ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaaji Column: ಭಾರತೀಯ ದರ್ಶನದ ವಾದಿ ಮತ್ತು ಪ್ರತಿವಾದಿ

“ಹಗಲಿನಲ್ಲಿ ನೀನು ಯಾವ ಬೆಳಕಿನ ಸಹಾಯದಿಂದ ನೋಡುವೆ?" ಎಂದರೆ ಶಿಷ್ಯ, “ಹಗಲಿನಲ್ಲಿ ಸೂರ್ಯನ ಸಹಾಯದಿಂದ" ಎನ್ನುತ್ತಾನೆ. ಮುಂದಿನ ಪ್ರಶ್ನೆ “ರಾತ್ರಿ ಹೇಗೆ ನೋಡುವೆ?". ಉತ್ತರ- “ದೀಪಗಳ ಮುಖಾಂತರ ನೋಡುವೆ". ಗುರು ಕೇಳುತ್ತಾನೆ “ಈ ಸೂರ್ಯ ಮತ್ತು ದೀಪಗಳನ್ನು ನೋಡುವ ಬೆಳಕು ಯಾವುದದು?". ಶಿಷ್ಯನ ಉತ್ತರ- “ನನ್ನ ಕಣ್ಣಿನಿಂದ ನಾನು ಅದನ್ನು ನೋಡು ತ್ತೇನೆ".

ಭಾರತೀಯ ದರ್ಶನದ ವಾದಿ ಮತ್ತು ಪ್ರತಿವಾದಿ

Profile Ashok Nayak May 2, 2025 8:10 AM

ಶಂಕರ ಸ್ಮರಣೆ

ನಾರಾಯಣ ಯಾಜಿ

ಭಾರತೀಯ ದರ್ಶನ ಶಾಸ್ತ್ರದಲ್ಲಿ ಬರುವ ಮುಖ್ಯವಾದ ಹೆಸರುಗಳು: ಬುದ್ಧ ಮತ್ತು ಶಂಕರ. ಬುದ್ಧನ ಶೂನ್ಯವಾದ ಮತ್ತು ಶಂಕರರ ಮಾಯಾವಾದ ಎರಡೂ ಒಂದೇ ಎಂದು ಕಾಣಿಸುತ್ತದೆ, ವಿಮರ್ಶಿಸ ಹೊರಟಾಗ ಈ ಎರಡರಲ್ಲಿಯೂ ಭಿನ್ನತೆಯೂ ಅಷ್ಟೇ ತೀವ್ರವಾಗಿ ಎದುರಾಗುತ್ತದೆ. ಬುದ್ಧನಲ್ಲಿಗೆ ಬರುವ ವಚ್ಚಗೋಟ್ಟನೆನ್ನುವ ಬ್ರಾಹ್ಮಣ “ಆತ್ಮ ಇದೆಯೇ?" ಎಂದು ಪ್ರಶ್ನಿಸಿದಾಗ ಆತ ಮೌನ ವಾಗುತ್ತಾನೆ.

“ಆತ್ಮ ಇಲ್ಲವೋ?" ಎನ್ನುವ ಪ್ರಶ್ನೆಗೂ ಮೌನವೇ ಆತನ ಉತ್ತರವಾಗುತ್ತದೆ. ನಂತರದಲ್ಲಿ ಆತನ ಶಿಷ್ಯ ಆನಂದ “ಎರಡೂ ಪ್ರಶ್ನೆಗೆ ಯಾವ ಉತ್ತರವನ್ನೂ ಕೊಡದೆ ಮೌನವಾಗಿದ್ದುದರ ಕಾರಣ ವೇನು?" ಎಂದು ಕೇಳಿದರೆ “ನಾನೇನಾದರೂ ಆತ್ಮವಿದೆ ಎಂದು ಸಾರಿದ್ದರೆ ಅನಿತ್ಯಕ್ಕೇ ನಿತ್ಯವೆಂದು ಆತನ ಶಿಷ್ಯರು ಪರಿಗಣಿಸಬಹುದು, ಇಲ್ಲವೆಂದರೆ ಉಚ್ಛೇದವಾದ (ವಿನಾಶವಾದ)ವನ್ನು ಉಪದೇಶಿ ಸುವ ದಾರ್ಶನಿಕರು ಹೇಳಿದ್ದು ಸತ್ಯವೆಂದು ಅವರು ನಂಬುತ್ತಾರೆ" ಎಂದುತ್ತರಿಸಿದ.

