ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಜೀವನೀಯವಾದ ಹಾಲು, ಹಾಲಾಹಲವಾಗಿದ್ದು ಹೇಗೆ ?

ಆಯುರ್ವೇದವು ‘ಕ್ಷೀರಂ ಜೀವನೀಯಾನಾಂ ಶ್ರೇಷ್ಠಮ’ ಎಂದು ಶ್ಲಾಘಿಸಿದೆ. ಅಂದರೆ, ನಾವು ಬದುಕಲು ಬೇಕಾದ ಪದಾರ್ಥಗಳಲ್ಲಿ ಹಾಲು ಅತ್ಯಂತ ಶ್ರೇಷ್ಠವಾದದ್ದು ಎಂದರ್ಥ. ಇದಕ್ಕೆ ಹಲವಾರು ಕಾರಣ ಗಳಿವೆ. ಹಾಲು ಎಲ್ಲಾ ಪ್ರಾಣಿಗಳಿಗೂ ಹುಟ್ಟುತ್ತಲೇ ಸಾತ್ಮ್ಯವಾಗಿರುತ್ತದೆ. ಆಯುರ್ವೇದವು ಹೇಳುವಂತೆ ಬದುಕೆಂಬುದು ಶರೀರ-ಇಂದ್ರಿಯ-ಮನಸ್ಸು-ಆತ್ಮ ಈ ನಾಲ್ಕರ ಒಕ್ಕೂಟ.

ಜೀವನೀಯವಾದ ಹಾಲು, ಹಾಲಾಹಲವಾಗಿದ್ದು ಹೇಗೆ ?

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಹಸುವಿನ ಸ್ಥಿತಿಗತಿಗಳು ಹಾಲಿನ ಗುಣವರ್ಧನೆಗೆ ಎಷ್ಟು ಮುಖ್ಯವೋ, ಅಂತೆಯೇ ಅದನ್ನು ಬಳಸುವ ರೀತಿಯೂ ಅಷ್ಟೇ ಮುಖ್ಯ. ಹಾಲು ಇಡೀ ಜಗತ್ತಿನಲ್ಲಿ ಸಿಗುವ ಅತ್ಯಂತ ಆರೋಗ್ಯ ಕರ ವಾದಂಥ ವಸ್ತುವಾದರೂ ಅದನ್ನು ನಾವು ಸರಿಯಾಗಿ ಬಳಸದಿದ್ದರೆ ಅದರಿಂದಲೂ ತೊಂದರೆ ತಪ್ಪಿದ್ದಲ್ಲ.

ನಿಮಗಿದು ಗೊತ್ತೇ? ಯಾವುದೇ ಘನಾಹಾರವಿಲ್ಲದೆ ಬರೀ ನೀರನ್ನೇ ಕುಡಿದು ಯಾರೂ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ. ಆದರೆ, ಕೇವಲ ಕ್ಷೀರವನ್ನು ಸೇವಿಸಿ ವರ್ಷಾನುಗಟ್ಟಲೆ ಎಲ್ಲಾ ಧಾತು ಗಳನ್ನೂ ಪೋಷಿಸಿಕೊಂಡು ಬದುಕಲು ಸಾಧ್ಯವಿದೆ. ಯೋಗಿಗಳು, ಸನ್ಯಾಸಿಗಳು, ಹಲವಾರು ಸಾಧಕರು ಕೇವಲ ಹಾಲನ್ನು ತಮ್ಮ ಆಹಾರವಾಗಿಸಿಕೊಂಡು ಉತ್ತಮ ಸಾಧನೆಯನ್ನು ಮಾಡುತ್ತಿರುವ ಉದಾಹರಣೆಗಳನ್ನು ನಾವು ಕಾಣಬಹುದು. ಹಾಗಾದರೆ ಹಾಲಿನ ವೈಶಿಷ್ಟಗಳೇನು? ಬನ್ನಿ, ಆಯುರ್ವೇದ ಶಾಸ್ತ್ರದಲ್ಲಿರುವ ಹಾಲಿನ ವರ್ಣನೆಯನ್ನು ಗಮನಿಸೋಣ.

