Harish Kera Column: ಚಿಂಪಾಂಜಿಗಳ ನಾಡಿನ ಸವಿ ಜೇನು
ಗಂಡು ಗುಬ್ಬಿ ಅದನ್ನು ಹೆಕ್ಕಿ ತಂದು ಹೆಣ್ಣಿಗೆ ನೀಡಿ ಅದರ ಒಲವು ಗಳಿಸಲು ಯತ್ನಿಸುತ್ತಿತ್ತು. ಇನ್ನೇನು ಬ್ರೆಡ್ ಬಳಿ ಸಾರಿ ಅದನ್ನು ಹೆಕ್ಕಬೇಕು ಅನ್ನುವಷ್ಟರಲ್ಲಿ ಯಾರೋ ಅಲ್ಲಿ ನಡೆದು ಬರುತ್ತಿದ್ದರು, ಮಾತಾ ಡುತ್ತಿದ್ದರು. ಗಂಡು ಬೆದರಿ ದೂರ ಹೋಗುತ್ತಿತ್ತು. ಮೂರ್ನಾಲ್ಕು ಸಲ ಹೀಗಾಯಿತು. ಈ ಡ್ರಾಮಾ ಎಲ್ಲ ಗಮನಿಸುತ್ತಾ ಹತ್ತು ನಿಮಿಷ ಕೂತಿದ್ದೆ. ನಿಸರ್ಗದ ನಡುವೆ ಬೋರ್ ಆಗುವ ಅಗತ್ಯ ಎಲ್ಲಿದೆ ಹೇಳಿ!

-

ಕಾಡುದಾರಿ
ಜೇನ್ ಗುಡಾಲ ಚಿಂಪಾಂಜಿಗಳನ್ನು ತನ್ನ ಮನೆಯ ಸದಸ್ಯರಿಗಿಂತ ಹೆಚ್ಚಾಗಿ ಪ್ರೀತಿಸಿದವ ರಾಗಿದ್ದರು. ಇವುಗಳ ಬಗ್ಗೆ ಅವರ ಅಧ್ಯಯನಗಳು ಚಿಂಪಾಂಜಿಗಳ ಬಗ್ಗೆಯೂ, ಆ ಮೂಲಕ ಮನುಷ್ಯರ ವರ್ತನೆಯ ಬಗ್ಗೆ ಹೊಸ ಒಳನೋಟಗಳನ್ನು ಕೊಟ್ಟವು.
ಕಾಡಿನಲ್ಲಿ ಇರುವಾಗ ಬೋರ್ ಎಂಬುದೇ ಇಲ್ಲ. ಏನಾದರೂ ಒಂದು ಸಂಗತಿ ನಡೆಯುತ್ತಿರುತ್ತದೆ. ಒಮ್ಮೆ ಹೀಗೆ ಒಬ್ಬಂಟಿ ನೋಡುತ್ತಿದ್ದೆ. ಅಲ್ಲಿ ಸಗಣಿ ಹುಳಗಳಿದ್ದವು. ಸಗಣಿ ಅಥವಾ ಲದ್ದಿಯನ್ನು ಸಣ್ಣ ಉಂಡೆಗಳಾಗಿ ಮಾಡಿ ಅವುಗಳನ್ನು ಉರುಳಿಸಿಕೊಂಡು ಹೋಗಿ ತಾವೇ ಮಾಡಿದ ಪುಟ್ಟ ಕುಳಿಗಳಿಗೆ ಬೀಳಿಸುತ್ತಿದ್ದವು.
ಅದು ಅವು ಮೊಟ್ಟೆಯಿಡಲು ಮಾಡಿಕೊಂಡ ಬಿಲಗಳು. ಎರಡು ಗಂಡು ಸಗಣಿ ಹುಳಗಳು ಹೀಗೆ ತಮ್ಮ ಉಂಡೆಗಳನ್ನು ಉರುಳಿಸುತ್ತ ಹೋಗುತ್ತಿದ್ದಾಗ ಎದುರುಬದುರಾದವು. ಅವುಗಳಿಗೆ ಜಗಳ ಶುರುವಾಯಿತು. ಅವು ಜಗಳ ಮಾಡುತ್ತಿರುವಾಗಲೇ, ತನ್ನ ಉಂಡೆಯನ್ನು ಉರುಳಿಸುತ್ತ ಹೋಗುತ್ತಿದ್ದ ಇನ್ನೊಂದು ಹೆಣ್ಣು ಹುಳ, ಆ ಗಂಡುಗಳಲ್ಲಿ ಒಂದರ ಉಂಡೆಯಿಂದ ಸ್ವಲ್ಪ ಸಗಣಿ ಕಿತ್ತು ತನ್ನದಕ್ಕೆ ಸದ್ದಿಲ್ಲದೆ ಸೇರಿಸಿಕೊಂಡು ಮುಂದುವರಿಯಿತು. ನೋಡ್ತಾ ಇದ್ದರೆ ಸಣ್ಣ ಕ್ರಿಮಿಕೀಟಗಳ ವರ್ತನೆಯಲ್ಲೂ ಇಂಥದನ್ನೆಲ್ಲ ಗಮನಿಸಬಹುದು.