ಇದರ ಅರ್ಥವಿಷ್ಟೇ: ಬುದ್ಧ ಅಸ್ತಿತ್ವವಾದಿಯಾಗಿದ್ದ. ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ" ಎಂದು ಉಪದೇಶವನ್ನು ಮಾಡಿದ್ದ. ಈ ‘ಬೆಳಕಾಗಿರಿ’ ಎನ್ನುವಾಗ ಶಂಕರಾಚಾರ್ಯರೂ ಇದನ್ನು ವಿವರಿಸಿದ ‘ಏಕೀ ಶ್ಲೋಕ’ವೆಂದು ಪ್ರಸಿದ್ಧವಾದ ವಿವರವೂ ಬರುತ್ತದೆ- ‘ಕಿಂ ಜ್ಯೋತಿಸ್ತವ ಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ | ಸ್ಯಾದೇವಂ ರವಿದೀಪದರ್ಶನವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ | ಚಕ್ಷುಸ್ತಸ್ಯ ನಿಮೀಲನಾದಿಸಮಯೇ ಕಿಂ ಧೀರ್ಧಿಯೋ ದರ್ಶನೇ | ಕಿಂ ತತ್ರಾಹಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ ||’- ಆತ್ಮಜ್ಞಾನ ಬಯಸಿ ಬಂದ ಶಿಷ್ಯನಿಗೆ ಗುರು ಕೇಳುವ ಪ್ರಶ್ನೆಯನ್ನು ಒಳಗೊಂಡ ತುಂಬಾ ಸುಂದರವಾದ ಶ್ಲೋಕ ಇದು.

“ಹಗಲಿನಲ್ಲಿ ನೀನು ಯಾವ ಬೆಳಕಿನ ಸಹಾಯದಿಂದ ನೋಡುವೆ?" ಎಂದರೆ ಶಿಷ್ಯ, “ಹಗಲಿನಲ್ಲಿ ಸೂರ್ಯನ ಸಹಾಯದಿಂದ" ಎನ್ನುತ್ತಾನೆ. ಮುಂದಿನ ಪ್ರಶ್ನೆ “ರಾತ್ರಿ ಹೇಗೆ ನೋಡುವೆ?". ಉತ್ತರ- “ದೀಪಗಳ ಮುಖಾಂತರ ನೋಡುವೆ". ಗುರು ಕೇಳುತ್ತಾನೆ “ಈ ಸೂರ್ಯ ಮತ್ತು ದೀಪಗಳನ್ನು ನೋಡುವ ಬೆಳಕು ಯಾವುದದು?". ಶಿಷ್ಯನ ಉತ್ತರ- “ನನ್ನ ಕಣ್ಣಿನಿಂದ ನಾನು ಅದನ್ನು ನೋಡು ತ್ತೇನೆ".

ಆಗ ಗುರು, “ನಿನ್ನ ಕಣ್ಣುಮುಚ್ಚಿಕೊಂಡಾಗ ನೀನು ಹೇಗೆ ಗುರುತಿಸುವೆ?" ಎಂದು ಕೇಳುತ್ತಾನೆ. “ಆಗ ನನ್ನ ಬುದ್ಧಿಯೇ ನನಗೆ ಬೆಳಕು ಗುರುವೇ" ಎನ್ನುತ್ತಾನೆ ಶಿಷ್ಯ. “ಸರಿ, ಆ ಬುದ್ಧಿಯನ್ನು ನೋಡುವ ಬೆಳಕು ಯಾವುದು?" ಎಂಬ ಪ್ರಶ್ನೆ ಹೊಮ್ಮಿದಾಗ, ಶಿಷ್ಯ ಹೇಳುವ ಮಾತು “ನಾನೇ ಆ ಬುದ್ಧಿಯನ್ನು ನೋಡುವ ಬೆಳಕು".

