ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೈಸೂರು ಮಾಧ್ಯಮ ಕ್ಷೇತ್ರದ ಸ್ಟಾರ್‌ ಅಸ್ತಂಗತ

ಕೆಬಿಜಿ ಅವರು ನಡೆದು ಬಂದ ಹಾದಿ ಸುಲಭದಲ್ಲಾಗಿರ ಲಿಲ್ಲ. ಆರಂಭದಲ್ಲಿ ಹಲವು ಸವಾಲು ಕಷ್ಟ-ನಷ್ಟ ಅನುಭವಿಸಿ, ಅದನ್ನು ಮೆಟ್ಟಿ ನಿಂತು ಸ್ಥಳೀಯ ಪತ್ರಿಕೆಯ ಮೂಲಕ ಪ್ರಭಾವಿ ಓದುಗರ ವಲಯವನ್ನು ಬಹುವಾಗಿ ವಿಸ್ತರಿಸ ಬಹುದು ಎಂಬುದನ್ನು ಅವರು ತೋರಿಸಿ ಕೊಟ್ಟರು.

ಮೈಸೂರು ಮಾಧ್ಯಮ ಕ್ಷೇತ್ರದ ಸ್ಟಾರ್‌ ಅಸ್ತಂಗತ

Profile Ashok Nayak Jul 14, 2025 5:32 PM

ಲೋಕೇಶ್‌ ಬಾಬು

ಮೈಸೂರು ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಯ ಜನತೆಗೆ ‘ಮೈಸೂರು ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರು’ ದಿನಪತ್ರಿಕೆಗಳು ಚಿರಪರಿಚಿತ. ಹಾಗೆಯೇ ಇದರ ಸಂಪಾದಕ ಕೆ.ಬಿ. ಗಣಪತಿ ಅವರ ಹೆಸರು ಕೂಡ. ಕಳೆದ ಐದು ದಶಕಗಳಿಂದ ಈ ಪತ್ರಿಕೆಗಳು ಇಲ್ಲಿನ ಜನತೆಯ ಬದುಕಿನ ಭಾಗವಾಗಿವೆ. ಸಂಸ್ಥಾಪಕ ಸಂಪಾದಕರಾಗಿ, ಮಾಲೀಕರಾಗಿ ಇವೆರಡೂ ಪತ್ರಿಕೆಗಳನ್ನು ಆರಂಭಿಸಿ, ಬೆಳೆಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಕೆ.ಬಿ. ಗಣಪತಿ (ಕೆ.ಬಿ.ಜಿ) ಅವರಿಗೆ ಸಲ್ಲುತ್ತದೆ.

ಭಾನುವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ ಮೂಲತಃ ಕೊಡಗು ಜಿಲ್ಲೆಯ ಕಲ್ಯಾಟಂಡ ಬಿ. ಗಣಪತಿ (86) ಹುಟ್ಟಿದ್ದು 1940ನೇ ಇಸವಿ ಜನವರಿ 6ನೇ ತಾರೀಕು. ಕೆ.ಎ. ಬೋಪಯ್ಯ ಹಂದ್ ಮತ್ತು ಕೆ.ಬಿ. ಮುತ್ತವ್ವ (ಬೇಬಿ) ದಂಪತಿಗೆ ಜನಿಸಿದ ಕೆ.ಬಿ. ಗಣಪತಿ ಅವರು ನಾಲ್ವರು ಒಡಹುಟ್ಟಿದವರಲ್ಲಿ ಎರಡನೆಯವರು. ಅವರ ತಂದೆ ಕೊಡವ ಕುಲದ ಕಲ್ಯಾತಂಡ ಕುಟುಂಬಕ್ಕೆ ಸೇರಿದ ಶಾಲಾ ಶಿಕ್ಷಕರಾಗಿದ್ದರು.

