ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ತನ್ನ ಜೀವನವನ್ನೇ ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳ

ರಾಮಾಯಣದಲ್ಲಿ ಸೀತೆಯ ತ್ಯಾಗ ಬಲಿದಾನದ ಬಗ್ಗೆ ಉಲ್ಲೇಖವಿದೆಯೇ ವಿನಃ ಲಕ್ಷ್ಮಣನ ಹೆಂಡತಿ ಯಾದ ಊರ್ಮಿಳೆಯ ಬಗ್ಗೆ ಹೆಚ್ಚು ತಿಳಿಯಲು ಅವಕಾಶವಿಲ್ಲ. ಪಿತೃವಾಕ್ಯ ಪರಿಪಾಲನೆಗಾಗಿ ರಾಮನು ಲಕ್ಷ್ಮಣ ಮತ್ತು ಸೀತೆಯರೊಂದಿಗೆ ಕಾಡಿಗೆ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯೂ ತನ್ನ ಪತಿಯನ್ನು ಅನುಸರಿಸಿದಾಗ ಲಕ್ಷ್ಮಣನು ಅವಳಿಗೆ ಅರಮನೆಯಲ್ಲಿಯೇ ಇದ್ದು ಅತ್ತೆಮಾವಂದಿರ ಸೇವೆ ಮಾಡಬೇಕೆಂದು ಅನುನಯಿಸುತ್ತಾನೆ.

ತನ್ನ ಜೀವನವನ್ನೇ ಲಕ್ಷ್ಮಣನಿಗಾಗಿ ತ್ಯಾಗ ಮಾಡಿದ ಊರ್ಮಿಳ

ಒಂದೊಳ್ಳೆ ಮಾತು

rgururaj628@gmail.com

ಊರ್ಮಿಳ ಅಂದರೆ ಭಾವನೆಗಳ ಅಲೆ. ಮಿಥಿಲೆಯ ರಾಜ ಜನಕ ಹಾಗೂ ರಾಣಿ ಸುನೈನಾಳ ಪುತ್ರಿ ಮತ್ತು ಸೀತೆಯ ತಂಗಿ ಇವಳು. ಊರ್ಮಿಳ ರಾಮನ ಕಿರಿಯ ಸಹೋದರ ಲಕ್ಷ್ಮಣನ ಹೆಂಡತಿ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು - ಅಂಗದಾ ಮತ್ತು ಚಂದ್ರಕೇತು. ರಾಮಾಯಣ ಮಹಾ ಕಾವ್ಯದ ಪಾತ್ರವಾದ ಊರ್ಮಿಳ ತನ್ನ ಉನ್ನತ ವಿಚಾರಗಳಿಂದ, ತ್ಯಾಗ ಬಲಿದಾನಗಳಿಂದ ಎಲ್ಲರ ಮನಸೂರೆಗೊಳ್ಳುತ್ತಾಳೆ. ಇವಳು ಒಳ್ಳೆಯ ಚಿತ್ರಕಾರಳೂ ಆಗಿದ್ದಳು.

ದಶರಥ ರಾಜನ ಮಕ್ಕಳಲ್ಲಿ ಹಿರಿಯವನು ರಾಮ. ಲಕ್ಷ್ಮಣ, ಭರತ, ಶತ್ರುಜ್ಞ ಸಹೋದರರು. ಜನಕನ ಮಗಳು ಸೀತಾ. ಊರ್ಮಿಳ, ಮಾಂಡವಿ, ಶ್ರುತಕೀರ್ತಿ ಅವಳ ಸಹೋದರಿಯರು. ರಾಮ ಸೀತಾ ಸ್ವಯಂವರದ ಸಂದರ್ಭದಲ್ಲಿ ರಾಮನ ಸಹೋದರರೊಂದಿಗೆ ಸೀತೆಯ ಸಹೋದರಿಯರ ವಿವಾಹವೂ ಆಗಿರುತ್ತದೆ.