ಗುರು ನಗುತ್ತಾ ಶಿಷ್ಯನಿಗೆ ಹೇಳುವುದು- “ನೋಡಿದೆಯಾ, ನೀನೇ ಬೆಳಕಿಗೂ ಬೆಳಕು, ಪರಂಜ್ಯೋತಿ". ಶಿಷ್ಯನಿಗೆ ತಾನು ಯಾರೆನ್ನುವುದು ಅರಿವಾಗಿ “ನಿಜ ಗುರುಗಳೇ, ನಾನೇ ಬೆಳಕು, ಎಲ್ಲವನ್ನು ಅರಿಯು ವವನು ನಾನೇ" ಎನ್ನುತ್ತಾನೆ. ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ಎಸ್.ರಾಧಾಕೃಷ್ಣನ್ ಅವರು ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದ ಕುರಿತು ಹೇಳಿದ ಪ್ರಸಿದ್ಧ ಮಾತು ಹೀಗಿದೆ: “ಶಂಕರರ ತತ್ವಶಾಸದಲ್ಲಿ ಈಶ್ವರನೆನ್ನುವ ಸತ್ವವು ಸ್ವಯಂವೇದ್ಯ ಪ್ರಮಾಣವಲ್ಲ, ತಾರ್ಕಿಕವಾದ ಸತ್ಯವೂ ಅಲ್ಲ, ಬದಲಾಗಿ ಪ್ರಾಯೋಗಿಕವಾಗಿ ಉಪಯುಕ್ತವಾದ ಒಂದು ಅವಶ್ಯಕ ಲಕ್ಷಣವಾಗಿದೆ".

ಈ ಕಾರಣಕ್ಕಾಗಿಯೇ ಭಾರತೀಯ ತತ್ವಶಾಸ್ತ್ರವನ್ನು ಅಭ್ಯಸಿಸುವಾಗ ಎಲ್ಲ ಸಿದ್ಧಾಂತಗಳೂ, ವೈದಿಕ ಮತ್ತು ಅವೈದಿಕ ದರ್ಶನಗಳೂ ಉದಾಹರಿಸುವುದು ಮತ್ತು ಖಂಡಿಸುವುದು ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತವಾದವನ್ನು. ವೇದಕಾಲದ ಋಷಿಗಳಿಂದ ತೊಡಗಿ ಇತ್ತೀಚಿನ ಜಿಡ್ಡು ಕೃಷ್ಣಮೂರ್ತಿಯವರನ್ನೂ ಸೇರಿಸಿ, ಯಾವುದೇ ವಿಚಾರಧಾರೆಗಳನ್ನು ಅಭ್ಯಸಿಸುವಾಗ ಅಥವಾ ವಿರೋಽಸುವಾಗ ಅದಕ್ಕೊಂದು ಮಾಪಕವಾಗಿ ಶಂಕರಾಚಾರ್ಯರಿಂದಾಗಿ ಬೆಳಕಿಗೆ ಬಂದ ಅದ್ವೈತ ಸಿದ್ಧಾಂತವನ್ನು ಉದಾಹರಿಸುವುದನ್ನು ಗಮನಿಸಬಹುದು.

