ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiran Upadhyay Column: ಹಾಂಗ್‌ ಕಾಂಗ್ ನಲ್ಲಿ ಹರಿಶ್ಚಂದ್ರ...!

ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಬಸ್ ಅಥವಾ ಕಾರಿನಲ್ಲಿ ಹೋದರೆ ಐದರಿಂದ ಆರು ನಿಮಿಷದ ದಾರಿಯಾಗಿತ್ತು. ನಮ್ಮ ಜತೆ ಬಂದವರಬ್ಬರಿಗೆ ತುರ್ತಾಗಿ ಏನೋ ಖರೀದಿಸಬೇಕಾಗಿತ್ತು. “ಇಲ್ಲಿ ಹತ್ತಿರ ದಲ್ಲಿ ಪೇಟೆಯಾಗಲಿ, ಅಂಗಡಿಯಾಗಲಿ ಇದೆಯೇ?" ಎಂದು ಕೇಳಿದರು. “ಹತ್ತಿರದಲ್ಲಿ ಇರುವುದೆಲ್ಲ ಈಗ ಮುಚ್ಚಿರುತ್ತದೆ. ನಿಮಗೆ ತೀರಾ ಅವಶ್ಯಕತೆ ಇದ್ದರೆ ವಿಮಾನ ನಿಲ್ದಾಣದಲ್ಲಿ ಅಂಗಡಿಗಳಿವೆ, ಅಲ್ಲಿಗೇ ಹೋಗುವುದು ಒಳಿತು" ಎಂದು ಹೇಳಿದೆ

ಹಾಂಗ್‌ ಕಾಂಗ್ ನಲ್ಲಿ ಹರಿಶ್ಚಂದ್ರ...!

ವಿದೇಶವಾಸಿ

dhyapaa@gmail.com

ಕಳೆದ ಏಪ್ರಿಲ್ ತಿಂಗಳಿನ ಕೊನೆಯ ಒಂದು ವಾರ ಹಾಂಗ್ ಕಾಂಗ್ ದೇಶದಲ್ಲಿದ್ದೆ. ನನ್ನ ಜತೆ ಒಂದು ತಂಡವೇ ಇತ್ತು. ಹೆಚ್ಚೇನೂ ಹೇಳದೆ 2-3 ಜನರಿಗೆ ಆದ ಅನುಭವವನ್ನು ನಿಮ್ಮೊಂದಿಗೆ ಹಂಚಿ ಕೊಂಡರೆ ಅಷ್ಟೇ ಸಾಕು, ಅಲ್ಲಿಯ ಜನ ಹೇಗೆ ಎಂಬುದು ಮನದಟ್ಟಾಗುತ್ತದೆ. ಜತೆಗೆ, ನಮ್ಮ ದೇಶ ಕ್ಕೂ ಆ ದೇಶಕ್ಕೂ ಇರುವ ವ್ಯತ್ಯಾಸದ ಅರಿವಾಗುತ್ತದೆ. ಅಂದು ರಾತ್ರಿ ಸುಮಾರು ಹನ್ನೊಂದೂವರೆ ಆಗಿತ್ತು. ನಾವು ಉಳಿದುಕೊಂಡ ಹೋಟೆಲಿನಿಂದ ಪೇಟೆ, ಅಂಗಡಿಗಳು ದೂರವೇ ಇದ್ದವು. ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಪ್ರತಿ ಅರ್ಧ ಗಂಟೆಗೆ ಉಚಿತ ಬಸ್ ವ್ಯವಸ್ಥೆ ಇತ್ತು. ಆದರೆ ಅದು ಹನ್ನೊಂದು ಗಂಟೆಗೇ ಕೊನೆಯಾಗುತ್ತಿತ್ತು.

ಹೋಟೆಲ್‌ನಿಂದ ವಿಮಾನ ನಿಲ್ದಾಣಕ್ಕೆ ಬಸ್ ಅಥವಾ ಕಾರಿನಲ್ಲಿ ಹೋದರೆ ಐದರಿಂದ ಆರು ನಿಮಿಷದ ದಾರಿಯಾಗಿತ್ತು. ನಮ್ಮ ಜತೆ ಬಂದವರಬ್ಬರಿಗೆ ತುರ್ತಾಗಿ ಏನೋ ಖರೀದಿಸಬೇಕಾಗಿತ್ತು. “ಇಲ್ಲಿ ಹತ್ತಿರದಲ್ಲಿ ಪೇಟೆಯಾಗಲಿ, ಅಂಗಡಿಯಾಗಲಿ ಇದೆಯೇ?" ಎಂದು ಕೇಳಿದರು. “ಹತ್ತಿರದಲ್ಲಿ ಇರುವುದೆಲ್ಲ ಈಗ ಮುಚ್ಚಿರುತ್ತದೆ. ನಿಮಗೆ ತೀರಾ ಅವಶ್ಯಕತೆ ಇದ್ದರೆ ವಿಮಾನ ನಿಲ್ದಾಣದಲ್ಲಿ ಅಂಗಡಿಗಳಿವೆ, ಅಲ್ಲಿಗೇ ಹೋಗುವುದು ಒಳಿತು" ಎಂದು ಹೇಳಿದೆ.

