ್ದಿದ್ದರೆ ಆ ಪಂದ್ಯಾವಳಿಯ ಉದ್ಘಾಟನಾ ಪಂದ್ಯಕ್ಕೆ ನಾನು ಆತಿಥ್ಯ ವಹಿಸಬೇಕಿತ್ತಲ್ಲದೇ, ಟೂರ್ನಿಯ ನಾಲ್ಕೈದು ಪಂದ್ಯಗಳೂ ನಡೆಯ್ತುತ್ತಿದ್ದವು. ಆದರೆ ನೋಡಿ, ನನ್ನದೊಂದು ಈ ಪರಿಯ ದುರಾದೃಷ್ಟದ ಹಣೆಬರಹ..
ವರ್ಷದ ಹಿಂದೆ ನಿಗದಿ ಆಗಿದ್ದ ಮಹಿಳಾ ವಿಶ್ವಕಪ್ ಟೂರ್ನಿಯ ಉದ್ಯಾನನಗರಿಯ ಪಂದ್ಯ ಗಳೆಲ್ಲವೂ ಮೊನ್ನೆ ಮುಂಬೈಗೆ ಸ್ಥಳಾಂತರಗೊಂಡಿವೆ ಎಂಬ ಸುದ್ದಿ ನಿಜಕ್ಕೂ ನನ್ನ ಪಾಲಿಗೆ ಅರಗಿಸಲಸಾಧ್ಯ.
ನಿಮಗೆಲ್ಲಾ ಗೊತ್ತೇ ಇದೆ, 1974ರಲ್ಲಿ ನನ್ನ ನೆಲದ ಮೊದಲ ಟೆಸ್ಟ್ ಪಂದ್ಯ ನಡೆಯಿತು, ಕೊನೆಯ ಬಾರಿ ಟೆಸ್ಟ್ ನಡೆದದ್ದು ಕಳೆದ ಅಕ್ಟೋಬರ್‌ನಲ್ಲಿ, ಇದುವರೆಗೂ ಒಟ್ಟು 25 ಟೆಸ್ಟ್ ಪಂದ್ಯಗಳಿಗೆ ನಾನು ಸಾಕ್ಷಿಯಾದೆ. 1982ರಲ್ಲಿ ಮೊದಲ ಏಕದಿನ ಪಂದ್ಯ ನಡೆದರೆ, ಕೊನೆಯ ಏಕದಿನ 2023 ನವೆಂಬರ್‌ನಲ್ಲಿ ನಡೆಯಿತು. 2012ರಲ್ಲಿ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ನಾನು ಆತಿಥ್ಯ ವಹಿಸಿದರೆ, ಕೊನೆಯ ಏಕದಿನ ಪಂದ್ಯ ೨೦೨೪, ಜನವರಿಯಲ್ಲಿ ನಡೆಯಿತು.
ಭಾರತದ ಕ್ರಿಕೆಟ್ ದಿಗ್ಗಜರಾದ ಗುಂಡಪ್ಪ ವಿಶ್ವನಾಥ್, ಸುನಿಲ್ ಗವಾಸ್ಕರ್, ಸಚಿನ್ ತಂಡೂಲ್ಕರ್, ಸೇರಿದಂತೆ ಹಲವು ಕ್ರಿಕೆಟಿಗರು ತಾವು ಕ್ರೀಡಾಂಗಣಗಳಲ್ಲಿ ಬಾರಿಸಿದ ರನ್‌ಗಳ ಪೈಕಿ ಹೆಚ್ಚಿನ ರನ್‌ಗಳನ್ನು ನನ್ನ ಪಿಚ್ ಮೂಲಕ ಕಲೆ ಹಾಕಿರುವುದು ಎಂಬುವುದು ನನ್ನ ಪಾಲಿನ ಹೆಮ್ಮೆಯ ಸಂಗತಿ. ಹಾಗೆಯೇ ನನ್ನ ನೆಲದಲ್ಲಿ ರನ್‌ಗಳ ಹೊಳೆಯನ್ನು ಹರಿಸಿದ ವಿದೇಶಿ ಕ್ರಿಕೆಟಿಗರ ಪೈಕಿ ರಿಕಿ ಪಾಂಟಿಂಗ್, ಮೈಕಲ್ ಹಸ್ಸಿ, ಯೂನಸ್ ಖಾನ್ ಮೊದಲಾದವರ ಹೆಸರೂ ಕೂಡಾ ಅಗ್ರಪಂಕ್ತಿ ಯಲ್ಲೇ ನಿಲ್ಲುತ್ತದೆ.