ಬಿ.ಎ, ಬಿ.ಎಲ್ ಉತ್ತೀರ್ಣರಾದ ಬಳಿಕ 1961ರಿಂದ 1965ರ ತನಕ ಬೆಂಗಳೂರಿನಲ್ಲಿ ವಕೀಲರಾಗಿ ಕಾನೂನು ಅಭ್ಯಾಸ ಮಾಡಿದರು. ಆದರೆ ಅವರ ಒಲವು, ತುಡಿತ ಪತ್ರಿಕೋ ದ್ಯಮದತ್ತಲೇ ಇತ್ತು. ವಕೀಲಿ ವೃತ್ತಿ ಬಿಟ್ಟು ಮುಂಬಯಿಗೆ ತೆರಳಿ ಭಾರತೀಯ ವಿದ್ಯಾಭವನ ದಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಪಡೆದ ನಂತರ ಅವರು ಸೇರಿದ್ದು ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯನ್ನು. ಪತ್ರಿ ಕೋದ್ಯಮದ ದಿಗ್ಗಜ ಟಿ.ಜೆ.ಎಸ್. ಜಾರ್ಜ್ ಆಗ ಈ ಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು.

1970ರವರೆಗೆ ಫ್ರೀ ಪ್ರೆಸ್ ಜರ್ನಲ್ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪತ್ರಕರ್ತರಾಗಿ ದುಡಿದ ಗಣಪತಿ ನಂತರ 1970ರಲ್ಲಿ ಸನ್‌ಬೀಮ್ ಅಡ್ವರ್ಟೈಸಿಂಗ್ ಪುಣೆ ಎಂಬ ತಮ್ಮ ಜಾಹೀರಾತು ಸಂಸ್ಥೆಯನ್ನು ಸ್ಥಾಪಿಸಿದರು.

ಇದನ್ನೂ ಓದಿ: Vishweshwar Bhat Column: ಮಾಯವಾದ ಮ್ಯಾಜಿಷಿಯನ್‌ ಸಂಪಾದಕ

ಮೈಸೂರಿನ ಸ್ಟಾರ್, ಮಿತ್ರ ಗಣಪತಿ ಅವರ ಪತ್ನಿ ದೇವಮ್ಮ ಮೈಸೂರಿನಲ್ಲಿ ಸರಕಾರಿ ಕಾಲೇಜಿನ ಉಪನ್ಯಾಸಕಿಯಾಗಿದ್ದರು.ಅವರ ಕುಟುಂಬಸ್ಥರು ಮೈಸೂರಿನಲ್ಲಿ ವಾಸಿಸು ತ್ತಿದ್ದರು. ಇದೇ ಕಾರಣಕ್ಕೆ ಮೈಸೂರಿಗೆ ಸ್ಥಳಾಂತರಗೊಂಡರು. ಕನ್ನಡ ನೆಲದಲ್ಲಿಯೇ ಸಂಸ್ಥೆ ಹುಟ್ಟು ಹಾಕಬೇಕೆಂಬ ಹಂಬಲದಿಂದ ಪುಣೆಯಿಂದ ಮೈಸೂರಿಗೆ ಮರಳಿ ಪತ್ರಿಕೆ ಆರಂಭಿಸುವ ದಿಟ್ಟ ನಿರ್ಧಾರ ಕೈಗೊಂಡರು. 1798ರಲ್ಲಿ ಅವರು ದಿವಂಗತ ಸಿ.ಪಿ. ಚಿನ್ನಪ್ಪ ಅವರ ಜೊತೆ ಸೇರಿ ಇಂಗ್ಲಿಷ್‌ನಲ್ಲಿ ‘ಸ್ಟಾರ್ ಆಫ್ ಮೈಸೂರು’ ಮತ್ತು 1980ರಲ್ಲಿ ಕನ್ನಡದಲ್ಲಿ ‘ಮೈಸೂರು ಮಿತ್ರ’ ಆರಂಭಿಸುವ ನಿರ್ಧಾರ ಕೈಗೊಂಡರು.

ಬಳಿಕ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕರಾಗಿ ಮಾಧ್ಯಮ ಕ್ಷೇತ್ರದಲ್ಲಿ ಅಳಿಸಲಾಗದ ಛಾಪನ್ನೊತ್ತಿದರು. ಕೆಬಿಜಿ ಅವರು ನಡೆದು ಬಂದ ಹಾದಿ ಸುಲಭದಲ್ಲಾಗಿರ ಲಿಲ್ಲ. ಆರಂಭದಲ್ಲಿ ಹಲವು ಸವಾಲು ಕಷ್ಟ-ನಷ್ಟ ಅನುಭವಿಸಿ, ಅದನ್ನು ಮೆಟ್ಟಿ ನಿಂತು ಸ್ಥಳೀಯ ಪತ್ರಿಕೆಯ ಮೂಲಕ ಪ್ರಭಾವಿ ಓದುಗರ ವಲಯವನ್ನು ಬಹುವಾಗಿ ವಿಸ್ತರಿಸ ಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು.