ಆಯುರ್ವೇದವು ‘ಕ್ಷೀರಂ ಜೀವನೀಯಾನಾಂ ಶ್ರೇಷ್ಠಮ’ ಎಂದು ಶ್ಲಾಘಿಸಿದೆ. ಅಂದರೆ, ನಾವು ಬದುಕಲು ಬೇಕಾದ ಪದಾರ್ಥಗಳಲ್ಲಿ ಹಾಲು ಅತ್ಯಂತ ಶ್ರೇಷ್ಠವಾದದ್ದು ಎಂದರ್ಥ. ಇದಕ್ಕೆ ಹಲವಾರು ಕಾರಣಗಳಿವೆ. ಹಾಲು ಎಲ್ಲಾ ಪ್ರಾಣಿಗಳಿಗೂ ಹುಟ್ಟುತ್ತಲೇ ಸಾತ್ಮ್ಯವಾಗಿರುತ್ತದೆ. ಆಯುರ್ವೇದವು ಹೇಳುವಂತೆ ಬದುಕೆಂಬುದು ಶರೀರ-ಇಂದ್ರಿಯ-ಮನಸ್ಸು-ಆತ್ಮ ಈ ನಾಲ್ಕರ ಒಕ್ಕೂಟ.

ಹಾಲು ಆತ್ಮವನ್ನು ಬಿಟ್ಟು ಉಳಿದ ಮೂರೂ ಘಟಕಗಳನ್ನು ಹುಟ್ಟಿದ ದಿನದಿಂದಲೂ ಪೋಷಿಸುತ್ತಾ ಬರುವ ಉತ್ತಮ ಆಹಾರವಾಗಿದೆ. ಹಾಗಾಗಿ ಇದು ಆಗ ತಾನೇ ಹುಟ್ಟಿದ ಹಸುಳೆ ಯಿಂದ ಹಿಡಿದು ಮರಣಶಯ್ಯೆಯಲ್ಲಿರುವ ಮುದುಕರವರೆಗೆ ಎಲ್ಲರಿಗೂ ಒಗ್ಗುವ ಉತ್ತಮ ಆಹಾರ. ತಾಯಿಯು (ಪ್ರಾಣಿ) ತಾನು ಸೇವಿಸಿದ ಆಹಾರದ ಸಾರಭಾಗವೇ ಈ ಹಾಲು. ಜೀರ್ಣಿಸಲು ಸುಲಭ ವಾಗುವಂತೆ ತಾಯಿಯ ದೇಹದಲ್ಲಿಯೇ ಪರಿಪಾಕ ಹೊಂದಿದ ಸಂಪೂರ್ಣ ಆಹಾರವು ಇದಾಗಿದೆ.

ಇದನ್ನೂ ಓದಿ: Dr Sadhanashree Column: ಆಹಾರ ಸೇವಿಸುವ ಮುನ್ನ ಗಮನಿಸಿ ಈ ಆರನ್ನು...

ಆದ್ದರಿಂದ ಇದು ಎಲ್ಲಾ ಪ್ರಾಣಿಗಳಿಗೂ ಆಜನ್ಮ ಸಾತ್ಮ್ಯ. ರುಚಿಯಲ್ಲಿ ನೋಡಿದರೆ ಹಾಲು ಮಧುರ ಪ್ರಧಾನವಾದಂಥ ದ್ರವ್ಯ. ನಾಲಿಗೆಗೆ ಮಾತ್ರ ಸಿಹಿ ಎನಿಸದೆ ದೇಹದಲ್ಲಿ ಜೀರ್ಣಿಸಿದ ನಂತರವೂ ಹಾಲು ಮಧುರವಾಗಿಯೇ ಪರಿಣಮಿಸುವ ಕಾರಣ ಇದು ಶರೀರದ ಎಲ್ಲಾ ಅವಯವಗಳ ಬೆಳವಣಿಗೆಗೂ ಮತ್ತು ಪೋಷಣೆಗೂ ಕಾರಣವಾಗುತ್ತದೆ.

ಅಂತೆಯೇ, ಶರೀರದ ಪುಷ್ಟಿ ಮತ್ತು ಬಲವನ್ನು ಹೆಚ್ಚಿಸಲು ಇದು ಉಪಯುಕ್ತ. ನಮ್ಮ ಶರೀರದಲ್ಲಿ ಸಪ್ತ ಧಾತುಗಳಿವೆ. ಶರೀರದ ಎಲ್ಲಾ ಕ್ರಿಯಾತ್ಮಕ ಕೆಲಸಗಳಿಗೂ ಈ ಧಾತುಗಳೇ ಆಶ್ರಯ. ಈ ಸಪ್ತ ಧಾತುಗಳ ಸಾರವೇ ಓಜಸ್ಸು. ಓಜಸ್ಸು ಎಂದರೆ ಜೀವಸತ್ವ. ಈ ಓಜಸ್ಸನ್ನು ನೇರವಾಗಿ ಪೋಷಿಸುವ ಗುಣ ಹಾಲಿಗಿದೆ. ಹಾಲು ಓಜಸ್ಯಮ್!