ಇದನ್ನು ಓದಿ: Chinnaswamy Stadium Rampade: ಆರ್‌ಸಿಬಿ ಹುಚ್ಚು: ಪೋಷಕರ ಕನಸಿಗೆ ಕೊಳ್ಳಿ
ಕನ್ನಡ ಕ್ರಿಕೆಟಿಗರ ಕರ್ಮಭೂಮಿ
ಭಾರತ ಕ್ರಿಕೆಟ್ ತಂಡ ಎಂದರೆ ಅದು ಕನ್ನಡಿಗರೇ ತುಂಬಿ ತುಳುಕುವ ತಂಡ ಎಂಬ ಹೆಗ್ಗಳಿಕೆ ಮರ‍್ನಾಲ್ಕು ಬಾರಿ ಸಂದಿರುವುದು ನನ್ನ ಪಾಲಿಗೆ ಮರೆಯಲಸಾಧ್ಯ ದಿನಗಳು. ಅವರಿಗೆಲ್ಲಾ ಮಾತೃ ವಾತ್ಸಲ್ಯ ಕೊಟ್ಟು ಪೊರೆದ ಪವಿತ್ರ ನೆಲ ಎಂಬ ನೆಮ್ಮದಿ ನನ್ನಲ್ಲಿ ಮೂಡಿದಂತೂ ನಿಜ. ಎಪ್ಪತ್ತು-ಎಂಬತ್ತರ ದಶಕದಲ್ಲಿ ಕರ್ನಾಟಕದ ಕಲಿಗಳಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ರಘುರಾಮ್ ಭಟ್, ಇ.ಎ.ಎಸ್. ಪ್ರಸನ್ನ, ಬ್ರಿಜೇಶ್ ಪಟೇಲ್ ನಮ್ಮ ಕನ್ನಡದ ಕೀರ್ತಿ ಪತಾಕೆಯನ್ನು ನನ್ನ ಮಣ್ಣಿನ ಮೂಲಕ ಎತ್ತಿ ಹಿಡಿದವರು.
ಹಾಗೆಯೇ ತೊಂಬತ್ತರ ದಶಕದಲ್ಲಿ ನನ್ನ ಅಂಗಣದ ಮೂಲಕ ವೃತ್ತಿ ಬದುಕನ್ನು ಕಟ್ಟಿ, ಅದೆಷ್ಟೋ ದಾಖಲೆಗಳಿಗೆ ಪಾತ್ರರಾದ ಅಂತಾರಾಷ್ಟ್ರೀಯ ಮೇರು ಕ್ರಿಕೆಟಿಗರೆನಿಸಿಕೊಂಡ ಅನಿಲ್ ಕುಂಬ್ಳೆ, ಜಾವಗಲ್ ಶೀನಾಥ್, ವೆಂಕಟೇಶ್ ಪ್ರಸಾದ್, ಸುನಿಲ್ ಜೋಷಿ ಆ ಬಳಿಕ ಭಾರತ ಟೆಸ್ಟ್ ತಂಡದ ಗೋಡೆ ಎಂದೇ ಪ್ರಸಿದ್ಧರಾದ ರಾಹುಲ್ ದ್ರಾವಿಡ್ ಕೂಡಾ ನನ್ನ ಕರುಳಬಳ್ಳಿಯ ಸುಪುತ್ರರು ಎಂದು ಯೋಚಿಸಿಕೊಂಡು ನಾನು ಮನಸಾರೆ ರೋಮಾಂಚನ ಪಟ್ಟುಕೊಂಡ ಕ್ಷಣಗಳೆಷ್ಟೋ.
