ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಶಕ್ತಿ-ಯುಕ್ತಿ ಎರಡೂ ಮೇಳೈಸಿದ ಬಲರಾಮ

ಹೀಗೆ ಬಲರಾಮನ ಯುಕ್ತಿ, ಶಕ್ತಿ ಅಪರಮಿತ. ಅವನು ಶ್ರೀ ಕೃಷ್ಣನ ವಿಸ್ತರಣೆಯಂತೆ. ಬಲರಾಮ ಸರ್ವ ಶಕ್ತ. ಬಲವೆಂದರೆ ಕೇವಲ ದೈಹಿಕ ಬಲವಲ್ಲ, ಆಧ್ಯಾತ್ಮಿಕ ಶಕ್ತಿ ಕೂಡ. ಜೀವನದಲ್ಲಿ ಏನೇ ಬಂದರೂ ಮೊದಲು ಅದನ್ನು ಸಮಾಧಾನದಿಂದ ಪರಿಹರಿಸುವ ಪ್ರಯತ್ನ ಮಾಡಬೇಕು. ಅದು ನಡೆಯದಿದ್ದಾಗ ಮುಂದಿನ ಹೆಜ್ಜೆ.

Roopa Gururaj Column: ಶಕ್ತಿ-ಯುಕ್ತಿ ಎರಡೂ ಮೇಳೈಸಿದ ಬಲರಾಮ

ಒಂದೊಳ್ಳೆ ಮಾತು

rgururaj628@gmail.com

ದೇವಕಿಯ ಅಣ್ಣ ಮತ್ತು ದುಷ್ಟ ರಾಜನಾದ ಕಂಸನು ದೇವಕಿಯ ಎಲ್ಲ ಮಕ್ಕಳನ್ನು ಕೊಲ್ಲುವ ಹೊಂಚು ಹಾಕಿದ್ದನು. ಇದಕ್ಕೆ ಕಾರಣ ದೇವಕಿಯ ಎಂಟನೇ ಸಂತಾನ ದುಷ್ಟ ಕಂಸನ ಹತ್ಯೆ ಮಾಡುವುದೆಂಬ ಅಶರೀರವಾಣಿ. ಈ ಕಾರಣದಿಂದ ಕಂಸನು ದೇವಕಿ ಮತ್ತು ವಸುದೇವನನ್ನು ಬಂಧನದಲ್ಲಿಟ್ಟು ಅವರ ಮಕ್ಕಳನ್ನು ಹುಟ್ಟಿದ ಕೂಡಲೇ ಕೊಲ್ಲುತ್ತಾ ಬಂದನು.

ಕಾಲಾನಂತರ ದೇವಕಿ ಏಳನೇ ಸಲ ಗರ್ಭಿಣಿಯಾದಳು. ಆದರೆ ಈ ಬಾರಿ ಗರ್ಭದಲ್ಲಿದ್ದ ಮಗುವನ್ನು ವಿಷ್ಣು ಮಧ್ಯಪ್ರವೇಶಿಸಿ, ತನ್ನ ಮಾಯೆಯಿಂದ ದೇವಕಿಯ ಗರ್ಭದಿಂದ ವಸುದೇವನ ಮೊದಲ ಪತ್ನಿ ರೋಹಿಣಿ ಗರ್ಭಕ್ಕೆ ವರ್ಗಾಯಿಸಿದನು. ಹೀಗೆ ಜನಿಸಿದವನೇ ಬಲರಾಮ. ಇದೇ ಕಾರಣದಿಂದ ಬಲರಾಮನ ಇನ್ನೊಂದು ಹೆಸರು ಸಂಕರ್ಷಣ ಎಂದು.