ಹಾಲು ಆಹಾರ ರೂಪದಲ್ಲಿ ಎಷ್ಟು ಪ್ರಯೋಜನಕಾರಿಯೋ ಅಂತೆಯೇ ಔಷಧ ರೂಪದಲ್ಲೂ ಬಹಳ ಉಪಯೋಗಕರವಾದದ್ದು. ಇದು ಶಾರೀರಿಕ ಮತ್ತು ಮಾನಸಿಕ ಚಿಕಿತ್ಸೆಗಳಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಲು ಸಾಮಾನ್ಯವಾಗಿ ಪಚನಕ್ಕೆ ಜಡ. ಅಂದರೆ, ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಅಂತೆಯೇ ಇದು ತಂಪು ಗುಣವನ್ನು ಹೊಂದಿದ್ದು ದೇಹದಲ್ಲಿಯೂ ತಂಪನ್ನು ಹೆಚ್ಚಿಸುತ್ತದೆ.

ಹಾಲೆಂಬುದು ಪ್ರಾಣಿಜನ್ಯವಾದ ಅಮೃತ. ಈ ಹಾಲು ಅನೇಕ ಮೂಲಗಳಿಂದ ನಮಗೆ ದೊರೆಯು ತ್ತದೆ. ಆದರೆ ಆಯುರ್ವೇದದಲ್ಲಿ ಚಿಕಿತ್ಸೋಪಯೋಗಿಯಾಗಿ ವಿವರಿಸಿದ ಹಾಲುಗಳು 8 ಮಾತ್ರ. ಪ್ರತಿಯೊಂದು ಬಗೆಯ ಹಾಲು ಸಹ ವಿಶಿಷ್ಟವಾದ ಗುಣಧರ್ಮವನ್ನು ಹೊಂದಿದೆ. ಹಸು, ಎಮ್ಮೆ, ಆಡು, ಕುರಿ, ಒಂಟೆ, ಕತ್ತೆ, ಆನೆ ಮತ್ತು ಮನುಷ್ಯ- ಈ ರೀತಿ ಎಂಟು ವಿಧವಾದ ಹಾಲು ಗಳನ್ನು ನಮ್ಮ ಶಾಸ್ತ್ರದಲ್ಲಿ ವಿವರಿಸಿರುವುದನ್ನು ಕಾಣಬಹುದು. ಆದರೆ ಈ ಎಲ್ಲಾ ರೀತಿಯ ಹಾಲು ಗಳಲ್ಲಿ ಹಸುವಿನ ಹಾಲು ಅತ್ಯಂತ ಪ್ರಶಸ್ತವಾದದ್ದು ಎಂಬುದು ಶಾಸ್ತ್ರದ ವಾಕ್ಯ.

ಹಸುವಿನ ಹಾಲನ್ನು ನಮ್ಮ ಭಾರತೀಯ ಪರಂಪರೆಯಲ್ಲಿ ಅಮೃತಕ್ಕೆ ಹೋಲಿಸಿರುವುದು ಸತ್ಯ. ಇದು ಕೇವಲ ತನ್ನ ಇರುವಿಕೆಯಿಂದಲೇ ವಾತಾವರಣವನ್ನೆಲ್ಲ ಪವಿತ್ರಗೊಳಿಸುವ ಕಾರಣ ಇದನ್ನು ಪೂಜೆಯಂಥ ಶುಭ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಬೇರೆ ಎಲ್ಲ ಹಾಲುಗಳ ರೀತಿ ಹಸುವಿನ ಹಾಲು ಸಹ ಬಹಳ ಮಧುರ ಮತ್ತು ಜಿಡ್ಡಿನಿಂದ ಕೂಡಿದ್ದಾಗಿದೆ.

