ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕವಿಗೆ ಕವಿ ಮುನಿಯಲಿಲ್ಲ!

ಮನೆಗೆ ಅಚಾನಕ್ಕಾಗಿ ಅತಿಥಿಗಳು ಬಂದರೆ ಕಣ್ ಕಣ್, ಬಾಯಿ ಬಾಯಿ ಬಿಡುವವರೇ ಹೆಚ್ಚಾಗಿರುವ ಕಾಲಘಟ್ಟವಿದು. ಅಂಥದ್ದರಲ್ಲಿ, ತಮಗೆ ಕೇವಲ ಔಟ್‌ಹೌಸ್‌ನಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಬಹುದು ಎಂದೇ ಭಾವಿಸಿಕೊಂಡಿದ್ದ ಭೈರಪ್ಪನವರನ್ನು, ಅವರ ಖಾಸಗಿತನಕ್ಕೆ ಧಕ್ಕೆಯಾಗ ಬಾರದು ಎಂಬ ಕಾರಣಕ್ಕೆ ಅವರಿಗಾಗಿಯೇ ತಮ್ಮದೊಂದು ಫ್ಲೈಟ್ ಅನ್ನು ಬಿಟ್ಟುಕೊಟ್ಟು ಬರೋಬ್ಬರಿ ಏಳೆಂಟು ತಿಂಗಳವರೆಗೆ ಊಟೋಪಚಾರ ಮತ್ತು ಇತರ ವಿಷಯಗಳ ನಿಗಾ ನೋಡಿ ಕೊಳ್ಳುವುದು ಸುಲಭದ ಮಾತಲ್ಲ.

ಕವಿಗೆ ಕವಿ ಮುನಿಯಲಿಲ್ಲ!

-

Ashok Nayak Ashok Nayak Oct 7, 2025 1:51 PM

ಪ್ರತಿಸ್ಪಂದನ

ಲಿಂಗದಹಳ್ಳಿ ಚೇತನ್‌ ಕುಮಾರ್

ಇದು ಕೆಲ ತಿಂಗಳ ಹಿಂದಿನ ಮಾತು. ನನ್ನ ಮೆಚ್ಚಿನ ಲೇಖಕ‌ರೊಬ್ಬರ ಅದ್ಯಾವುದೋ ಬರಹವನ್ನು ಓದುತ್ತಿರುವಾಗ, ಅದರಲ್ಲಿ ಉಲ್ಲೇಖವಾಗಿದ್ದ ‘ಕವಿಗೆ ಕವಿ ಮುನಿವಂ’ ಎಂಬ ಮಾತು ನನ್ನ ಗಮನ ಸೆಳೆಯಿತು. ನಿಜ ಹೇಳಬೇಕೆಂದರೆ, ಅದು ನನಗೆ ಹೊಸ ಪರಿಕಲ್ಪನೆ. ಆದ್ದರಿಂದ, ಹಾಗೆಂದರೇನು ಎಂಬುದನ್ನು ಕಂಡುಕೊಳ್ಳಲು ಅಲ್ಲಿ ಇಲ್ಲಿ ಹುಡುಕಿದಾಗ, “ಕವಿಗಳು/ಸಾಹಿತಿಗಳು ಅಥವಾ ಬರಹಗಾರರು ಪರಸ್ಪರರ ಮೇಲೆ ಅಸಮಾಧಾನಗೊಳ್ಳುವಿಕೆ" ಎಂಬ ವಿವರಣೆ ಸಿಕ್ಕಿತು.

ಅಂದರೆ, “ಮತ್ತೊಬ್ಬರ ಕೃತಿಗಳ ಬಗ್ಗೆ ಋಣಾತ್ಮಕವಾಗಿ ಅಥವಾ ಟೀಕೆಯ ಉದ್ದೇಶವಿಟ್ಟುಕೊಂಡೇ ನೋಡುವ ಪ್ರವೃತ್ತಿಯನ್ನು ಇದು ಸೂಚ್ಯವಾಗಿ ಹೇಳುತ್ತದೆ. ಇದು ಕೆಲ ಬರಹಗಾರರಲ್ಲಿ ಕಂಡು ಬರುವ ಒಂದು ಲಕ್ಷಣ" ಎಂಬ ಹೆಚ್ಚುವರಿ ವಿವರಣೆಯನ್ನೂ ಮತ್ತೊಬ್ಬರು ಗೆಳೆಯರು ನೀಡಿದರು ಎನ್ನಿ!

ಇದ್ದಕ್ಕಿದ್ದಂತೆ ಈ ಗ್ರಹಿಕೆ ನನಗೆ ನೆನಪಾಗಲಿಕ್ಕೆ ಕಾರಣರಾದವರು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟರು ಹಾಗೂ ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು. ