ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಬ್ರಾಂಡ್‌ ಗಳ ಮುಖವಾಡ ಕಳಚುತ್ತಿದೆ ಚೀನಾ !

ಬ್ರಾಂಡೆಡ್ ಎಂದಾಕ್ಷಣ ಅದನ್ನು ಅತ್ಯುತ್ತಮ ಎಂದುಕೊಳ್ಳುವ ನಮ್ಮ ಮಂಕುಬುದ್ಧಿ, ನಮ್ಮ ಭಾವನೆ ಅವರ ಬಂಡವಾಳವಾಗಿದೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಈ ಟಿ-ಶರ್ಟ್ ತಯಾರಾಗು ವುದು ಚೀನಾದಲ್ಲಿ, ಅದರ ಬೆಲೆ ಹೆಚ್ಚೆಂದರೆ 3 ಯುರೋ ಅಷ್ಟೇ! ಎಲ್ಲಿಯ 3 ಯುರೋ, ಎಲ್ಲಿಯ 110 ಯುರೋ?! ಇದೇ ಮಾತು ಪರ್ಫ್ಯೂಮ್‌ಗಳಿಗೂ ಅನ್ವಯವಾಗುತ್ತದೆ.

ಬ್ರಾಂಡ್‌ ಗಳ ಮುಖವಾಡ ಕಳಚುತ್ತಿದೆ ಚೀನಾ !

ರಂಗಸ್ವಾಮಿ ಎಂ ರಂಗಸ್ವಾಮಿ ಎಂ Apr 22, 2025 7:56 AM

ವಿಶ್ವರಂಗ

ನನಗಿನ್ನೂ ಚೆನ್ನಾಗಿ ನೆನಪಿದೆ. ಅದು 2006ನೇ ಇಸವಿ. ನನಗೆ ಮದುವೆಯಾಗಿ ಒಂದು ವರ್ಷ ವಾಗಿತ್ತು. ರಮ್ಯ, ಬಾರ್ಸಿಲೋನಾದಲ್ಲಿ ನನಗೆ ಜತೆಯಾಗಿದ್ದಳು. ನಾನು ಎಂದಿಗೂ ಬ್ರಾಂಡೆಡ್ ಬಟ್ಟೆಗಳನ್ನು ಹಾಕಿದವನಲ್ಲ. ಇದು ರಮ್ಯಳಿಗೆ ಬಹಳ ಅಚ್ಚರಿ ಎನ್ನಿಸುತ್ತಿತ್ತು. “ಭಗವಂತ ನಿನಗೆ ಎಲ್ಲವನ್ನೂ ಕೊಟ್ಟಿದ್ದಾನೆ, ಆದರೂ ನೀನೇಕೆ ಅತಿ ಕಡಿಮೆ ದುಡ್ಡಿನ ಬಟ್ಟೆಯನ್ನು ಹಾಕುತ್ತೀಯ? ಅದೇಕೆ ಬ್ರಾಂಡೆಡ್ ಟಿ-ಶರ್ಟ್ ಕೊಳ್ಳುವುದಿಲ್ಲ?" ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಳು. “ನೀನೊಮ್ಮೆ ನನ್ನ ಜತೆಗೆ ಚೀನಾಕ್ಕೆ ಬಂದರೆ ಅದಕ್ಕೆ ಉತ್ತರ ಸಿಗುತ್ತದೆ" ಎನ್ನುವ ಮಾತನ್ನು ನಾನು ಅಂದಿನಿಂದ ಹೇಳಿಕೊಂಡು ಬರುತ್ತಿದ್ದೇನೆ. ಬಾರ್ಸಿಲೋನಾದಲ್ಲಿ ‘ಎಲ್ ಕೊರ್ತೆ ಇಂಗ್ಲೆಸ್’ ಎನ್ನುವ ಒಂದು ಹೈಪರ್ ಮಾರ್ಕೆಟ್ ಇದೆ. ಅಲ್ಲಿಗೆ ಬಲವಂತದಿಂದ ಕರೆದುಕೊಂಡು ಹೋಗಿ ವಿಶ್ವಪ್ರಸಿದ್ಧ ಲಾಕೋಸ್ಟೆ ಬ್ರಾಂಡಿನ 2 ಟಿ-ಶರ್ಟ್ ಖರೀದಿ ಮಾಡಿದಳು. ಅಂದಿಗೆ ಒಂದು ಟಿ-ಶರ್ಟ್ ಬೆಲೆ 110 ಯುರೋ! ಒಂದು ಟಿ-ಶರ್ಟ್‌ಗೆ ಅಷ್ಟೊಂದು ದುಡ್ಡು ಕೊಟ್ಟಿದ್ದಕ್ಕೆ ನನ್ನ ಮನಸ್ಸು ಮಮ್ಮಲ ಮರುಗಿತು.