ಈ ಸಿದ್ಧಾಂತದ ಹರಹು ಎಷ್ಟರಮಟ್ಟಿಗೆ ವ್ಯಾಪಕವಾಗಿದೆಯೆಂದರೆ ಭೌತಶಾಸ್ತ್ರದ ಕ್ವಾಂಟಂ ಥಿಯರಿ ಯನ್ನು ಮತ್ತು ಪಾಶ್ಚಾತ್ಯ ಚಿಂತಕರುಗಳನ್ನು ಶಾಂಕರ ಸಿದ್ಧಾಂತದೊಟ್ಟಿಗೆ ತೌಲನಿಕ ಅಧ್ಯಯನ ವನ್ನೂ ಮಾಡುತ್ತಾರೆ. ಶಂಕರರ ವಿಚಾರಧಾರೆಗಳು ವ್ಯಾಸರಿಂದ ತೊಡಗಿ ಆಧುನಿಕರು ಎನಿಸಿ ಕೊಳ್ಳುವ ಇಂದಿನ ಚಿಂತಕರಿಂದ ಈ ಪರ ಮತ್ತು ವಿರೋಧಗಳಾಗಿ ವಿಮರ್ಶಿಸಲ್ಪಟ್ಟಿವೆ.

ಈ ರೀತಿ ವಿಮರ್ಶೆಗೊಳಗಾದ ಮತ್ತೊಂದು ವಿಚಾರಧಾರೆ ಜಗತ್ತಿನಲ್ಲಿ ಇದ್ದರೆ ಅದು ಭಗವದ್ಗೀತೆ ಮಾತ್ರ. ಆದರೆ ಭಗವದ್ಗೀತೆ ಆರಾಧನೆಯಾಗಿ ಬಳಸಲ್ಪಟ್ಟಿರುವುದರಿಂದ ಅದನ್ನು ವಿಮರ್ಶೆ ಗೊಳಪಡಿಸುವುದಕ್ಕಿಂತ ಪ್ರಮಾಣೀಕೃತ ಗ್ರಂಥವೆಂದು ಒಪ್ಪಿದವರೇ ಹೆಚ್ಚು. ಶಾಂಕರರ ತತ್ವದಷ್ಟೇ ಅವರ ಜೀವನ ಚರಿತ್ರೆ ಸಹ ಅನೇಕ ಊಹಾತ್ಮಕ ವಿಷಯಗಳಿಂದ ತುಂಬಿದೆ.

ಅವರ ಬಾಲ್ಯ ಮತ್ತು ಸನ್ಯಾಸಾಶ್ರಮಕ್ಕೆ ಸಂಬಂಧಿಸಿದಂತೆ ‘ಶಂಕರವಿಜಯ’ವೆನ್ನುವ ಸುಮಾರು 22ಕ್ಕೂ ಮಿಕ್ಕಿದ ಗ್ರಂಥಗಳಿವೆ. ಅದರಲ್ಲಿ ಮಾಧವೀಯ ಶಂಕರ ವಿಜಯ, ವ್ಯಾಸಾಚಲೀಯ, ಚಿದ್ವಿಲಾಸೀಯ ಶಂಕರವಿಜಯ ವಿಲಾಸ, ಅನಂತಾನಂದಗಿರೀಯಗಳು ಪ್ರಸಿದ್ಧವಾದವುಗಳು. ಕೂರ್ಮಪುರಾಣ ಸಹಿತವಾಗಿ ಅನೇಕ ಪುರಾಣಗಳಲ್ಲಿ ಶಂಕರವಿಜಯದ ಪ್ರಸ್ತಾಪವಿದೆ.

ಶಂಕರಾಚಾರ್ಯರ ತಂದೆ ಶಿವಗುರು ಮತ್ತು ತಾಯಿ ಆರ್ಯಾಂಬೆ. ಕೇರಳದ ಕಾಲಟಿಯಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ವೇದವೇದಾಂಗಗಳನ್ನು ಅಭ್ಯಸಿಸಿ ಮಹಾ ಪ್ರತಿಭಾಶಾಲಿಯಾಗಿದ್ದರಂತೆ. ಈ ವ್ಯಕ್ತಿಯ ಬದುಕಿನ ಮೂಲವಿರುವುದು ಅವರ ಚಿಂತನಾಕ್ರಮಗಳು ಮತ್ತು ಅವರು ರಚಿಸಿದ ಕೃತಿಗಳಿಂದ. ಶಂಕರಾಚಾರ್ಯರ ಬದುಕಿನ ಮಹತ್ವದ ಘಟನೆಗಳಿಗಿಂತ ಅವರ ತತ್ವಚಿಂತನೆಗಳ ಅಧ್ಯಯನದ ಮೂಲಕವೇ ಅವರನ್ನು ಅವಲೋಕಿಸುವುದು ಯುಕ್ತ. ಈ ಕಾರಣದಿಂದಲೇ ಶಂಕರರ ಜನ್ಮದಿನವನ್ನು ‘ರಾಷ್ಟ್ರೀಯ ತತ್ವಜ್ಞಾನಿಗಳ ದಿನ’ವನ್ನಾಗಿ ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.

