ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Srinivasmurthy N S Column: ಪ್ರಾಗೈತಿಹಾಸಿಕ ನೆಲೆಯ ಹುಡುಕಾಟದಲ್ಲಿ

ಸೊಮೇಶ್ವರ ದೇವಾಲಯದ ಸಮೀಪದ ಬಂಡೆಯ ಮೇಲಿನ 1280ರ ಶಾಸನದಲ್ಲಿ, ಕುವಳಾಲನಗರದ ಗಂಗ ವಂಶದ ವೀರಗಂಗ ಉತ್ತಮ ಚೋಳಗಂಗನ ಮಗನಾದ ವೆತ್ತುಮಪ್ಪರ ಬಾಣನು ದೇವಾಲಯದ ದೈನಂದಿನ ಸೇವೆಗೆ ದತ್ತಿ ನೀಡಿದ ಉಲ್ಲೇಖವಿದೆ. ದೇವಾಲಯದ ಗೋಡೆಯಲ್ಲಿನ 1295ರ ಶಾಸನದಲ್ಲಿ ಮೂಡಲಿಪಿಳ್ಳೈ ಮಹಾಮಂತ್ರಿ ಮತ್ತು ಇಳಾನಾಡಿನಲ್ಲಿನ ಪಿರಿಯನಾಡಿನ ನಿವಾಸಿಗಳು ಅಖಂಡ ದೀಪ ಉರಿಸುವದಕ್ಕೆ ದತ್ತಿ ನೀಡಿದ ಉಲ್ಲೇಖವಿದೆ.

ಪ್ರಾಗೈತಿಹಾಸಿಕ ನೆಲೆಯ ಹುಡುಕಾಟದಲ್ಲಿ

Profile Ashok Nayak Apr 22, 2025 2:35 PM

ಶ್ರೀನಿವಾಸಮೂರ್ತಿ ಎನ್.ಎಸ್

ಇತಿಹಾಸ ಪೂರ್ವ ನೆಲೆಗಳು ಹಲವೆಡೆ ಹರಡಿಕೊಂಡಿದ್ದು ಅಂತಹ ನೆಲೆಯೊಂದು ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ ಹುನಕುಂದವೂ ಒಂದು. ಶಾಸನಗಳಲ್ಲಿ ಹುನಕುಂದವನ್ನು ಪೊಕ್ಕುಂದ ಪೊನ್ ಕುಂದ ಪೋಕುಂದ ಎಂದು ಕರೆಯಲಾಗಿದೆ. ಹೊನ್ನಿನಂತೆ ಬಂಡೆಗಳ ಸರಣಿ ಯೇ ಕಾಣುವ ಕಾರಣ ಹೊನ್ನಿನ ಕುಂದ (ಪೊನ್) - ಹುನಕುಂದ ಎಂಬ ಹೆಸರು ಬಂದಿದೆ. ಇಲ್ಲಿನ ಬೆಟ್ಟಗಳಲ್ಲಿ ಆದಿ ಮಾನವ ವಾಸಿಸುತ್ತಿದ್ದ ಕುರುಹುಗಳು, ಪ್ರಾಗೈತಿಹಾಸಿಕ ಸಮಾಧಿಗಳು ಇದೆ. ಇಲ್ಲಿನ ಸೊಮೇಶ್ವರ ದೇವಾಲಯದ ಸಮೀಪದ ಬಂಡೆಯ ಮೇಲಿನ 1280ರ ಶಾಸನದಲ್ಲಿ, ಕುವಳಾಲನಗರದ ಗಂಗ ವಂಶದ ವೀರಗಂಗ ಉತ್ತಮ ಚೋಳಗಂಗನ ಮಗನಾದ ವೆತ್ತುಮಪ್ಪರ ಬಾಣನು ದೇವಾಲಯದ ದೈನಂದಿನ ಸೇವೆಗೆ ದತ್ತಿ ನೀಡಿದ ಉಲ್ಲೇಖವಿದೆ. ದೇವಾಲಯದ ಗೋಡೆ ಯಲ್ಲಿನ 1295ರ ಶಾಸನದಲ್ಲಿ ಮೂಡಲಿಪಿಳ್ಳೈ ಮಹಾಮಂತ್ರಿ ಮತ್ತು ಇಳಾನಾಡಿನಲ್ಲಿನ ಪಿರಿಯನಾಡಿನ ನಿವಾಸಿಗಳು ಅಖಂಡ ದೀಪ ಉರಿಸುವದಕ್ಕೆ ದತ್ತಿ ನೀಡಿದ ಉಲ್ಲೇಖವಿದೆ.