ಶರೀರದ ಎಲ್ಲ ಧಾತುಗಳನ್ನು ಪುಷ್ಟಿಗೊಳಿಸಿ, ಬಲವನ್ನು ವೃದ್ಧಿಸಿ, ಬುದ್ಧಿ, ಮೇಧಾಶಕ್ತಿಗಳ ಹೆಚ್ಚಳಕ್ಕೂ ಇದು ಕಾರಣವಾಗಿದೆ. ಮನಸ್ಸಿಗೆ ಸತ್ವ ಗುಣವನ್ನೆರೆದು ಶಾಂತಿಯನ್ನು ನೀಡುತ್ತದೆ. ಇದು ವಿಶೇಷವಾಗಿ ರೋಗ ನಿರೋಧಕ ಮತ್ತು ನಿವಾರಕ ಶಕ್ತಿಯನ್ನು ನಮಗೆ ಧಾರೆಯೆರೆಯುತ್ತದೆ. ಹಸುವಿನ ಹಾಲನ್ನು ಚಿಕಿತ್ಸೆಯಲ್ಲೂ ಬಳಸಲಾಗುತ್ತದೆ. ಕೆಮ್ಮು, ಹಳೆ ಜ್ವರ, ರಕ್ತಪಿತ್ತ, ತಲೆನೋವು, ನಿದ್ರಾಹೀನತೆ, ಶುಕ್ರ ಕ್ಷಯ ಮುಂತಾದ ರೋಗಗಳಲ್ಲಿ ಹಾಲು ಅತ್ಯುತ್ತಮ ದ್ರವ್ಯವಾಗಿದೆ.

ಆದರೆ ಹಸು ಸೇವಿಸುವ ಆಹಾರ, ಅದರ ಮೈ ಕಟ್ಟು, ಅದರ ಓಡಾಟ, ಅದಕ್ಕೆ ನೀಡುವ ವಿವಿಧ ರೀತಿಯ ಔಷಧಿಗಳಿಗೆ ಅನುಗುಣವಾಗಿ ಹಾಲಿನಲ್ಲಿರುವ ಗುಣಗಳ ಏರುಪೇರು ಕಂಡುಬರುತ್ತದೆ. ಬಹಳಷ್ಟು ಸಮಯ ಹಾಲಿನಿಂದ ತೊಂದರೆಯಾಗುವುದು ಈ ಕಾರಣದಿಂದಲೇ. ಹಸುವಿಗೆ ಉತ್ತಮ ವಾದ ವಾತಾವರಣವನ್ನು ನೀಡದೆ ಕೇವಲ ರಾಸಾಯನಿಕಗಳನ್ನು ಮತ್ತು ಹಾರ್ಮೋನ್ ಗಳನ್ನು ನೀಡಿಯೇ ಬೆಳೆಸುವುದರಿಂದ ಅದು ಕೊಡುವ ಹಾಲು ಇಂದು ಹಾಲಾಹಲವಾಗುತ್ತಿದೆ.

ಹಸುವಿನ ಸ್ಥಿತಿಗತಿಗಳು ಹಾಲಿನ ಗುಣವರ್ಧನೆಗೆ ಎಷ್ಟು ಮುಖ್ಯವೋ, ಅಂತೆಯೇ ಅದನ್ನು ಬಳಸುವ ರೀತಿಯೂ ಅಷ್ಟೇ ಮುಖ್ಯ. ಹಾಲು ಇಡೀ ಜಗತ್ತಿನಲ್ಲಿ ಸಿಗುವ ಅತ್ಯಂತ ಆರೋಗ್ಯಕರ ವಾದಂಥ ವಸ್ತುವಾದರೂ ಅದನ್ನು ನಾವು ಸರಿಯಾಗಿ ಬಳಸದಿದ್ದರೆ ಅದರಿಂದಲೂ ತೊಂದರೆ ತಪ್ಪಿದ್ದಲ್ಲ.