ಅದೇ ರೀತಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ನನ್ನ ಅಂಗಣದ ಕ್ರಿಕೆಟಿಗರಾದ ಕೆ.ಎಲ್.ರಾಹುಲ್, ಪ್ರಸಿದ್ಧ್ ಕೃಷ್ಣ, ಕರುಣ್ ನಾಯರ್ ಸೇರಿದಂತೆ ಈಗಿನ ಕ್ರಿಕೆಟಿಗರು ನನ್ನ ನೆಲದ ಯಶೋಗಾಥೆಯನ್ನು ಬರೆಯಲಿದ್ದಾರೆ ಎಂಬ ಆತ್ಮವಿಶ್ವಾಸವೂ ನನ್ನಲ್ಲಿದೆ.
ಆರ್‌ಸಿಬಿಗೂ ನಾನೇ ಪುಣ್ಯಭೂಮಿ
2007ರಲ್ಲಿ ಭಾರತದಲ್ಲಿ ಐಪಿಎಲ್ ಟಿ ೨೦ ಕ್ರಿಕೆಟ್ ಆರಂಭವಾದಾಗ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡಕ್ಕೆ ಸಹಜವಾಗಿಯೇ ತಂಡಕ್ಕೆ ನಾನೇ ತವರು ಮೈದಾನವಾದೆ. ಟೂರ್ನಿ ಆರಂಭ ವಾದಂದಿನಿಂದ ಇಲ್ಲಿಯ ವರೆಗೂ ತಂಡದ ಅದೆಷ್ಟೋ ಪ್ರತಿಭೆಗಳ ಅನಾವರಣ ನನ್ನಲ್ಲಿಂದ ಆರಂಭವಾಯಿತು ಎಂದು ಯೋಚಿಸಿಕೊಂಡಾಗಲೆಲ್ಲಾ ನಾನೂ ಆನಂದಭಾಷ್ಪ ಸುರಿಸಿದ್ದಿದೆ. ನನ್ನ ಮಣ್ಣಿನಲ್ಲಿ ಬೆವರು ಸುರಿಸಿ ಅಭ್ಯಾಸ ಮಾಡಿ ಅದೆಷ್ಟೋ ಐಪಿಎಲ್ ಪಂದ್ಯಗಳಲ್ಲಿ ಆರ್‌ಸಿಬಿ ಆಟಗಾರರು ದಾಖಲೆ ಬರೆದಿದ್ದಾರೆ.
ವಿರಾಟ್ ಕೊಹ್ಲಿಯಂತಹ ಮೇರು ಕ್ರಿಕೆಟಿಗ ಐಪಿಎಲ್‌ನಲ್ಲಿ ಇಷ್ಟು ವರ್ಷ ಆಡಿ, ಈಗಲೂ ನನ್ನ ಕರುಳಬಳ್ಳಿಯಿಂದ ದೂರವಾಗದಿುವುದಕ್ಕೆ ನಾನೆಂದೂ ಹೆಮ್ಮೆಪಡುತ್ತಿರುತ್ತೇವೆ. ಐಪಿಎಲ್ ಟೂರ್ನಿ ಯಲ್ಲಿ 2009, 2011 ಮತ್ತು 2016ರಲ್ಲಿ ನನ್ನ ಆರ್‌ಸಿಬಿ ಫೈನಲ್ ತಲುಪಿದರೂ, ಟ್ರೋಫಿ ಗೆಲ್ಲದಾಗ ನಾನು ಬಹಳ ನೊಂದುಕೊಂಡೆ. ಆದರೆ ಪ್ರತಿಯೊಂದು ಐಪಿಎಲ್ ಪಂದ್ಯ ನಡೆಯುವಾಗ ಇಂಚಿಂಚೂ ಜಾಗಬಿಡದೆ ಕ್ರಿಕೆಟ್‌ಪ್ರೇಮಿಗಳು ಕಿಕ್ಕಿರಿದು ಸೇರಿದಾಗ ನಾನು ಮನಸಾರೆ ಸಂಭ್ರಮಿ ಸಿದ್ದೂ ಇದೆ.