ಬ್ರಾಂಡೆಡ್ ಎಂದಾಕ್ಷಣ ಅದನ್ನು ಅತ್ಯುತ್ತಮ ಎಂದುಕೊಳ್ಳುವ ನಮ್ಮ ಮಂಕುಬುದ್ಧಿ, ನಮ್ಮ ಭಾವನೆ ಅವರ ಬಂಡವಾಳವಾಗಿದೆ. ಈ ಮಾತನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಈ ಟಿ-ಶರ್ಟ್ ತಯಾರಾಗುವುದು ಚೀನಾದಲ್ಲಿ, ಅದರ ಬೆಲೆ ಹೆಚ್ಚೆಂದರೆ 3 ಯುರೋ ಅಷ್ಟೇ! ಎಲ್ಲಿಯ 3 ಯುರೋ, ಎಲ್ಲಿಯ 110 ಯುರೋ?! ಇದೇ ಮಾತು ಪರ್ಫ್ಯೂಮ್‌ಗಳಿಗೂ ಅನ್ವಯವಾಗುತ್ತದೆ.

ತನ್ನ ಕೈಗೆಟುಕದ ವಸ್ತುವನ್ನು ಕೊಳ್ಳುವುದರಲ್ಲಿ ಗ್ರಾಹಕನಿಗೆ ಅತೀವ ಆಸಕ್ತಿ. ಬೆಲೆ ಹೆಚ್ಚಿದಷ್ಟೂ ಅದು ಅತ್ಯುತ್ತಮ ಗುಣಮಟ್ಟದ್ದು ಎನ್ನುವುದು ಸಾಮಾನ್ಯ ಗ್ರಾಹಕನ ಇನ್ನೊಂದು ನಂಬಿಕೆ. ಆತ ಬಯಸಿದ ಆ ವಸ್ತು ವಿದೇಶದ್ದಾಗಿದ್ದರೆ ಕೇಳುವುದೇ ಬೇಡ, ಅದರ ಗುಣಮಟ್ಟ ಕಳಪೆ ಇರಲು ಸಾಧ್ಯವೇ ಇಲ್ಲ ಎನ್ನುವ ಅದಮ್ಯ ವಿಶ್ವಾಸ ಆತನದು. ಗ್ರಾಹಕನ ಈ ಮನಸ್ಥಿತಿಯನ್ನು ಚೆನ್ನಾಗಿ ಅರಿತಿರುವ ಕಾರ್ಪೊರೇಟ್ ಸಂಸ್ಥೆಗಳು ಇದನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿವೆ, ಬಳಸಿಕೊಳ್ಳು ತ್ತಿವೆ.

ಇದನ್ನೂ ಓದಿ: Rangaswamy Mookanahalli Column: ನೆದರ್ಲ್ಯಾಂಡಿನಲ್ಲೂ ತಪ್ಪಿದಲ್ಲ ಇಲಿಕಾಟ !

ಗ್ರಾಹಕನ ಮನಸ್ಥಿತಿಯನ್ನು ನಿಖರವಾಗಿ ಅರಿಯಲು ಅವು ಮನಶ್ಶಾಸ್ತ್ರಜ್ಞರ ಸಹಾಯ ಪಡೆಯುತ್ತಿವೆ. ಜನರ ಮನಸ್ಥಿತಿ ಅರಿತು ಅವರ ಬೇಕು-ಬೇಡಗಳ ಪಟ್ಟಿ ಮಾಡಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ವರದಿ ಒಪ್ಪಿಸಲು ಕೂಡ ಸಂಸ್ಥೆಗಳು ಹುಟ್ಟಿಕೊಂಡಿವೆ. ‘ಕಾಸಿಗೆ ತಕ್ಕ ಕಜ್ಜಾಯ’ ಎಂಬ ಮಾತನ್ನು ಹಿಂದೆ ಹೇಳುತ್ತಿದ್ದರು. ಆಗ ನೈತಿಕತೆಗೆ ಬೆಲೆಯಿತ್ತು. ಈಗ ಕಾಸ್ಮೆಟಿಕ್ ಮತ್ತಿತರ ವಸ್ತುಗಳ ಲಾಭಾಂ ಶವು 300 ಅಥವಾ 400 ಪಟ್ಟು ಇರುತ್ತದೆ ಎಂದರೆ ನಂಬುತ್ತೀರಾ? ಕಂಪನಿಗೆ ಅಥವಾ ಅದರ ಮುಖ್ಯ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಹೆಸರು ಗಳಿಸಿಕೊಡಲು ಕೂಡ ಸಂಸ್ಥೆಗಳಿವೆ.

