Kiran Upadhyay Column: ಎತ್ತರಕ್ಕೆ ಏರುತ್ತಿರುವ ಕಿಲೋಮೀಟರ್ ರೇಸ್
ಅಡ್ಡಡ್ಡವಾಗಿ ಕಟ್ಟಿಕೊಳ್ಳುತ್ತಿದ್ದ ಮನೆ, ಊರು, ಪಟ್ಟಣಗಳು ಮುಂದೊಂದುದಿನ ಎತ್ತರೆತ್ತರವಾಗಿ ಮರ ಗಳಂತೆ ಬೆಳೆಯುತ್ತವೆ, ಅಲ್ಲ, ಮರಗಳನ್ನೂ ಮೀರಿಸಿ ಬೆಳೆಯುತ್ತವೆ ಎಂದೂ ಆ ಕಾಲದಲ್ಲಿ ಊಹಿಸಿರ ಲಿಕ್ಕಿಲ್ಲ. ಮೊದಲ ಮಹಡಿ ಕಂಡಾಗ ಜನ ಹೇಗೆ ಪ್ರತಿಕ್ರಿಯೆ ನೀಡಿರಬಹುದು, ಕಟ್ಟಿದವರು ಎಷ್ಟು ಹೆಮ್ಮೆಪಟ್ಟಿರಬಹುದು ಎಂದು ಯೋಚಿಸುವಾಗ ಅಚ್ಚರಿಯಾಗುವುದು ಸಹಜ. ಆದರೆ ಈಗ, ಬಾನೆತ್ತರಕ್ಕೆ ಬಿಲ್ಡಿಂಗ್ ಕಟ್ಟುವುದು ರೂಢಿಯೂ, ಸಹಜವೂ ಆಗಿದೆ.
-
ವಿದೇಶವಾಸಿ
ಮಾಳಿಗೆಯ ಮೇಲೊಂದು ಮಾಳಿಗೆ ಕಟ್ಟುವ ವಿಚಾರ ಮೊದಲು ಯಾರಿಗೆ ಬಂತು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಸಾವಿರಾರು ವರ್ಷಗಳ ಹಿಂದೆಯೇ ಈ ಯೋಚನೆ, ಯೋಜನೆ ಅಳವಡಿಸಿಕೊಂಡವರು ಯಾರೇ ಇದ್ದಿರಬಹುದು, ಉದ್ದ ಅಥವಾ ದೂರ ಅಳೆಯುವ ಮೀಟರ್, ಕಿಲೋಮೀಟರ್ ಲೆಕ್ಕ ಎತ್ತರ ಅಳೆಯುವ ಮಾಪನ ಆಗಬಹುದೆಂದು ಆ ಕಾಲದಲ್ಲಿ ಯಾರೂ ಎಣಿಸಿರಲಿಕ್ಕಿಲ್ಲ.
ಅಡ್ಡಡ್ಡವಾಗಿ ಕಟ್ಟಿಕೊಳ್ಳುತ್ತಿದ್ದ ಮನೆ, ಊರು, ಪಟ್ಟಣಗಳು ಮುಂದೊಂದುದಿನ ಎತ್ತರೆತ್ತರವಾಗಿ ಮರಗಳಂತೆ ಬೆಳೆಯುತ್ತವೆ, ಅಲ್ಲ, ಮರಗಳನ್ನೂ ಮೀರಿಸಿ ಬೆಳೆಯುತ್ತವೆ ಎಂದೂ ಆ ಕಾಲದಲ್ಲಿ ಊಹಿಸಿರಲಿಕ್ಕಿಲ್ಲ. ಮೊದಲ ಮಹಡಿ ಕಂಡಾಗ ಜನ ಹೇಗೆ ಪ್ರತಿಕ್ರಿಯೆ ನೀಡಿರಬಹುದು, ಕಟ್ಟಿದವರು ಎಷ್ಟು ಹೆಮ್ಮೆಪಟ್ಟಿರಬಹುದು ಎಂದು ಯೋಚಿಸುವಾಗ ಅಚ್ಚರಿಯಾಗುವುದು ಸಹಜ. ಆದರೆ ಈಗ, ಬಾನೆತ್ತರಕ್ಕೆ ಬಿಲ್ಡಿಂಗ್ ಕಟ್ಟುವುದು ರೂಢಿಯೂ, ಸಹಜವೂ ಆಗಿದೆ.
ಕ್ರಿ.ಪೂ.2560ರಲ್ಲಿ ಕಟ್ಟಿದ ಈಜಿಪ್ಟ್‌ನ ಗೀಜಾ ಪಿರಾಮಿಡ್‌ಗಳು ಮಾನವ ನಿರ್ಮಿತ ಎತ್ತರದ ಸ್ಥಾವರ ಗಳು. 146 ಮೀಟರ್ ಎತ್ತರದ ಈ ಪಿರಾಮಿಡ್ ಸುಮಾರು 3800 ವರ್ಷ ಈ ದಾಖಲೆ ಹೊಂದಿತ್ತು. ಈ ದಾಖಲೆ ಮೊದಲು ಮುರಿದದ್ದು 1311ರಲ್ಲಿ 160 ಮೀಟರ್ ಎತ್ತರದ ಲಿಂಕನ್ ಕೆಥೆಡ್ರಲ್ ನಿರ್ಮಾಣಗೊಂಡಾಗ. ಇದೂ ಕೂಡ ಸುಮಾರು 238 ವರ್ಷಗಳ ಕಾಲ ವಿಶ್ವದ ಎತ್ತರದ ಸ್ಥಾವರ ಎಂಬ ದಾಖಲೆ ಹೊಂದಿತ್ತು. ಆ ದಿನಗಳಲ್ಲಿ ಎತ್ತರದ ಸ್ಥಾವರಗಳು ಎಂದರೆ ಕೆಥೆಡ್ರಲ್ ಅಥವಾ ಚರ್ಚುಗಳದ್ದೇ ಇರುತ್ತಿದ್ದವು.
ಸಾಧ್ಯವಾದಷ್ಟು ಎತ್ತರದಲ್ಲಿ ಗಂಟೆ ನೇತು ಹಾಕುವುದು ಮತ್ತು ಸಾಧ್ಯವಾದಷ್ಟು ದೂರದಿಂದ ಜನರು ಈ ಸ್ಥಳಗಳನ್ನು ಗುರುತಿಸಲು ಅನುಕೂಲವಾಗಲಿ ಎಂಬುದು ಇದರ ಮೂಲ ಉದ್ದೇಶ ವಾಗಿತ್ತು. ನಂತರದ ದಿನಗಳಲ್ಲಿ ಸಾಕಷ್ಟು ರೇಡಿಯೋ ಮತ್ತು ಟೆಲಿವಿಷನ್ ಟವರ್‌ಗಳು ನಿರ್ಮಾಣ ಗೊಂಡವು. ಈ ದಾಖಲೆ ಮುರಿದದ್ದು 1884ರಲ್ಲಿ ನಿರ್ಮಾಣಗೊಂಡ ವಾಷಿಂಗ್ಟನ್ ಸ್ಥಾವರ ಅಥವಾ ವಾಷಿಂಗ್ಟನ್ ಮೆಮೊರಿಯಲ್. ಇದರ ನಿರ್ಮಾಣ ಕಾರ್ಯ ಆರಂಭವಾದದ್ದು 1833ರಲ್ಲಿ. ಆಗ ಕಟ್ಟಡಕ್ಕೆಂದು ನಿಧಿ ಸಂಗ್ರಹಣೆಗೊಂಡದ್ದು ಇಪ್ಪತ್ತೆಂಟು ಸಾವಿರ ಡಾಲರ್‌ಗಳು ಮಾತ್ರ.
ಇದನ್ನೂ ಓದಿ: Kiran Upadhyay Column: ಅಮೆರಿಕ ಇನ್ನೊಂದು ಯುದ್ಧ ಗೆದ್ದಿದೆ !?
ಆರಂಭಗೊಂಡು ಮೂರು ವರ್ಷದ ಹಣದ ಅಭಾವದಿಂದ ಕಾರ್ಯ ಸ್ಥಗಿತಗೊಂಡಿತ್ತು. ಕಾರ್ಯ ಪುನಃ ಆರಂಭಗೊಳ್ಳಲು ಹನ್ನೆರಡು ವರ್ಷಗಳೇ ಹಿಡಿದವು. ಈ ಸ್ಮಾರಕ ಸಂಪೂರ್ಣಗೊಂಡು ಕಾರ್ಯಾರಂಭ ಮಾಡುವವರೆಗೆ ಭರ್ತಿ ಐದು ದಶಕಗಳೇ ಕಳೆದಿದ್ದವು. ಅದಾಗಿ ಇಪ್ಪತ್ತು ವರ್ಷಗಳ ನಂತರ ಹದಿನೈದು ಮಿಲಿಯನ್ ಡಾಲರ್ ವೆಚ್ಚದಲ್ಲಿ ಇದನ್ನು ನವೀಕರಿಸಿ, ಹೊಸ ರೂಪ ನೀಡಲಾಯಿತು.
ಆರಂಭದ ದಿನಗಳಲ್ಲಿ ಪ್ರತಿ ತಿಂಗಳು ಐವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸೆಳೆಯುವಲ್ಲಿ ಇದು ಸಫಲವಾಯಿತು. ನಿಜವಾಗಿ ಜನರು ಆಕಾಶಕ್ಕೆ ಸಮೀಪವಾಗಲು ಆರಂಭವಾದದ್ದೇ ಇಲ್ಲಿಂದ ಎಂದರೆ ತಪ್ಪಾಗಲಾರದು. ಆದರೆ ಈ ದಾಖಲೆಯ ಆಯಸ್ಸು ಐದು ವರ್ಷಕ್ಕೇ ಮುಗಿದುಹೋಯಿತು. ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ 324 ಮೀಟರ್ ಎತ್ತರದ ಐಫೆಲ್ ಟವರ್ ನಭದ ಓಟದಲ್ಲಿ ಇದನ್ನು ಹಿಂದಿಕ್ಕಿ ಹೊಸ ಇತಿಹಾಸ ನಿರ್ಮಿಸಿತು. 1998ರಲ್ಲಿ ಈ ದಾಖಲೆ ಮುರಿದದ್ದು ಮಲೇಶಿಯಾ. ರಾಜಧಾನಿ ಕೌಲಾಲಂಪುರ್‌ನಲ್ಲಿ ನಿರ್ಮಿಸಲಾದ 452 ಮೀಟರ್ ಎತ್ತರದ ಪೆಟ್ರೊನಾಸ್ ಅವಳಿ ಸ್ಥಾವರಗಳು ನೂತನ ವಿಶ್ವದಾಖಲೆ ಬರೆದವು.
ಇಂದು ಅದೇ ಪೆಟ್ರೊನಾಸ್ ಏಳನೆಯ ಸ್ಥಾನದಲ್ಲಿದೆ. ಮೊದಲೆಲ್ಲ ಸ್ಥಾವರಗಳೆಂದರೆ ಪ್ರೇಕ್ಷಣೀಯ ಸ್ಥಳಗಳಾಗಿದ್ದು, ಜನರು ಹತ್ತಿ ಇಳಿದು ಬರುತ್ತಿದ್ದರು. ಕ್ರಮೇಣ ಗಗನಚುಂಬಿ ಕಟ್ಟಡಗಳಲ್ಲಿ ಮಾಲ್ ಗಳು, ಕಚೇರಿಗಳು, ಮನೆಗಳು ನಿರ್ಮಾಣಗೊಂಡು ನಗರಗಳು ಅಡ್ಡಡ್ಡ ಬೆಳೆಯುವ ಬದಲು ಎತ್ತರಕ್ಕೆ ಬೆಳೆಯಲಾರಂಭಿಸಿದವು.
ಚಿಕಾಗೊ ಮೂಲದ ‘ಕೌನ್ಸಿಲ್ ಆನ್ ಟಾಲ್ ಬಿಲ್ಡಿಂಗ್ಸ್ ಎಂಡ್ ಅರ್ಬನ್ ಹೆಬಿಟ್ಯಾಟ’ (ಸಿಟಿಬಿಯುಎಚ್) ಎಂಬ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಕಾರ ವಸತಿ, ವ್ಯವಹಾರ, ವ್ಯಾಪಾರ ಗಳನ್ನೊಳಗೊಂಡ ಬಹು ಮಹಡಿಯುಳ್ಳ ಕಟ್ಟಡಗಳು ಮಾತ್ರ ಕಟ್ಟಡಗಳು.
ಉಳಿದವು ಸ್ಮಾರಕಗಳು ಅಥವಾ ಸ್ಥಾವರಗಳು. ಎತ್ತರದ ಕಟ್ಟಡಕ್ಕೆ ಮೂರು ಮಾನದಂಡಗಳಿವೆ. ಕಟ್ಟಡದ ಯಾವುದೇ ಭಾಗದ ಎತ್ತರವನ್ನು ಪರಿಗಣಿಸುವುದು ಒಂದು, ಅತಿ ಎತ್ತರದ ಮಹಡಿ ಯನ್ನು ಪರಿಗಣಿಸುವುದು ಇನ್ನೊಂದು, ಕಟ್ಟಡದ ವಾಸ್ತುಶಿಲ್ಪದ ಎತ್ತರವನ್ನು ಪರಿಗಣಿಸುವುದು ಮತ್ತೊಂದು. ಮೂರೂ ಬೇರೆ ಬೇರೆ ಫಲಿತಾಂಶ ನೀಡಬಲ್ಲುವಾದ್ದರಿಂದ ಕೊನೆಯದನ್ನೇ ಹೆಚ್ಚಾಗಿ ಪರಿಗಣಿಸಲಾಗುತ್ತಿದೆ. ಅಂದಹಾಗೆ, ಕಟ್ಟಡದ ಮೇಲಿರುವ ಲೈಟನಿಂಗ್ ಅರೆಸ್ಟರ್ (ಮಿಂಚು ಬಂಧಕ), ಧ್ವಜಸ್ತಂಭ ಅಥವಾ ಅಂಟೆನಾಗಳು ಎತ್ತರ ಅಳೆಯುವಾಗ ಲೆಕ್ಕಕ್ಕೆ ಬರುವುದಿಲ್ಲ.
ಈ ನಿಟ್ಟಿನಲ್ಲಿ ನೋಡುವುದಾದರೆ, ಮುಗಿಲನ್ನು ತಲುಪುವ ತವಕದಲ್ಲಿದ್ದದ್ದು ಅಮೆರಿಕವೇ. 1899 ರಲ್ಲಿ ನಿರ್ಮಿಸಿದ ಮ್ಯಾನ್ಹಟ್ಟನ್ ಲೈಫ್ ಇನ್ಶೂರೆನ್ಸ್ ಬಿಲ್ಡಿಂಗ್ ನೂರು ಮೀಟರ್ ಗಡಿ ದಾಟಿದ ಮೊದಲ ಇಮಾರತು. ಅಲ್ಲಿಂದ 1998ರಲ್ಲಿ ಕಾರ್ಯಾರಂಭ ಮಾಡಿದ 442 ಮೀಟರ್ ಎತ್ತರದ ಚಿಕಾಗೊದಲ್ಲಿರುವ ಸೀಯರ್ಸ್ ಟಾವರ್‌ವರೆಗೆ ಒಂದು ಶತಮಾನಕ್ಕೂ ಹೆಚ್ಚು ಅಮೆರಿಕವೇ ದಾಖಲೆ ವೀರ. ಈ ಅವಧಿಯಲ್ಲಿ ಪಾರ್ಕ್ ರೋವ್, ಸಿಂಗರ್ ಬಿಲ್ಡಿಂಗ್, ಮೆಟ್ರೊಪೊಲಿಟನ್ ಲೈಫ್ ಟವರ್, ವೂಲ್‌ವರ್ತ್, ವಾಲ್ ಸ್ಟ್ರೀಟ್, ಕ್ರೈಸ್ಲರ್, ಎಂಪಾಯರ್ ಸ್ಟೇಟ, ವರ್ಲ್ಡ್ ಟ್ರೇಡ್ ಸೆಂಟರ್ ಹೀಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡದ ಮೊದಲ ಹತ್ತು ಸ್ಥಾನಗಳೂ ದೊಡ್ಡಣ್ಣನ ಹೆಸರಿನಲ್ಲಿಯೇ ಇದ್ದವು.
ಸದ್ಯ ದುಬೈನ ಬುರ್ಜ್ ಖಲೀಫಾ ವಿಶ್ವದ ಅತ್ಯಂತ ಎತ್ತರದ ಕಟ್ಟಡ. ಎರಡನೆಯ ಸ್ಥಾನದಲ್ಲಿರು ವುದು 632 ಮೀಟರ್ ಎತ್ತರದ, ಚೀನಾದಲ್ಲಿರುವ ಶಾಂಘೈ ಟವರ್. ಸೌದಿ ಅರೇಬಿಯಾದ ಮೆಕ್ಕಾ ದಲ್ಲಿರುವ 601 ಮೀಟರ್ ಎತ್ತರದ ಅಬ್ರಾಜ್ ಅಲ್ ಬೈತ್ ಕ್ಲಾಕ್ ಟವರ್, ಚೀನಾದ ಶೆಂಜೆನ್ ನಲ್ಲಿರುವ 599 ಮೀಟರ್ ಎತ್ತರದ ಪಿನ್ ಅನ್ ಸೆಂಟರ್, ದಕ್ಷಿಣ ಕೊರಿಯಾದ ಸಿಯೋಲ್ʼನಲ್ಲಿರುವ 556 ಮೀಟರ್ ಎತ್ತರದ ಲಾಟೆ ವರ್ಲ್ಡ್ ಟವರ್ ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೆಯ ಸ್ಥಾನದಲ್ಲಿವೆ. ಒಂದು ವಿಷಯ ತಿಳಿದಿರಲಿ, ಆಗಸಕ್ಕೆ ಏಣಿ ಹಾಕುವ ಆಟದಲ್ಲಿ ಯಾರ ಸ್ಥಾನವೂ ಶಾಶ್ವತವಲ್ಲ. ಸದ್ಯ ಉತ್ತುಂಗದಲ್ಲಿರುವ ಬುರ್ಜ್ ಖಲೀಫಾ ಕೂಡ ಇದಕ್ಕೆ ಹೊರತಲ್ಲ. ಅದನ್ನು ಮೀರಿಸಲು ಇತರ ರಾಷ್ಟ್ರಗಳಲ್ಲ, ದುಬೈಯೇ ಸಿದ್ಧವಾಗಿ ನಿಂತಿದೆ!
2016ರಲ್ಲಿ ಸುಮಾರು 1300 ಮೀಟರ್ ಎತ್ತರದ (ಎತ್ತರ ಅಧಿಕೃತವಾಗಿ ಘೋಷಣೆಯಾಗಿಲ್ಲ) ದುಬೈ ಕ್ರೀಕ್ ಟವರ್ ಸ್ಥಾವರದ ಕಾರ್ಯ ಆರಂಭವಾಗಿತ್ತು. ಬುರ್ಜ್ ಖಲೀಫಾದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಒಂದು ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಸ್ಥಾವರ 2022ರಲ್ಲಿ ಸಂಪೂರ್ಣಗೊಳ್ಳಬೇಕಿತ್ತು. ಎಪ್ಪತ್ತೈದು ಮೀಟರ್ ಆಳದ ಅಡಿಪಾಯದ ಕಾರ್ಯ ನಿರೀಕ್ಷೆಗಿಂತ ಎರಡು ತಿಂಗಳು ಮೊದಲೇ ಮುಗಿದಿತ್ತು. ಇದರ ಅಡಿಪಾಯಕ್ಕೆ ಇಪ್ಪತ್ತು ಸಾವಿರ ಟನ್ ಕಾಂಕ್ರೀಟ್ ಬಳಸಲಾಗಿದೆ ಎಂದು ಹೇಳುತ್ತಾರೆ. ಅಂದರೆ ಹೆಚ್ಚುಕಮ್ಮಿ ಅಮೆರಿಕದ ಒಂದು ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಅರ್ಧದಷ್ಟು ತೂಕ! ಸದ್ಯ ಇದರ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಇದರಲ್ಲಿ ಕೇವಲ ಇಪ್ಪತ್ತು ಅಂತಸ್ತುಗಳಿದ್ದು, ಇದೊಂದು ನಿರೀಕ್ಷಣಾ ಸ್ಥಾವರ ವಾಗಿದ್ದು, ವ್ಯಾವಹಾರಿಕವಾಗಿ ಅಷ್ಟೊಂದು ಲಾಭದಾಯಕ ಅಲ್ಲವಾದದ್ದು ಸ್ಥಗಿತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇದೊಂದು ಅದ್ಭುತ ಭೌಗೋಳಿಕ ರಚನೆಯಾಗಲಿದ್ದು ದುಬೈಗೆ ವಿಶ್ವದಾದ್ಯಂತ ಇನ್ನಷ್ಟು ಹೆಸರು ತಂದುಕೊಡಲಿದೆ ಮತ್ತು ಅತ್ಯಂತ ಎತ್ತರದ ಸ್ಥಾವರವಾಗಲಿರು ವುದರಿಂದ ನಿರ್ಮಾಣ ಕಾರ್ಯ ಮುಂದುವರಿಯುತ್ತದೆ ಎನ್ನಲಾಗುತ್ತಿದೆ. ಅಂದ ಹಾಗೆ ಇದರ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವುದು ಬುರ್ಜ್ ಖಲೀಫಾ ನಿರ್ಮಿಸಿದ ‘ಎರ್ಮಾ’ ಸಂಸ್ಥೆ. ಇಷ್ಟರ ನಡುವೆ 2013ರಲ್ಲಿ ಸೌದಿ ಅರೇಬಿಯಾದಲ್ಲಿ ಕಿಂಗ್‌ಡಮ್ ಟವರ್ ಕಟ್ಟಡದ ಕಾರ್ಯ ಆರಂಭವಾಗಿತ್ತು. ಈ ಕಟ್ಟಡಕ್ಕೆ ಹಣ ಹೂಡಿದವರಲ್ಲಿ ಪ್ರಮುಖರಾದ ಪ್ರಿ ವಲೀದ್ ಬಿನ್ ತಲಾಲ್ ಮತ್ತು ಬಾಕರ್ ಬಿನ್ ಲಾದೆನ್ ಭ್ರಷ್ಟಾಚಾರದ ಆರೋಪದಡಿ ಬಂಧಿತ ರಾದ್ದರಿಂದ ಜನವರಿ 2018ರಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು.
ಈಗ ನಿರ್ಮಾಣ ಕಾರ್ಯ ಪುನಃ ಆರಂಭಗೊಂಡಿದ್ದು, ಅರವತ್ತು ಮಹಡಿಗಳು ಅಥವಾ ಇನ್ನೂ ರೈವತ್ತು ಮೀಟರ್‌ಗಿಂತಲೂ ಹೆಚ್ಚಿನ ಕಾರ್ಯ ಪೂರ್ಣಗೊಂಡಿದ್ದು, 2030ರ ಒಳಗೆ ಪೂರ್ಣ ಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಇಪ್ಪತ್ತು ಬಿಲಿಯನ್ ಡಾಲರ್ ವೆಚ್ಚದಲ್ಲಿ ದೇಶದ ಪಶ್ಚಿಮ ಭಾಗದಲ್ಲಿರುವ ಮಹಾ ನಗರ ಜೆದ್ದಾದಲ್ಲಿ ನಿರ್ಮಿಸಲಾಗುತ್ತಿರುವ ಈ ಕಟ್ಟಡಕ್ಕೆ ‘ಜೆದ್ದಾ ಟವರ್’ ಎಂದು ಮರು ನಾಮಕರಣ ಮಾಡಲಾಯಿತು.
ಬರೋಬ್ಬರಿ ಒಂದು ಕಿಲೋಮೀಟರ್ ಎತ್ತರದ, ಒಟ್ಟೂ ಇನ್ನೂರು ಮಹಡಿಯ ಈ ಕಟ್ಟಡ ಗಾಳಿಯ ಒತ್ತಡ ತಡೆದುಕೊಳ್ಳಲು ಅನುಕೂಲವಾಗುವಂತೆ ಕೆಲವು ಮೀಟರ್ ಅಂತರದಲ್ಲಿ ಆಕಾರ ಬದಲಿಸುವಂತೆ ವಿನ್ಯಾಸಗೊಳಿಸಲಾಗಿದ್ದು, 664 ಮೀಟರ್ ಎತ್ತರದಲ್ಲಿ ನಗರ ವೀಕ್ಷಣೆಗೆ (ಆಬ್ಸರ್ವೇಷನ್ ಡೆಕ್) ಅವಕಾಶ ಒದಗಿಸಲಾಗಿದೆ.
ಇದಕ್ಕೂ ಮೊದಲು 2007ರಲ್ಲಿ ಕುವೈತ್ ಕೂಡ ಗಗನಚುಂಬಿ ಕಟ್ಟಡದ ಪ್ರಸ್ತಾಪ ಮಾಡಿತ್ತು. ಅರೇಬಿಯನ್ ನೈಟ್ಸ್‌ನಲ್ಲಿ ಬರುವ 1001 ಕತೆಗಳ ನೆನಪಿನ ದ್ಯೋತಕವಾಗಿ 1001 ಮೀಟರ್ ಎತ್ತರದ ಬುರ್ಜ್ ಮುಬಾರಕ್ ಅಲ್ ಕಬೀರ್ ನಿರ್ಮಿಸುವುದಾಗಿ ಹೇಳಿಕೊಂಡಿತ್ತು. ಎಂಬತ್ತು ಬಿಲಿಯನ್ ಡಾಲರ್ ವೆಚ್ಚದಲ್ಲಿ ಗಂಟೆಗೆ ಇನ್ನೂರ ನಲವತ್ತು ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿ ಯನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಿದ ಈ ಯೋಜನೆ ಇದುವರೆಗೂ ಆರಂಭವಾಗಲಿಲ್ಲ.
ಇದನ್ನು ವಿನ್ಯಾಸಗೊಳಿಸಿದ ಆರ್ಕಿಟೆಕ್ಟ್ ಎರಿಕ್ ಕುಹ್ನೆ ನಾಲ್ಕು ವರ್ಷದ ಹಿಂದೆ ತೀರಿಹೋದರೂ 2019ರಲ್ಲಿ ಚೈನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 2023ರಲ್ಲಿ ಕಾರ್ಯ ಆರಂಭವಾಗುವ ವರದಿಯಿದೆ. ಇಂದು ವಿಶ್ವದಾದ್ಯಂತ ಅರ್ಧ ಕಿಲೋಮೀಟರ್ʼನಷ್ಟು ಎತ್ತರದ ಸುಮಾರು ಐವತ್ತು ಕಟ್ಟಡಗಳು ತಲೆ ಎತ್ತಿ ನಿಲ್ಲಲು ಸಜ್ಜಾಗುತ್ತಿವೆ ಎಂದರೆ ಆಶ್ಚರ್ಯಪಡಬೇಕಾಗಿಲ್ಲ. ಇವುಗಳಲ್ಲಿ ಇಪ್ಪತ್ತೆರಡು ಚೀನಾ ಒಂದರ ಎದ್ದು ನಿಲ್ಲಲಿದ್ದು, ದುಬೈನಲ್ಲಿ ಆರು, ಇತರ ಕೊಲ್ಲಿ ರಾಷ್ಟ್ರಗಳಲ್ಲಿ ನಾಲ್ಕು, ಪೂರ್ವ ಏಷ್ಯಾ ರಾಷ್ಟ್ರಗಳಾದ ಮಲೇಷಿಯಾ, ಇಂಡೋನೇಷಿಯಾ, ಕೊರಿಯಾ, ಥೈಲೆಂಡ್ ನಲ್ಲಿ ಹತ್ತು ಕಟ್ಟಡಗಳು ಜನ್ಮ ಪಡೆಯಲಿವೆ.
ಇವುಗಳಲ್ಲಿ ಕೆಲವು ಇನ್ನೂ ಭ್ರೂಣಾವಸ್ಥೆಯಲ್ಲಿದ್ದರೂ ಇನ್ನೊಂದು ಹತ್ತು ವರ್ಷಕ್ಕಂತೂ ಇವು ಗಳಿಗೆಲ್ಲ ನಾಮಕರಣವಾಗುವುದು ಖಂಡಿತ. ಒಂದು ನೂರು ವರ್ಷ ಮೊದಲು ಯಾರಾದರೂ ಒಂದು ಕಿಲೋಮೀಟರ್ ಎತ್ತರದ ಕಟ್ಟಡ ನಿರ್ಮಾಣ ಮಾಡುತ್ತೇನೆ ಎಂದರೆ ಹುಚ್ಚು ಎಂದು ನಗುತ್ತಿದ್ದರು. ಇಂದು ಹಣ ಇದ್ದರೆ, ಇಂಜಿನಿಯರ್‌ಗಳ ಕ್ಷಮತೆ, ವಿಜ್ಞಾನ ಮತ್ತು ತಂತ್ರಜ್ಞಾನ ದಿಂದಾಗಿ ನಾಲ್ಕರಿಂದ ಐದು ವರ್ಷಗಳ ಅವಧಿಯ ಒಳಗೆ ಇದು ಸಾಧ್ಯವಾಗುತ್ತಿದೆ.
ಇದು ಹೀಗೇ ಮುಂದುವರಿದರೆ ಮುಂದೊಂದು ದಿನ ಈ ಕಟ್ಟಡಗಳಲ್ಲಿ ವಾಸಿಸುವವರು ಹಕ್ಕಿ ಗಳನ್ನು ನೋಡಲು ಕೆಳಗೆ ಇಳಿದು ಬರಬೇಕಾದೀತು! ಒಂದು ಸಂತಸದ ಸಂಗತಿಯೆಂದರೆ ಇಲ್ಲಿ ಉಳಿಯುವವರಿಗೆ ಸೊಳ್ಳೆ ಕಾಟವಿಲ್ಲ, ಏಕೆಂದರೆ ಸೊಳ್ಳೆ ಅಷ್ಟು ಮೇಲಕ್ಕೆ ಹಾರುವುದಿಲ್ಲ!
ಕೊನೆಯದಾಗಿ ನಿಮಗೆ ಎಕ್ಸ್-ಸೀಡ್ 4000 X- Seed 4000 ) ವಿಷಯ ಹೇಳಲೇಬೇಕು. ಜಪಾನ್ʼನ ಟೋಕಿಯೋದಲ್ಲಿ ನಿರ್ಮಿಸಬೇಕೆಂದಿರುವ ಈ ಕಟ್ಟಡದ ಎತ್ತರವೇ ನಾಲ್ಕು ಸಾವಿರ ಮೀಟರ್, ಅಂದರೆ ನಾಲ್ಕು ಕಿಲೋಮೀಟರ್. 1995ರಲ್ಲಿ ತೈಸೀ ಕನ್ಸ್ಟ್ರಕ್ಷನ್ ಕಂಪನಿಯ ಇಂಜಿನಿಯರ್ ಮಾರ್ಟಿನ್ ಪಾಸ್ಕೋ ವಿನ್ಯಾಸಗೊಳಿಸಿರುವ ಈ ಕಟ್ಟಡ ನೋಡಲು ಪರ್ವತದಂತೆ ಕಾಣುತ್ತಿದ್ದು, ಎಂಟು ನೂರು ಮಹಡಿಗಳಿವೆ. ಕಟ್ಟಡ ಬುಡದಲ್ಲಿ ಆರು ಕಿಲೋಮೀಟರ್ ಅಗಲವಾಗಿದ್ದು, ಇದರಲ್ಲಿ ಒಟ್ಟೂ ಹತ್ತು ಲಕ್ಷ ನಿವಾಸಿಗಳಿಗೆ ಅವಕಾಶ ಒದಗಿಸಿಕೊಡಲಾಗುತ್ತದೆ.
ಮೂವತ್ತು ಲಕ್ಷ ಟನ್ ಉಕ್ಕು ಬಳಸಿ ನಿರ್ಮಿಸಲಾಗುವ ಈ ಕಟ್ಟಡದಲ್ಲಿ ಸೌರ ಶಕ್ತಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕಟ್ಟಡದ ಮೇಲಕ್ಕೇರಲು ಗಂಟೆಗೆ ನಾಲ್ಕುನೂರರಿಂದ ಐದು ನೂರು ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಮ್ಯಾಗ್ನೆಟಿಕ್ ಲೆವಿಯೇಷನ್ (Maglev) ರೈಲನ್ನು ಬಳಸಲಾಗುತ್ತದೆ. ಎತ್ತರದಲ್ಲಿ ಇದು ಜಪಾನ್‌ನ ಟೊಕಿಯೋದ ನಿರ್ಮಾಣಗೊಳ್ಳಬೇಕಿದ್ದ ‘ಶಿಮಿಜು ಮೆಗಾಸಿಟಿ’ ಪಿರಾ ಮಿಡ್‌ನ ಎರಡರಷ್ಟಿದೆ. ಇದನ್ನು ವಿನ್ಯಾಸಗೊಳಿಸಿರುವುದು ಕಾಲ್ಪನಿಕವಾಗಿದ್ದು, ನಿರ್ಮಾಣ ಕ್ಕಾಗಿ ಅಲ್ಲ, ಇದು ಸಂಸ್ಥೆಯ ಪ್ರಚಾರ ತಂತ್ರದ ಭಾಗವಾಗಿದೆ ಎಂದು ತೈಸೀ ಕಂಪನಿಯೇ ಹೇಳಿಕೊಂಡಿದೆ. ಆದರೂ ಮುಂದೊಂದು ದಿನ ಇದು ನಿಜವಾದರೂ ಆಶ್ಚರ್ಯವಿಲ್ಲ.
ಎಲ್ಲರೂ ಆಗಸಕ್ಕೇರುವ ತವಕದಿಂದಿರುವಾಗ ಯಾರನ್ನೂ ನಂಬಲು ಸಾಭ್ಯವಿಲ್ಲ. ಮನಸು ಮಾಡಿದರೆ ಮನುಷ್ಯನಿಗೆ ಯಾವುದೂ ಅಸಾಧ್ಯವಲ್ಲ! ಅಷ್ಟಕ್ಕೂ ಮುಗಿಲಿಗೆ ಏರಬೇಕು ಎನ್ನುವುದು ಮಾನವನ ಇಂದು ನಿನ್ನೆಯ ಬಯಕೆಯಲ್ಲವಲ್ಲ.