ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Rohith Kumar H G Column: ಭಾವನೆಗಳು ಮತ್ತು ನಿರ್ಧಾರಗಳ ಮೂಲ ನಿಮ್ಮ ಕರುಳೋ ಅಥವಾ ಮಿದುಳೋ ?

ನಿಮ್ಮ ಸ್ನೇಹಿತರೂ, “ಈ ಹೂಡಿಕೆಯಿಂದ ನಾನೂ ಹೆಚ್ಚು ಲಾಭ ಮಾಡಿಕೊಂಡಿದ್ದೇನೆ, ನೀನು ನಿಸ್ಸಂ ದೇಹವಾಗಿ ಹೂಡಿಕೆ ಮಾಡಬಹುದು" ಎಂದು ನಿಮಗೆ ಹೇಳುತ್ತಾರೆ. ಹಣವನ್ನು ಹೂಡಿ ಲಾಭವನ್ನು ಎಣಿಸುವ ಆಸೆ ನಿಮಗೂ ಬರುತ್ತದೆ. ಆದರೆ, ಏನೋ ಸರಿಯಿಲ್ಲ ಎಂದು ನಿಮ್ಮ ಕರುಳು ಹೇಳುತ್ತದೆ. ನಿಮ್ಮ ದೇಹ ಮತ್ತು ಮನಸ್ಸಿಗೆ ಅದೇನೋ ಕಸಿವಿಸಿ, ತಳಮಳದ ಭಾವ.

ಭಾವನೆಗಳು ಮತ್ತು ನಿರ್ಧಾರಗಳ ಮೂಲ ನಿಮ್ಮ ಕರುಳೋ ಅಥವಾ ಮಿದುಳೋ ?

Ashok Nayak Ashok Nayak Aug 2, 2025 12:06 PM

ಭಾವ ವೈದ್ಯ

ಡಾ.ರೋಹಿತ್‌ ಕುಮಾರ್‌ ಎಚ್.ಜಿ

ನೀವು ಪ್ರತಿದಿನ ಕಚೇರಿಗೆ ಹೋಗುವಾಗ ಒಂದೇ ದಾರಿಯನ್ನು ಬಳಸಿ ಹೋಗುತ್ತಿರುತ್ತೀರಿ. ಅದೇನೋ ಅಂದು ನಿಮಗೆ ಬೇರೆ ದಾರಿಯಲ್ಲಿ ಹೋಗಬೇಕು ಅನ್ನಿಸುತ್ತದೆ. ಹಾಗೆಯೇ ನೀವು ದಾರಿ ಬದಲಿಸಿ ಪ್ರಯಾಣ ಪೂರ್ಣಗೊಳಿಸಿ, ಕಚೇರಿ ತಲುಪುತ್ತೀರಿ. ಆನಂತರ ನಿಮಗೆ, ನೀವು ಪ್ರತಿದಿನ ಬರುತ್ತಿದ್ದ ದಾರಿಯಲ್ಲಿ ಪ್ರತಿದಿನಕ್ಕಿಂತಲೂ ಹೆಚ್ಚು ಸಂಚಾರ ದಟ್ಟಣೆಯಿಂದ ಎಲ್ಲಾ ವಾಹನಗಳು ಒಂದು ಗಂಟೆಗೂ ಹೆಚ್ಚಿನ ಕಾಲ ನಿಂತ ನಿಂತಿದ್ದವು ಎಂಬುದು ಅದೇ ದಾರಿಯಲ್ಲಿ ನಿತ್ಯವೂ ಪ್ರಯಾಣಿಸುವ ನಿಮ್ಮ ಸಹೋದ್ಯೋಗಿಯೊಬ್ಬರಿಂದ ತಿಳಿಯುತ್ತದೆ.

ಹೀಗಾಗಬಹುದು ಎನ್ನುವ ಬಗ್ಗೆ ನಿಮಗೆ ಸ್ವಲ್ಪವೂ ಅರಿವಿಲ್ಲದಿದ್ದರೂ, ನಿಮ್ಮ ಅಂತಃಪ್ರಜ್ಞೆ ದಾರಿ ಬದಲಿಸುವ ನಿರ್ಧಾರಕ್ಕೆ ದೂಡಿರುತ್ತದೆ. ಅಬ್ಬಾ! ದಾರಿ ಬದಲಾಯಿಸಲು ಮನಸಿಗೆ ತೋಚಿದ್ದು ಒಳ್ಳೆಯದೇ ಆಯಿತು ಅಂತಂದುಕೊಳ್ಳುತ್ತೀರಿ. ನಿಮ್ಮ ಸ್ನೇಹಿತರೊಬ್ಬರು ಅವರಿಗೆ ಪರಿಚಯವಿದ್ದ ಆರ್ಥಿಕ ಸಲಹೆಗಾರರೊಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ಆ ಸಲಹೆಗಾರರು ನಿಮಗೆ ಕಡಿಮೆ ಅವಧಿಯ ಹೆಚ್ಚು ಲಾಭ ಬರುವ ಒಂದೊಳ್ಳೆಯ ಹೂಡಿಕೆಯ ಬಗ್ಗೆ ತಿಳಿಸುತ್ತಾರೆ.

ನಿಮ್ಮ ಸ್ನೇಹಿತರೂ, “ಈ ಹೂಡಿಕೆಯಿಂದ ನಾನೂ ಹೆಚ್ಚು ಲಾಭ ಮಾಡಿಕೊಂಡಿದ್ದೇನೆ, ನೀನು ನಿಸ್ಸಂದೇಹವಾಗಿ ಹೂಡಿಕೆ ಮಾಡಬಹುದು" ಎಂದು ನಿಮಗೆ ಹೇಳುತ್ತಾರೆ. ಹಣವನ್ನು ಹೂಡಿ ಲಾಭವನ್ನು ಎಣಿಸುವ ಆಸೆ ನಿಮಗೂ ಬರುತ್ತದೆ. ಆದರೆ, ಏನೋ ಸರಿಯಿಲ್ಲ ಎಂದು ನಿಮ್ಮ ಕರುಳು ಹೇಳುತ್ತದೆ. ನಿಮ್ಮ ದೇಹ ಮತ್ತು ಮನಸ್ಸಿಗೆ ಅದೇನೋ ಕಸಿವಿಸಿ, ತಳಮಳದ ಭಾವ.