ಆ ಸಂದರ್ಭದಲ್ಲಿ ಟ್ಯಾಕ್ಸಿಯಲ್ಲಿ ಹೋಗುವ ಅವಕಾಶ ಮಾತ್ರ ಇತ್ತು. ಅವರು ಟ್ಯಾಕ್ಸಿ ಹಿಡಿದು ವಿಮಾನ ನಿಲ್ದಾಣದ ಕಡೆಗೆ ಹೋದರು. ಮಾರನೆಯ ದಿನ ಬೆಳಗ್ಗೆ ತಿಂಡಿ ತಿನ್ನುವಾಗ ಅವರು ಪುನಃ ಭೇಟಿಯಾದರು. “ನಿನ್ನೆ ರಾತ್ರಿ ನಿಮ್ಮ ಕೆಲಸ ಆಯಿತೇ?" ಎಂದು ಕೇಳಿದೆ. ಅದಕ್ಕೆ ಅವರು ನಗುತ್ತಾ ಕೈ ಮುಗಿದು, “ಇದು ಎಂಥ ದೇಶ ಸ್ವಾಮಿ! ರಾತ್ರಿ ನಾನು ವಿಮಾನ ನಿಲ್ದಾಣಕ್ಕೆ ಹೋಗಿಬೇಕಾದ ವಸ್ತುವನ್ನು ಖರೀದಿಸಿದೆ.

ಅಲ್ಲಿಂದ ಹಿಂತಿರುಗಿ ಬರುವಾಗ ಪುನಃ ಟ್ಯಾಕ್ಸಿಯಲ್ಲಿ ಕುಳಿತು ನಮ್ಮ ಹೋಟೆಲ್ ಹೆಸರು ಹೇಳಿದೆ, ಆ ಟ್ಯಾಕ್ಸಿ ಚಾಲಕ ನನ್ನನ್ನು ಕುಳ್ಳಿರಿಸಿಕೊಂಡು ಹೊರಟ. ಸುಮಾರು ಒಂದು ಗಂಟೆ ಪ್ರಯಾಣಿಸಿದೆವು. ಆತ 4-5 ಹೋಟೆಲ್ ಎದುರು ಟ್ಯಾಕ್ಸಿ ನಿಲ್ಲಿಸಿದ್ದ. ಆದರೆ ನಮ್ಮ ಹೋಟೆಲ್ ಸಿಗಲಿಲ್ಲ. ರಾತ್ರಿ 2 ಗಂಟೆ ಆಗುತ್ತಿದ್ದಂತೆ ನಮ್ಮಿಬ್ಬರಲ್ಲೂ ಆತಂಕ ಶುರುವಾಯಿತು.

ಇದನ್ನೂ ಓದಿ: Kiran Upadhyay Column: ವಿಮಾನಯಾನದಲ್ಲಿ ಘನತೆ ಕಾಯ್ದುಕೊಳ್ಳದಿದ್ದರೆ ಹೇಗೆ ?

ಅಲ್ಲಿಯವರೆಗೆ ಟ್ಯಾಕ್ಸಿಯ ಮೀಟರ್‌ನಲ್ಲಿ 400 ಹಾಂಗ್ ಕಾಂಗ್ ಡಾಲರ್ ಆಯಿತು ಎಂದು ತೋರಿಸುತ್ತಿತ್ತು. ನನ್ನ ಬಳಿ ಅಷ್ಟು ಹಣ ಇರದ ಕಾರಣ ನಾನು ಅತೀವ ಆತಂಕಕ್ಕೆ ಒಳಗಾಗಿದ್ದೆ" ಎಂದರು. “ನಿಮ್ಮ ಬಳಿ ನನ್ನ ನಂಬರ್ ಇತ್ತಲ್ಲ, ನನಗೆ ಕರೆ ಮಾಡಬಹುದಿತ್ತಲ್ಲ?" ಎಂದೆ. ಅದಕ್ಕೆ, “ನಾನು ಚಾರ್ಜರ್ ಮರೆತು ಬಿಟ್ಟು ಬಂದಿದ್ದೆ. ಅದನ್ನು ತರಲೆಂದೇ ಅಂಗಡಿ ಹುಡುಕಿಕೊಂಡು ಹೊರಟಿದ್ದೆ. ನನ್ನ ಫೋನ್ ಡೆಡ್ ಆಗಿತ್ತು, ಯಾರಿಗೂ ಫೋನ್ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.