ಇವತ್ತಿಗೆ ಎಲ್ಲವೂ ಲಾಭದ ಲೆಕ್ಕಾಚಾರದಲ್ಲಿ ನಡೆಯುತ್ತದೆ. ಗುಣಮಟ್ಟದಲ್ಲಿ ಯಾವ ವ್ಯತ್ಯಾಸವೂ ಇಲ್ಲದ ವಸ್ತುಗಳು ಒಂದೊಂದು ಕಡೆ ಒಂದೊಂದು ಬೆಲೆಗೆ ಮಾರಾಟವಾಗುತ್ತವೆ. ‘ಬ್ರಾಂಡ್‌ನೇಮ್’ ಎಷ್ಟು ಪ್ರಸಿದ್ಧ ಎನ್ನುವುದರ ಮೇಲೆ ಬೆಲೆ ಕೂಡ ನಿಗದಿಯಾಗುತ್ತದೆ.

bags

ಒಂದು ವಸ್ತು, ಉತ್ಪನ್ನ, ಕಂಪನಿ ಅಥವಾ ವ್ಯಕ್ತಿಯು ಜನರ ಮನದಲ್ಲಿ ಯಾವುದೋ ಕಾರಣಕ್ಕೆ ಸ್ಥಾನ ಪಡೆದರೆ ಮತ್ತು ಅವರ ನಿಷ್ಠೆಯು ಆ ವಸ್ತು, ಉತ್ಪನ್ನ, ಕಂಪನಿ ಅಥವಾ ವ್ಯಕ್ತಿಯ ಬಗ್ಗೆ ಅಚಲವಾಗಿದ್ದರೆ, ಅಂಥ ವಸ್ತು/ಉತ್ಪನ್ನ/ಕಂಪನಿ/ ವ್ಯಕ್ತಿಯನ್ನು ‘ಬ್ರಾಂಡ್’ ಎನ್ನುತ್ತೇವೆ. ಉದಾ ಹರಣೆ ನೋಡೋಣ- ತಾಜ್‌ಮಹಲ್ ಜನರ ಮನದಲ್ಲಿ ಅಚ್ಚೊತ್ತಿದೆ. ಕೇವಲ ಅದರ ಹೆಸರಿ ನಿಂದಾಗಿ ಲಕ್ಷಾಂತರ ಪ್ರವಾಸಿಗರು ಅದನ್ನು ನೋಡಲು ಹೋಗುತ್ತಾರೆ. ತಾಜ್‌ಮಹಲ್ ಒಂದು ಬ್ರಾಂಡ್. ಲೈಫ್‌ ಬಾಯ್ ಸೋಪು ಯಾವ ಕಂಪನಿಯದು ಎಂದರೆ ನನಗೂ ಸರಿಯಾಗಿ ನೆನಪು ಬರುತ್ತಿಲ್ಲ!

ಆದರೆ ಒಂದು ಉತ್ಪನ್ನವಾಗಿ ಲೈಫ್‌ ಬಾಯ್ ಸೋಪು ಜನರ ಮನದಲ್ಲಿ ನೆಲೆ ಪಡೆದಿದೆ. ವರ್ಲ್ ಪೂಲ್, ಜಾನ್ಸನ್ ಆಂಡ್ ಜಾನ್ಸನ್ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಉತ್ಪನ್ನದ ಜತೆಗೆ ಆ ಕಂಪನಿಗಳು ಕೂಡ ಒಂದು ಬ್ರಾಂಡ್ ಆಗಿ ನೆಲೆ ಪಡೆದುಕೊಂಡಿವೆ. ಸಚಿನ್ ತೆಂಡೂಲ್ಕರ್, ಧೋನಿ, ವಿರಾಟ್ ಕೊಹ್ಲಿ, ಅಮಿತಾಭ್, ಶಾರುಖ್, ಸಲ್ಮಾನ್ ಇವರೆಲ್ಲಾ ಬ್ರಾಂಡ್‌ಗಳು. ಜನರ ಮನದಲ್ಲಿ ಇವರಿಗಿರುವ ಪ್ರೀತಿಯೇ ಇವರ ಬಂಡವಾಳ.

