Roopa Gururaj Column: ಎಲ್ಲಿಯೂ ಸಲ್ಲದ ತ್ರಿಶಂಕು ಸ್ವರ್ಗ
ದೇವತೆಗಳ ಆಗ್ರಹಕ್ಕೆ ಮಣಿದ ವಿಶ್ವಾಮಿತ್ರರು ತ್ರಿಶಂಕುವನ್ನು ಅಲ್ಲಿಯೇ ಇರಿಸಿ, ಭೂಮಿಗೂ ಸ್ವರ್ಗಕ್ಕೂ ನಡುವೆ ಇದ್ದ ಆತನ ನೆಲೆಯನ್ನು ತ್ರಿಶಂಕು ಸ್ವರ್ಗವೆಂದು ಕರೆದರು. ಎಲ್ಲಿಯೂ ಸಲ್ಲದವರ ಸ್ಥಿತಿ ತ್ರಿಶಂಕು ವಿನ ಸ್ಥಿತಿ ಎಂದೇ ಹೆಸರಾಯಿತು. ಪ್ರಕೃತಿಗೆ ವಿರುದ್ಧವಾಗಿ ನಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಸ್ಥಿತಿಯೂ ಹೀಗೇ ಆಗುತ್ತದೆ.


ಒಂದೊಳ್ಳೆ ಮಾತು
rgururaj628@gmail.com
ಇಕ್ಷ್ವಾಕು ವಂಶದಲ್ಲಿ ತ್ರಿಶಂಕು ಎಂಬ ರಾಜನಿದ್ದ. ಅವನಿಗೆ ಶರೀರದ ಮೇಲಿನ ವ್ಯಾಮೋಹದಿಂದ ಸಶರೀರವಾಗಿ ಸ್ವರ್ಗ ಪ್ರವೇಶ ಮಾಡಬೇಕೆಂಬ ಬಯಕೆಯಾಯಿತು. ತಕ್ಷಣವೇ ತನ್ನ ಕುಲಗುರು ಗಳಾದ ವಸಿಷ್ಠರಿಗೆ ತನ್ನ ಆಸೆಯನ್ನು ತಿಳಿಸಿದ. ಆಗ ವಸಿಷ್ಠರು, ‘ನೀನು ಎಷ್ಟೇ ಶ್ರೇಷ್ಠ ರಾಜನಾ ದರೂ, ಎಷ್ಟೇ ಶ್ರೇಷ್ಠ ಯಾಗಗಳನ್ನು ಮಾಡಿದ್ದರೂ, ಸಶರೀರ ವಾಗಿ ಸ್ವರ್ಗಕ್ಕೆ ಹೋಗುವುದು ಧರ್ಮ ಶಾಸ್ತ್ರದಲ್ಲಿ ಹೇಳಿಲ್ಲ.
ಯಾರಾದರೂ ಸರಿ, ಶರೀರವನ್ನು ತ್ಯಜಿಸುವುದು ಅನಿವಾರ್ಯ, ಅದರ ನಂತರವೇ ಸ್ವರ್ಗ ಲೋಕದ ಪ್ರವೇಶ ಸಿಗುತ್ತದೆ. ಹಾಗಾಗಿ ಸಶರೀರವಾಗಿ ಸ್ವರ್ಗಕ್ಕೆ ಹೋಗುವುದು ಅಸಾಧ್ಯ’ ಎಂದು ಅವನ ಕೋರಿಕೆಯನ್ನು ನಿರಾಕರಿಸಿದರು. ಆಗ ತ್ರಿಶಂಕು, ವಸಿಷ್ಠರ ಮಕ್ಕಳ ಬಳಿ ಹೋಗಿ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ.
ಅವರು, ‘ನಮ್ಮ ತಂದೆಯವರು ಸಾಧ್ಯವಿಲ್ಲ ಎಂದ ಮೇಲೆ ಅದು ಸಾಧ್ಯವಿಲ್ಲ’ ಎಂದು ಹೇಳಿ ಬಿಟ್ಟರು. ಅಸಮಾಧಾನಗೊಂಡ ತ್ರಿಶಂಕು ತಾನು ಬೇರೆ ಗುರುಗಳನ್ನು ಹುಡುಕಿ, ತನ್ನ ಕೋರಿಕೆ ಯನ್ನು ಈಡೇರಿಸಿಕೊಳ್ಳುತ್ತೇನೆ ಎಂದು ಹೇಳಿ ಹೊರಟುಹೋದ. ಆಗ ಅವರು, ‘ನೀನು ನಮ್ಮ ತಂದೆ, ನಿನ್ನ ಗುರುಗಳೂ ಆದ ವಸಿಷ್ಠರ ಮಾತನ್ನು ಧಿಕ್ಕರಿಸಿ ಮತ್ತೊಬ್ಬ ಗುರುವನ್ನು ಹುಡುಕಲು ಹೊರಟಿರುವೆ.