ಕೊನೆಗೂ ನನಸಾಗಿದ್ದ ಆರ್‌ಸಿಬಿ ಕನಸು
ಅಂದು ಜೂನ್-3. ಅಹಮದಾಬಾದಿನಲ್ಲಿ ಈ ವರ್ಷದ ಐಪಿಎಲ್ ಫೈನಲ್ ಪಂದ್ಯ ನಡೆಯ ಲಾರಂಭಿಸಿತ್ತು. ಅಹಮದಾ ಬಾದ್‌ನಲ್ಲಿ ನಡೆಯಿತ್ತಿರುವ ಪಂದ್ಯದಲ್ಲಿ ಈ ಸಲ ಹೇಗಾದೂ ನನ್ನ ಹುಡುಗರು ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯನ್ನು ನಾನೂ ಹೊಂದಿದ್ದೆ. ಮನಸಾರೆ ಪ್ರಾರ್ಥಿಸಿ, ಆಶೀರ್ವದಿಸಿದ್ದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಆ ರೋಚಕ ಪಂದ್ಯದಲ್ಲಿ ಕೊನೆಗೂ ನನ್ನ ಹೆಮ್ಮೆಯ ಕ್ರಿಕೆಟಿಗರು 6 ರನ್‌ಗಳಿಂದ ಜಯ ಸಾಧಿಸಿ ಐಪಿಎಲ್ ಟ್ರೋಫಿ ಎತ್ತಿದಾಗ ನಾನು ಅವರನ್ನೆಲ್ಲಾ ಮನಸಾರೆ ಪ್ರಶಂಸಿಸಿ, ಸಂಭ್ರಮದ ಕಡಲಲ್ಲಿ ತೇಲಾಡಿದೆ. ತವರು ನೆಲವನ್ನು ಮರೆಯದೆ, ನನ್ನ ಆಶೀವಾದ ಪಡೆಯಲು ನನ್ನ ಬಳಿ ಬಂದೇ ಬರುತ್ತಾರೆ ಎಂಬ ನಿರೀಕ್ಷೆಯೂ ನನಗಿತ್ತು.
ಕತ್ತಿಗೆ ಉರುಳಾದ ಕಾರ್ಯಕ್ರಮ
ಐಪಿಎಲ್ ಟ್ರೋಫಿ ಗೆದ್ದು ಬೆಂಗಳೂರಿಗೆ ಕೀರ್ತಿ ತಂದ ಎಲ್ಲಾ ಆಟಗಾರರನ್ನು ಬೆಂಗಳೂರಿನಲ್ಲಿ ಸತ್ಕರಿಸುವುದು ಕರ್ತವ್ಯವೂ ಆಗಿತ್ತು. ಆದರೆ ಆರ್‌ಸಿಬಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಮತ್ತು ರಾಜ್ಯ ಸರಕಾರ ಜಂಟಿಯಾಗಿ ದಿಢೀರನೆ ಆ ಕಾರ್ಯಕ್ರಮ ಏರ್ಪಡಿಸಿದ್ದರಿಂದ, 11 ಮಂದಿಯ ಸಾವಿಗೆ ಕಾರಣವಾದ ಭಯಾನಕ ಕಾಲ್ತುಳಿತದ ಘಟನೆ ಇತಿಹಾಸದಲ್ಲೇ ಕಪ್ಪುಚುಕ್ಕೆ ಎನಿಸಿತು. ಸರಿಯಾದ ಸಂಯೋಜನೆ ಇಲ್ಲದೆ ತರಾತುರಿಯಲ್ಲಿ ನನ್ನ ಗೇಟ್‌ನ ಹೊರಭಾಗದಲ್ಲಿ ಆ ದುರ್ಘಟನೆ ನಡೆದೇ ಹೋದಾಗ ನನ್ನ ಜಂಘಾಬಲವೇ ಕುಸಿದು ಹೋಗಿತ್ತು.
ಈ ಘಟನೆಯ ಹೊಣೆ ಹೊತ್ತುಕೊಳ್ಳಲು ಯಾರೂ ಸಿದ್ಧರಿಲ್ಲ. ಆರ್‌ಸಿಬಿ ಆಗಲಿ, ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ಸ್ ಆಗಲಿ, ನನ್ನ ಮಾಲೀಕತ್ವ ಹೊಂದಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಾಗಲಿ, ತರಾತುರಿಯಲ್ಲಿ ಒಪ್ಪಿಗೆ ನೀಡಿದ ಸರಕಾರವಾಗಲಿ ಇಲ್ಲವೇಮ ಪೊಲೀಸರೇ ಆಗಲಿ ದುರ್ಘಟನೆಯ ಹೊಣೆ ಹೊತ್ತು ಕೊಳ್ಳಲು ಮುಂದೆ ಬಂದಿಲ್ಲ ಎಂಬ ಕಾರಣಕ್ಕಾಗಿ ಈ ಘಟನೆಯಿಂದ ಶಿಕ್ಷೆಗೆ ಒಳಗಾಗಿರುವುದು ನಾನೇ. ಈಗಲೂ ಆ ವಿಷಯ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ ಎಂಬುವುದು ಇಲ್ಲಿ ಉಲ್ಲೇಖನೀಯ.