ಹಾಗಾಗಿ, ಆಯುರ್ವೇದದಲ್ಲಿ ಹೇಳಿರುವ ಕೆಲವು ವಿಚಾರಗಳನ್ನು ತಿಳಿದುಕೊಂಡು ನಂತರ ಹಾಲನ್ನು ಉಪಯೋಗಿಸಿದರೆ ಅದರ ಎಲ್ಲ ಲಾಭಗಳನ್ನು ನಾವು ಸಂಪೂರ್ಣವಾಗಿ ಪಡೆಯ ಬಹುದು. ಸಾಮಾನ್ಯವಾಗಿ ಹಸುವಿನ ಹಾಲು ಮೂರು ವಿಧವಾದ ರೀತಿಯಲ್ಲಿ ಬಳಕೆಯಾಗುತ್ತದೆ. ಅವೆಂದರೆ:

೧. ಧಾರೋಷ್ಣ ಕ್ಷೀರ: ಅಂದರೆ ಆಗ ತಾನೆ ಕರೆದ ಹಾಲು. ಇದು ಅಮೃತ ಸಮಾನವಾದದ್ದು ಮತ್ತು ಅತ್ಯುತ್ತಮವಾದದ್ದು. ಕರೆಯುವಾಗ ಇದ್ದ ಬಿಸಿ ಆರುವ ಮೊದಲೇ ಸೇವಿಸಿದರೆ ಇದು ಬಹಳ ಪ್ರಯೋಜನಕಾರಿ. ಪ್ರಮಾಣವನ್ನು ಅರಿತು ಸೇವಿಸಿದಾಗ ಹಾಲಿನ ಎಲ್ಲಾ ಗುಣಗಳನ್ನು ಪಡೆಯ ಬಹುದು. ಈ ಹಾಲು ತಣ್ಣಗಾಗುತ್ತಾ ಹೋದಂತೆ ಇದರ ಗುಣ ಧರ್ಮಗಳು ಬದಲಾಗುತ್ತವೆ.

೨. ಹಸಿ ಹಾಲು: ಕರೆದ ಹಾಲಿನ ಬಿಸಿ ತಣ್ಣಗಾಗಿ ಮತ್ತೆ ಕಾಯಿಸದೆ ಇದ್ದ ಹಾಲನ್ನು ಹಸಿ ಹಾಲು ಎಂದು ಹೇಳಬಹುದು. ಇದು ತಣ್ಣಗಾಗುತ್ತ ಹೋದಂತೆ ಜೀರ್ಣಿಸಿಕೊಳ್ಳಲು ಕಷ್ಟ ಮತ್ತು ದೇಹ ದಲ್ಲಿನ ದ್ರವದ ಅಂಶವನ್ನು ಹೆಚ್ಚು ಮಾಡುತ್ತದೆ. ವಿಶೇಷವಾಗಿ ಹಲವಾರು ದಿನ ಫ್ರಿಜ್‌ನಲ್ಲಿ ಇಟ್ಟು ನಂತರ ಬಳಸುವ ಹಾಲು ಇದೇ ರೀತಿ ದೇಹದಲ್ಲಿ ಜಿನುಗುವಿಕೆ ಯನ್ನು(ಅಭಿಷ್ಯಂದ) ಹೆಚ್ಚಿಸುತ್ತದೆ. ಪ್ರಮೇಹ ಮುಂತಾದ ರೋಗಗಳಿಗೆ ಇದು ಮುಖ್ಯ ಕಾರಣವಾಗಬಹುದು. ಆದ್ದರಿಂದ, ಕರೆದು ತಣ್ಣಗಾದ ಹಾಲನ್ನು ಕಾಯಿಸದೆ ಉಪಯೋಗಿಸುವುದು ಆಯುರ್ವೇದದ ಪ್ರಕಾರ ಅಹಿತಕರ.

೩. ಬಿಸಿ/ಕಾಯಿಸಿದ ಹಾಲು: ಈ ರೀತಿಯ ಹಾಲು ಎಲ್ಲ ರೀತಿಯಿಂದಲೂ ಆರೋಗ್ಯಕರ. ಇದು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಅಭಿಷ್ಯಂದವನ್ನು ಉಂಟುಮಾಡುವುದಿಲ್ಲ. ಆದರೆ ಕಾಯಿಸುವ ವಿಧಾನವನ್ನು ನಾವು ಚೆನ್ನಾಗಿ ಅರಿಯಬೇಕು. ಕಾರಣ, ಹಾಲು ಪ್ರಾಣಿಜನ್ಯವಾದ್ದರಿಂದ ಇದರ ಪಾಕದಲ್ಲಿ ಆಗುವ ಬದಲಾವಣೆಯು ಅತ್ಯಂತ ಸೂಕ್ಷ್ಮವಾದದ್ದು. ಆದ್ದರಿಂದ ಕೆಳಗೆ ವಿವರಿಸಿರು ವಂತೆ ಸರಿಯಾದ ವಿಧಾನದಲ್ಲಿ ಇದನ್ನು ಕಾಯಿಸಬೇಕು: ಹಾಲನ್ನು ಸಮಾನಾಂತರ ಎತ್ತರದಲ್ಲಿ ರುವ, ಮುಂಭಾಗದಲ್ಲಿ ಸ್ವಲ್ಪ ಚಿಕ್ಕದಾಗಿರುವ ಸೂಕ್ತವಾದ ಪಾತ್ರೆಯಲ್ಲಿ ಕಾಯಿಸಬೇಕು.