ಇದನ್ನೂ ಓದಿ: Roopa Gururaj Column: ಸುರಸಳ ಶಕ್ತಿ ಮುಂದೆ ಯುಕ್ತಿ ಪ್ರದರ್ಶಿಸಿದ ಹನುಮಂತ
ನಿನ್ನಿಂದ ಗುರು ವಾಕ್ಯ ಉಲ್ಲಂಘನೆ ಮತ್ತು ಅವಮಾನ ನಡೆದಿದೆ, ಅದಕ್ಕೆ ತಕ್ಕ ಶಿಕ್ಷೆಯಾಗಲಿ’ ಎಂದು ಶಪಿಸಿದರು. ಮರುದಿನ ತ್ರಿಶಂಕು ನಿದ್ದೆಯಿಂದ ಏಳುವ ವೇಳೆಗೆ, ಅವನ ಮುಖದಲ್ಲಿನ ಕಾಂತಿಯು ಕುಂದಿ, ಮುಖವೆಲ್ಲಾ ಕಪ್ಪಾಗಿತ್ತು. ಅವನ ಬಂಗಾರದ ಆಭರಣಗಳು ಹಿತ್ತಾಳೆಯಾಗಿದ್ದವು. ಕೂದಲು, ಕಣ್ಣುಗಳು ಕೆಂಪಾಗಿ, ನೋಡಲು ಭಯಂಕರವಾಗಿದ್ದವು. ಅವನ ಭೀಕರ ರೂಪವನ್ನು ನೋಡಿ ಅರಮನೆಯಲ್ಲಿದ್ದವರೂ, ರಾಜಪರಿ ವಾರದವರೂ ಭಯದಿಂದ ಓಡಿಹೋದರು.
ತ್ರಿಶಂಕು ಅದೇ ರೂಪದಲ್ಲಿ ತಿರುಗುತ್ತಾ ಕೊನೆಗೆ ರಾಜರ್ಷಿಯಾಗಿದ್ದ ವಿಶ್ವಾಮಿತ್ರರ ಬಳಿ ಬಂದ. ವಸಿಷ್ಠರ ಮೇಲೆ ವಿಶ್ವಾಮಿತ್ರರಿಗೆ ಮೊದಲೇ ಕೋಪವಿತ್ತು. ಹೇಗಾದರೂ ಪ್ರತೀಕಾರ ತೀರಿಸಿಕೊಳ್ಳ ಬೇಕೆಂದು ಕಾದಿದ್ದರು. ಈಗ ತ್ರಿಶಂಕುವಿಗೆ ಸಹಾಯ ಮಾಡುವ ಮೂಲಕ ವಸಿಷ್ಠರನ್ನು ಅವಮಾ ನಿಸಬಹುದೆಂದು ಭಾವಿಸಿದ ವಿಶ್ವಾಮಿತ್ರ, ಅವನನ್ನು ಸ್ವರ್ಗಕ್ಕೆ ಕಳುಹಿಸಲು ಒಪ್ಪಿದರು.
ಅದರಂತೆ ಸ್ವರ್ಗಾರೋಹಣ ಯಾಗ ಪ್ರಾರಂಭವಾಯಿತು. ಆದರೆ ಯಾಗಾಗ್ನಿಯಲ್ಲಿ ಹವಿಸ್ಸನ್ನು ಸ್ವೀಕರಿಸಲು ಯಾವ ದೇವತೆಯೂ ಬರಲಿಲ್ಲ. ಯಾರೂ ಬರದಿರುವುದನ್ನು ಕಂಡು, ವಿಶ್ವಾಮಿತ್ರರು ಕೋಪಗೊಂಡು ತನ್ನ ತಪಃಶಕ್ತಿಯಿಂದ ತ್ರಿಶಂಕುವನ್ನು ಮೇಲಕ್ಕೆ ಕಳಿಸತೊಡಗಿದರು.
ತ್ರಿಶಂಕು ಆಕಾಶಮಾರ್ಗವಾಗಿ ಪ್ರಯಾಣಿಸುತ್ತಾ ಸ್ವರ್ಗದ ಕಡೆಗೆ ವೇಗವಾಗಿ ಸಾಗತೊಡಗಿದ. ಈ ವಿಷಯ ತಿಳಿದ ದೇವೇಂದ್ರ ಕೋಪದಿಂದ, ‘ತ್ರಿಶಂಕೋ ಗಚ್ಛ ಭೂಯಾಃ ತ್ವಂ ಅಸಿ ಸ್ವರ್ಗ ಕೃತ ಆಲಯಂ’, ‘ತ್ರಿಶಂಕು, ಗುರುಶಾಪಕ್ಕೆ ಗುರಿಯಾದ ನಿನಗೆ ಸ್ವರ್ಗದಲ್ಲಿ ಪ್ರವೇಶವಿಲ್ಲ, ನೀನು ತಲೆ ಕೆಳಗಾಗಿ ಭೂಮಿಯ ಮೇಲೆ ಬೀಳು’ ಎಂದು ತ್ರಿಶಂಕುವನ್ನು ತಿರಸ್ಕರಿಸಿಬಿಟ್ಟ.