ಸದ್ಯದ ಈ ಸಂಕಷ್ಟವೆಂಬ ಪರಿಸ್ಥಿತಿಯಲ್ಲಿ ಸುಮಾರು ೪೦ ಸಾವಿರದಷ್ಟು ವೀಕ್ಷಕರು ಕುಳಿತು ಪಂದ್ಯ ವೀಕ್ಷಿಸಬಹುದಾದ ನನ್ನಲ್ಲಿ ಯಾವುದೇ ರೀತಿಯ ಪಂದ್ಯವಿಲ್ಲದೆ ನನ್ನ ಆಟಗಾರರನ್ನು ಕಣ್ತುಂಬಿ ಕೊಳ್ಳುವ ಅವಕಾಶ ಇಲ್ಲದಿರುವುದು ನಿಜಕ್ಕೂ ನನ್ನ ಪಾಲಿನ ಮೂಕರೋಧನೆಯಲ್ಲದೆ ಇನ್ನೇನು? ಒಂದೆಡೆ ಬೆಂಗಳೂರಿನ ಹೃದಯಭಾಗದಲ್ಲಿರುವ ನನ್ನ ಹೆಸರನ್ನು ಹೊರತುಪಡಿಸಿ, ಬೇರೆ ಉತ್ಕೃಷ್ಟ ಮಟ್ಟದ ಕ್ರೀಡಾಂಗಣವನ್ನು ನಿರ್ಮಿಸುವ ಚರ್ಚೆಯೂ ಸಕ್ರಿಯವಾಗಿದೆ.
೧೯೮೭ರಲ್ಲಿ ನನ್ನ ಅಂಗಳದಲ್ಲಿ ನಡೆದ ವಿಶ್ವಕಪ್ ಪಂದ್ಯಾವಳಿಯ ಭಾರತ-ನ್ಯೂಜಿಲೆಂಡ್ ಪಂದ್ಯ, ೧೯೯೬ರಲ್ಲಿ ಭಾರತ-ಪಾಕ್ ಪಂದ್ಯವನ್ನು ಕನ್ನಡಿಗರೆಂದೂ ಮೆರೆಯುವುದುಂಟೇ? ಒಂದು ವೇಳೆ ಪರ್ಯಾಯ ಕ್ರೀಡಾಂಗಣದ ಪ್ರಸ್ತಾಪಕ್ಕೆ ವೇಗ ಬಂದರೆ ನನ್ನಲ್ಲಿ ಇನ್ನು ಮುಂದೆ ಪಂದ್ಯಗಳು ನಡೆಯದೇ ಇರದೇನೋ ಎಂಬ ಆತಂಕ ಒಮ್ಮೊಮ್ಮೆ ನನ್ನನ್ನು ಕಾಡುತ್ತಿರುವುದಂತೂ ನಿಜ, ಸರಿಸುಮಾರು ಐವತ್ತು ವರ್ಷಗಳ ಕಾಲ ನೂರಾರು ಕ್ರಿಕೆಟಿಗರನ್ನು ಪೊರೆದ ನನ್ನಿಂದ ಇಂತಹ ಸಂಕಟ ಸಹಿಸಲಾದಿತೇ? ಕೆ.ಎಸ್.ಸಿ.ಎ.ಯಲ್ಲಿ ಸದ್ಯ ಇತರ ಕೆಲವು ದೈನಂದಿನ ಚಟುವಟಿಕೆಗಳು ನಡೆಯುತ್ತಿದ್ದರೂ ಪಂದ್ಯ ನಡೆಯದೆ ಇರುವುದನ್ನು ನಾನು ಇನ್ನೂ ಎಷ್ಟು ದಿನ ಸಹಿಸಬಲ್ಲೆ? ಕೆಲವು ತಿಂಗಳು ಕಳೆದರೆ ಬರೀ ಕ್ಲಬ್‌ಗಷ್ಟೇ ನಾನು ಸೀಮಿತನಾಗುವೆನೇ? ಮತ್ತೂ ಅದೇ ಸ್ಥಿತಿ ಮುಂದುವರಿದು ಅಽಕಾರಿಗಳ ಮೋಜಿನ ತಾಣ ನಾನಾದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನನಗೆ ಕಳಂಕ ತರುವ ವರದಿಗಳು ಬಂದರೂ ಬರಬಹುದು.