ಅಂಥದ್ದರಲ್ಲಿ ನಡುರಾತ್ರಿ 2-3 ತಾಸು ಅಪರಿಚಿತ ದೇಶದಲ್ಲಿ, ಭಾಷೆ ಅರ್ಥವಾಗದವನೊಂದಿಗೆ ಅಲೆದಾಡುವಾಗ ಆತಂಕವಾಗದೇ ಇದ್ದೀತೇ?" ಎಂದರು. “ಆಮೇಲೆ ಏನಾಯಿತು?" ಎಂದೆ. ಅದಕ್ಕೆ, “ನಮ್ಮ ಹೋಟೆಲ್ ವಿಮಾನ ನಿಲ್ದಾಣದಿಂದ ಕೇವಲ ಐದರಿಂದ ಆರು ನಿಮಿಷ ದೂರದಲ್ಲಿದೆ, ನಾವು ಖಂಡಿತವಾಗಿಯೂ ದಾರಿ ತಪ್ಪಿದ್ದೇವೆ" ಎಂದಾಗ ಆತ ಪುನಃ ವಿಮಾನ ನಿಲ್ದಾಣದ ಬಳಿ ಕರೆದುಕೊಂಡು ಬಂದು, ಅದರ ಸುತ್ತಮುತ್ತಲಿರುವ ಹೋಟೆಲ್‌ಗಳನ್ನೆಲ್ಲ ಹುಡುಕಾಡಿದ.

ಅಂತೂ ಬೆಳಗಿನ ಜಾವ 3 ಗಂಟೆಯ ಹೊತ್ತಿಗೆ ಸರಿಯಾದ ಜಾಗಕ್ಕೆ ಬಂದು ತಲುಪಿದೆವು. ಹೋಟೆಲ್ ಎದುರು ಬಂದು ನಿಂತಾಗ ಮೀಟರ್‌ನಲ್ಲಿ 400 ಡಾಲರ್ ಎಂದು ತೋರಿಸುತ್ತಿತ್ತು. ನನ್ನ ಬಳಿ ಅಷ್ಟು ಹಣವೂ ಇರಲಿಲ್ಲ. ಏನು ಮಾಡುವುದೆಂದು ಯೋಚಿಸುತ್ತಿರುವಾಗಲೇ, ಆತ ನನ್ನನ್ನು ಇಳಿಸಿ

“15 ಡಾಲರ್ ಕೊಡಿ" ಎಂದ. ನಾನೇ ತಪ್ಪು ಕೇಳಿಸಿಕೊಳ್ಳುತ್ತಿದ್ದೇನೆ ಅನಿಸಿತು. ಇನ್ನೊಮ್ಮೆ ಅವನಲ್ಲಿ ಖಚಿತಪಡಿಸಿಕೊಂಡೆ. “ಮೀಟರ್‌ನಲ್ಲಿ ಅಷ್ಟು ತೋರಿಸುತ್ತಿದೆ ನಿಜ. ಆದರೆ ನಿಮ್ಮ ಹೋಟೆಲ್ ವಿಮಾನ ನಿಲ್ದಾಣಕ್ಕೆ ತೀರಾ ಹತ್ತಿರದಲ್ಲಿದೆ. ಅಲ್ಲಿಂದ ಇಲ್ಲಿಗೆ ನೇರವಾಗಿ ಬಂದರೆ 15 ಡಾಲರ್ ಅಷ್ಟೇ ಆಗುವುದು. ನಾನು ಸುಮಾರು ಎರಡೂವರೆಯಿಂದ ಮೂರು ತಾಸು ನಿಮ್ಮನ್ನು ಮಧ್ಯರಾತ್ರಿಯಲ್ಲಿ ವಿನಾಕಾರಣ ಸುತ್ತಾಡಿಸಿದೆ, ಇದರಲ್ಲಿ ನಿಮ್ಮ ತಪ್ಪೇನೂ ಇರಲಿಲ್ಲ.