1300ರ ಶಾಸನದಲ್ಲಿ ಉತ್ತಮ ಚೋಳ ಗಂಗಪೆರುಮಾಳನ ಮಗ ವಿಕ್ಕೀರಮಾದಿತ್ತನ್ ಮತ್ತು ದೇವ ಚೋಳಸ್ವಾಮಿ ಎಂಬ ಅಧಿಕಾರಿಗಳು ತೋರೀಶ್ವರನ್ ಉಡೈಯರ್ ದೇವರಿಗೆ ದತ್ತಿ ನೀಡಿದ ಉಲ್ಲೇಖ ವಿದೆ. ಈ ಊರಿನಲ್ಲಿ ಹಲವು ವೀರಗಲ್ಲುಗಳು ಸಿಕ್ಕಿದ್ದು ಇದು ಪೊಕ್ಕುಂದ ಗ್ರಾಮದ ವೈಭವಕ್ಕೆ ಸಾಕ್ಷಿ. ಇಲ್ಲಿನ ವೀರಗಲ್ಲುಗಳನ್ನು ಸುಂದರವಾಗಿ, ಪ್ರಾಂಗಣದಲ್ಲಿ ಜೋಡಿಸಲಾಗಿದೆ.

ಇದನ್ನೂ ಓದಿ: Rangaswamy Mookanahalli Column: ಬ್ರಾಂಡ್‌ ಗಳ ಮುಖವಾಡ ಕಳಚುತ್ತಿದೆ ಚೀನಾ !

ಪ್ರಾಗೈತಿಹಾಸಿಕ ನೆಲೆ: ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ ಪೂರ್ವದಲ್ಲಿ ಪ್ರಾಗೈತಿಹಾಸಿಕ ನೆಲೆ ಇದ್ದು ಕೇಂದ್ರ ಪುರಾತತ್ವ ಇಲಾಖೆ ಸಂರಕ್ಷಣೆ ಮಾಡಿದೆ. ಇಲ್ಲಿ ಆದಿ ಇತಿಹಾಸ ಕಾಲಕ್ಕೆ ಸೇರಿದ ಮಣ್ಣಿನ ಪಾತ್ರೆಗಳು, ನವಶಿಲಾಯುಗದ ಕೊಡಲಿಗಳು ಮತ್ತು ಕಲ್ಲು ವೃತ್ತ ಸಮಾಧಿಗಳು ಇದೆ. ಇಲ್ಲಿನ ಆವರಣದಲ್ಲಿ ಹಲವು ಇಂತಹ ಸಮಾಧಿಗಳಿದ್ದು ಸಮೀಪದ ಬೆಟ್ಟದ ಉದ್ದಕ್ಕೂ ಇದು ಹರಡಿಕೊಂಡಿದೆ.