ಕಾರ್ಪೊರೇಟ್ ಕಂಪನಿಗಳು ಇವರ ಮೂಲಕ ತಮ್ಮ ಉತ್ಪನ್ನಗಳನ್ನು ಜನರಿಗೆ ಮಾರುತ್ತವೆ. ಹೀಗೆ ಜನರ ಮನದಲ್ಲಿ ಒಂದು ವಸ್ತು/ಉತ್ಪನ್ನ/ಕಂಪನಿ ಅಥವಾ ವ್ಯಕ್ತಿಯನ್ನು ನೆಲೆಗೊಳಿಸುವ ಪ್ರಕ್ರಿಯೆಗೆ ‘ಬ್ರಾಂಡಿಂಗ್’ ಎನ್ನುತ್ತಾರೆ. ವಸ್ತುವಿಗೆ ಅಥವಾ ಉತ್ಪನ್ನಕ್ಕೆ ಒಂದು ಚಿಹ್ನೆ ಅಥವಾ ಲೋಗೋ ಅನ್ನು ನೀಡಲಾಗುತ್ತದೆ. ಜಾಹೀರಾತು ಮೂಲಕ ಅದನ್ನು ಜನರಿಗೆ ತಲುಪಿಸಲಾಗುತ್ತದೆ. ಒಂದೇ ವಿಷಯವನ್ನು ಇಂದು ಲಭ್ಯವಿರುವ ಅನೇಕ ಮಾಧ್ಯಮಗಳ ಮೂಲಕ ಪದೇಪದೆ ತೋರಿಸ ಲಾಗುತ್ತದೆ.

ಆಲೂಗಡ್ಡೆ ಚಿಪ್ಸ್ ಎಂದಾಕ್ಷಣ ‘ಲೇಸ್’ ಅನ್ನುವ ಮಟ್ಟಕ್ಕೆ, ನಕಲು ತೆಗೆಯುವ ಪ್ರಕ್ರಿಯೆಗೆ ಫೋಟೋ ಕಾಪಿ ಅನ್ನುವ ಬದಲು ‘ಜೆರಾಕ್ಸ್’ ಎನ್ನುವ ಕಂಪನಿ ಹೆಸರೇ ಪರ್ಯಾಯವಾದ ಹಾಗೆ ಬ್ರಾಂಡ್ ಅನ್ನು ಬೆಳೆಸಬಹುದು. ಇಂದು ಹೀಗೆ ಬ್ರಾಂಡ್ ಕಟ್ಟುವ ಕೆಲಸದಲ್ಲಿ ತೊಡಗಿರುವ ಅನೇಕ ಕಂಪನಿ ಗಳಿವೆ. ಇವುಗಳ ಮುಖ್ಯ ಕೆಲಸವೇ ಜನರನ್ನು ನಂಬಿಸುವುದು ಹಾಗೂ ನಿರ್ದಿಷ್ಟ ಉತ್ಪನ್ನವನ್ನು ಕೊಳ್ಳುವಂತೆ ಅವರನ್ನು ಪ್ರೇರೇಪಿಸುವುದು.