ನನ್ನಿಂದಾಗಿ ನಿಮ್ಮ ಸಮಯ, ನಿದ್ರೆ ಎರಡೂ ಹಾಳಾಯಿತು. ದಯವಿಟ್ಟು ಕ್ಷಮಿಸಿ, ನಿಲ್ದಾಣದಿಂದ ಇಲ್ಲಿಗೆ ಬಂದರೆ ಎಷ್ಟು ಬಾಡಿಗೆ ಆಗುತ್ತದೆಯೋ ಅಷ್ಟನ್ನೇ ಕೊಡಿ ಸಾಕು" ಎಂದ. ನಾನು ಹೋಟೆಲ್ ವಿಳಾಸವನ್ನು ಸರಿಯಾಗಿ ಹೇಳದೇ ಇದ್ದುದರಿಂದ ಇದರಲ್ಲಿ ನನ್ನ ತಪ್ಪೂ ಇದೆ, ಪೂರ್ತಿ ಅವನದ್ದೇ ಅಲ್ಲ ಎಂದು 100 ಡಾಲರ್ ಕೊಟ್ಟೆ. ಆತ 85 ಡಾಲರ್ ಹಿಂತಿರುಗಿಸಿ, ಮತ್ತೊಮ್ಮೆ ಕ್ಷಮೆ ಕೇಳಿ ಅಲ್ಲಿಂದ ಹೊರಟು ಹೋದ.

ಜನ ಇಷ್ಟು ಪ್ರಾಮಾಣಿಕರಾಗಿರುತ್ತಾರೆಯೇ ಎಂದು ನನಗೆ ಆಶ್ಚರ್ಯವಾಯಿತು ಎಂದರು. ಇದೇ ರೀತಿಯ ಅನುಭವ ಇನ್ನಿಬ್ಬರಿಗೂ ಆಗಿತ್ತು. ಅವರೂ ತಮ್ಮ ಅನುಭವ ಹಂಚಿಕೊಂಡರು. ಅವರಿಬ್ಬರೂ ಆ ರಾತ್ರಿ ಏನೋ ಕೊಳ್ಳಲು ಟ್ಯಾಕ್ಸಿ ಹತ್ತಿ ಹೊರಟರಂತೆ. ತಮಗೆ ಬೇಕಾದ ವಸ್ತು ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಕರೆದುಕೊಂಡು ಹೋಗು ಎಂದು ಟ್ಯಾಕ್ಸಿಯವನಲ್ಲಿ ಹೇಳಿದರಂತೆ.

ಅವನು ಎಲ್ಲಿಗೆ ಹೋದರೂ ಆ ಅಂಗಡಿಗಳು ಮುಚ್ಚಿದ್ದವಂತೆ. ಸುಮಾರು ಅರ್ಧ-ಮುಕ್ಕಾಲು ಗಂಟೆ ಸುತ್ತಿದರೂ ಪ್ರಯೋಜನವಾಗದಿದ್ದಾಗ, ಪುನಃ ಹೋಟೆಲ್‌ಗೆ ಬಂದರಂತೆ. ಎಷ್ಟಾಯಿತು ಎಂದು ಕೇಳಿದಾಗ, ಆ ಟ್ಯಾಕ್ಸಿ ಚಾಲಕ ಹಣ ಬೇಡ ಎಂದನಂತೆ. ಕಾರಣ ಕೇಳಿದಾಗ, “ನಿಮ್ಮ ಕೆಲಸ ಆಗಲಿಲ್ಲ, ಸುಮ್ಮನೆ ನಿಮ್ಮ ಸಮಯ ಹಾಳಾಯಿತು, ಕ್ಷಮಿಸಿ" ಎಂದು ಹೊರಟು ಬಿಟ್ಟನಂತೆ.

ಇದಾಗಿ ಎರಡು ದಿನವಾಗಿತ್ತು. ನಾವೆಲ್ಲ ಪಕ್ಕದ ಇರುವ ಮಕಾವು ದೇಶಕ್ಕೆ ಹೋಗಿ ಹಿಂತಿರುಗಿ ಬರುತ್ತಿದ್ದೆವು. ಹಾಂಗ್ ಕಾಂಗ್‌ನಿಂದ ಮಕಾವುಗೆ ಹೋಗಿ ಬರಲು ಮೂರು ವಿಧಾನವಿದೆ. ವಾಯು ಮಾರ್ಗ, ಸೇತುವೆಯ ಅಥವಾ ಜಲಮಾರ್ಗ. ಹಾಂಗ್ ಕಾಂಗ್‌ನಿಂದ ಆ ಪುಟ್ಟ ದೇಶಕ್ಕೆ ಹೋಗಿ ಬರಲು ನಾಲ್ಕು ಸೇತುವೆಗಳಿವೆ.