ಹಾಲು ಕಾಯುವಾಗ ಮುಚ್ಚಳವನ್ನು ಮುಚ್ಚುವುದು ಹಾಲಿನಲ್ಲಿ ಗುರುತ್ವವನ್ನು ಉಂಟು ಮಾಡುತ್ತದೆ. ಆದ್ದರಿಂದ ಹಾಲನ್ನು ತೆರೆದ ಪಾತ್ರೆಯಲ್ಲಿಯೇ ಕಾಯಿಸತಕ್ಕದ್ದು. ಕಾಯಿಸುವಾಗ ಆರಂಭದಲ್ಲಿ ಉರಿ ಚಿಕ್ಕದಾಗಿದ್ದು, ಬರುಬರುತ್ತಾ ಜಾಸ್ತಿಯಾಗಿ, ಮತ್ತೆ ಕ್ರಮೇಣ ಕಡಿಮೆಯಾಗುತ್ತಾ ಬರಬೇಕು. ಈ ರೀತಿ ಉರಿಯನ್ನು ನಿಯಂತ್ರಿಸಿ ಕಾಯಿಸುವಾಗ ಹಾಲನ್ನು ಒಂದೆರಡು ಬಾರಿ ಸೌಟಿ ನಿಂದ ಕೈ ಆಡಿಸುವುದು ಉತ್ತಮ ವಿಧಾನ. ಒಂದೇ ಸಲ ದೊಡ್ಡ ಉರಿಯಲ್ಲಿ ಹಾಲನ್ನು ಕಾಯಿಸಿ ದಾಗ ಹಾಲಿನ ಎಲ್ಲಾ ಅಣುಗಳು/ಕಣಗಳು ಪಾಕವಾಗದೆ ಅಜೀರ್ಣ, ಹೊಟ್ಟೆ ಉಬ್ಬರ, ಬೇಧಿಯಂಥ ತೊಂದರೆಗಳು ಉಂಟಾಗುತ್ತವೆ.

ಇನ್ನು ಹಾಲನ್ನು ಕಾಯಿಸುವಾಗ ಅದಕ್ಕೆ ನೀರು ಸೇರಿಸಬೇಕೇ? ಎಂಬ ಪ್ರಶ್ನೆ ಬರಬಹುದು. ಹಾಲನ್ನು ಕಾಯಿಸುವಾಗ ಹಾಲಿಗೆ ಅರ್ಧದಷ್ಟು ಪ್ರಮಾಣ ನೀರನ್ನು ಸೇರಿಸಿ, ನೀರು ಸಂಪೂರ್ಣ ಆವಿಯಾಗಿ ಹೋಗುವವರೆಗೆ ಅದನ್ನು ಕಾಯಿಸುವುದು ಒಂದು ವಿಧಾನ. ಈ ವಿಧಾನದಿಂದ ಹಾಲು ಲಘುವಾಗಿ, ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ನೀರನ್ನು ಹಾಕದೆ ಕಾಯಿಸಿದ ಹಾಲು ಜೀರ್ಣಕ್ಕೆ ಜಡ. ಅಂತೆಯೇ, ಅತಿಯಾಗಿ ಕಾಯಿಸಿದ ಹಾಲು ಅಥವಾ ಬಹಳಷ್ಟು ಸಮಯ ಚಿಕ್ಕ ಉರಿಯಲ್ಲಿ ಕಾಯಿಸಿದ ಹಾಲು ಪಚನಕ್ಕೆ ಜಡ ಮತ್ತು ದೇಹವೃದ್ಧಿಕರ.