ಇದಕ್ಕೆ ಹೊಂದಿಕೊಂಡಂತೆ ಸಪ್ತಮಾತೃಕೆಯರ ಶಿಲ್ಪಗಳ ದೇವಾಲಯವಿದೆ. ನೂತನವಾಗಿ ನಿರ್ಮಾಣವಾದ ದೇವಾಲಯದಲ್ಲಿ ಬಂಡೆಯ ಮೇಲೆ ಕೆತ್ತಲಾದ ಸಪ್ತಮಾತೃಕೆಯರನ್ನು ಜೋಡಿಸ ಲಾಗಿದೆ. ಇಲ್ಲಿನ ಸೋಮೇಶ್ವರ ದೇವಾಲಯ ಪುರಾತನವಾಗಿದ್ದು, ಬೆಟ್ಟದ ಹಾದಿಯಲ್ಲಿ ಬಂಡೆಯ ನಡುವೆ ನಿರ್ಮಾಣವಾಗಿದೆ. ಗರ್ಭಗುಡಿಯಲ್ಲಿ ಪುರಾತನವಾದ ಬಾಣಲಿಂಗವಿದೆ. ಜತೆಗೆ, ಗಂಗರ ಕಾಲದ ಹಲವು ಶಿಲ್ಪಗಳು ಇಲ್ಲಿವೆ. ಇಲ್ಲಿ ಸೂರ್ಯನ ಶಿಲ್ಪವೂ ಇದೆ. ನವರಂಗಕ್ಕೆ ಇದ್ದ ಎರಡು ಪ್ರವೇಶದ್ವಾರಗಳಲ್ಲಿ ಒಂದು ಮಾತ್ರ ಈಗ ತೆರೆದಿದ್ದು ಬಾಗಿಲುವಾಡದ ಕೆತ್ತನೆ ಸುಂದರವಾಗಿದೆ. ದೇವಾಲಯಕ್ಕೆ ಮುಂಚೆ ಇದ್ದ ಶಿಖರ ನಾಶವಾಗಿದ್ದು ನೂತನವಾದ ಶಿಖರ ನಿರ್ಮಾಣವಾಗಿದೆ. ಈ ಪ್ರಾಗೈತಿಹಾಸಿಕ ತಾಣವು ಕೋಲಾರದಿಂದ 20 ಕಿ ಮೀ, ಬಂಗಾರಪೇಟೆಯಿಂದ ಸುಮಾರು 15 ಕಿ ಮೀ, ಕೆಜಿಎಫ್ ನಿಂದ ಸುಮಾರು 16 ಕಿ ಮೀ ದೂರದಲ್ಲಿದೆ.

ವೀರಗಲ್ಲುಗಳ ಪಾರ್ಕ್

ಇಲ್ಲಿನ ಪರಿಸರಲ್ಲಿ ಸಿಕ್ಕ ಹಲವು ವೀರಗಲ್ಲುಗಳನ್ನು ಪಾರ್ಕ್‌ನಲ್ಲಿ ಜೋಡಿಸಲಾಗಿದ್ದು ಇವುಗಳಲ್ಲಿ 950 ರಲ್ಲಿ ನೊಳಂಬ ದಿಲೀಪಯ್ಯನ ಕಾಲದಲ್ಲಿ ಕೊಂಗಮಂಗಲದ ಮೇದಯ್ಯ ಪೊಕ್ಕುಂದದ ಗೋವುಗಳನ್ನು ಅಪಹರಣಕಾರರಿಂದ ರಕ್ಷಣೆ ಮಾಡುವಾಗ ವೀರಮರಣ ಹೊಂದಿದ ವೀರಗಲ್ಲು, 900ರಲ್ಲಿ ಮಾಚಿರಾಯನೆಂಬ ವೀರ ಇದೇ ಕಾರಣಕ್ಕೆ ಮರಣ ಹೊಂದಿದ ವೀರಗಲ್ಲು, 950ರಲ್ಲಿ ಬಾರುಂಡರಾವಯ್ಯನ ವೀರಗಲ್ಲು, 980ರಲ್ಲಿ ಬಾಣರಸ ಗಂಗ 600ರ ಕಾಲದಲ್ಲಿ ಅವಗಣಿ ಮತ್ತಿ ಗಂಗನ ಮಗ ನಾಗದೇವನ ತುರುಗೋಳ್ ವೀರಗಲ್ಲು ಪ್ರಮುಖವಾದದ್ದು.