‘ಮುಂದೆ ನೋಡೋಣ, ಸದ್ಯಕ್ಕೆ ಅವಸರ ಮಾಡುವುದು ಬೇಡ’ ಎಂದುಕೊಂಡು ಸುಮ್ಮನಾಗುತ್ತೀರಿ. ಅದಾದ ಕೆಲವೇ ತಿಂಗಳಲ್ಲಿ ಆ ಸಲಹೆಗಾರ ನಿಮ್ಮ ಸ್ನೇಹಿತನಿಗೆ ವಂಚಿಸಿರುವುದು ತಿಳಿಯುತ್ತದೆ. ನಿಮ್ಮ ಆ ಕರುಳ ಭಾವಕ್ಕೆ ಮನಸ ಧನ್ಯವಾದ ಹೇಳುತ್ತಾ, ನಿಟ್ಟುಸಿರಿಡುತ್ತೀರಿ.

ಈ ರೀತಿಯ ಸಂದರ್ಭಗಳು ನಮ್ಮ ಬದುಕಲ್ಲಿ ಹಲವು ಬಾರಿ ಆಗಿರುತ್ತವೆ. ಪ್ರತಿ ಬಾರಿ ಹೀಗಾದಾಗ “ನನ್ನ ‘ಗಟ್ ಫೀಲಿಂಗ್’ (ಕರುಳ ಭಾವ ಅಥವಾ ಅಂತಃಪ್ರe) ಇಂದ ಸಮಸ್ಯೆ ತಪ್ಪಿತು" ಎಂದು ನಮಗೆ ನಾವು ಅಥವಾ ಇತರರ ಮುಂದೆ ಹೇಳಿಕೊಂಡಿರುತ್ತೇವೆ. ಆದರೆ, ಈ ಭಾವನೆಗಳು ಮತ್ತು ಯೋಚನೆಗಳು ಹುಟ್ಟುವುದು ಮಿದುಳಿನಲ್ಲಿ ತಾನೇ? ಅದ್ಯಾಕೆ ಈ ಭಾವಕ್ಕೆ ಗಟ್ (ಕರುಳ) ಫೀಲಿಂಗ್ ಅನ್ನುತ್ತೇವೆ? “ಅವರ ಕಷ್ಟ ನೋಡಿ ನನ್ನ ಕರುಳು ಚುರ್ ಅಂತು" ಅಂತ ಹೇಳುವಾಗ ಆ ಸಂಕಟದ ಭಾವನೆ ಹುಟ್ಟಿದ್ದು ಮಿದುಳಿನ ಅಥವಾ ಕರುಳಿನ? ಆಹಾರ ಜೀರ್ಣಕ್ರಿಯೆಯಲ್ಲಿ ಸಹಾಯವಾಗೋ ಕರುಳಿಗೂ ಈ ಫೀಲಿಂಗ್‌ಗೂ ಎತ್ತಣಿಂದೆತ್ತ ಸಂಬಂಧ? ಇದನ್ನು ವಿವರಿಸಬೇಕು ಎಂದರೆ ಸ್ವಲ್ಪ ಹೆಚ್ಚೇ ಹಿಂದಕ್ಕೆ ಹೋಗಬೇಕಾಗುತ್ತದೆ.

ಇದನ್ನೂ ಓದಿ: Roopa Gururaj Column: ದೈವತ್ವದ ಅಭಾವವೇ ದೆವ್ವಗಳ ನೆಲೆ, ಬೆಳಕಿನ ಅಭಾವವೇ ಕತ್ತಲೆ

ದೇಹ ವರ್ಸಸ್ ಮಿದುಳು ಸಿದ್ಧಾಂತಗಳು 1880ರ ದಶಕದಲ್ಲಿ ವಿಲಿಯಂ ಜೇಮ್ಸ್ ಮತ್ತು ಕಾರ್ಲ್ ‌ ಲ್ಯಾಂಗ್ ಎಂಬ ಇಬ್ಬರು ವಿಜ್ಞಾನಿಗಳು, ಭಯ ಮತ್ತು ಕೋಪದ ಭಾವನೆ ಉಂಟಾಗುವಲ್ಲಿ ಮಿದುಳಿ ಗಿಂತ ದೇಹವೇ ಮೊದಲು ಪ್ರತಿಕ್ರಿಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಉದಾಹರಣೆಗೆ ಹಾವನ್ನು ಕಂಡಾಕ್ಷಣ ನಾವು ಭಯಕ್ಕೊಳಗಾದಾಗ ಸಾಮಾನ್ಯವಾಗಿ ಹೃದಯ ಬಡಿತ ಹೆಚ್ಚಾಗಿ, ಉಸಿರಾಟ ವೇಗಗೊಂಡು, ಉದರದಲ್ಲಿ ತಳಮಳವಾದಂತಾಗುತ್ತದೆ.

ದೇಹವು ಈ ರೀತಿ ಭಯಪಟ್ಟಂತೆ ಪ್ರತಿಕ್ರಿಯಿಸುವುದನ್ನು ಗಮನಿಸಿ ನಾವು ಭಯದ ಭಾವನೆಯನ್ನು ಅನುಭವಿಸುತ್ತೇವೆ ಎನ್ನುವುದು ಈ ಇಬ್ಬರು ವಿಜ್ಞಾನಿಗಳ ವಾದ. ಆದರೆ ಇವರ ಸಿದ್ಧಾಂತವನ್ನು ಎಲ್ಲರೂ ಒಪ್ಪಿರಲಿಲ್ಲ.

1920ರಲ್ಲಿ ಇನ್ನೊಬ್ಬ ವಿಜ್ಞಾನಿ ವಾಲ್ಟರ್ ಕ್ಯಾನನ್ ಇದರ ಬಗ್ಗೆ ವಿಶ್ಲೇಷಿಸುತ್ತಾ “ನಮ್ಮ ಭಾವನೆಗಳು ಮಿದುಳಿನಿಂದ ನೇರವಾಗಿ ಬರುತ್ತವೆಯೇ ಹೊರತು, ದೇಹದ ಬದಲಾವಣೆಗಳನ್ನು ನಾವು ಗ್ರಹಿಸುವು ದರಿಂದಲ್ಲ" ಎಂದು ವಾದಿಸುತ್ತಾರೆ. ಭಯ ಅಥವಾ ಕೋಪವನ್ನು ಮಿದುಳು ಅನುಭವಿಸಿದ ನಂತರ ಅದರ ಅಡ್ಡಪರಿಣಾಮವಾಗಿ ದೇಹವು ಪ್ರತಿಕ್ರಿಯಿಸುತ್ತದೆ. ಆದ್ದರಿಂದಲೇ ಈ ಎಲ್ಲ ದೈಹಿಕ ಬದಲಾವಣೆಗಳು, ಭಾವನೆಗಳು ಪ್ರಕಟಗೊಳ್ಳುವುದಕ್ಕಿಂತ ಬಹಳ ನಿಧಾನವಾಗಿ ಸಂಭವಿಸುತ್ತವೆ ಎಂಬುದು ಇವರ ಅಭಿಪ್ರಾಯ.

pp

ಇದಾದ ಹಲವು ವರ್ಷಗಳ ನಂತರ ಬಂದ ವಿಜ್ಞಾನಿಗಳು ಈ ಎರಡು ಸಿದ್ಧಾಂತಗಳೂ ಭಾಗಶಃ ಸರಿಯಾಗಿರಬಹುದು ಎಂದರು. ಅವರಲ್ಲಿ ಪ್ರಮುಖರು ಸಂಶೋಧಕರಾದ ಆಂಟೋನಿಯೊ ಡಮಾಸಿಯೊ ಮತ್ತು ಎ.ಡಿ. ಕ್ರೇಗ್. ಇವರಿಬ್ಬರು ನಮ್ಮ ದೇಹದ ಆಂತರಿಕ ಸಂಕೇತಗಳು ನಮ್ಮ ಭಾವನೆಗಳಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ವಿಸ್ತೃತವಾಗಿ ಅರ್ಥೈಸಿದರು.

ಡಮಾಸಿಯೊ ಅವರ ‘ಸೊಮಾಟಿಕ್ ಮಾರ್ಕರ್’ (ಅರ್ಥ: ದೈಹಿಕ ಗುರುತು) ಸಿದ್ಧಾಂತದ ಪ್ರಕಾರ ನಮ್ಮ ಹಿಂದಿನ ಭಾವನಾತ್ಮಕ ಅನುಭವಗಳು ದೇಹದಲ್ಲಿ ನೆನಪುಗಳನ್ನು ಬಿಟ್ಟು ಹೋಗುತ್ತವೆ. ಇವುಗಳನ್ನು ದೈಹಿಕ ಗುರುತುಗಳು ಎಂದು ಕರೆಯಲಾಗುತ್ತದೆ.

ಆದ್ದರಿಂದ, ನೀವು ಹೊಸ ಪರಿಸ್ಥಿತಿಗೆ ಎದುರಾದಾಗ, ಇದೇ ರೀತಿಯ ಸಂದರ್ಭದಲ್ಲಿ ಈ ಹಿಂದೆ ನಿಮ್ಮ ದೇಹ ಹೇಗೆ ಪ್ರತಿಕ್ರಿಯಿಸಿತ್ತು ಎಂಬುದನ್ನು ನಿಮ್ಮ ಮಿದುಳು ನೆನಪಿಸಿಕೊಳ್ಳುತ್ತದೆ. ಆ ಮೂಲಕ ನಿಮಗೆ ಆ ಕ್ಷಣದಲ್ಲಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ. ಉದಾಹರಣೆಗೆ, ಹಿಂದೆ ಯಾವುದಾದರೊಂದು ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ನೀವು ಆತಂಕಕ್ಕೆ ಒಳಗಾಗಿದ್ದರೆ, ಮುಂದೆ ಮತ್ತೊಮ್ಮೆ ಭಾಷಣಕ್ಕೆ ಆಹ್ವಾನ ಸಿಕ್ಕಾಗಲೇ ನಿಮ್ಮ ದೇಹ ಭಯಕ್ಕೊಳಗಾಗಬಹುದು. ಈ ಆತಂಕವು ಮುಂಚಿತವಾಗಿಯೇ ಭಾಷಣಕ್ಕೆ ಉತ್ತಮವಾಗಿ ತಯಾರಾಗುವಂತೆ ನಿಮ್ಮನ್ನು ಪ್ರೇರೇಪಿಸ ಬಹುದು.

ಇನ್ನು ಕ್ರೇಗ್‌ರವರು ‘ಹೋಮಿಯೋಸ್ಟಾಟಿಕ್ ಎಮೋಷನ್’ (ದೇಹದ ಎಲ್ಲಾ ವ್ಯವಸ್ಥೆಗಳ ನಡುವಿನ ಸಮತೋಲನದ ಸ್ಥಿತಿಯನ್ನು ಹೋಮಿಯೋಸ್ಟಾಸಿಸ್ ಎನ್ನುವರು) ಎಂಬ ಸಿದ್ಧಾಂತವನ್ನು ಮುಂದಿಟ್ಟರು. ಈ ಸಿದ್ಧಾಂತವು ಹೃದಯಬಡಿತ, ದೇಹದ ತಾಪಮಾನ, ಕರುಳಿನಗುವ ಚಟುವಟಿಕೆ ಗಳಂಥ ದೇಹದ ಆಂತರಿಕ ಸ್ಥಿತಿಯನ್ನು ನಮ್ಮ ಮಿದುಳು ಹೇಗೆ ಗ್ರಹಿಸುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲಿತು.

ಅದರಂತೆ, ಮಿದುಳಿನಲ್ಲಿರುವ ‘ಇನ್ಸುಲಾ’ ಎಂದು ಕರೆಯಲ್ಪಡುವ ಭಾಗವು ನಮ್ಮ ದೇಹವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವ ಬಗ್ಗೆ ಒಂದು ಆಂತರಿಕ ನಕ್ಷೆಯನ್ನು ತಯಾರಿಸುತ್ತದೆ. ದೇಹದ ವಿವಿಧ ಭಾಗಗಳಲ್ಲಿರುವ ನರಗಳಿಂದ ಬರುವ ಸಂಕೇತಗಳಿಂದ ಈ ನಕ್ಷೆಯು ನಿರಂತರವಾಗಿ ನವೀಕರಿಸಲ್ಪಡುತ್ತದೆ. ದೇಹದಿಂದ ಬರುವ ಈ ಸಂಕೇತಗಳ ಮಾಹಿತಿಯನ್ನು ಮಿದುಳಿನ ನಿರ್ಧಾರ ಕೈಗೊಳ್ಳುವ ಪ್ರದೇಶದಿಂದ ಬರುವ ಮಾಹಿತಿಯೊಂದಿಗೆ ಸಂಯೋಜಿಸಿ, ನಮ್ಮೊಳಗೇ ಯಾವ ಭಾವನೆ ಹುಟ್ಟಬೇಕು ಎಂದು ನಿರ್ಧಾರವಾಗುತ್ತದೆ.

ಹೀಗೆ ಭಾವನೆಗಳ ಜನನದಲ್ಲಿ ದೇಹ-ಮಿದುಳು ಎರಡೂ ಭಾಗವಹಿಸುತ್ತವೆ ಎಂಬುದು ಈ ಸಿದ್ಧಾಂತದ ಸಾರಾಂಶ. ಹಾಗಿದ್ದರೆ ಮಿದುಳು ಮತ್ತು ಕರುಳಿನ ಸಂಬಂಧ ಹೇಗೆ ಬೆಸೆದುಕೊಂಡಿದೆ? ಕರುಳಿನಿಂದ ಭಾವನೆಗಳ ಉಗಮ ಸಾಧ್ಯವೇ? ಮಿದುಳು ಮತ್ತು ಕರುಳು ಹಲವು ರೀತಿಯಲ್ಲಿ ಒಂದಕ್ಕೊಂದು ಬೆಸೆದುಕೊಂಡಿದ್ದು, ಈ ಸಂಪರ್ಕ ಸಾಧನಗಳು ಎರಡು ಅಂಗಗಳ ನಡುವಿನ ಸಂವಹನದ ಸೇತುವೆಗಳಾಗಿವೆ.

ಕರುಳಲ್ಲಿದೆ ಎರಡನೇ ಮಿದುಳು!

ಮೊದಲಿಗೆ, ಕರಳು ಮತ್ತು ಮಿದುಳು ನರ ವ್ಯವಸ್ಥೆಯ ವೇಗಸ್ ಮತ್ತು ಬೆನ್ನುಮೂಳೆಯ ನರಗಳ ಮೂಲಕ ನೇರವಾಗಿ ಸಂಪರ್ಕಿಸಲ್ಪಟ್ಟಿದೆ. ಇವು ಕರುಳಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಹೊತ್ತ ಇಂದ್ರಿಯ ಸಂಕೇತಗಳನ್ನು ಕರುಳಿನಿಂದ ಮಿದುಳಿಗೆ, ಹಾಗೂ ಕರುಳಿನಲ್ಲಿ ಯಾವ ಕ್ರಿಯೆ ನಡೆಯ ಬೇಕೆಂಬ ಸೂಚನೆ ನೀಡುವ ಮೋಟಾರ್ ಅಥವಾ ಚಲನ ಸಂಕೇತಗಳನ್ನು ಮಿದುಳಿನಿಂದ ಕರುಳಿಗೆ ತಲುಪಿಸುತ್ತವೆ. ಅಷ್ಟೇ ಅಲ್ಲದೆ, ಕರುಳು ತನ್ನದೇ ಆದ ಆಂತರಿಕ ನರವ್ಯೂಹವನ್ನೂ ಹೊಂದಿದೆ. ಈ ವ್ಯವಸ್ಥೆಯಲ್ಲಿ 50 ಕೋಟಿಗೂ ಹೆಚ್ಚಿನ ನ್ಯೂರಾನ್ (ನರಕೋಶ) ಗಳಿವೆ. ಇದು ಅಂದಾಜು 8600 ಕೋಟಿ ನರಕೋಶಗಳನ್ನು ಹೊಂದಿರುವ ಮಿದುಳೊಂದನ್ನು ಹೊರತು ಪಡಿಸಿ, ಬೆನ್ನುಹುರಿ (ಅಂದಾಜು 6.9 ಕೋಟಿ) ಸೇರಿದಂತೆ ಇತರೆ ಅಂಗಗಳಿಗಿಂತ ಹೆಚ್ಚು! ಆದ್ದರಿಂದಲೇ ಕರುಳಲ್ಲಿನ ನರವ್ಯವಸ್ಥೆಯನ್ನು ಎರಡನೇ ಮಿದುಳು ಎಂದು ಕರೆಯಲಾಗುತ್ತದೆ.