ಸೇತು ಮಾರ್ಗವಾಗಲಿ, ಜಲಮಾರ್ಗವಾಗಲಿ, ಪ್ರಯಾಣಕ್ಕೆ ಒಂದು ಗಂಟೆಯ ಸಮಯ ಬೇಕು. ಕೆಲವು ಕಾರಣಗಳಿಂದ ಬಹುತೇಕ ಮಂದಿ ಜಲಮಾರ್ಗವಾಗಿ, ಫೆರ್ರಿ ಅಥವಾ ದೊಡ್ಡ ದೋಣಿಯಲ್ಲಿ ಹೋಗುವುದನ್ನು ಇಷ್ಟಪಡುತ್ತಾರೆ. ನಮ್ಮ ತಂಡವೂ ಅದನ್ನೇ ಆಯ್ದುಕೊಂಡಿತ್ತು. ನಮ್ಮ ತಂಡ ದಲ್ಲಿ ಒಬ್ಬರು ಶಾಸಕರಿದ್ದರು.

ಮಕಾವುನಿಂದ ಹಿಂತಿರುಗಿ ಹಾಂಗ್ ಕಾಂಗ್‌ಗೆ ಬಂದು ಇಳಿದು ಇಮಿಗ್ರೇಷನ್ ಮುಗಿಸಿ ಹೊರಗೆ ಬಂದ ನಂತರ ತಾವು ದೋಣಿಯಲ್ಲಿ ಮೊಬೈಲ್ ಫೋನ್ ಬಿಟ್ಟು ಬಂದಿರುವುದು ಅವರ ಅರಿವಿಗೆ ಬಂತು. ಹಿಂತಿರುಗಿ ಹೋಗಿ ದೋಣಿಯಲ್ಲಿರುವ ಮೊಬೈಲ್ ತೆಗೆದುಕೊಂಡು ಬರಬೇಕೆಂದರೆ, ಆಗಲೇ ಕಾನೂನುಬದ್ಧವಾಗಿ ಹಾಂಗ್ ಕಾಂಗ್ ದೇಶದ ಒಳಗೆ ಬಂದಾಗಿತ್ತು. ದಡದಲ್ಲಿ ಇರುವ ದೋಣಿಗೆ ಹೋಗಬೇಕೆಂದರೂ ಕಾನೂನು ಬದ್ಧವಾಗಿ ದೇಶದಿಂದ ಹೊರಗೆ ಹೋಗಿ, ಮೊಬೈಲ್ ಪಡೆದು, ಪುನಃ ದೇಶದೊಳಗೆ ಬರುವಾಗ ಯಾವ ನಡಾವಳಿಗಳಿವೆಯೋ, ಪ್ರಕ್ರಿಯೆಗಳಿವೆಯೋ ಅವನ್ನೆಲ್ಲ ಪೂರೈಸಿ ಯೇ ಬರಬೇಕಾಗಿತ್ತು.

ಶಾಸಕರಿಗೆ ಹೊಸ ಮೊಬೈಲ್ ಖರೀದಿಸುವುದು ದೊಡ್ಡ ವಿಷಯವೇನೂ ಆಗಿರಲಿಲ್ಲ. ಇಲ್ಲಿ ಹಣದ ವಿಷಯ ಪ್ರಧಾನವೇ ಆಗಿರಲಿಲ್ಲ. ಆದರೆ ಅದರಲ್ಲಿರುವ ಸಾವಿರಾರು ದೂರವಾಣಿ ಸಂಖ್ಯೆಗಳು, ಒಂದಷ್ಟು ಫೋಟೋಗಳು, ಆಧಾರ್ ಕಾರ್ಡ, ಪಾನ್ ಕಾರ್ಡ್ ನಂಥ ಕೆಲವು ದಾಖಲೆಗಳು ಕಳೆದು ಹೋದರೆ ಯಾರಿಗಾದರೂ ಕಷ್ಟವೇ. ‌

ನಮ್ಮ ಜತೆಗಿದ್ದ ಗೈಡ್ ಶಾಸಕರನ್ನು ಕರೆದುಕೊಂಡು ಹೋಗಿ, ಅಧಿಕಾರಿಗಳ ಜತೆ ಸಂಪರ್ಕ ಸಾಽಸಿ, ವಿಷಯವನ್ನು ವಿವರಿಸಿದರು. ಆದರೆ, ನಾವು ಬಂದಿದ್ದ ದೋಣಿ ಆಗಲೇ ಹಾಂಗ್ ಕಾಂಗ್ ಬಿಟ್ಟು ಮಕಾವು ಕಡೆಗೆ ತೆರಳಿತ್ತು. ಹಾಂಗ್ ಕಾಂಗ್‌ನಿಂದ ಮಕಾವುಗೆ ಹೋಗಲು ಒಂದು ಗಂಟೆ, ಅಲ್ಲಿ ಜನರನ್ನು ಇಳಿಸಿ, ಬೇರೆಯವರನ್ನು ಹತ್ತಿಸಿಕೊಳ್ಳಲು ಒಂದು ಗಂಟೆ, ಹಿಂತಿರುಗಿ ಬರಲು ಒಂದು ಗಂಟೆ, ಹೀಗೆ ಕನಿಷ್ಠ ಮೂರು ಗಂಟೆ ಬೇಕಾಗಿತ್ತು.

ಶಾಸಕರ ಬಳಿ ಸಮಯದ ಕೊರತೆಯೇನೂ ಇರಲಿಲ್ಲ. ಆದರೆ ಮೂರು ಗಂಟೆ ಆ ಬಂದರಿನಲ್ಲಿ ಏನು ಮಾಡುವುದು? ಅಷ್ಟಕ್ಕೂ ಮೊಬೈಲ್ ಸಿಕ್ಕೇ ಬಿಡುತ್ತದೆ ಎನ್ನುವ ‘ಗ್ಯಾರಂಟಿ’ಯಾದರೂ ಏನು? ದೂರು ಕೊಟ್ಟು, ಜತೆಗಿದ್ದ ಅವರ ಮಗನ ದೂರವಾಣಿ ಸಂಖ್ಯೆಯನ್ನು ನೀಡಿ, ಮೊಬೈಲ್ ಸಿಕ್ಕಿದರೆ ತಿಳಿಸಿ ಎಂದು ಕೇಳಿಕೊಂಡು, ನಮ್ಮ ಜತೆ ಅವರೂ ಹೊರಟರು.

ಬರೋಬ್ಬರಿ ಮೂರು ಗಂಟೆಯ ನಂತರ ಶಾಸಕರ ಮಗನಿಗೆ ಬಂದರಿನ ಅಧಿಕಾರಿಗಳಿಂದ ಕರೆ ಬಂತು. ಮೊಬೈಲ್ ಸಿಕ್ಕಿರುವುದಾಗಿಯೂ, ಬಂದು ತೆಗೆದುಕೊಂಡು ಹೋಗಬೇಕೆಂದೂ ಅಲ್ಲಿಯ ಅಽಕಾರಿಗಳು ತಿಳಿಸಿದರು. ಶಾಸಕರ ಅದೃಷ್ಟ ಚೆನ್ನಾಗಿತ್ತು. ಏನಿಲ್ಲವೆಂದರೂ ಐದು ನೂರು ಜನ ಹೋಗಿ ಬರುವಂಥ ಒಂದು ದೋಣಿಯಲ್ಲಿ ಕಳೆದುಕೊಂಡ ಮೊಬೈಲ್ ಪುನಃ ಸಿಕ್ಕಿದ್ದನ್ನು ಕಂಡು ಶಾಸಕರಿಗೇ ಆಶ್ಚರ್ಯವಾಗಿರಬೇಕು!

ಇನ್ನೊಂದು ಸಣ್ಣ, ಪ್ರಮುಖ ಘಟನೆ ಹೇಳಿ ಬಿಡುತ್ತೇನೆ. ನಾವು ಉಳಿದುಕೊಂಡಿದ್ದ ಹೋಟೆಲ್‌ನ ರಿಸೆಪ್ಶನ್‌ನಲ್ಲಿ ಯಾರೋ ಒಂದು ಸಣ್ಣ ಬಗಲಚೀಲವನ್ನು ಮರೆತು ಹೋಗಿದ್ದರು. ನಮ್ಮ ತಂಡ ದವರದ್ದೇ ಇರಬೇಕೆಂದು ಕೇಳಿದರೆ, ಅದು ನಮ್ಮವರದ್ದಾಗಿರಲಿಲ್ಲ. ಸರಿ, ಯಾರೋ ಮರೆತಿರ ಬೇಕೆಂದು ಅದನ್ನು ಹೋಟೆಲ್ ಸಿಬ್ಬಂದಿಗೆ ಕೊಟ್ಟೆ.

ಆ ಹೋಟೆಲಿನ ರಿಸೆಪ್ಶನ್‌ನಲ್ಲಿ ನಾಲ್ಕು ಜನರಿದ್ದರು. ನನ್ನಿಂದ ಚೀಲ ಪಡೆದಾಕೆ ಉಳಿದ ಮೂವರನ್ನೂ ಕರೆದಳು. ಅವರ ಸಮ್ಮುಖದಲ್ಲಿ ಚೀಲ ತೆರೆದು ನೋಡಿದರೆ ಒಂದು ಕಂತೆ ಡಾಲರ್, ಒಂದಷ್ಟು ಚೀಟಿಗಳಿದ್ದವೇ ವಿನಾ ಪರಿಚಯದ ಯಾವ ಕುರುಹುಗಳೂ ಇರಲಿಲ್ಲ. ಮಾರನೆಯ ದಿನ ನಾನು ರಿಸೆಪ್ಶನ್‌ಗೆ ಹೋದಾಗ, ಅಲ್ಲಿ ಕೆಲಸ ಮಾಡುವವರು ಬದಲಾಗಿದ್ದರು. ಆದರೆ ಆ ಚೀಲ ಅಲ್ಲಿಯೇ ಇತ್ತು. ಅಲ್ಲಿಗೆ ಆಗಲೇ ಸುಮಾರು ಮೂವತ್ತಾರು ಗಂಟೆ ಕಳೆದಿತ್ತು. ಒಂದು ತಂಡ, ನಾಲ್ಕು ದಿನದ ಪ್ರವಾಸ, ನಾಲ್ಕು ಘಟನೆಗಳು, ಅನುಭವಗಳು!

ಇದನ್ನೆಲ್ಲ ಕೇಳಿದಾಗ, ಕಂಡಾಗ, ಹರಿಶ್ಚಂದ್ರ ಹುಟ್ಟಿದ್ದು ಭಾರತದ ಅಥವಾ ಹಾಂಗ್ ಕಾಂಗ್‌ನ ಎಂಬ ಅನುಮಾನ ಬಂದದ್ದು ಸುಳ್ಳಲ್ಲ. ಭಾರತದ ಹುಟ್ಟಿದ್ದರೂ, ಹಾಂಗ್ ಕಾಂಗ್‌ಗೆ ಎಂದಾದರೂ ಬಂದು ಹೋಗಿದ್ದನೇ? ಅಥವಾ ಹರಿಶ್ಚಂದ್ರನಂಥವರು ಯಾರಾದರೂ ಆ ದೇಶದಲ್ಲೂ ಹುಟ್ಟಿದ್ದರೇ ಎಂಬ ಸಂಶಯ ಮೂಡಿದ್ದಂತೂ ಸತ್ಯ. ನಮ್ಮ ದೇಶದಲ್ಲಿ ಪ್ರಾಮಾಣಿಕರು ಇಲ್ಲವೇ ಇಲ್ಲವೆಂದಲ್ಲ. ಆದರೆ, ಹಾಂಗ್ ಕಾಂಗ್‌ಗೆ ಹೋಲಿಸಿದರೆ ತೀರಾ ಕಡಿಮೆ ಎಂದೇ ಹೇಳಬೇಕು.

ಹೊಸಬರು, ಪ್ರವಾಸಿಗರು ಎಂದು ತಿಳಿಯುತ್ತಿದ್ದಂತೆಯೇ ವಿನಾಕಾರಣ ಊರು ಸುತ್ತಿಸುವ ಟ್ಯಾಕ್ಸಿ ಅಥವಾ ಆಟೋರಿಕ್ಷಾ ಚಾಲಕರ ಸಂಖ್ಯೆ ಎಷ್ಟಿಲ್ಲ? ನನ್ನ ನಾಲ್ಕು ಬಾರಿಯ ಹಾಂಗ್ ಕಾಂಗ್ ಪ್ರವಾಸದಲ್ಲಿ ಮೀಟರ್ ಹಾಕದೇ ನಡೆಸಿದ ಟ್ಯಾಕ್ಸಿಯನ್ನು ಒಮ್ಮೆಯೂ ಕಂಡಿಲ್ಲ. ಮೀಟರ್ ಮೇಲೆ ಇಂತಿಷ್ಟು ಕೊಡಿ, ಅಲ್ಲಿಂದ ಹಿಂತಿರುಗಿ ಬರುವಾಗ ಬಾಡಿಗೆ ಸಿಗುವುದಿಲ್ಲ ಎಂಬ ಸಬೂಬು ಹೇಳಿದ ವರನ್ನು ನೋಡಿಲ್ಲ.

ಹೋಗಲಿ, ಸಾವಿರಾರು ರೂಪಾಯಿ ಬೆಲೆ ಬಾಳುವ ಮೊಬೈಲ್ ಸಿಕ್ಕಿದಾಗ ಹಿಂತಿರುಗಿ ತಲುಪಿಸುವ ಜನ ನಮ್ಮಲ್ಲಿ ಎಷ್ಟಿದ್ದಾರೆ ಎನ್ನುವುದನ್ನು ನಾವೇ ಪ್ರಶ್ನಿಸಿಕೊಳ್ಳೋಣ. ಇಂಥ ವಿಷಯ ಬಂದಾಗ, ನಮ್ಮಲ್ಲಿ ಫಟಿಂಗರ ಸಂಖ್ಯೆ ಪ್ರಾಮಾಣಿಕರಿಗಿಂತ ಹೆಚ್ಚೇ ಇದೆ ಎಂದು ಪ್ರಾಮಾಣಿಕವಾಗಿ ಒಪ್ಪಿ ಕೊಳ್ಳೋಣ. ಹಾಗಾದರೆ ನಾವು ಎಲ್ಲಿ ಎಡವುತ್ತಿದ್ದೇವೆ? ಕೇವಲ ಹರಿಶ್ಚಂದ್ರ ಹುಟ್ಟಿದ ನಾಡು ಎನ್ನುವ ಕಾರಣಕ್ಕಾಗಿ ಪ್ರಾಮಾಣಿಕತೆ ರಕ್ತಗತವಾಗಿ ಬರುವುದಿಲ್ಲ, ಜನರ ಬಾಯಲ್ಲಿ ಸತ್ಯವೇ ಹೊರಗೆ ಬರುವುದಿಲ್ಲ ಎನ್ನುವುದಕ್ಕೆ ನಮ್ಮ ದೇಶವೇ ಸಾಕ್ಷಿ.

ಇಂದಿನ ತಲೆಮಾರಿನಲ್ಲಿ ಅದೆಷ್ಟೋ ಜನರಿಗೆ ಹರಿಶ್ಚಂದ್ರನ ಕಥೆಯೇ ಗೊತ್ತಿಲ್ಲ. ಹರಿಶ್ಚಂದ್ರ ಹುಟ್ಟ ದಿದ್ದರೂ, ಭೇಟಿಕೊಡದಿದ್ದರೂ, ಇನ್ನೊಂದು ದೇಶದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯ ನೆಲೆಯೂರಿದೆ ಎಂದರೆ, ಅದು ಅಲ್ಲಿಯ ಮಕ್ಕಳಿಗೆ ಅವರ ಮನೆಯಿಂದಲೇ ಸಿಗುವ ಸಂಸ್ಕಾರ ಎಂದೇ ಹೇಳಬೇಕು. ಬಹುಶಃ ನಮ್ಮಲ್ಲಿ ಕೊರತೆಯಾಗುತ್ತಿರುವುದು ಇದೇ.

ಲೆಕ್ಕಾಚಾರ, ಗಣಿತ, ವಿಜ್ಞಾನ, ತಂತ್ರಜ್ಞಾನ, ಭಾಷೆ, ಸ್ಪರ್ಧಾತ್ಮಕ ಪರೀಕ್ಷೆಗೆ ನಮ್ಮ ಮಕ್ಕಳನ್ನು ತಯಾರು ಮಾಡುವ ಭರದಲ್ಲಿ ನಾವು ಮಕ್ಕಳಿಗೆ ನೀತಿಪಾಠ ಹೇಳಿಕೊಡುವುದನ್ನೇ ಮರೆಯು ತ್ತಿದ್ದೇವೆ ಎಂದೆನಿಸುತ್ತದೆ. ನಮ್ಮ ಮಕ್ಕಳಿಗೆ ಪ್ರಾಮಾಣಿಕತೆಯ ಪಾಠವನ್ನು ನಾವೇ ಹೇಳಿಕೊಡ ಬೇಕೇ ವಿನಾ, ಪಕ್ಕದ ಪಾಕಿಸ್ತಾನದಿಂದ ಬಯಸಿದರೆ ಯಾವ ಪ್ರಯೋಜನವೂ ಇಲ್ಲ!