ವಿಶೇಷವೆಂದರೆ ‘ಮೈಸೂರು ಮಿತ್ರ’ದ ಜೊತೆಗೇ ಇಂಗ್ಲಿಷಿನ ಅದರಲ್ಲೂ ಸಂಜೆ ಓದುಗರನ್ನು ಆಶ್ರಯಿಸಿ ಇಂಗ್ಲಿಷ್ ದೈನಿಕವನ್ನು ಇಡೀ ಭಾರತೀಯ ಪತ್ರಿಕೋದ್ಯಮವೇ ನಿಬ್ಬೆರ ಗಾಗುವಂತೆ ಯಶಸ್ವಿಯಾಗಿ ರೂಪಿಸಿದ್ದು ಗಣಪತಿಯವರ ಅದ್ವಿತೀಯ ಸಾಧನೆ. ಹುಟ್ಟಿದ್ದು ಕೊಡಗಿನಲ್ಲೇ ಆದರೂ, ತಮ್ಮ ತಾಯ್ನೆಲದಷ್ಟೇ ಮೈಸೂರನ್ನೂ ಅಪಾರವಾಗಿ ಪ್ರೀತಿಸಿ, ಇಲ್ಲಿಯೇ ಬದುಕು ಕಂಡುಕೊಂಡ ಗಣಪತಿ ಅವರು, ಮೈಸೂರಿನ ಅಭಿವೃದ್ಧಿ, ಮೈಸೂರು ಪರಂಪರೆ ಉಳಿಸುವ ಬಗ್ಗೆ ಒಬ್ಬ ಹೋರಾಟಗಾರನಂತೆ ಬೆಂಬಲ ನೀಡಿದರು.

ತಮ್ಮ ಅಂಕಣಗಳ ಮೂಲಕ ಸದಾ ಕಾಳಜಿ ವ್ಯಕ್ತಪಡಿಸುತ್ತಿದ್ದರು. ಸಮಾನ ಮನಸ್ಕ ರೊಡಗೂಡಿ ಕ್ರಿಯಾಶೀಲ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದರು. ಕೆ.ಬಿ.ಜಿ ಅವರ ಪುಸ್ತಕ ಹಾಗೂ ಬರಹಗಳಲ್ಲಿ ಮೈಸೂರು ಇತಿಹಾಸ ಅಡಗಿತ್ತಲ್ಲದೆ, ಅಭಿವೃದ್ಧಿಯ ಚಿಂತನೆ ಗಳಿದ್ದವು. ಸುಂದರ ಮೈಸೂರಿನ ಅಳಿವು- ಉಳಿವಿನ ಪರಿಕಲ್ಪನೆಯ ರಾಯಭಾರಿಯಂತೆ ತಮ್ಮ ನಿಲುವು ಹೊಂದಿದ್ದರು.

ಜನಪ್ರಿಯ ಅಂಕಣಕಾರ ‘ಸ್ಟಾರ್ ಆಫ್ ಮೈಸೂರ್ ’ನಲ್ಲಿ ಅವರ ಅಂಕಣ ‘ಅಬ್ರಕದಬ್ರ’ ಹಲವು ತೀರಾ ಇತ್ತೀಚಿನವರೆಗೂ ಪ್ರಕಟವಾಗುತ್ತಿತ್ತು. ‘ಹೋಕಸ್ ಫೋಕಸ್’ ಎಂಬ ಇನ್ನೊಂದು ಅಂಕಣವನ್ನೂ ಬರೆಯುತ್ತಿದ್ದರು. ಇದು ಪತ್ರಿಕೆಯನ್ನು ಜನಪ್ರಿಯಗೊಳಿಸಲು ಸಹಾಯ ಮಾಡಿತು. ಈ ಅಂಕಣಗಳು ಮಾಹಿತಿ ಪೂರ್ಣ ಮಾತ್ರವಲ್ಲ ಜ್ಞಾನ ಮತ್ತು ತಿಳಿವಳಿಕೆ ನೀಡುವಂತಿದ್ದವು. ಸುಮಾರು 44 ವರ್ಷಗಳ ಕಾಲ ತಮ್ಮ ಅಂಕಣ ಬರೆಯುವು ದನ್ನು ಮುಂದುವರೆಸಿದ್ದರು.