ಅಷ್ಟೇ ಅಲ್ಲ, ಅವರ ನಿಷ್ಠೆ ಬ್ರಾಂಡ್‌ಗೆ ಅಚಲವಾಗಿರುವಂತೆ ನೋಡಿಕೊಳ್ಳುವುದು ಕೂಡ ಇವರ ಕೆಲಸವೇ ಆಗಿರುತ್ತದೆ. ಇಂಥ ವೇಳೆ, ಇವರ ಕೆಲಸವನ್ನು ಸುಲಭ ಮಾಡುವುದು ‘ಮನಶ್ಶಾಸ್ತ್ರ ’. ವಸ್ತು ವಿನ ಬೆಲೆ ಹೆಚ್ಚಿಸಿಬಿಟ್ಟರೆ ಸಾಕು, ಅದನ್ನು ತನ್ನದಾಗಿಸಿಕೊಳ್ಳಲು ಮನುಷ್ಯ ಹವಣಿಸುತ್ತಾನೆ ಎಂಬು ದು ಅವರಿಗೆ ಚೆನ್ನಾಗಿ ಗೊತ್ತು. ನಿತ್ಯವೂ ಕೈಕಾಲಿಗೆ ಎಟುಕುವ ಯಾವುದೇ ವಸ್ತುವನ್ನು ನೋಡಿ- ಅದಕ್ಕೆ ನಮ್ಮ ಸಮಾಜದಲ್ಲಿ ಬೆಲೆ ಇಲ್ಲ.

ಅದನ್ನ ಜಗಮಗಿಸುವ ಷೋರೂಮ್‌ನಲ್ಲಿಡಿ, ಜೇಬಿಗೆ ಭಾರ ಎನಿಸುವ ಪ್ರೈಸ್ ಟ್ಯಾಗ್ ಅದಕ್ಕೆ ಹಾಕಿ, ಕಂತಿನಲ್ಲಾದರೂ ಸರಿಯೇ ಜನರು ಕೊಳ್ಳುತ್ತಾರೆ. ಎಲ್ಲಾ ಬ್ರಾಂಡೆಡ್ ಉತ್ಪನ್ನಗಳೂ ಉತ್ತಮ ಗುಣ ಮಟ್ಟದವೇ? ಎನ್ನುವ ಪ್ರಶ್ನೆಗೆ ಉತ್ತರ- ‘ಹೌದು’ ಮತ್ತು ‘ಇಲ್ಲ’. ಸೇವಾಕ್ಷೇತ್ರದಲ್ಲಿ ಇದಕ್ಕೆ ಉತ್ತರ ‘ಹೌದು’.

ಹೋಟೆಲ್, ರೆಸ್ಟೋರೆಂಟ್ ಇತ್ಯಾದಿ ಸೇವೆ ನೀಡುವ ಸಂಸ್ಥೆಗಳು ಬ್ರಾಂಡೆಡ್ ಆಗುವುದು ಸುಲಭ ವಲ್ಲ. ಇಲ್ಲಿ ಜನರನ್ನು ನಂಬಿಸುವುದಷ್ಟೇ ಮುಖ್ಯವಲ್ಲ, ಅವರು ಸೇವೆಯನ್ನು ಕೂಡ ಮೆಚ್ಚಬೇಕು. ಎಷ್ಟೇ ಜಾಹೀರಾತು ಕೊಟ್ಟರೂ, ನೀಡಿದ ಸೇವೆಯು ಗ್ರಾಹಕನಿಗೆ ಇಷ್ಟವಾಗಿಲ್ಲ ಎಂದರೆ ಅಲ್ಲಿಗೆ ಮುಗಿಯಿತು. ಇದೇ ಮಾತನ್ನು ಇತರ ವಿಷಯಗಳ ಬಗ್ಗೆ ಹೇಳಲು ಬರುವುದಿಲ್ಲ, ಏಕೆಂದರೆ ಅಲ್ಲಿ ಮನುಷ್ಯನ ‘ಅಹಂ’ ಅಥವಾ ‘ಇಗೋ’ವನ್ನು ನಂಬಿಸುವುದು ಅಥವಾ ಅದನ್ನು ತಣಿಸುವುದಷ್ಟೇ ಮುಖ್ಯ. ರೋಲೆಕ್ಸ್ ವಾಚ್, ರೇಬಾನ್ ಕನ್ನಡಕ, ಗುಚ್ಚಿ ಬ್ಯಾಗ್, ಲಾಕೋಸ್ಟೆ ಟಿ-ಶರ್ಟ್ ಇತ್ಯಾದಿಗಳು ಇದಕ್ಕೆ ಉದಾಹರಣೆ.