ಅಂತಹ ವರದಿಗಳೇನಾದರೂ ಬಂದಲ್ಲಿ ಅದನ್ನು ನಾನು ಹೇಗೆ ಸಹಿಸಿಕೊಳ್ಳಲಿ? ನನ್ನ ಪಾಲಿನ ದುಃಖದ ಸ್ವಲ್ಪ ಪಾಲನ್ನು ಮುಕ್ತವಾಗಿ ನಿಮ್ಮ ಬಳಿ ಹಂಚೋಣವೆನಿಸಿ ಇವಿಷ್ಟನ್ನು ತಿಳಿಸಿದ್ದೇನೆ. ನನ್ನ ಸತ್ ಪರಂಪರೆ ಮತ್ತು ಕೀರ್ತಿಗಳನ್ನು ನೀವಾದರೂ ಎಂದೆಂದೂ ನೆನಪಿನಲ್ಲಿಟ್ಟುಕೊಳ್ಳುತ್ತೀರಿ ಎಂಬ ಭರವಸೆ ಇನ್ನೂ ನನ್ನೊಳಗಿದೆ..!
ಇಂತಿ ನಿಮ್ಮ
ಚಿನ್ನಸ್ವಾಮಿ ಸ್ಟೇಡಿಯಂ
*
ನನ್ನ ನಿರ್ಮಾಣ, ನಾಮಕರಣದ ಕುರಿತು...
೧೯೬೯ರಲ್ಲಿ ಶಂಕುಸ್ಥಾಪನೆಯಾಗಿ, ೧೯೭೦ರಲ್ಲಿ ಕಾಮಗಾರಿ ಆರಂಭವಾಯಿತು. ಇದೀಗ ವಿಶ್ವದ ಸಬ್ ಏರ್ ಸಿಸ್ಟಮ್ ಹೊಂದಿರುವ ಮೊದಲ ಕ್ರೀಡಾಂಗಣ ಎಂಬ ಹೆಗ್ಗಳಿಕೆಯನ್ನೂ ಪಡೆದು ಕೊಂಡಿದ್ದೇನೆ. ಮಂಗಳಂ ಚಿನ್ನಸ್ವಾಮಿ ಮುದಲಿಯಾರ್ ಅವರು ಮೂಲತ: ಮಂಡ್ಯದವರು. ೧೯೫೩ರಿಂದ ೧೯೭೮ರ ವರೆಗೆ ರಾಜ್ಯ ಕ್ರಿಕೆಟ್ ಅಸೊಸಿಯೇಶನ್ ಕಾರ್ಯದರ್ಶಿಯಾಗಿದ್ದವರು. ೧೯೭೮ರಿಂದ ೯೦ ವರೆಗೂ ಅಧ್ಯಕ್ಷರಾಗಿದ್ದವರು. ೧೯೬೦ರಲ್ಲಿ ಬಿಸಿಸಿಐ ಕಾರ್ಯದರ್ಶಿ ಆ ಬಳಿಕ ೧೯೭೭ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದವರು. ಅವರ ಕ್ರಿಕೆಟ್‌ಪ್ರೇಮ ಮತ್ತು ಕ್ರೀಡಾಂಗಣ ಸ್ಥಾಪನೆಯ ಇಚ್ಚಾಶಕ್ತಿಯೇ ನನ್ನ ಅಸ್ತಿತ್ವಕ್ಕೆ ಕಾರಣವಾಯಿತು. ಹಾಗಾಗಿಯೇ ಅವರ ಹೆಸರನ್ನೇ ನಾನೂ ಪಡೆದೆ.