ಮಗುವಿನ ಹೆಸರು ರಾಮ ಎಂದಿದ್ದರೂ, ಅವನ ಅತೀವ ಶಕ್ತಿಯ ಕಾರಣ ಬಲರಾಮ ಎಂದು ಕರೆಯಲಾಯಿತು. ಹೀಗೆ ರೋಹಿಣಿ ಬಲರಾಮನಿಗೆ ಜನ್ಮ ಕೊಟ್ಟು ಪಾಲಿಸಿದಳು. ಬಲರಾಮನು ತನ್ನ ಬಾಲ್ಯವನ್ನು ಸಹೋದರ ಕೃಷ್ಣನ ಜೊತೆ ಹಸುಗಳನ್ನು ಕಾಯುವ ಗೋಪಾಲನಾಗಿ ಕಳೆದನು. ಬಲರಾಮ ಕಂಸನಿಂದ ಕಳುಹಿಸಲ್ಪಟ್ಟ ಅಸುರನಾದ ಪ್ರಲಂಬ ಮತ್ತು ಮುಷ್ಟಿಕ ಎನ್ನುವ ಕುಸ್ತಿ ಪಟುಗಳನ್ನು ಕೊಂದನು.

ಇದನ್ನೂ ಓದಿ: Roopa Gururaj Column: ಬುದ್ಧನಾಗಬೇಕಾದರೆ ಏನು ಮಾಡಬೇಕು ?

ಕೃಷ್ಣನು ಕಂಸನನ್ನು ಕೊಲ್ಲುತ್ತಿದ್ದಾಗ, ಬಲರಾಮನು ಕಂಸನ ಬಲಿಷ್ಠ ಸೇನಾಪತಿಯಾದ ಕಾಲವಕ್ರ ನನ್ನು ಕೊಂದನು. ದುಷ್ಟ ರಾಜನನ್ನು ಕೊಂದ ನಂತರ, ಬಲರಾಮ ಮತ್ತು ಕೃಷ್ಣರು ತಮ್ಮ ಶಿಕ್ಷಣ ಕ್ಕಾಗಿ ಉಜ್ಜಯಿನಿಯ ಋಷಿ ಸಾಂದೀಪನಿ ಆಶ್ರಮಕ್ಕೆ ಹೋದರು.

ಬಲರಾಮ ನಂತರ ರಾಜ ಕಕುದ್ಮಿಯ ಮಗಳಾದ ರೇವತಿಯನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು - ನಿಶಾತ ಮತ್ತು ಉಲ್ಮುಕಾ, ಮತ್ತು ಮಗಳು - ವತ್ಸಲಾ.ಬಲರಾಮನ ಶಕ್ತಿ ಮತ್ತು ಸಮಾಧಾನ ಎರಡನ್ನೂ ಬಿಂಬಿಸುವ ಈ ಘಟನೆ ಅವನ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲುತ್ತದೆ. ಶ್ರೀಕೃಷ್ಣನ ಮಗನಾದ ಸಾಂಬನು ದುರ್ಯೋಧನನ ಮಗಳು ಲಕ್ಷ್ಮಣೆಯನ್ನು ವಿವಾಹವಾಗಲು ಸ್ವಯಂವರದ ಸಭೆಯಿಂದ ಅವಳನ್ನು ಅಪಹರಿಸಿಕೊಂಡು ಹೋದನು.

ಇದರಿಂದ ಕುಪಿತರಾದ ಕೌರವರು ಸಾಂಬನನ್ನು ಬಂಧಿಸಿದರು. ಶಾಂತಿಯ ಪ್ರತಿಪಾದಕನಾದ ಬಲರಾಮನು ಕೌರವರೊಂದಿಗೆ ಯುದ್ಧ ಮಾಡುವುದು ಬೇಡ, ತಾನೇ ಅವರೊಡನೆ ಮಾತನಾಡಿ ಸಾಂಬನನ್ನು ಅವನ ಹೆಂಡತಿ ಲಕ್ಷ್ಮಣೆಯನ್ನು ಕರೆತರುತ್ತೇನೆ ಎಂದು ಯಾದವರಿಗೆ ಹೇಳಿ, ಹಸ್ತಿನಾ ಪುರಕ್ಕೆ ಬರುತ್ತಾನೆ.