ಮೈಸೂರು ಮತ್ತು ಕರ್ನಾಟಕದ ಯುವ ಪತ್ರಕರ್ತರನ್ನು ಪೋಷಿಸುವಲ್ಲಿ ಮತ್ತು ಮಾರ್ಗದರ್ಶನ ನೀಡುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಜತೆಗೆ ಮೈಸೂರಿನ ನಾನಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ. ಮೈಸೂರು ಕೇಂದ್ರ ಭಾರತೀಯ ವಿದ್ಯಾಭವನದ ಉಪಾಧ್ಯಕ್ಷರಾಗಿ, 1993 ಮತ್ತು 1995ರ ನಡುವೆ ಕರ್ನಾಟಕ ಪತ್ರಿಕಾ ಅಕಾಡೆಮಿ ಸದಸ್ಯರಾಗಿ, ಕಾವೇರಿ ಕಾಲೇಜಿನ ಉಪಾಧ್ಯಕ್ಷರಾಗಿ, ಮೈಸೂರಿನ ಕೊಡವ ಸಮಾಜ ಮಾಜಿ ಉಪಾಧ್ಯಕ್ಷರಾಗಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಗಿಯೂ ಅವರು ಕಾರ‍್ಯ ನಿರ್ವಹಿಸಿದ್ದಾರೆ.

ತಮ್ಮ ಸಂಸ್ಥೆಯ ಮೂಲಕ ಹಲವು ಸಂಘ ಸಂಸ್ಥೆಗಳ, ನೊಂದವರ ನೆರವಿಗೆ ನಿಂತಿದ್ದಾರೆ. ಹಲವು ವಿದೇಶ ಪ್ರವಾಸಗಳ ಮೂಲಕವೂ ಅಪಾರ ಜ್ಞಾನಸಂಪತ್ತನ್ನು ಪಡೆದಿರುವ ಅವರು, ಆಗ್ನೇಯ ಏಷ್ಯಾ, ಅಮೆರಿಕ, ಇಸ್ರೇಲ್, ಈಜಿಪ್ಟ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಗಳಿಗೆ ಭೇಟಿ ನೀಡಿದ್ದಾರೆ. ಈ ಕುರಿತು ಕೃತಿಯನ್ನೂ ಬರೆದಿದ್ದಾರೆ.

ಪತ್ರಕರ್ತರ ಕಾರ್ಖಾನೆ

ಕೆಬಿಜಿ ಅವರ ಗರಡಿಯಲ್ಲಿ ಪಳಗಿದ ಅನೇಕ ಪ್ರತಿಭಾವಂತ ಪತ್ರಕರ್ತರು ಇಂದು ರಾಜ್ಯ-ದೇಶದ ಮುಂಚೂಣಿ ಮಾಧ್ಯಮಗಳಲ್ಲಿ ಗುರುತಿಸಿಕೊಂಡಿದ್ದಾರೆ. ಯಾರಿಗೂ ಅಹಿತವನ್ನು ಬಯಸದ ಕೆ.ಬಿ.ಜಿಯವರದ್ದು ಮೇರು ವ್ಯಕ್ತಿತ್ವ . ಅವರೊಂದಿಗೆ ಹೆಗಲು ಕೊಟ್ಟವರನ್ನು ಅವರು ಗೌರವಿಸುವ ರೀತಿ, ಆಧ ರಿಸುವ ರೀತಿ ಉದ್ಯೋಗದಾತರಿಗೆ ಮಾದರಿ. ಉದ್ಯಮದಲ್ಲಿ ಕುಟುಂಬದ ವಾತಾವರಣ ಸೃಷ್ಟಿಸಿದ ಅವರು ಸಂಪಾದಕೀಯ, ತಾಂತ್ರಿಕ ವರ್ಗ ಮತ್ತು ಇತರ ಸಿಬ್ಬಂದಿಗಳನ್ನು ನಡೆಸಿಕೊಳ್ಳುವ ರೀತಿ ಅನುಕರಣೀಯವಾಗಿತ್ತು.