ಡೆನ್ವರ್ ಏರ್‌ಪೋರ್ಟ್‌ನಲ್ಲಿದ್ದೆ. ಒಂದಷ್ಟು ಗುಬ್ಬಚ್ಚಿಗಳಿದ್ದವು ಅಲ್ಲಿ. ಒಂದು ಹೆಣ್ಣು, ಒಂದು ಗಂಡು. ಅದು ಅವುಗಳ ಮಿಲನದ ಸನ್ನಿವೇಶ. ಹೆಣ್ಣು ಗುಬ್ಬಿ ಬಾಯಿ ತೆರೆಯುತ್ತಾ ರೆಕ್ಕೆಗಳನ್ನು ಫಟಫಟಿಸುತ್ತಿತ್ತು. ಯಾರೋ ನೆಲದಲ್ಲಿ ಬ್ರೆಡ್ ಚೂರುಗಳನ್ನು ಬೀಳಿಸಿಕೊಂಡು ಹೋಗಿದ್ದರು.
ಗಂಡು ಗುಬ್ಬಿ ಅದನ್ನು ಹೆಕ್ಕಿ ತಂದು ಹೆಣ್ಣಿಗೆ ನೀಡಿ ಅದರ ಒಲವು ಗಳಿಸಲು ಯತ್ನಿಸುತ್ತಿತ್ತು. ಇನ್ನೇನು ಬ್ರೆಡ್ ಬಳಿ ಸಾರಿ ಅದನ್ನು ಹೆಕ್ಕಬೇಕು ಅನ್ನುವಷ್ಟರಲ್ಲಿ ಯಾರೋ ಅಲ್ಲಿ ನಡೆದು ಬರುತ್ತಿದ್ದರು, ಮಾತಾಡುತ್ತಿದ್ದರು. ಗಂಡು ಬೆದರಿ ದೂರ ಹೋಗುತ್ತಿತ್ತು. ಮೂರ್ನಾಲ್ಕು ಸಲ ಹೀಗಾಯಿತು. ಈ ಡ್ರಾಮಾ ಎಲ್ಲ ಗಮನಿಸುತ್ತಾ ಹತ್ತು ನಿಮಿಷ ಕೂತಿದ್ದೆ. ನಿಸರ್ಗದ ನಡುವೆ ಬೋರ್ ಆಗುವ ಅಗತ್ಯ ಎಲ್ಲಿದೆ ಹೇಳಿ!

ಮೇಲಿನ ಎರಡೂ ಘಟನೆಗಳನ್ನು ಹೇಳಿದವಳು ಜೇನ್ ಗುಡಾಲ. ಮೊದಲಿನ ಘಟನೆ ಓದುವಾಗ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕುವೆಂಪು ಬರೆದ ಸಗಣಿ ಹುಳಗಳ ವರ್ಣನೆ ನೆನಪಿಗೆ ಬರುತ್ತದೆ ಅಲ್ಲವೇ? ಅಂದ ಹಾಗೆ ಜೇನ್ ಗುಡಾಲ್ ಇನ್ನಿಲ್ಲ. ಅಕ್ಟೋಬರ್ 1ರಂದು ನಿಧನರಾದಾಗ ಆಕೆಗೆ 91 ವಯಸ್ಸಾಗಿತ್ತು. ಆದರೆ ಮನುಕುಲ ಮರೆಯಲಾಗದ ಕೆಲವು ಕೊಡುಗೆಗಳನ್ನು ಕೊಟ್ಟವರು ಈಕೆ.