ಇನ್ನು ಬಟ್ಟೆ ಬ್ರಾಂಡ್‌ಗಳು ನಗು ಹುಟ್ಟಿಸುತ್ತವೆ. ರಸ್ತೆಬದಿಯಲ್ಲಿ 300 ರುಪಾಯಿಗೆ ಸಿಗುವ ಟಿ-ಶರ್ಟ್‌ಗೆ, ಮಳಿಗೆಯಲ್ಲಿ 3000 ರುಪಾಯಿ ಕೊಡುವ ಜನರಿದ್ದಾರೆ. ಬ್ರಾಂಡೆಡ್ ಟಿ-ಶರ್ಟ್ ತಯಾ ರಾಗುವ ಜಾಗ ಮತ್ತು ಇತರ ಟಿ-ಶರ್ಟ್ ತಯಾರಾಗುವ ಜಾಗ ಎರಡೂ ಒಂದೇ- ಚೀನಾದ ದೊಡ್ಡ ತಯಾರಿಕಾ ಸಂಸ್ಥೆಗಳಿಗೆ ಹೇಳಿದರೆ ಸಾಕು!

ಬ್ರಾಂಡೆಡ್ ಟಿ-ಶರ್ಟ್ ಬೆಲೆ ಮಾತ್ರ ಗ್ರಾಹಕನಿಗೆ ತಲುಪುವ ಹೊತ್ತಿಗೆ ಸಾಮಾನ್ಯ ಟಿ-ಶರ್ಟ್‌ನ ಬೆಲೆ ಗಿಂತ 30 ಅಥವಾ 40 ಪಟ್ಟು ಹೆಚ್ಚು ತನ್ನ ಬೆಲೆಯನ್ನು ವರ್ಧಿಸಿಕೊಳ್ಳುತ್ತದೆ. ಕೆಲವೊಮ್ಮೆ 100 ಪಟ್ಟು ಹೆಚ್ಚಾಗುವುದೂ ಇದೆ. ಹಾಗೆ ಬೆಲೆ ವೃದ್ಧಿಯಾಗಿದ್ದೇಕೆ ಎಂಬುದನ್ನು ಬುದ್ಧಿವಂತ ಓದುಗರಿಗೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಬ್ರಾಂಡ್ ನೇಮ್‌ನ ಮಹಿಮೆಯಿದು!

ಇದರ ಜತೆಗೆ ಇನ್ನಷ್ಟು ಬ್ರಾಂಡ್‌ಗಳು ಸೃಷ್ಟಿಯಾಗುವುದು ಕೂಡ ಮತ್ತದೇ ಮನುಷ್ಯನ ಅಹಂ ಅಥವಾ ಇಗೋವನ್ನು ತಣಿಸುವುದಕ್ಕಾಗಿಯೇ! ಫೆರಾರಿ, ಬಿಎಂಡಬ್ಲ್ಯೂ, ಆಡಿ ಕಾರುಗಳು, ಅತ್ಯಂತ ದುಬಾರಿ ವಾಚು, ಬೆಲ್ಟು, ಷೂ, ಪರ್ಫ್ಯೂಮ್‌ಇಂಥ ಉತ್ಪನ್ನಗಳನ್ನು ಉಪಯೋಗಿಸುವ ಜನರಲ್ಲಿ ‘ನಾವು ಸಾಮಾನ್ಯ ಜನರಿಗಿಂತ ಭಿನ್ನ, ನಾವು ಎಲ್ಲರಂತಲ್ಲ’ ಎನ್ನುವ ಹಮ್ಮು ಬೇರೂರಿರುತ್ತದೆ.

ನಿಮಗೆ ಗೊತ್ತೇ? ಆಫ್ರಿಕಾ ದೇಶದಲ್ಲಿ ಬ್ರಾಂಡೆಡ್ ಷೂ ಕೊಳ್ಳಲು, ಬ್ರಾಂಡೆಡ್ ಬಟ್ಟೆ ಹಾಕಲು ಜನರ ಮಧ್ಯೆ ಸಾಕಷ್ಟು ಪೈಪೋಟಿಯಿದೆ. ಈಗ ನಾನು ಹೇಳಲು ಹೊರಟಿರುವ ವಿಷಯವನ್ನು ನಂಬಲು ನಿಮಗೆ ಸ್ವಲ್ಪ ಕಷ್ಟವಾಗಬಹುದು, ಆದರೆ ಇದು ಸತ್ಯ- ಆಫ್ರಿಕಾ ದೇಶದಲ್ಲಿ ಒಂದು ಷೂ ಕೊಳ್ಳಲು ಎರಡು ವರ್ಷ ಹಣವನ್ನು ಉಳಿತಾಯ ಮಾಡಿ, ನಂತರ ಅದನ್ನು ಕೊಳ್ಳುವವರಿದ್ದಾರೆ.