ರಾಮಾಯಣದಲ್ಲಿ ಸೀತೆಯ ತ್ಯಾಗ ಬಲಿದಾನದ ಬಗ್ಗೆ ಉಲ್ಲೇಖವಿದೆಯೇ ವಿನಃ ಲಕ್ಷ್ಮಣನ ಹೆಂಡತಿ ಯಾದ ಊರ್ಮಿಳೆಯ ಬಗ್ಗೆ ಹೆಚ್ಚು ತಿಳಿಯಲು ಅವಕಾಶವಿಲ್ಲ. ಪಿತೃವಾಕ್ಯ ಪರಿಪಾಲನೆಗಾಗಿ ರಾಮನು ಲಕ್ಷ್ಮಣ ಮತ್ತು ಸೀತೆಯರೊಂದಿಗೆ ಕಾಡಿಗೆ ವನವಾಸಕ್ಕೆ ತೆರಳುವ ಸಂದರ್ಭದಲ್ಲಿ ಊರ್ಮಿಳೆಯೂ ತನ್ನ ಪತಿಯನ್ನು ಅನುಸರಿಸಿದಾಗ ಲಕ್ಷ್ಮಣನು ಅವಳಿಗೆ ಅರಮನೆಯಲ್ಲಿಯೇ ಇದ್ದು ಅತ್ತೆಮಾವಂದಿರ ಸೇವೆ ಮಾಡಬೇಕೆಂದು ಅನುನಯಿಸುತ್ತಾನೆ. ಊರ್ಮಿಳೆಯ ಈ ತ್ಯಾಗ ದಿಂದಾಗಿ ಲಕ್ಷ್ಮಣನು ರಾಮ-ಸೀತೆಯರ ಸೇವೆಗೆ ಸಂಪೂರ್ಣವಾಗಿ ತನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಯಿತು.

ಇದನ್ನೂ ಓದಿ: Roopa Gururaj Column: ಎಲ್ಲಿಯೂ ಸಲ್ಲದ ತ್ರಿಶಂಕು ಸ್ವರ್ಗ

ಅದರಂತೆ ಊರ್ಮಿಳೆಯು ತನ್ನ ಯವ್ವನದ ಉತ್ತುಂಗದಲ್ಲಿ ಹದಿನಾಲ್ಕು ವರ್ಷಗಳನ್ನು ವನ ವಾಸಕ್ಕೆ ತೆರಳದೆಯೇ ವನವಾಸವನ್ನು ಅನುಭವಿಸುತ್ತಾಳೆ. ಲಕ್ಷ್ಮಣನ ನಿರೀಕ್ಷೆಯಲ್ಲಿ ಏಕಾಂಗಿಯಾಗಿ ಸಮಾಧಿ ಸ್ಥಿತಿಗೆ ಜಾರುತ್ತಾಳೆ. ಒಂದು ಕತೆಯ ಪ್ರಕಾರ ವನವಾಸದ ಸಮಯದಲ್ಲಿ ಲಕ್ಷ್ಮಣನು ತನ್ನ ಅಣ್ಣನ ಸೇವೆಗಾಗಿ 14 ವರ್ಷಗಳ ಕಾಲ ನಿದ್ರಿಸದೆ ಇರಲು ನಿದ್ರಾದೇವಿಯಿಂದ ವರ ಪಡೆದ. ಆದರೆ ಅದನ್ನು ಮತ್ತಾರಾದರೂ ಸ್ವೀಕರಿಸಲೇ ಬೇಕಾಗಿತ್ತು.

ಆಗ ಲಕ್ಷ್ಮಣನ ನಿದ್ರೆಯನ್ನು ಅವನ ಪತ್ನಿ ಊರ್ಮಿಳ ಸ್ವೀಕರಿಸುತ್ತಾಳೆ. ಇದರಿಂದಾಗಿ ಊರ್ಮಿಳೆ ೧೪ ವರ್ಷಗಳ ಕಾಲ ನಿದ್ದೆಯಲ್ಲಿ ಕಳೆಯುತ್ತಾಳೆ . ಆ ವೇಳೆಯಲ್ಲಿ ಲಕ್ಷ್ಮಣನು ಜಾಗೃತನಾಗಿದ್ದು ರಾಮ ಸೀತೆಯರ ಸೇವಾಮಗ್ನನಾಗಿರುತ್ತಾನೆ. ಸೀತೆಯ ಎಲ್ಲ ಕಷ್ಟ-ಸುಖಗಳಲ್ಲಿ ರಾಮ ಒಡನಾಡಿ ಯಾಗಿರುತ್ತಾನೆ. ಜನಕನ ಮಗಳಾಗಿ ಊರ್ಮಿಳ ಕೂಡ ಅರಮನೆಯಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವಳು.