ಇವರು ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡಿದ ಎಥಾಲಜಿಸ್ಟ್ ಮತ್ತು ಚಿಂಪಾಂಜಿಗಳನ್ನು ಸ್ಟಡಿ ಮಾಡಿದ ಪ್ರೈಮೇಟಾಲಜಿಸ್ಟ್ ಎಂದು ಹೇಳಿದರೆ ಆಕೆಯ ವೃತ್ತಿಪರತೆಯ ಒಂದು ಮುಖವನ್ನು ಹೇಳಿದಂತಾದೀತು. ಅದೆಲ್ಲಕ್ಕಿಂತ ಹೆಚ್ಚಾಗಿ ಆಕೆ ಚಿಂಪಾಂಜಿಗಳನ್ನು ತನ್ನ ಮನೆಯ ಸದಸ್ಯರಿಗಿಂತ ಹೆಚ್ಚಾಗಿ ಪ್ರೀತಿಸಿದವರಾಗಿದ್ದರು. ಇವುಗಳ ಬಗ್ಗೆ ಅವರ ಅಧ್ಯಯನಗಳು ಚಿಂಪಾಂಜಿಗಳ ಬಗ್ಗೆಯೂ, ಆ ಮೂಲಕ ಮನುಷ್ಯರ ವರ್ತನೆಯ ಬಗ್ಗೆ ಹೊಸ ಒಳನೋಟಗಳನ್ನು ಕೊಟ್ಟವು.
ನೆಟ್‌ಫ್ಲಿಕ್ಸ್ ಈಕೆಯ ಬಗ್ಗೆ ‘ಫೇಮಸ್ ಲಾಸ್ಟ್ ವರ್ಡ್ಸ್: ಜೇನ್ ಗುಡಾಲ್’ ಎಂಬ ವಿಲಕ್ಷಣ ಕಾರ್ಯಕ್ರಮ ವೊಂದನ್ನು ಸಿದ್ಧಪಡಿಸಿ ಹೊರಬಿಟ್ಟಿದೆ. ಅದೊಂದು ಸಂದರ್ಶನ. ಜೇನ್ ಗುಡಾಲ್ ತೀರಿಕೊಂಡ ನಂತರವೇ ಪ್ರಸಾರ ಮಾಡಲೆಂದು ಮಾಡಿದ ಇಂಟರ್‌ವ್ಯೂ. ಸಂದರ್ಶಕ ಬ್ರಾಡ್ ಫಾಲ್ಚುಕ್ ಕೂಡ ಇದನ್ನು ಸಂದರ್ಶನದ ನಡುವೆ ಮತ್ತೆ ಮತ್ತೆ ಹೇಳುತ್ತಾರೆ.
ಜೇನ್ ಕೂಡ ಇವು ತಮ್ಮ ಕೊನೆಯ, ತಮ್ಮ ದೇಹ ಅಳಿದ ನಂತರ ಸಂದೇಶದಂತೆ ಪ್ರಸಾರ ವಾಗಲಿರುವ ಮಾತುಗಳು ಎಂಬ ಅರಿವಿನಿಂದ ಮಾತಾಡಿರುವುದರಿಂದ ಈ ಸಂದರ್ಶನಕ್ಕೆ ಒಂದು ತೀವ್ರತೆ, ಭಾವುಕತೆ ಪ್ರಾಪ್ತವಾಗಿದೆ. ತಮ್ಮ ಕೆಲಸಗಳಿಂದ ದಂತಕತೆ ಆಗಿಬಿಟ್ಟಿರುವ ಜೇನ್ ಮತ್ತು ಆಕೆಯೊಳಗೆ ಇರುವ ಕುತೂಹಲಿಯಾದ ಪುಟ್ಟ ಹುಡುಗಿ ಜೇನ್ ಇಬ್ಬರೂ ಇಲ್ಲಿ ಮುಖಾಮುಖಿ ಯಾದಂತಿದೆ.