ಇಟಾಲಿಯನ್ ಸೂಟು, ಬೆಲ್ಟು ಇವಕ್ಕೆಲ್ಲಾ ಹಲವು ವರ್ಷ ದುಡಿದು ಹಣವನ್ನು ಉಳಿಸಿಕೊಳ್ಳುವ ಜನರ ಒಂದು ದೊಡ್ಡ ದಂಡೇ ಇದೆ. ಇಂಥ ಉತ್ಪನ್ನಗಳನ್ನು ಕೊಂಡು ಧರಿಸಿದರೆ ಸಮಾಜದಲ್ಲಿ ತಮ್ಮ ಮೌಲ್ಯ ಮತ್ತು ಗೌರವ ಹೆಚ್ಚುತ್ತದೆ ಎಂಬ ಮನಸ್ಥಿತಿಯೇ ಇದಕ್ಕೆ ಕಾರಣ. ಚೀನಾ, ಭಾರತ, ಆಫ್ರಿಕಾ ದೇಶಗಳ ಹೊಸ ಶ್ರೀಮಂತರ ಮನಸ್ಸಿನಲ್ಲಿ ‘ಬ್ರಾಂಡ್ ಈಸ್ ಗ್ರಾಂಡ್ ಆಂಡ್ ಬೆಸ್ಟ್’ ಎನ್ನುವ ಮನಸ್ಥಿತಿಯನ್ನು ಬೇರೂರಿಸಲು ನಡೆಸಿದ ಪ್ರಯತ್ನಗಳು ಫಲ ಕೊಟ್ಟಿವೆ.

ಹಣವಿಲ್ಲದ ಶ್ರೀಸಾಮಾನ್ಯ ಕೂಡ ಇದರ ಬಲೆಗೆ ಬಿದ್ದು ‘ಆಪಲ್ ಐಫೋನ್’ ಕೊಳ್ಳಲು ಮಗುವನ್ನು ಮಾರಿದ, ಮತ್ತೊಬ್ಬಾಕೆ ತನ್ನ ಕನ್ಯತ್ವವನ್ನು ಹರಾಜಿಗಿಟ್ಟ ಸುದ್ದಿಗಳು ನಮ್ಮನ್ನು ತಲುಪಿವೆ. ಬ್ರಾಂಡ್‌ಗಳ ಬಗ್ಗೆ ಇಷ್ಟೆಲ್ಲಾ ಬರೆಯಲು ಕಾರಣವೇನು ಎಂಬುದು ಈ ವೇಳೆಗೆ ನಿಮಗೆ ಗೊತ್ತಾಗಿರು ತ್ತದೆ. ವಾರದ ಹಿಂದೆ ಚೀನಾ ದೇಶದ ಕಾರ್ಖಾನೆ ಮಾಲೀಕರು, ಬ್ರಾಂಡ್ ಎನ್ನುವುದು ಎಷ್ಟು ಖೊಟ್ಟಿ ಎನ್ನುವುದನ್ನು ಬಿಡಿಸಿ ಹೇಳುವ ವಿಡಿಯೋಗಳು ವೈರಲ್ ಆಗಿವೆ.

“ಬ್ರಾಂಡ್ ಹೆಸರಿನಲ್ಲಿ ನಿಮ್ಮ ದೇಶದ ವ್ಯಾಪಾರಿ ಸಂಸ್ಥೆಗಳು, ಬಂಡವಾಳಶಾಹಿಗಳು ನಿಮ್ಮನ್ನು ಯಾವ ಮಟ್ಟಿಗೆ ಸುಲಿಗೆ ಮಾಡಿದ್ದಾರೆ ನೋಡಿ ಎಂಬುದನ್ನು ಹೇಳುವುದು ಅವರ ಉದ್ದೇಶ. “ಕಳೆದ 30-40 ವರ್ಷದಿಂದ ಈ ಐಷಾರಾಮಿ ವಸ್ತುಗಳನ್ನು ತಯಾರಿಸುತ್ತಿರುವುದು ನಾವು; ಇದನ್ನು ತಯಾ ರಿಸಲು ಆಗುವ ಖರ್ಚು ಇಷ್ಟು, ಇದಕ್ಕೆ ನಮ್ಮ ಲಾಭವನ್ನು ಸೇರಿಸಿ ಇಷ್ಟು ಡಾಲರಿಗೆ ಇದನ್ನು ಮಾರಿದ್ದೇವೆ. ಅದನ್ನು ಅವರು ನಿಮಗೆ ಮಾರುತ್ತಿರುವುದು ಇಷ್ಟು ಡಾಲರಿಗೆ" ಎನ್ನುವ ಲೆಕ್ಕಾಚಾರ ವನ್ನು ಚೀನಾ ಜಗತ್ತಿಗೆ ತೆರೆದು ತೋರಿಸಿದೆ.