ಹಾಲನ್ನು ಕುಡಿದರೆ ಹಲವರಲ್ಲಿ ಹೊಟ್ಟೆ ನೋವು, ಹೊಟ್ಟೆ ಉಬ್ಬರದಂಥ ತೊಂದರೆಗಳು ಕಾಣಿಸಿ ಕೊಳ್ಳುತ್ತವೆ. ಹಾಲನ್ನು ಕುಡಿದ ತಕ್ಷಣವೇ ಮಲಪ್ರವೃತ್ತಿಯಾಗುವುದು. ತೆಳ್ಳಗಿನ ಬೇಧಿಯಾಗುವ ಸಂಭವವೂ ಹೆಚ್ಚುತ್ತದೆ. ಹಾಲನ್ನು ಸೇವಿಸಿದರೆ ಕೆಲವರಿಗೆ ಅತಿಯಾದ ತೇಗು, ಚರ್ಮದ ಮೇಲೆ ಗಂಧೆಗಳು, ಮೈ ಊದಿಕೊಂಡಂತೆ ಆಗುವುದು, ಮೈ ಭಾರ, ನೆಗಡಿ- ಈ ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತವೆ. ಇಂಥ ಸ್ಥಿತಿಗಳಲ್ಲಿ ಹಾಲನ್ನೇ ತ್ಯಜಿಸುವ ಬದಲು ಹಾಲನ್ನು ಬಳಸುವ ವಿಧಾನವನ್ನು ಸರಿಪಡಿಸಿಕೊಳ್ಳುವುದರಿಂದ ಈ ಸಮಸ್ಯೆಗಳು ಬಹಳಷ್ಟು ಕಡಿಮೆಯಾಗುತ್ತವೆ.

ಇಂಥವರು, ಹಾಲಿಗೆ ಅರ್ಧ ಅಥವಾ ಮುಕ್ಕಾಲು ಭಾಗ ನೀರು ಸೇರಿಸಿ ಕುದಿಸಿ, ಬಿಸಿ ಇರುವಾಗಲೇ, ಆಹಾರದ ಜತೆಗೆ ಸೇವಿಸುವುದು ಒಳ್ಳೆಯದು. ಹಸಿಯಾದ ಹಾಲನ್ನು ಅಥವಾ ಹಲವಾರು ದಿನ ಫ್ರಿಜ್‌ನಲ್ಲಿ ಶೇಖರಿಸಿಟ್ಟಿದ್ದ ಹಾಲನ್ನು ಸೇವಿಸಿದರೆ ತೊಂದರೆ ಖಚಿತ. ಅಂತೆಯೇ ಹಾಲಿಗೆ ಸ್ವಲ್ಪ ಶುಂಠಿ ಪುಡಿ/ಜೀರಿಗೆ/ಧನಿಯಾ/ಏಲಕ್ಕಿ ಹಾಕಿ ಕಾಯಿಸಿ ಕುಡಿಯುವುದರಿಂದ ಜೀರ್ಣ ಮಾಡಿ ಕೊಳ್ಳಲು ಸುಲಭವಾಗುತ್ತದೆ.

ಈ ರೀತಿಯ ಸಂಸ್ಕಾರ ನೀಡಿದ ಹಾಲು ಹೆಚ್ಚು ತೊಂದರೆ ತರದು. ಹಾಲಿನ ಜತೆ ಕೆಲವು ಪದಾರ್ಥ ಗಳನ್ನು ಬಳಸಬಾರದು ಎಂಬ ನಿಷೇಧವನ್ನು ಆಯುರ್ವೇದ ಶಾಸ್ತ್ರ ಹೇಳುತ್ತದೆ. ಅವೆಂದರೆ: ಸಾಮಾನ್ಯವಾಗಿ ಎಲ್ಲಾ ಬಗೆಯ ಸಿರಿಧಾನ್ಯ, ಮೊಳಕೆ ಒಡೆದ ಕಾಳುಗಳು, ಬಳ್ಳಿ ತರಕಾರಿಗಳು (ಕುಂಬಳಕಾಯಿ, ಸೌತೆಕಾಯಿ, ಬಣ್ಣದ ಸೌತೆಕಾಯಿ), ಅಣಬೆಗಳು, ಒಣ ಸೊಪ್ಪು, ಬಿದಿರಿನ ಚಿಗುರು ಇವುಗಳ ಜತೆ ಹಾಲನ್ನು ಸೇವಿಸಬಾರದು.