ಇದನ್ನೂ ಓದಿ: Harish Kera Column: ಹಾರಿ ಬಂದ ಪತಂಗ, ಚಂದ ಇದರ ಸಂಗ
ಕೋಳಿ ಮೊಟ್ಟೆಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದನ್ನು ನೋಡಲೆಂದೇ ಅರ್ಧ ದಿನ ಕೋಳಿ ಗೂಡಿನೊಳಗೆ ಸದ್ದಿಲ್ಲದೇ ಬಚ್ಚಿಟ್ಟುಕೊಂಡಿದ್ದ ಪುಟ್ಟ ಹುಡುಗಿ ಜೇನ್. ಬಾಲ್ಯದ ಇದ್ದ ಆ ಅಗಾಧ ತಾಳ್ಮೆ ಮತ್ತು ಕುತೂಹಲವೇ ಆಕೆಯನ್ನು ಮುಂದೆ ಒಯ್ದಿದ್ದು. ಜೇನ್ ಯಾವುದೇ ವಿಶ್ವ ವಿದ್ಯಾಲಯದ ಪದವಿ ಅಥವಾ ಶಾಸೀಯ ವೈeನಿಕ ತರಬೇತಿ ಇಲ್ಲದೆ 1960ರಲ್ಲಿ ತಾಂಜಾನಿಯಾದ ಟ್ಯಾಂಗನಿಕಾ ಸರೋವರದ ತೀರಕ್ಕೆ ಬಂದರು. ಆಗ ಆಕೆಗೆ 26 ವರ್ಷ.
ಅವಳಲ್ಲಿ ಇದ್ದದ್ದು ಅಗಾಧ ತಾಳ್ಮೆ ಮಾತ್ರ. ಗಂಟೆಗಟ್ಟಲೆ ಅವಳು ಕಾಡಿನಲ್ಲಿ ಸದ್ದಿಲ್ಲದೆ ಕುಳಿತು ನೋಡುತ್ತಿದ್ದಳು. ತಾಂಜಾನಿಯದ ಗೊಂಬೆ ಸಂರಕ್ಷಿತ ಉದ್ಯಾನದ ಚಿಂಪಾಂಜಿಗಳಲ್ಲಿ ಅವಳು ಕಂಡ ಸಂಗತಿಗಳು ಮುಂದೆ ವಿಜ್ಞಾನವನ್ನೇ ಬದಲಾಯಿಸಿತು.
ಆಕೆ ತಾನು ಪ್ರತಿದಿನ ನೋಡುತ್ತಿದ್ದ ಚಿಂಪಾಂಜಿಗಳಿಗೆ ಒಂದೊಂದು ಹೆಸರಿಟ್ಟಿದ್ದಳು. ಒಮ್ಮೆ ಡೇವಿಡ್ ಗ್ರೇಬಿಯರ್ಡ್ ಎಂಬ ಚಿಂಪಾಂಜಿ, ಮರದ ಕೊಂಬೆಯೊಂದನ್ನು ಮುರಿದು ಅದರ ಎಲೆಗಳನ್ನು ಕಿತ್ತು ಆ ಕೋಲನ್ನು ಗೆದ್ದಲಿನ ಹುತ್ತದಲ್ಲಿ ತೂರಿಸಿ ತೆಗೆದು ಅದಕ್ಕೆ ಹತ್ತಿಕೊಂಡಿದ್ದ ಗೆದ್ದಲು ಹುಳಗಳನ್ನು ತಿನ್ನುವುದನ್ನು ಆಕೆ ನೋಡಿ ದಾಖಲೀಕರಿಸಿಕೊಂಡಳು.
ಉಪಕರಣಗಳ ಬಳಕೆ ಮನುಷ್ಯರ ಆವಿಷ್ಕಾರ, ಅದು ನರರನ್ನು ವಾನರರಿಂದ ಪ್ರತ್ಯೇಕಿಸುವ ಗುಣ ಎಂದು ಅದುವರೆಗೂ ಭಾವಿಸಲಾಗಿತ್ತು. ಜೇನ್‌ಳ ಈ ದಾಖಲೀಕರಣ ಆ ಚಿಂತನೆಯನ್ನೇ ತಲೆಕೆಳಗು ಮಾಡಿತು. ಇದನ್ನು ನೋಡಿದ ಜೇನ್‌ಳ ಗೈಡ್, ತಜ್ಞ ಲೂಯಿಸ್ ಲೀಕಿ ಹೇಳಿದ ಮಾತು- ‘ಈಗ ನಾವು ಟೂಲ್ (ಉಪಕರಣ) ಎಂಬುದನ್ನೇ ಮರು ವ್ಯಾಖ್ಯಾನಿಸಬೇಕು, ಅಥವಾ ’ಮನುಷ್ಯ’ ಎಂಬುದನ್ನು ಮರು ವ್ಯಾಖ್ಯಾನಿಸಬೇಕು ಅಥವಾ ಚಿಂಪಾಂಜಿಗಳನ್ನು ಮನುಷ್ಯ ಎಂದು ಸ್ವೀಕರಿಸಬೇಕು!’
ವಿಜ್ಞಾನ ಒಂದು ಕಾಲದಲ್ಲಿ ಭಾವನೆಗಳು ಮಾನವರಿಗೆ ಮೀಸಲು ಎಂದು ಹೇಳುತ್ತಿತ್ತು. ಇದುವರೆಗೆ ನಡೆದಿರುವ ದೀರ್ಘಕಾಲಿಕ ಅಧ್ಯಯನಗಳ ಬಳಿಕ, ಪ್ರಾಣಿಗಳು ದುಃಖ, ಸಂತೋಷದಂಥ ಕೆಲವು ಮೂಲಭೂತ ಭಾವನೆಗಳನ್ನು ಅನುಭವಿಸುತ್ತವೆ ಎಂದು ಗೊತ್ತಾಗಿದೆ. ಜೇನ್ ಗುಡಾಲ್ ಅಂಥ ಕೆಲವು ಅಧ್ಯಯನಗಳ ಬಾಗಿಲು ತೆರೆದವರು.
ಚಿಂಪಾಂಜಿಗಳೂ ಒಂದು ಆಂತರಿಕ ಜೀವನವನ್ನು ಹೊಂದಿವೆ. ಅವೂ ದುಃಖಿಸುತ್ತವೆ, ಶೋಕಿಸು ತ್ತವೆ, ಹರ್ಷದಿಂದ ಕೂಗಾಡುತ್ತವೆ. ಸೇಡು ತೀರಿಸಿಕೊಳ್ಳುತ್ತವೆ ಕೂಡ ಎಂದು ಸಾಬೀತುಪಡಿಸಿದಳು. ಒಮ್ಮೆಯಂತೂ, ಚಿಂಪಾಂಜಿಗಳ ಎರಡು ಗುಂಪುಗಳು ನಡೆಸಿದ ಕಾದಾಟ, ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ನಡೆಸಿದ ಬರ್ಬರವಾದ ದಾಳಿ, ಎದುರಾಳಿಗಳನ್ನು ನಿರ್ದಯೆಯಿಂದ ಕೊಂದು ಹಾಕಿದ ದೃಶ್ಯ ನೋಡಿ ಜೇನ್ ನಡುಗಿಹೋದಳು.
ಈಕೆಯ ಅಧ್ಯಯನ ಜೀವಶಾಸ್ತ್ರವನ್ನೂ ಮೀರಿ ವಿಸ್ತರಿಸಿತು. ಮಾನವ ಇತರ ಪ್ರಾಣಿಗಳಿಗಿಂತ ಮೇಲಿನವನು ಎಂಬ ವರ್ಗೀಕರಣದ ಗೋಡೆ ಉರುಳಿತು. ಅವಳ ಕೆಲಸ ಜೀವಶಾಸ್ತ್ರಕ್ಕೆ ಮಾತ್ರ ವಲ್ಲದೆ ವನ್ಯಕಲ್ಯಾಣ, ಪರಿಸರ ನೀತಿಶಾಸ್ತ್ರಕ್ಕೂ ಅಡಿಪಾಯವಾಯಿತು. ಹವ್ಯಾಸಿ ಎಂದು ಒಮ್ಮೆ ತಜ್ಞರು ಭಾವಿಸಿದ್ದ ಜೇನ್, ಪದವಿಪೂರ್ವ, ಪದವಿ ಶಿಕ್ಷಣ ಪಡೆಯದೆಯೇ ಕೇಂಬ್ರಿಡ್ಜ್ ವಿವಿಯ ಪಿಎಚ್.ಡಿ ಪಡೆದಳು. ಜೇನ್ ಗುಡಾಲ್ ಎಂದಿಗೂ ಜನಪ್ರಿಯಳಾಗಬೇಕು ಎಂದು ಬಯಸಿರಲಿಲ್ಲ.