ಅಕಾಡೆಮಿ ನ್ಯೂಸ್ ಪೇಪರ್ಸ್ ಪ್ರೈ. ಲಿಮಿಟೆಡ್‌ನಡಿ ಸುಮಾರು 120 ಉದ್ಯೋಗಿಗಳು ದುಡಿಯುತ್ತಿದ್ದಾರೆ. 300ಕ್ಕೂ ಹೆಚ್ಚು ಜನರಿಗೆ ಅರೆಕಾಲಿಕ ಉದ್ಯೋಗ ದೊರೆತಿದೆ. ಪತ್ರಿಕೋದ್ಯಮದ ಮೇಲಿನ ಉತ್ಸಾಹದಿಂದ, ಗಣಪತಿ ತಮ್ಮ ಎರಡು ಪತ್ರಿಕೆಗಳನ್ನು ಮೈಸೂರಿನ ಪತ್ರಿಕೋದ್ಯಮ ಶಾಲೆಗಳಿಗಿಂತ ಹೆಚ್ಚು ಪತ್ರಕರ್ತರನ್ನು ಉತ್ಪಾದಿಸುವ ಪತ್ರಿಕೋದ್ಯಮ ಶಾಲೆಯನ್ನಾಗಿ ಪರಿವರ್ತಿಸಿದರು.

ಇಂದು ಇವೆರಡೂ ಪತ್ರಿಕೆಗಳ ಹಳೆಯ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಲ್ಲಿ ಹಿರಿಯ ಹುದ್ದೆಗಳಲ್ಲಿದ್ದಾರೆ. ದಿವಂಗತ ಗಿರೀಶ್ ನಿಕಮ್ (ರಾಜ್ಯಸಭಾ ಟಿವಿ), ದಿವಂಗತ ನಿರಂಜನ್ ನಿಕಮ್ (ಡೆಕ್ಕನ್ ಹೆರಾಲ್ಡ್), ಕೃಷ್ಣ ಪ್ರಸಾದ್ (ಔಟ್ ಲುಕ್ ನಿಯತಕಾಲಿಕೆಯ ಮಾಜಿ ಸಂಪಾದಕ, ಈಗ ದಿ ಹಿಂದೂ ಪತ್ರಿಕೆ), ಚೇತನ್ ಕೃಷ್ಣಸ್ವಾಮಿ (ಹಿಂದೆ ದಿ ವೀಕ್ ನಿಯತಕಾಲಿಕೆಯಲ್ಲಿ ಮತ್ತು ಈಗ ಅಮೆಜಾನ್‌ನ ಸಾರ್ವಜನಿಕ ನೀತಿ ಮುಖ್ಯಸ್ಥ), ಎಚ್.ಆರ್. ರಂಗನಾಥ್ (ಕನ್ನಡ ಪ್ರಭದ ಮಾಜಿ ಸಂಪಾ ದಕ ಮತ್ತು ಈಗ ಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ) ಇವರಲ್ಲಿ ಪ್ರಮುಖರು.

ಯಾದವಗಿರಿಯಲ್ಲಿರುವ ಪ್ರಸಿದ್ಧ ಕಾದಂಬರಿಕಾರ ಆರ್.ಕೆ. ನಾರಾಯಣ್ ಅವರ ಮನೆ ಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವಲ್ಲಿ ಗಣಪತಿ ಅವರ ಪಾತ್ರ ದೊಡ್ಡದು.

ಗೌರವ-ಪ್ರಶಸ್ತಿಗಳು

ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ (2001)ಪತ್ರಿಕೋದ್ಯಮಕ್ಕಾಗಿ ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ (2005) ಕೆಯುಡಬ್ಲೂಜೆ ನ ಪಿ.ಆರ್. ರಾಮಯ್ಯ ಪ್ರಶಸ್ತಿ (2005)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೮)

ಮೊಹರೆ ಹನಮಂತರಾಯ ಪ್ರಶಸ್ತಿ (೨೦೧೩)

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಜೀವಮಾನ ಸಾಧನೆ ಪ್ರಶಸ್ತಿ (೨೦೨೩)

ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್

ಕೆಬಿಜಿ ಕೃತಿಗಳು

ಕನ್ನಡದಲ್ಲಿ ಒಂದು ಕಾದಂಬರಿ ಆದರ್ಶವಾದಿ (1992), ‌ಇದನ್ನು ಮೈಸೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಡಿ. ಜವರೇಗೌಡ ಪ್ರಕಟಿಸಿದ್ದಾರೆ.