ಶ್ರೀರಾಮನ ಅನುಜ ಲಕ್ಷ್ಮಣನ ಕೈ ಹಿಡಿದರೂ ಎಲ್ಲ ಸುಖಗಳಿಂದ ವಂಚಿತಳಾದ ಊರ್ಮಿಳೆಯ ಬಗ್ಗೆ ನಮಗೆ ಹೆಚ್ಚಿಗೆ ತಿಳಿಯಲು ಅವಕಾಶವಾಗಿಲ್ಲ. ತೆರೆಯ ಮರೆಗೆ ಸರಿಯುವ ದುರಂತ ನಾಯಕಿ ಯ ಪಾತ್ರ ಜನರ ಅಂತಃಪಟಲದಿಂದ ಕೂಡ ಮರೆಯಾಗುತ್ತದೆ. ಇಂದಿನವರೆಗೂ ಸಹ ಕೈಕೇಯಿ ಅವಳ ಸಖಿ ದುಷ್ಟ ಮಂಥರೆಯನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವ ಜನರಿಗೆ ಪತಿವ್ರತೆಯರ ಸಾಲಿ ನಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಊರ್ಮಿಳೆಯ ಪರಿಚಯವಿಲ್ಲವೆಂಬುದು ಆಶ್ಚರ್ಯ ತರುವ ವಿಷಯವಾದರೂ ಕಟುಸತ್ಯ.

ರಾಮಾಯಣದಲ್ಲಿ ಊರ್ಮಿಳೆಯನ್ನು ಅತ್ಯಂತ ತ್ಯಾಗಮಯಿ ಮತ್ತು ನಿಸ್ವಾರ್ಥ ಪತ್ನಿ ಎಂದು ಹೊಗಳಲಾಗುತ್ತದೆ. ತನ್ನ ಗಂಡನ ಕರ್ತವ್ಯ ಮತ್ತು ತನ್ನ ಪ್ರಿಯರ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡವಳು ಅವಳು. ವಾಲ್ಮೀಕಿ ರಾಮಾಯಣದಲ್ಲಿ ಅವಳ ಪಾತ್ರ ಕಡಿಮೆ ಉಲ್ಲೇಖವಾ ಗಿದ್ದರೂ, ಅವಳ ತ್ಯಾಗದ ಘಟನೆ ಆಧುನಿಕ ಕಾಲದ ಅನೇಕ ಸಾಹಿತಿಗಳಿಗೆ ಸ್ಪೂರ್ತಿಯಾಗಿದೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಲಕ್ಷ್ಮಣ ಮತ್ತು ಊರ್ಮಿಳೆಗೆ ಮೀಸಲಾಗಿರುವ ದೇವಾ ಲಯವಿದೆ. ಈ ದೇವಾಲಯವನ್ನು ಕ್ರಿ.ಶ 1870ರಲ್ಲಿ ಅಂದಿನ ಭರತ್‌ಪುರದ ಆಡಳಿತಗಾರ ಬಲ್ವಂತ್ ಸಿಂಗ್ ನಿರ್ಮಿಸಿದ. ಅದಷ್ಟೇ ಅಲ್ಲ ಇದನ್ನು ಭರತ್‌ಪುರ ರಾಜ್ಯದ ರಾಜಮನೆತದ ರಾಜ ದೇವಾಲಯ ವೆಂದು ಪರಿಗಣಿಸಿದೆ. ಕೆಲವೊಮ್ಮೆ ನಾವು ಮಾಡಿದ ಸಣ್ಣ ಉಪಕಾರವನ್ನು ದೊಡ್ಡದಾಗಿ ಹೇಳುತ್ತಾ ತಿರುಗುತ್ತೇವೆ. ಆದರೆ ಕೆಲವರು ಜೀವನದುದ್ದಕ್ಕೂ ನಮಗಾಗಿ ಮಿಡಿಯುತ್ತಾ ತ್ಯಾಗ ಮಾಡುತ್ತಾ ಅದನ್ನು ಎಲ್ಲಿಯೂ ಸುದ್ದಿ ಮಾಡುವುದಿಲ್ಲ.

ಅಂತಹವರ ಬಗ್ಗೆ ನಮಗೆ ಕೃತಜ್ಞತಾ ಭಾವವಿರಬೇಕು. ನಮಗಾಗಿ ಮಿಡಿಯುವವರ ಬಗ್ಗೆ ಗೌರವ ಇದ್ದಾಗ ಅವರು ಮಾಡಿದ ತ್ಯಾಗದ ತೂಕವೂ ನಮಗೆ ಅರಿವಾಗುತ್ತದೆ. ಅಂಥವರನ್ನು ಮರೆತರೆ ನಾವು ಜೀವನದಲ್ಲಿ ಯಾವ ಯಶಸ್ಸನ್ನೂ ಬಹುಕಾಲ ಉಳಿಸಿಕೊಳ್ಳಲು ಸಾಧ್ಯವಿಲ್ಲ.