ಎಲ್ಲಾ ಬಗೆಯ ಹುಳಿ ಹಣ್ಣುಗಳ ಜತೆಯೂ ಹಾಲು ಹೊಂದದ ಆಹಾರ. ಉದಾಹರಣೆಗೆ ಪಚ್ಚ ಬಾಳೆಹಣ್ಣು, ಸ್ಟ್ರಾಬೆರಿ, ಮಾವಿನ ಹಣ್ಣು, ಮೋಸಂಬಿ, ಕಿತ್ತಳೆ, ಕಿವಿ, ಲಿಚಿ ಹೀಗೆ ಹುಳಿಯಿರುವ ಹಣ್ಣುಗಳನ್ನು ಹಾಲಿನೊಂದಿಗೆ ಮಿಲ್ಕ್ ಶೇಕ್/ಐಸ್ ಕ್ರೀಮ್/ಫ್ರೂಟ್ ಸಲಾಡ್ ಗಳನ್ನು ತಯಾರಿಸಿ ಸೇವಿಸುವುದು ಸೂಕ್ತವಲ್ಲ.‌

ಅಂತೆಯೇ, ಎಲ್ಲ ಬಗೆಯ ಮೀನು, ಎಮ್ಮೆ ಮಾಂಸ, ಹಂದಿಮಾಂಸ, ಕುರಿಯ ಮಾಂಸದೊಂದಿಗೆ ಹಾಲು ಹೊಂದುವುದಿಲ್ಲ. ಸಾಮಾನ್ಯವಾಗಿ ಹುಳಿಯಾದ ಮಜ್ಜಿಗೆ/ ಮೊಸರಿನೊಂದಿಗೆ ಹಾಲು ಸೇರಿಸಿ ತಿನ್ನುವ ಅಭ್ಯಾಸವನ್ನು ಕಾಣಬಹುದು. ಆದರೆ ಈ ಸಂಯೋಗವು ಅತ್ಯಂತ ಅನಾರೋಗ್ಯ ಕರ.

ಹಾಲಿನೊಂದಿಗೆ ಹುಳಿ, ಉಪ್ಪು, ಕ್ಷಾರೀಯ ಪಾನೀಯಗಳನ್ನು (ಕಾರ್ಬೊನೇಟೆಡ್ ಡ್ರಿಂಕ್ಸ್)‌ ಸೇರಿಸಿ ಸೇವಿಸುವುದು ಅನಾರೋಗ್ಯಕ್ಕೆ ಮೂಲ. ಜತೆಗೆ, ಎಲ್ಲಾ ಬಗೆಯ ಮದ್ಯಗಳೂ ಹಾಲಿನ ಜತೆಗೆ ನಿಷಿದ್ಧ. ಸ್ನೇಹಿತರೇ, ಕತೆಯ ಸಾರಾಂಶ ಇಷ್ಟೇ- ಹಾಲನ್ನು ಬಳಸುವ ಮುನ್ನ, ಬಳಸುವ ವ್ಯಕ್ತಿ ತನ್ನ ಜೀರ್ಣಶಕ್ತಿಯನ್ನು ಸರಿಪಡಿಸಿಕೊಂಡು, ಬಳಸುವ ಹಾಲನ್ನು ಉತ್ತಮ ನೈಸರ್ಗಿಕವಾದ ಮೂಲ ದಿಂದ ಸಂಗ್ರಹಿಸಿ, ಶಾಸ್ತ್ರೋಕ್ತವಾಗಿ ಕಾಯಿಸಿ, ಉತ್ತಮ ದ್ರವ್ಯಗಳಿಂದ ಸಂಸ್ಕರಿಸಿ, ಉತ್ತಮ ಪದಾರ್ಥಗಳೊಂದಿಗೆ ಸಂಯೋಜಿಸಿ, ಹಸಿವೆಯನ್ನು ಅರಿತು ಸೇವಿಸಿದರೆ ಹಾಲು ಅಮೃತವಾಗಿ, ದೇಹ ಮನಸ್ಸುಗಳನ್ನು ಪೋಷಿಸಿ, ನಮಗೆ ದೀರ್ಘಾಯುಷ್ಯವನ್ನು ಧಾರೆಯೆರೆಯುವುದು ನಿಸ್ಸಂಶಯ- ಇದು ಆರ್ಷವಾಣಿ!