ಆದರೆ ಮನ್ನಣೆ ಅವಳನ್ನು ಹಿಂಬಾಲಿಸಿತು. 1960ರ ದಶಕದಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ಮ್ಯಾಗಜಿನ್ ತನ್ನ ಮುಖಪುಟದಲ್ಲಿ, ಚಿಂಪಾಂಜಿಗಳ ಜೊತೆಗೆ ಆಕೆಯ ಚಿತ್ರವನ್ನು ಪ್ರಕಟಿಸಿತು. ಆ ಕ್ಷಣದಿಂದ ಆಕೆ ಒಂದು ವನ್ಯಜೀವಿ ಅಧ್ಯಯನ, ಈ ಕ್ಷೇತ್ರದಲ್ಲಿ ಒಂಟಿಯಾಗಿ ಕೆಲಸ ಮಾಡಬಲ್ಲ ಸ್ತ್ರೀಯರ ಸಾಮರ್ಥ್ಯ, ಪರಿಸರ ಸಂರಕ್ಷಣೆ ಎಲ್ಲದರ ಸಂಕೇತವಾದಳು. ಆಗ ಕಾಡಿಗೆ ಹೋಗಿ ಇಂಥ ಕೆಲಸದಲ್ಲಿ ತೊಡಗುವವರೂ ತುಂಬ ಮಂದಿ ಇರಲಿಲ್ಲ. ಈ ಚಿತ್ರಣ ಜನರ ಗಮನ ಸೆಳೆಯಿತು.
ಹೀಗೆ ಐಕಾನ್ ಆಗಿ ಮಾರ್ಪಟ್ಟ ಜೇನ್, ಈ ಪ್ರಸಿದ್ಧಿಯನ್ನು ಎಂದೂ ಸ್ವಂತಕ್ಕಾಗಿ ಉಪಯೋಗಿಸ ಲಿಲ್ಲ. ಅವಳು ‘ರೂಟ್ಸ್ ಆಂಡ್ ಶೂಟ್ಸ್’ ಎಂಬ ಸಂಸ್ಥೆ ರಚಿಸಿಕೊಂಡು ಇನ್ನಷ್ಟು ಯುವಜನತೆ ಯನ್ನು ಕರೆತಂದು ಅಧ್ಯಯನ, ಸಂರಕ್ಷಣೆಗಳಲ್ಲಿ ತೊಡಗಿಕೊಂಡಳು. ಜೇನ್ ಗುಡಾಲ್ ಜೀವನ ವನ್ನು ಸರಳವಾಗಿ ಸಂಕ್ಷಿಪ್ತವಾಗಿ ಹೇಳಲಾಗದು.
ಆಕೆ ಏಕಕಾಲದಲ್ಲಿ ವಿಜ್ಞಾನಿ, ಕಥೆಗಾರ್ತಿ, ಪರಿಸರ ಕಾರ್ಯಕರ್ತೆ ಮತ್ತು ಐಕಾನ್ ಆಗಿದ್ದಾಕೆ. ವನ್ಯಮೃಗ- ಮಾನವ ಸಹಜೀವನಕ್ಕೆ ಏನು ಬೇಕು ಎಂಬುದನ್ನು ಸರಳವಾಗಿ ಜನತೆಗೆ ಮನದಟ್ಟು ಮಾಡಿಸಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡುತ್ತಿದ್ದರು. ಇವಳ ಹತ್ತಾರು ಪುಸ್ತಕಗಳು ಈಕೆಯ ಅಧ್ಯಯನ, ಅನುಭವ, ಒಳನೋಟ, ತಾತ್ವಿಕತೆ ಎಲ್ಲವನ್ನೂ ಕಟ್ಟಿ ಕೊಡುತ್ತವೆ.
ಜಗತ್ತಿನಾದ್ಯಂತ ತಿರುಗಾಟ, ಯುವಜನತೆ ಜೊತೆ ಒಡನಾಟ ಇವೆಲ್ಲದರ ನಡುವೆ ಆಕೆ ಆಧ್ಯಾತ್ಮಿಕ ಜೀವಿಯೂ ಆಗಿದ್ದರು. ಮೆದುಳು ಮತ್ತು ಹೃದಯ ಸಾಮರಸ್ಯದಿಂದ ಕೆಲಸ ಮಾಡಿದಾಗ ಮಾತ್ರ ಅದು ನಿಜವಾದ ಮಾನವ ಸಾಮರ್ಥ್ಯ. ಹಾಗೆಯೇ ವಿeನವು ಇದೆಲ್ಲ ಹೇಗೆ ಎಂಬುದನ್ನು ವಿವರಿಸ ಬಹುದು, ಆದರೆ ಏಕೆ ಎಂದು ನಮಗೆ ನೆನಪಿಸಲು ಆಧ್ಯಾತ್ಮಿಕ ಮೌಲ್ಯಗಳು ಬೇಕಾಗುತ್ತವೆ ಎಂಬು ದು ಆಕೆಯ ಮಾತು.