ಕೂಡಲೇ ತ್ರಿಶಂಕು ತಲೆಕೆಳಗಾಗಿ ಭೂಮಿಯ ಮೇಲೆ ಬೀಳತೊಡಗಿದ. ಭಯದಿಂದ ವಿಶ್ವಾಮಿತ್ರ ರನ್ನು ಪ್ರಾರ್ಥಿಸತೊಡಗಿದ. ವಿಶ್ವಾಮಿತ್ರರು ‘ತಮ್ಮ ಶಿಷ್ಯನಿಗೆ ಸ್ವರ್ಗದಲ್ಲಿ ಜಾಗ ಕೊಡದಿದ್ದರೆ ತಾನೆ ಏನು? ಪ್ರತ್ಯೇಕ ಸ್ವರ್ಗವನ್ನೇ ಸೃಷ್ಟಿಸುವೆ’ ಎಂದು ಹೂಂಕರಿಸಿದರು. ತಮ್ಮ ತಪಃಶಕ್ತಿಯಿಂದ ದಕ್ಷಿಣ ದಿಕ್ಕಿನಲ್ಲಿ ಮತ್ತೊಂದು ನಕ್ಷತ್ರ ಮಂಡಲವನ್ನೂ, ಸಪ್ತರ್ಷಿ ಮಂಡಲವನ್ನೂ ಸೃಷ್ಟಿಸಿದರು, ನಂತರ ದೇವತೆಗಳನ್ನು ಕೂಡ ಸೃಷ್ಟಿಸಲು ಮುಂದಾದರು.
ಆಗ ದೇವತೆಗಳು ವಿಶ್ವಾಮಿತ್ರರ ಬಳಿ ಬಂದು, ‘ಶಾಂತನಾಗು ವಿಶ್ವಾಮಿತ್ರ, ನಿನಗೆ ತಪಃ ಶಕ್ತಿ ಇದ್ದ ಮಾತ್ರಕ್ಕೆ ಪ್ರತಿಸ್ವರ್ಗದ ಸೃಷ್ಟಿ ಸರಿಯಲ್ಲ, ಶಾಸ್ತ್ರದಂತೆ ಸಶರೀರವಾಗಿ ಸ್ವರ್ಗ ಸೇರಲು ಸಾಧ್ಯವಿಲ್ಲ, ಇದೂ ನಿಮಗೆ ತಿಳಿದಿದೆ, ನಿಮ್ಮಂಥವರು ಹೀಗೆ ನಡೆದುಕೊಳ್ಳುವುದು ಸರಿಯಲ್ಲ. ನೀವು ಸೃಷ್ಟಿಸಿದ ನಕ್ಷತ್ರ ಮಂಡಲವು ಜ್ಯೋತಿಷ್ಯಚಕ್ರದಿಂದ ಹೊರಗಿದ್ದು, ತ್ರಿಶಂಕು ಅಲ್ಲಿಯೇ ನೆಲೆಸಲಿ’ ಎಂದು ಕೇಳಿಕೊಂಡರು.
ದೇವತೆಗಳ ಆಗ್ರಹಕ್ಕೆ ಮಣಿದ ವಿಶ್ವಾಮಿತ್ರರು ತ್ರಿಶಂಕುವನ್ನು ಅಲ್ಲಿಯೇ ಇರಿಸಿ, ಭೂಮಿಗೂ ಸ್ವರ್ಗ ಕ್ಕೂ ನಡುವೆ ಇದ್ದ ಆತನ ನೆಲೆಯನ್ನು ತ್ರಿಶಂಕು ಸ್ವರ್ಗವೆಂದು ಕರೆದರು. ಎಲ್ಲಿಯೂ ಸಲ್ಲದವರ ಸ್ಥಿತಿ ತ್ರಿಶಂಕುವಿನ ಸ್ಥಿತಿ ಎಂದೇ ಹೆಸರಾಯಿತು. ಪ್ರಕೃತಿಗೆ ವಿರುದ್ಧವಾಗಿ ನಮ್ಮ ಆಸೆಗಳನ್ನು ಪೂರೈಸಿ ಕೊಳ್ಳಲು ಪ್ರಯತ್ನಿಸಿದಾಗ ನಮ್ಮ ಸ್ಥಿತಿಯೂ ಹೀಗೇ ಆಗುತ್ತದೆ.