ಕೌರವರಿಗೆ ತಾನು ಬಂದಿರುವ ವಿಷಯವನ್ನು ಹೇಳಿ ಕಳುಹಿಸುತ್ತಾನೆ. ಆದರೆ ಕೌರವರು ಯಾದವ ರನ್ನು ತಮ್ಮ ದಾಸರೆಂದೂ, ತಾವು ಯಾರ ಅಪ್ಪಣೆಯನ್ನು ಪಾಲಿಸುವುದಿಲ್ಲವೆಂದೂ ಹೇಳಿದರು. ಶಾಂತಿ ಸಂಧಾನಕ್ಕೆ ಬಂದಿದ್ದ ಬಲರಾಮನು ಎಷ್ಟು ಕುಪಿತನಾದನೆಂದರೆ ಇಡೀ ಬ್ರಹ್ಮಾಂಡವನ್ನು ಸುಟ್ಟು ಬೂದಿ ಮಾಡುವ ಹಾಗೆ ಕಂಡನು. ಅವನು ತನ್ನ ಹಲಾಯುಧವನ್ನು ತೆಗೆದುಕೊಂಡು ಅದರಿಂದ ನೆಲವನ್ನು ಕುಟ್ಟಲು ಪ್ರಾರಂಭಿಸಿದನು.

ಇದರಿಂದ ಇಡೀ ಹಸ್ತಿನಾಪುರವು ಭೂಮಿಯಿಂದ ಬೇರೆಯಾಯಿತು. ಆನಂತರ ಬಲರಾಮನು ಹಸ್ತಿನಾಪುರವನ್ನು ಹರಿಯುತ್ತಿದ್ದ ಗಂಗೆಯ ನೀರಿನ ಕಡೆಗೆ ಎಳೆಯಲು ಪ್ರಾರಂಭಿಸಿದನು. ಇದನ್ನು ನೋಡಿ ಹೆದರಿದ ಕೌರವರು ತತ್‌ಕ್ಷಣ ಸಾಂಬನನ್ನು ಅವನ ಪತ್ನಿ ಲಕ್ಷ್ಮಣೆಯನ್ನು ಬಲರಾಮನಿಗೆ ತಂದೊಪ್ಪಿಸಿ ಅವನ ಕ್ಷಮೆ ಬೇಡಿದರು.

ಹೀಗೆ ಬಲರಾಮನ ಯುಕ್ತಿ, ಶಕ್ತಿ ಅಪರಮಿತ. ಅವನು ಶ್ರೀ ಕೃಷ್ಣನ ವಿಸ್ತರಣೆಯಂತೆ. ಬಲರಾಮ ಸರ್ವಶಕ್ತ. ಬಲವೆಂದರೆ ಕೇವಲ ದೈಹಿಕ ಬಲವಲ್ಲ, ಆಧ್ಯಾತ್ಮಿಕ ಶಕ್ತಿ ಕೂಡ. ಜೀವನದಲ್ಲಿ ಏನೇ ಬಂದರೂ ಮೊದಲು ಅದನ್ನು ಸಮಾಧಾನದಿಂದ ಪರಿಹರಿಸುವ ಪ್ರಯತ್ನ ಮಾಡಬೇಕು. ಅದು ನಡೆಯದಿದ್ದಾಗ ಮುಂದಿನ ಹೆಜ್ಜೆ.

ಸಾಮ ದಾನ, ಭೇದ, ದಂಡ ಇವು ಯಾವುದೇ ಕೆಲಸವನ್ನು ಸಾಧಿಸಲು ಇರುವ ಚತುರೋಪಾಯ ಗಳು. ಒಳ್ಳೆಯ ಮಾತುಕತೆಯಿಂದ, ದಾನ ಅಂದರೆ ಉಪಕಾರ ಮಾಡುವುದರಿಂದ ಅದು ಆಗದಿದ್ದಾಗ ಭೇದ ಅಂದರೆ ಒಡೆದು ಕಾರ್ಯ ಸಿದ್ಧಿ ಮಾಡಿಕೊಳ್ಳುವುದು. ಕೊನೆಯದಾಗಿ ದಂಡ ಪ್ರಯೋಗಿಸ ಬೇಕು. ದುಷ್ಟರನ್ನು ಸದೆಬಡಿಯಲು ದಂಡವೇ ಸಾಧನ. ಆದರೆ ಬೇರೆ ಎಲ್ಲವೂ ನಿರುಪಯುಕ್ತ ವಾದಾಗ ಮಾತ್ರ. ಈ ಚತುರೋಪಾಯಗಳು ನಮಗೆ ತಿಳಿದಿರಲಿ.