ಮಾಯಾವಾದವೆಂದರೇನು?: ಶಂಕರ ದರ್ಶನದೊಟ್ಟಿಗೆ ಇಲ್ಲಿ ಭಾರತೀಯ ಷಡ್ದರ್ಶನಗಳ ಕುರಿತೂ ಪ್ರಾಥಮಿಕ ಪರಿಚಯ ತುಂಬಾ ಮುಖ್ಯವಾಗುತ್ತದೆ. ದರ್ಶನವೆನ್ನುವುದಕ್ಕೆ ಶಂಕರಾಚಾರ್ಯರು ಮೂರು ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ. ಒಂದು ಜಗತ್ತು, ಮತ್ತೊಂದು ಜೀವ, ಮೂರನೆಯದು ಜಗತ್ಕಾರಣ. ಯಾವುದೇ ದರ್ಶನದ ಚಿಂತನೆ ಈ ಮೂರು ವಿಚಾರಗಳ ಕುರಿತು ಆಗಬೇಕಾಗುತ್ತದೆ. “ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ" ಎನ್ನುವ ಅವರ ಪ್ರಸಿದ್ಧ ವಾಕ್ಯದ ಕುರಿತು ನಿರಂತರವಾಗಿ ಚರ್ಚೆಗಳಾಗುತ್ತಲೇ ಇವೆ.

ಇಲ್ಲಿ ಜಗತ್ತನ್ನು ಮಿಥ್ಯೆ ಎಂದರೆ ಇಲ್ಲದ್ದು ಎಂಬ ಅರ್ಥದಲ್ಲಿ ಹೇಳಿರುವುದಲ್ಲ. ಸತ್ಯದಲ್ಲಿ ವ್ಯಾವ ಹಾರಿಕ ಸತ್ಯ ಮತ್ತು ಪ್ರಾತಿಭಾಷಿಕ ಸತ್ಯಗಳೆಂಬ ಎರಡು ವಿಧಗಳಿವೆ. ಇವೆರಡಕ್ಕೂ ಕಾರ್ಯ ಮತ್ತು ಕಾರಣಗಳ ಸಂಬಂಧಗಳಿವೆ. ‘ಮಿಥ್ಯಾ’ ಎಂದರೆ ಕಾರ್ಯ, ‘ಸತ್ಯ’ವೆನ್ನುವದು ಕಾರಣ. ನಾವು ಹಾಕಿ ಕೊಳ್ಳುವ ಬಟ್ಟೆ ಮಿಥ್ಯಾ, ಅದಕ್ಕೆ ಕಾರಣವಾದ ನೂಲು ಸತ್ಯ.

ತೊಡುವ ಆಭರಣ ಮಿಥ್ಯ, ಅದರೊಳಗಿನ ಬಂಗಾರ ಸತ್ಯ. ನೂಲನ್ನು ವಿಭಜಿಸಿದಾಗ ನೂಲು ಮಿಥ್ಯ, ಹತ್ತಿಯ ಗಿಡ ಸತ್ಯ. ಇದನ್ನು ಮತ್ತೂ ವಿಭಜಿಸಿದಾಗ ಗಿಡ ಮಿಥ್ಯವಾಗಿ ಬೀಜ ಸತ್ಯ, ಬೀಜ ವನ್ನು ವಿಭಾಜಿಸುತ್ತಾ ಇದಕ್ಕೆ ಕಾರಣವಾದ ಭೂಮಿ, ಭೂಮಿಗೆ ಕಾರಣವಾದದ್ದು ಪಂಚಭೂತಗಳು, ಪಂಚಭೂತಗಳನ್ನು ವಿಭಜಿಸಿದರೆ ಅದು ಆತ್ಮನಿಗೆ ಹೋಗುತ್ತದೆ.