ಸಂಕೀರ್ಣವಾದ ಚಿಂತನೆ ಅಥವಾ ಸೃಜನಶೀಲ ಅಭಿವ್ಯಕ್ತಿಗಳನ್ನು ಹೊರ ಹಾಕಲು ಈ ಮಿದುಳಿಗೆ ಸಾಮರ್ಥ್ಯವಿಲ್ಲ. ಆದರೆ, ಇದರಿಂದ ಕರುಳಿಗೆ ಸ್ವತಂತ್ರವಾಗಿ ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಆಹಾರವನ್ನು ನುಂಗುವುದು, ಜೀರ್ಣಕ್ರಿಯೆಗೆ ಅವಶ್ಯವಾದ ಕಿಣ್ವಗಳನ್ನು ಬಿಡುಗಡೆಗೊಳಿಸುವುದು, ಪೋಷಕಾಂಶಗಳನ್ನು ಹೀರಿಕೊಳ್ಳಲು ರಕ್ತದ ಹರಿವಿನ ನಿಯಂತ್ರಣ ಮಾಡುವುದು ಹಾಗೂ ಆಹಾರವನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಕಳಿಸುವುದು ಸೇರಿದಂತೆ ಜೀರ್ಣಕ್ರಿಯೆಯ ಎಲ್ಲಾ ಹಂತಗಳನ್ನು ಈ ಕರುಳ ಮಿದುಳು ಸ್ವಾಯತ್ತವಾಗಿ ನಿಯಂತ್ರಿಸುತ್ತದೆ. ಜತೆಗೆ, ತನ್ನಲ್ಲಿ ನಡೆಯುತ್ತಿರುವ ಕ್ರಿಯೆಗಳ ಬಗ್ಗೆ (ಕರುಳ ಹಿಗ್ಗುವಿಕೆ, ಆಹಾರದ ಚಲನವಲನ ಮತ್ತು ರಾಸಾಯನಿಕ ಕ್ರಿಯೆ) ಮಿದುಳಿನೊಂದಿಗೆ ಸಂವಹಿಸಲು ಸಹ ಇದು ನೆರವಾಗುತ್ತದೆ.

ಹಾರ್ಮೋನುಗಳ ಪಾತ್ರ

ಹಾರ್ಮೋನುಗಳು ಸಹ ಮಿದುಳು ಮತ್ತು ಕರುಳ ನಡುವೆ ಸಂಪರ್ಕ ಸಾಧಿಸುವಲ್ಲಿ ಪಾತ್ರ ವಹಿಸುತ್ತವೆ. ಕರುಳಿನಲ್ಲಿರುವ ವಿಶೇಷ ಜೀವಕೋಶಗಳು ಅನೇಕ ವಿಭಿನ್ನ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ. ಹೊಟ್ಟೆ ಖಾಲಿಯಿದ್ದಾಗ ಜಠರದಲ್ಲಿ ಉತ್ಪತ್ತಿಯಾಗೋ ‘ಘ್ರೆಲಿನ್’ ಎಂಬ ಹಾರ್ಮೋನು, ‘ಇದು ಊಟದ ಸಮಯ’ ಎಂದು ಮಿದುಳಿಗೆ ನೆನಪಿಸುತ್ತದೆ. ಆ ಮೂಲಕ ನಿಮಗೆ ಹಸಿವಾಗುವಂತೆ ಮಾಡುತ್ತದೆ.

ಇನ್ನು ನೀವು ಸೇವಿಸಿದ ಆಹಾರ ಜೀರ್ಣಗೊಂಡಾಗ ಬರುವ ಪ್ರೋಟೀನ್ ಮತ್ತು ಕೊಬ್ಬಿನಂಶಗಳು ಸಣ್ಣ ಕರುಳಿನ ಮೊದಲ ಭಾಗವಾದ ಡ್ಯುವೋಡೆನಮ್‌ಗೆ ಸಿಕ್ಕಾಗ, ಅಲ್ಲಿ ಕೋಲೆಸಿಸ್ಟೊಕಿನಿನ್ ಹಾರ್ಮೋನು ಉತ್ಪತ್ತಿಯಾಗುತ್ತದೆ. ಇದರ ಜತೆಗೆ ಆಹಾರ ಸೇವಿಸಿದ ನಂತರ ಉತ್ಪತ್ತಿಯಾಗುವ ‘ಪೆಪ್ಟೈಡ್ ಹಾರ್ಮೋನು ಸೇರಿ, ನಿಮಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸುತ್ತವೆ. ಅಲ್ಲದೆ, ಈ ಎರಡು ಹಾರ್ಮೋನುಗಳು ಹೊಟ್ಟೆ ತುಂಬಿದೆ ಎಂಬ ಸಂಕೇತವನ್ನು ಮಿದುಳಿಗೆ ತಲುಪಿಸಿ, ಆಹಾರ ಸೇವಿಸುವುದನ್ನು ಕಡಿಮೆ ಮಾಡಲು ಸೂಚಿಸುತ್ತವೆ.

ಮಿದುಳು ಸಹ ಒತ್ತಡದ ಸಮಯದಲ್ಲಿ ಕಾರ್ಟಿಸೋಲ್‌ನಂಥ ತನ್ನದೇ ಆದ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರತಿಕ್ರಿಯಿಸುತ್ತದೆ. ಈ ಹಾರ್ಮೋನು, ನಿಮ್ಮ ಕರುಳಿನ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಉದಾಹರಣೆಗೆ, ಹೆಚ್ಚು ಒತ್ತಡದಲ್ಲಿರುವ ವ್ಯಕ್ತಿಗಳಲ್ಲಿ ಕಾರ್ಟಿಸೋಲ್‌ನ ಪರಿಣಾಮವಾಗಿ ಕರುಳಲ್ಲಿ ಆಹಾರ/ತ್ಯಾಜ್ಯ ಕಣಗಳ ಚಲನೆಯಲ್ಲಿ ವ್ಯತ್ಯಾಸವಾಗಿ ಮಲಬದ್ಧತೆ ಅಥವಾ ಅತಿಸಾರವಾಗಬಹುದು. ಹೀಗೆ ಈ ಎಲ್ಲಾ ಹಾರ್ಮೋನು ಗಳಿಂದ ಮಿದುಳು ಮತ್ತು ಕರುಳಿನ ನಡುವೆ ನಡೆಯುವ ಸಂವಹನವು ನಿಮ್ಮ ದೇಹದೊಳಗಿನ ಅಗತ್ಯಗಳಿಗೆ ಮತ್ತು ನಿಮ್ಮ ಸುತ್ತಮುತ್ತಲಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಎರಡೂ ಅಂಗಗಳು ಒಟ್ಟಾಗಿ ಕಾರ್ಯನಿರ್ವಹಿಸುವುದಕ್ಕೆ ಅನುವು ಮಾಡಿಕೊಡುತ್ತವೆ.