ಹಾಗಂತ ಆಕೆಯ ಆಧ್ಯಾತ್ಮಿಕತೆ ರೂಢಿಗತವಾದದ್ದಾಗಿರಲಿಲ್ಲ. ಬದಲಾಗಿ, ನೇರ ಅನುಭವದಿಂದ ಉದ್ಭವಿಸಿದ್ದಾಗಿತ್ತು. ಚಿಂಪಾಂಜಿಗಳ ನಡುವಿನ ಸಹಬಾಳ್ವೆ, ಅವುಗಳು ಕೂಗುಗಳ ನಡುವೆ ಕಳೆದು ಹೋಗುವಿಕೆ, ಕಾಡಿನ ಮರಗಿಡಗಳ ಎಲೆಗಳ ಸದ್ದಿನ ಆಲಿಸುವಿಕೆ ಇವೆಲ್ಲ ಆಕೆಯ ಆಧ್ಯಾತ್ಮಿಕತೆ ಯಾಗಿತ್ತು.
‘ನಾನು ಯಾವ ಸಂದೇಶ ನೀಡಲು ಬಯಸುತ್ತೇನೆ? ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಈ ಭೂಮಿಯ ಮೇಲೆ ಒಂದು ಪಾತ್ರವಿದೆ ಎಂದು ನೀವೆಲ್ಲ ಅರ್ಥ ಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮಗೆ ಅದು ತಿಳಿದಿಲ್ಲದಿರಬಹುದು, ನಿಮಗೆ ಅದು ಸಿಗದಿರಬಹುದು. ಆದರೆ ನಿಮ್ಮ ಜೀವನ ಮುಖ್ಯ. ನೀವು ಯಾವುದೋ ಒಂದು ಕಾರಣಕ್ಕಾಗಿ ಇಲ್ಲಿದ್ದೀರಿ. ನೀವು ಬದುಕುವಾಗ ಆ ಕಾರಣ ಸ್ಪಷ್ಟವಾಗುತ್ತದೆ.
ನಾವು ನೈಸರ್ಗಿಕ ಪ್ರಪಂಚದ ಭಾಗ ಎಂದು ನೀವು ಅರ್ಥ ಮಾಡಿಕೊಳ್ಳಬೇಕು. ಜಗತ್ತು ಕರಾಳ ವಾಗಿದೆ. ಆದರೆ ಇನ್ನೂ ಭರವಸೆ ಇದೆ. ಭರವಸೆ ಕಳೆದುಕೊಳ್ಳಬೇಡಿ. ಈ ಜಗತ್ತಿನಲ್ಲಿ ಸುಂದರವಾದ ದ್ದನ್ನು ಉಳಿಸಲು ನೀವು ಬಯಸಿದರೆ - ನಿಮ್ಮ ಮೊಮ್ಮಕ್ಕಳಿಗೆ, ಅವರ ಮೊಮ್ಮಕ್ಕಳಿಗೆ ನೀವು ಈ ಗ್ರಹವನ್ನು ಉಳಿಸಲು ಬಯಸಿದರೆ - ನೀವು ಪ್ರತಿದಿನ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಯೋಚಿಸಿ. ಏಕೆಂದರೆ, ಒಬ್ಬರ ಕ್ರಿಯೆ ಒಂದು ಶತಕೋಟಿ ಪಟ್ಟು ಗುಣಿಸಿದರೆ, ಸಣ್ಣ ಕ್ರಿಯೆಗಳು ಸಹ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ.
ನಾನು ನಂಬುವಂತೆ, ಸಾವಿನಾಚೆಗೂ ಜೀವನವಿದೆ. ಬದಲಾವಣೆಯ ಶಕ್ತಿ ನಿಮಗಿದೆ’ ಎಂಬುದು ಈ ಸಂದರ್ಶನದಲ್ಲಿ ಜೇನ್ ಕೊನೆಯ ಮಾತುಗಳು. ಈ ಮಾತುಗಳು ಮತ್ತೆ ಮತ್ತೆ ನಮ್ಮ ಕಿವಿಯಲ್ಲಿ ಅನುರಣಿಸುತ್ತಿರಲಿ. ಬದುಕಿನ ಎಚ್ಚರವಾಗಿರಲಿ.