ಆತ್ಮನು ಬಂದzಲ್ಲಿಂದ ಎಂದು ಮೂಲವನ್ನು ಹುಡುಕುತ್ತಾ ಹೋದಾಗ ಅಲ್ಲಿ ಬರುವ “ಯತೋ ವಾಚೇ ವಿವರ್ತಂತೆ ಅಪ್ರಾಪ್ಯ ಮನಸಾ ಸಹ" ಎನ್ನುವಲ್ಲಿ ಬಂದು ನಿಲ್ಲುತ್ತದೆ. ಅದನ್ನು ಮಾತಿ ನಿಂದಾಗಲಿ, ಮನಸ್ಸಿನಿಂದಾಗಲೀ ವಿವರಿಸಲು ಸಾಧ್ಯವಿಲ್ಲ. ಅದೇ ಬ್ರಹ್ಮವು. ಅದು ಇದ್ದೇ ಇದೆ.

ಇದನ್ನು ಪಾರಮಾರ್ಥಿಕ ಸತ್ಯವೆನ್ನುತ್ತಾರೆ. ಜಗತ್ತು ಬ್ರಹ್ಮದಂತೆ ಪಾರಮಾರ್ಥಿಕ ಸತ್ಯವಲ್ಲ. ಅಂದರೆ ಬದಲಾಗದ ಸತ್ಯವಲ್ಲ. ಸ್ವಪ್ನ ಮತ್ತು ವಾಸ್ತವ ಜಗತ್ತನ್ನು ಮಾಯಾವಾದಕ್ಕೆ ಉದಾಹರಣೆಯಾಗಿ ವಿವರಿಸಬಹುದು. ಸ್ವಪ್ನದಲ್ಲಿ ನಾವು ನೋವು ನಲಿವು ಮುಂತಾದ ಭಾವವನ್ನು ಅನುಭವಿಸುತ್ತೇವೆ.

ನಮಗೆ ಬೇಕಾದವರ ಅಗಲುವಿಕೆಯ ನೋವನ್ನು ಅನುಭವಿಸಿ ನಮ್ಮ ಮನಸ್ಸು ದುಃಖದಿಂದ ಗೋಳಿಡುತ್ತದೆ. ಎಚ್ಚರಾದಾಗಲೂ ಈ ಮಂಕು ನಮ್ಮನ್ನು ಕೆಲ ಸಮಯದವರೆಗೆ ಕಾಡುತ್ತಿರುತ್ತದೆ. ಸ್ವಲ್ಪ ಸಮಯ ಕಳೆದಮೇಲೆ ಆ ಭಾವ ನಿಜವಲ್ಲ ಎನ್ನುವುದು ಅನುಭವಕ್ಕೆ ಬರುತ್ತದೆ. ಅವಸರ ದಲ್ಲಿ ಇರುವಾಗ ಎದುರಲ್ಲಿ ಅಸ್ತವ್ಯಸ್ತವಾಗಿ ಬಿದ್ದಿರುವ ಹಗ್ಗವೇ ಹಾವಾಗಿ ಕಾಣಿಸುವುದುಂಟು.