ಇಂಗ್ಲಿಷ್‌ನಲ್ಲಿ ಪ್ರವಾಸ ಕಥನ-ಅಮೆರಿಕಾ ಆನ್ ಏರಿಯಾ ಆಫ್ ಲೈಟ್ (1993)

ಕೊಡಗಿನ ಬಗ್ಗೆ ಇಂಗ್ಲಿಷ್‌ನಲ್ಲಿ ಬರೆದ ಕಾದಂಬರಿ-ದಿ ಕ್ರಾಸ್ ದಿ ಕೂರ್ಗ್ಸ್ (೧೯೯೪)

ಕೊಡಗಿನ ಮೇಲೆ ಶಿಲುಬೆಯ ನೆರಳು-ದಿ ಕ್ರಾಸ್ ದಿ ಕೂರ್ಗ್ಸ್ (೨೦೦೫) ಪುಸ್ತಕದ ಕನ್ನಡ ಅನುವಾದ.

‘ಸ್ಟಾರ್ ಆಫ್ ಮೈಸೂರು’ನಲ್ಲಿ (2003) ಅವರ ಆಯ್ದ ಅಂಕಣಗಳ ಸಂಗ್ರಹ ಅಬ್ರಕದಬ್ರಾ. ‘ಮೈಸೂರು ಮಿತ್ರ’ದಲ್ಲಿ (2005) ಅವರ ಆಯ್ದ ಅಂಕಣಗಳ ಸಂಗ್ರಹ ಛೂ ಮಂತ್ರ.

ಬರಾಕ್ ಒಬಾಮಾ ಅವರ ಕುರಿತಾದ ಗಾಂಧಿಯವರ ಪತ್ರ ಒಬಾಮಾ (2009) ಎಂಬ ಪುಸ್ತಕ. ‘ಸ್ವೋರ್ಡ್ ಆಫ್ ಶಿವಾಜಿ’ ಇಂಗ್ಲಿಷ್ ಅನುವಾದ ಕೃತಿ (2021) ಕನ್ನಡದಲ್ಲಿ ‘ಶಿವಾಜಿಯ ಖಡ್ಗ’ ಕೃತಿ (2021)

*

ನನ್ನೂರಿನ ಹಿರಿಯ ಪತ್ರಕರ್ತ ಮಿತ್ರರಾದ ಕೆ.ಬಿ.ಗಣಪತಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ವಸ್ತುನಿಷ್ಠ ಹಾಗೂ ವೃತ್ತಿಪರ ಬರಹಗಳಿಗೆ ಹೆಸರುವಾಸಿ. ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಯ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪಾರ ಓದುಗ ಬಳಗ ಸೃಷ್ಟಿಸಿದ ಗಣಪತಿಯವರು ಪತ್ರಿಕೋದ್ಯಮದಲ್ಲಿ ಮೂಡಿಸಿರುವ ಹೆಜ್ಜೆಗುರುತುಗಳು ಯುವ ಪತ್ರಕರ್ತರಿಗೆ ಮಾದರಿ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ‌

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಪತ್ರಿಕಾರಂಗದ ದಿಗ್ಗಜರೆನಿಸಿದ ಬಿ.ಕೆ.ಗಣಪತಿ ಅವರು ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಮೂಲಕ ಪತ್ರಿಕಾರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪತ್ರಕರ್ತರಾಗಿ ಅವರ ಬದುಕು ಮತ್ತು ಸಾಧನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿಯನ್ನು ದೇವರು ಕರುಣಸಲಿ ಎಂದು ಪ್ರಾರ್ಥಿಸುತ್ತೇನೆ.

-ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ, ವಿಶ್ವವಾಣಿ

ಹಿರಿಯ ಪತ್ರಕರ್ತ ಕೆ.ಬಿ. ಗಣಪತಿ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಅಪಾರ ಪ್ರಾಪಂಚಿಕ ಜ್ಞಾನನ್ನು ಹೊಂದಿದ್ದ ಅವರ ಲೇಖನಿಯಿಂದ ಹೊರಹೊಮ್ಮಿದ ಪ್ರತಿಯೊಂದು ಅಕ್ಷರಗಳು ಕೂಡಾ ಸಮಾಜದ ಮೇಲೆ ಗಾಢವಾದ ಪರಿಣಾಮ ಬೀರು ವಂಥ ಶಕ್ತಿಯನ್ನು ಹೊಂದಿದ್ದವು. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಕುಟುಂಬದವರು, ಸಹೋದ್ಯೋಗಿಗಳು, ಹಿತೈಷಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ.

-ಡಿ.ಕೆ.ಶಿವಕುಮಾರ್, ಡಿಸಿಎಂ