ರೋಗನಿರೋಧಕ ವ್ಯವಸ್ಥೆ ಮತ್ತು ಸೈಟೊಕಿನ್ ಸಂಕೇತಗಳು

ನಿಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ದೊಡ್ಡ ಭಾಗವು ಕರುಳಿನಲ್ಲಿರುತ್ತದೆ. ದೇಹದಲ್ಲಿ ಹಾನಿಕಾರಕ ಸೂಕ್ಷ್ಮಜೀವಿಗಳು ಸೇರಿದಾಗ, ಒತ್ತಡಕ್ಕೊಳಗಾದಾಗ ಅಥವಾ ಕರುಳಿನಲ್ಲಿರುವ ಸ್ನೇಹ ಪರ ಬ್ಯಾಕ್ಟೀರಿಯಗಳ ಮಟ್ಟದಲ್ಲಿ ಬದಲಾವಣೆಗಳಾದಾಗ ಅಲ್ಲಿನ ಪ್ರತಿರಕ್ಷಣಾ ಜೀವಕೋಶಗಳು ಸೈಟೊಕಿನ್ ಎಂಬ ವಿಶೇಷ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಈ ರಾಸಾಯನಿಕ ಗಳು ನಿಮ್ಮ ಮಿದುಳಿಗೆ ಪ್ರಯಾಣಿಸಿ ಭಾವನೆಗಳ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ, ನಿಮ್ಮ ಮನಸ್ಥಿತಿ ಮತ್ತು ನಡವಳಿಕೆಯನ್ನು ಪ್ರಭಾವಿಸಬಹುದು.

ಉದಾಹರಣೆಗೆ, ಕರುಳಿನಲ್ಲಿನ ನಿರಂತರ ಉರಿಯೂತವು ಖಿನ್ನತೆ ಮತ್ತು ಆತಂಕದಂಥ ಪರಿಸ್ಥಿತಿ ಗಳಿಗೆ ಕಾರಣವಾಗಬಹುದು. ಮತ್ತೊಂದೆಡೆ, ನಿಮ್ಮ ಮಿದುಳು ಒತ್ತಡಕ್ಕೆ ಒಳಗಾದಾಗ ಅಥವಾ ಅಸಮಾಧಾನಗೊಂಡಾಗ, ಅದು ಕರುಳಿನ ರಕ್ಷಣೆಯನ್ನು ದುರ್ಬಲಗೊಳಿಸಬಹುದು ಮತ್ತು ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದು.

ಸೂಕ್ಷ್ಮಜೀವಿಗಳ ಪ್ರಭಾವ

ಡೋಪಮೈನ್ ಮತ್ತು ಗಾಮಾ ಅಮೈನೋ ಬ್ಯುಟಿರಿಕ್ ಆಸಿಡ್ ( GABA -ಗಾಬಾ) ಎಂಬ ಮಿದುಳಿನ ಎರಡು ಸಂದೇಶವಾಹಕಗಳು ನಿಮ್ಮ ಮನಸ್ಥಿತಿ, ಆಲೋಚನೆ ಮತ್ತು ದೇಹದ ಚಲನೆಯನ್ನು ನಿಯಂತ್ರಿಸುತ್ತವೆ. ಡೋಪಮೈನ್, ನೀವು ಏನಾದರೂ ಸಾಧಿಸಿದಾಗ ನಿಮ್ಮೊಳಗೆ ಉತ್ತಮ ಭಾವನೆ ಮೂಡಿಸಿ, ನಿಮ್ಮನ್ನು ಪ್ರೇರಿತರಾಗಿರುವಂತೆ ಮಾಡುತ್ತದೆ ಮತ್ತು ನೀವು ಸಲೀಸಾಗಿ ಚಲಿಸಲು ಸಹಕರಿಸುತ್ತದೆ. ಗಾಬಾ, ಮಿದುಳಿನಲ್ಲಿ ಬ್ರೇಕ್‌ನಂತೆ ಕಾರ್ಯನಿರ್ವಹಿಸಿ, ನರಕೋಶಗಳು ಹೆಚ್ಚು ಪ್ರಚೋದನೆಗೆ ಒಳಗಾಗದಂತೆ ನೋಡಿಕೊಂಡು ನಿಮ್ಮನ್ನು ಶಾಂತವಾಗಿರಿಸುತ್ತದೆ.

ಅಂದಾಜು 100 ಟ್ರಿಲಿಯನ್ (1 ಟ್ರಿಲಿಯನ್ ಅಂದರೆ 1 ಲಕ್ಷ ಕೋಟಿ!) ಸೂಕ್ಷ್ಮಜೀವಿಗಳು ಸಾಮಾನ್ಯ ವಾಗಿ ಕರುಳಿನಲ್ಲಿರುತ್ತವೆ. ಈ ಸೂಕ್ಷ್ಮಜೀವಿಗಳು ಡೋಪಮೈನ್ ಮತ್ತು ಗಾಬಾಗಳಿಗೆ ಹೋಲುವ ಅನೇಕ ರಾಸಾಯನಿಕಗಳ ಜತೆಗೆ ಕೊಬ್ಬಿನಾಮ್ಲಗಳನ್ನು (ಶಾರ್ಟ್-ಚೈನ್ ಫ್ಯಾಟಿ ಆಸಿಡ್) ತಯಾರಿಸು ತ್ತವೆ. ಇವು ಕರುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು,

ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸಲು ನೆರವಾಗಬಹುದು, ನರಗಳ ಮೂಲಕ ಅಥವಾ ಇತರ ಮಾರ್ಗಗಳ ಮೂಲಕ ಮಿದುಳಿಗೆ ಸಂಕೇತಗಳನ್ನು ಕಳುಹಿಸಬಹುದು. ಮುಂದುವರಿದು, ಕರುಳಿನ ಸೂಕ್ಷ್ಮಜೀವಿಗಳು ‘ಒಳ್ಳೆಯ ಭಾವನೆಗಳ ರಾಸಾಯನಿಕ’ ಎಂದೇ ಖ್ಯಾತವಾದ ಸಿರೊಟೋ ನಿನ್ ಹಾರ್ಮೋನನ್ನು ತಯಾರಿಸಲು ಸಹಾಯ ಮಾಡುತ್ತವೆ. ವಾಸ್ತವವಾಗಿ, ದೇಹದಲ್ಲಿನ ಶೇ.90 ರಷ್ಟು ಸಿರೊಟೋನಿನ್ ಕರುಳಿನಲ್ಲಿಯೇ ಉತ್ಪತ್ತಿಯಾಗುತ್ತದೆ!

ಹಾಗಾಗಿ, ಈ ಸೂಕ್ಷ್ಮಜೀವಿಗಳ ಸಮತೋಲನವು ತೊಂದರೆಗೊಳಗಾದಾಗ (ಒತ್ತಡ, ಕಳಪೆ ಆಹಾರ ಅಥವಾ ಪ್ರತಿಜೀವಕಗಳಿಂದಾಗಿ), ಅದು ಆತಂಕ ಮತ್ತು ಖಿನ್ನತೆಯಂಥ ಸಮಸ್ಯೆಗಳಿಗೆ ಕಾರಣವಾಗ ಬಹುದು. ಇದು ಪ್ರತಿರಕ್ಷಣಾ ವ್ಯವಸ್ಥೆ ಅತಿಯಾಗಿ ಸಕ್ರಿಯಗೊಂಡು ಉರಿಯೂತಗಳಂಥ ಸಮಸ್ಯೆಗೆ ಕಾರಣವಾದಾಗ ಸಂಭವಿಸುವ ಸಾಧ್ಯತೆ ಹೆಚ್ಚು.

ಇಂಥ ಸಂದರ್ಭಗಳಲ್ಲಿ ಕರುಳಿನ ಕೆಲವು ಬ್ಯಾಕ್ಟೀರಿಯಾಗಳು ಈ ಉರಿಯೂತವನ್ನು ಕಡಿಮೆ ಮಾಡಿ, ಮಿದುಳನ್ನು ಒತ್ತಡದಿಂದ ರಕ್ಷಿಸಲು ಸಹಾಯ ಮಾಡಬಲ್ಲವು.

ಪ್ರಾಣಿಗಳ ಮೇಲೆ ನಡೆದ ಒಂದು ಅಧ್ಯಯನದಲ್ಲಿ ಕಂಡುಬಂದ ಅಚ್ಚರಿಯ ಫಲಿತಾಂಶದಲ್ಲಿ ಪ್ರಾಣಿಗಳ ಕರುಳಿನ ಬ್ಯಾಕ್ಟೀರಿಯಾಗಳು ಬದಲಾದಾಗ, ಅವುಗಳ ನಡವಳಿಕೆಯೂ ಬದಲಾಗಿದೆ. ಹೆಚ್ಚು ಆತಂಕ ಅಥವಾ ಖಿನ್ನತೆಗೆ ಒಳಗಾದ ಪ್ರಾಣಿಗಳಿಗೆ ಕೆಲವು ಉತ್ತಮ ಬ್ಯಾಕ್ಟೀರಿಯಾಗಳನ್ನು (ಪ್ರೋಬಯಾಟಿಕ್) ನೀಡಿದಾಗ, ಅವುಗಳ ಮನಸ್ಥಿತಿ ಸುಧಾರಿಸಿದೆ. ಇದರಿಂದ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳು ನಮ್ಮ ಭಾವನೆಗಳನ್ನು ರೂಪಿಸುವಲ್ಲಿ ಪ್ರಭಾವ ಬೀರುತ್ತವೆ ಎನ್ನುವುದು ದೃಢ ವಾಗಿದೆ.

ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ವಿಜ್ಞಾನಿಗಳ ತಂಡವು, ಭಾವನೆಗಳು ಮತ್ತು ಅವುಗಳ ನಿಯಂತ್ರಣದಲ್ಲಿ ಸೂಕ್ಷ್ಮಜೀವಿಗಳ ಪಾತ್ರದ ಬಗ್ಗೆ ಸಂಶೋಧನೆ ನಡೆಸಿದೆ. ಇನ್ನೂರಕ್ಕೂ ಹೆಚ್ಚು

ಮಹಿಳೆಯರು ಭಾಗವಹಿಸಿ, 2023ರಲ್ಲಿ ಪ್ರಕಟಗೊಂಡ ಈ ವರದಿ, ಸಕಾರಾತ್ಮಕ (ಸಂತೋಷ ಮತ್ತು ಆಶಾವಾದ) ಮತ್ತು ನಕಾರಾತ್ಮಕ (ದುಃಖ, ಭಯ, ಚಿಂತೆ, ನಿರಾಶಾದಾಯಕ ಸ್ಥಿತಿ, ಖಿನ್ನತೆ ಅಥವಾ ಒಂಟಿತನ) ಭಾವನೆಗಳು ಮತ್ತು ಕರುಳ ಸೂಕ್ಷ್ಮಜೀವಿಗಳ ನಡುವಿನ ಸಂಬಂಧದ ಬಗ್ಗೆ ವಿವರ ನೀಡಿದೆ.