ಅರಿವು ಎಂಬುದು ಬಂದಮೇಲೆ ಸ್ವಪ್ನದಲ್ಲಿ ಕಾಡಿದ ದುಃಖ, ಹಗ್ಗ ಹಾವಾಗಿ ಬೆದರಿಸಿದ್ದು ಎಲ್ಲ ಮಿಥ್ಯೆ. ಆದರೆ ಅದು ಮಿಥ್ಯೆ ಎಂದು ಗೊತ್ತಾಗುವವರೆಗೆ ನಮಗೆ ಸತ್ಯವೆಂದೇ ತೋರುತ್ತದೆ. ಇದನ್ನು ಪ್ರಾತಿಭಾಷಿಕ ಸತ್ಯವೆನ್ನುತ್ತಾರೆ. ಆದರೆ ಬ್ರಹ್ಮವೆನ್ನುವುದು ಇಲ್ಲವೆಂದು ಆಗುವುದೇ ಇಲ್ಲ. ಅದು ನಿನ್ನೆ, ಇಂದು, ನಾಳೆ ಎಲ್ಲಾ ಕಾಲಗಳಲ್ಲೂ ಏಕರೂಪವಾಗಿ ಇರುವಂಥದ್ದು.

ಇದೇ ಪಾರಮಾರ್ಥಿಕ ಸತ್ಯ. ಉಳಿದುದೆಲ್ಲವೂ ಮಾಯೆ. ಹಾಗಾಗಿ ಇಲ್ಲಿ ಮಾಯೆಯನ್ನು ‘ತತ್-ತ್ವ’ ಎನ್ನುವ ಶಬ್ದ ಆಯ್ದುಕೊಂಡು ಮುಂದುವರಿಯುತ್ತಾರೆ. ಇನ್ನೊಂದು ಉದಾಹರಣೆ ಸೂರ್ಯ. ಆತನನ್ನು ಜಗತ್ತಿನ ಸಾಕ್ಷಿ ಎನ್ನುತ್ತೇವೆ. ಸೂರ್ಯನು ಮುಂಜಾನೆ ಮತ್ತು ಸಾಯಂಕಾಲ ಕಿತ್ತಳೆ ಬಣ್ಣದಿಂದ ಮನಸ್ಸನ್ನು ಅಪಹರಿಸುತ್ತಾನೆ. ಮಧ್ಯಾಹ್ನದ ಬಿಸಿಲಾಗಿ ತಾಪವನ್ನುಂಟುಮಾಡುತ್ತಾನೆ.

ಕ್ಷಣಕ್ಕೂ ಬದಲಾಗುವ ಈ ಸೂರ್ಯ ವ್ಯಾವಹಾರಿಕ ಸತ್ಯ; ಅದನ್ನೇ ಮಿಥ್ಯೆ ಎಂದು ಆಚಾರ್ಯರು ಹೇಳಿದ್ದು. ಮಿಥ್ಯೆ ಎಂದರೆ ಅದು ಮೊಲದ ಕೋಡಿನಂತೆ, ಬಂಜೆಯ ಮಗನಂತೆ ಅಸತ್ತೂ ಅಲ್ಲ. ಬ್ರಹ್ಮವೆಂದರೇನು?: ಶಂಕರರ “ಸತ್ಯವೇ ಬ್ರಹ್ಮ, ಜ್ಞಾನವೇ ಬ್ರಹ್ಮ, ಅನಂತವೇ ಬ್ರಹ್ಮ" ಎನ್ನುವ ಮಾತನ್ನು ಒಪ್ಪದೇ “ನಿರ್ಗುಣ ಬ್ರಹ್ಮನಿಗೆ ಈ ಗುಣಗಳನ್ನೂ ಹೇಗೆ ಆರೋಪಿಸುತ್ತೀರಿ.