ಮೊದಲೇ ಹೇಳಿದಂತೆ, 100ರಿಂದ 300 ಪಟ್ಟು ಹೆಚ್ಚಿನ ಹಣಕ್ಕೆ ಅವರು ಅದನ್ನು ಮಾರಾಟ ಮಾಡಿದ್ದಾರೆ. ಚೀನಾದಿಂದ ಬಂದ ಪದಾರ್ಥಗಳನ್ನು ಯುರೋಪ್ ಮತ್ತು ಅಮೆರಿಕದಲ್ಲಿ ಪ್ಯಾಕ್ ಮಾಡಿ, ತಮ್ಮ ಬ್ರಾಂಡ್ ಹೆಸರು ಹಾಕಿ ಜನರಿಗೆ ಮಾರಾಟ ಮಾಡುತ್ತಿದ್ದಾರೆ. ಅಮೆರಿಕವು ‘ಸುಂಕ-ಸಮರ’ವನ್ನು ಶುರು ಮಾಡಿದ ಬೆನ್ನಲ್ಲೇ ಚೀನಾ ಕೂಡ ಅದಕ್ಕೆ ಸರಿಯಾದ ಉತ್ತರವನ್ನು ನೀಡುತ್ತಾ, ಅಮೆರಿಕ ಮತ್ತು ಯುರೋಪಿನ ಬ್ರಾಂಡ್‌ಗಳ ಬಂಡವಾಳವನ್ನು ಬಯಲುಮಾಡಿದೆ. ಈ ಮೂಲಕ, ‘ಚೀನಾ ನಿಮ್ಮ ವಿರುದ್ಧವಿಲ್ಲ, ನಿಮ್ಮ ದೇಶದ ವಿರುದ್ಧವಿಲ್ಲ. ನಿಮ್ಮ ವಿರುದ್ಧವಿರುವುದು ನಿಮ್ಮದೇ ದೇಶದ ಕಂಪನಿಗಳು, ಬಂಡವಾಳಶಾಹಿಗಳು’ ಎನ್ನುವುದನ್ನು ಬಿಡಿಸಿ ಹೇಳುವ ಪ್ರಯತ್ನವನ್ನು ಮಾಡಿದೆ. ಬ್ರಾಂಡೆಡ್ ಎಂದಾಕ್ಷಣ ಅವೆಲ್ಲವೂ ಅತ್ಯುತ್ತಮ ಎಂದು ಕೊಂಡಿದ್ದ ಜನರು ‘ಅಯ್ಯೋ, ಮೋಸಹೋದೆವು’ ಎಂದುಕೊಳ್ಳುತ್ತಿದ್ದಾರೆ.

ನಿಮಗೆಲ್ಲಾ ನೆನಪಿರಲಿ, ಅತ್ತ ಅತಿದೊಡ್ಡ ಶ್ರೀಮಂತರೂ ಅಲ್ಲದ, ಇತ್ತ ಬಡವರೂ ಅಲ್ಲದ ಮೇಲ್ಮಧ್ಯಮ ವರ್ಗದ ಜನರಿಗೆ ತಾವು ಶ್ರೀಮಂತರು ಎಂದು ತೋರಿಸಿಕೊಳ್ಳುವ ಚಟವಿರುತ್ತದೆ. ಜಗತ್ತಿನಾದ್ಯಂತ ಇರುವ ಇಂಥ ಜನರ ಭ್ರಮೆಯನ್ನು ಚೀನಾ ಕಳಚಿ ನಿಲ್ಲಿಸಿದೆ. ಆ ಮೂಲಕ ಲಕ್ಷಾಂತರ ಕೋಟಿ ರುಪಾಯಿಯಷ್ಟು ವ್ಯಾಪಾರ ಕುಸಿತಕ್ಕೂ ಕಾರಣವಾಗಿದೆ....