ನಕಾರಾತ್ಮಕ ಮತ್ತು ಸಕಾರಾತ್ಮಕ ಭಾವನೆಗಳ ಸಂದರ್ಭಗಳಲ್ಲಿ ಕರುಳಲ್ಲಿನ ಕೆಲವು ಬ್ಯಾಕ್ಟೀರಿಯಾ ಗಳ ಮಟ್ಟದಲ್ಲಿ ಬದಲಾವಣೆ ಕಾಣಿಸಿದೆ. ಪ್ರಮುಖವಾಗಿ, ನಕಾರಾತ್ಮಕ ಭಾವನೆಗಳನ್ನು ಹೊಂದಿದ್ದ ಜನರಲ್ಲಿ ಕೆಲವು ನಿರ್ದಿಷ್ಟ ಬ್ಯಾಕ್ಟೀರಿಯಾಗಳ (ಫರ್ಮಿಕ್ಯುಟ್ಸ್ ಬ್ಯಾಕ್ಟೀರಿಯಂ CAG 94 ಮತ್ತು ರುಮಿ ನೊಕೊಕೇಸಿ ಬ್ಯಾಕ್ಟೀರಿಯಂ D16 ) ಸಂಖ್ಯೆ ಹೆಚ್ಚಿದೆ.

ಸಂತೋಷದ ಭಾವನೆಗಳನ್ನು ವರದಿ ಮಾಡಿದ ಜನರಲ್ಲಿ ಈ ಎರಡು ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ, ತಮ್ಮ ಭಾವನೆಗಳನ್ನು ನಿಗ್ರಹಿಸಿದ ಅಥವಾ ಹಿಡಿದಿಟ್ಟುಕೊಂಡ ಜನರಲ್ಲಿನ ಕರುಳಿನ ಸೂಕ್ಷ್ಮಜೀವಿಗಳ ವೈವಿಧ್ಯವೇ ಕಡಿಮೆಯಾಗಿದೆ. ಇದೇ ರೀತಿಯ ಹಲವು ಅಧ್ಯಯನಗಳು ಕರುಳ ಸೂಕ್ಷ್ಮಜೀವಿಗಳು ಮತ್ತು ಮಾನಸಿಕ ಆರೋಗ್ಯದ ನಡುವೆ ಸಂಬಂಧವಿದೆ ಎನ್ನುವುದನ್ನು ತಿಳಿಸಿವೆ.

ಉತ್ತಮ ಆಹಾರ ಮತ್ತು ಪ್ರೋಬಯಾಟಿಕ್‌ಗಳ ಮೂಲಕ ಕರುಳನ್ನು ಆರೋಗ್ಯಕರವಾಗಿಟ್ಟರೆ, ಮನಸ್ಥಿತಿ ಮತ್ತು ಒತ್ತಡದ ಮಟ್ಟವನ್ನು ನಿರ್ವಹಿಸಬಹುದು ಎಂದು ಸೂಚಿಸಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಕರುಳು ಆಹಾರವನ್ನು ಜೀರ್ಣಿಸುವುದಲ್ಲದೆ, ನಿಮ್ಮ ಭಾವನೆಯನ್ನು ರೂಪಿಸಲು ಕೂಡ ಸಹಾಯ ಮಾಡುತ್ತದೆ. ಅದಕ್ಕಾಗಿಯೇ, ಲಂಡನ್ ವಿಶ್ವವಿದ್ಯಾಲಯದ ವಿಜ್ಷಾನಿ ಯಾದ ಆಂಟನ್ ಇಮ್ಯಾನುಯೆಲ್‌ರವರು ‘ಕರುಳು ಭಾವನೆಗಳ ಬಾಗಿಲು’ ಎಂದು ನಂಬುತ್ತಾರೆ.

ಆದರೆ, ಇದು ಒಂದೇ ದಿಕ್ಕಿನಲ್ಲಿ ನಡೆಯುವ ಪ್ರಕ್ರಿಯೆಯಲ್ಲ ಎಂಬುದು ಸತ್ಯ. ಕರುಳಿನ ಮೇಲೆ ಮಿದುಳು, ಮಿದುಳಿನ ಮೇಲೆ ಕರುಳು, ಒಂದರ ಮೇಲೊಂದು ಪರಿಣಾಮ ಬೀರುತ್ತವೆ. ಈ ಪರಿಣಾಮಗಳು ಒಟ್ಟು ಸೇರಿ ನೀವು ಭಾವನೆಗಳನ್ನು ಅನುಭವಿಸುವಂಥದ್ದು. ಹಾಗಾಗಿ, ಭಾವನೆಗಳು ಮತ್ತು ನಿರ್ಧಾರಗಳಲ್ಲಿ ಕರುಳಿನ ಪಾತ್ರವಿದೆ ಎಂದು ಹೇಳಬಹುದೇ ಹೊರತು ಇದು ಸಂಪೂರ್ಣ ಕರುಳಿನದೇ ಕೆಲಸ ಎಂದು ಹೇಳಲಾಗದು. ಇದೇ ಕಾರಣಕ್ಕೆ, ಈ ವಿಷಯದ ಬಗ್ಗೆ ಎಲ್ಲಾ ವಿಜ್ಞಾನಿ ಗಳ ‘ಗಟ್ ಫೀಲಿಂಗ್’ ಒಂದೇ ರೀತಿಯಲ್ಲಿ ಇಲ್ಲ ಎನ್ನಬಹುದು!

ಕೊನೆಯದಾಗಿ ಒಂದು ಪ್ರಶ್ನೆ. ನಾಳೆ ನೀವು ಕಚೇರಿಗೆ ಹೋಗುವಾಗ ನಿತ್ಯ ಬಳಸುತ್ತಿದ್ದ ದಾರಿಯನ್ನು ಬದಲಿಸಿ, ಬೇರೆ ದಾರಿಯಲ್ಲಿ ಹೋಗಬೇಕು ಎಂದು ನಿಮ್ಮ ಕರುಳು ಸೂಚಿಸಿದರೆ ಏನು ಮಾಡುತ್ತೀರಿ?

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗ್ರ್ಯಾಂಟ್ಸ್‌ ಮ್ಯಾನೇಜರ್)