ಹಾಗಾಗಿ ಬ್ರಹ್ಮ ಸಗುಣ" ಎನ್ನುವ ಟೀಕೆಗಳಿವೆ. ವಸ್ತು ಇದೆ ಎಂದಾದರೆ ಅದಕ್ಕೊಂದು ಲಕ್ಷಣವಿರ ಬೇಕಾಗುತ್ತದೆ. ಶಂಕರರು ಇಲ್ಲಿ ‘ಸ್ವರೂಪ ಲಕ್ಷಣ’ ಮತ್ತು ‘ತಟಸ್ಥ ಲಕ್ಷಣ’ವೆನ್ನುವ ಎರಡು ವಿಭಾಗ ವನ್ನು ಹೇಳುತ್ತಾರೆ. ಧ್ರುವ ನಕ್ಷತ್ರವೆಲ್ಲಿದೆ ಎಂದು ಕೇಳಿದರೆ “ಅದೋ ಆ ಗಿಡದ ತುದಿಯನ್ನು ನೋಡು ಅಲ್ಲಿದೆ" ಎಂದು ಎದುರು ಕಾಣುವ ಮರವನ್ನು ತೋರಿಸಿ ಪರಿಚಯಿಸುವುದುಂಟು. ಆ ಮರದ ತುದಿಯಿಂದ ಮೇಲೆ ನೋಡಿದರೆ ಧ್ರುವ ನಕ್ಷತ್ರವನ್ನು ಗುರುತಿಸಬಹುದಾಗಿದೆ.

ಧ್ರುವ ನಕ್ಷತ್ರ ಯಾವತ್ತೂ ಸ್ಥಿರ. ಮರದ ತುದಿಯಲ್ಲಿರುವುದು ಎನ್ನುವುದು ಧ್ರುವ ನಕ್ಷತ್ರದ ತಟಸ್ಥ ಲಕ್ಷಣ. ಬ್ರಹ್ಮವೂ ಹಾಗೇ, ಅದು ‘ಸತ್’ ಎಂದರೆ ಸದಾ ಇರುವುದು, ‘ಚಿತ್’ ಎಂದರೆ ನಿತ್ಯಜ್ಞಾನವೇ ಬ್ರಹ್ಮ ಮತ್ತು ಈ ಬ್ರಹ್ಮವೇ ಆನಂದ. ಹೀಗಾಗಿ ಸಚ್ಚಿದಾನಂದವೇ ಬ್ರಹ್ಮದ ಸ್ವರೂಪ ಲಕ್ಷಣ; ಜಗತ್ತಿನ ಸೃಷ್ಟಿ, ಸ್ಥಿತಿ, ಲಯಕರ್ತ ಎಂದರೆ ಅದು ತಟಸ್ಥ ಲಕ್ಷಣ. ಈ ಸಚ್ಚಿದಾನಂದ ಸ್ವರೂಪವನ್ನು ಶುದ್ಧ ಬ್ರಹ್ಮವೆಂತಲೂ ಮಾಯೆಯಿಂದ ಕೂಡಿದ ಬ್ರಹ್ಮನನ್ನು ಸಗುಣ ಬ್ರಹ್ಮನೆಂತಲೂ ಅಚಾರ್ಯರು ಸ್ಪಷ್ಟನೆ ನಿಡುತ್ತಾರೆ.

ಮಾಯೆಯೂ ಈಶ್ವರನಂತೆ ನಿತ್ಯವಾದುದು. ಮಾಯೆ ಮತ್ತು ಅವಿದ್ಯೆ ಬೇರೆ ಬೇರೆಯಾಗಿವೆ. ಮಾಯೆ ಈಶ್ವರನಲ್ಲಿದ್ದರೆ, ಅವಿದ್ಯೆ ಜೀವನಲ್ಲಿದೆ. ಮಾಯೆಯಿಂದಾದ ಜಗತ್ತಿನ ಮೂಲಕ ಜೀವರುಗಳು ತಮ್ಮ ಕರ್ಮಫಲವನ್ನು ಅನುಭವಿಸುತ್ತಾರೆ. ಜೀವನು ಬ್ರಹ್ಮನಿಗಿಂತಲೂ ಭಿನ್ನನಲ್ಲ, ಆತನೇ ಬ್ರಹ್ಮ, ಆ ಸ್ವರೂಪಮರೆಯಾಗಿರುವುದು ಅವಿದ್ಯೆಯಿಂದ. ಈ ಅವಿದ್ಯೆಯ ನಿವೃತ್ತಿಯೇ ಮೋಕ್ಷವಾಗಿದೆ.

(ಲೇಖಕರು ಸಾಹಿತಿ ಮತ್ತು ಚಿಂತಕರು)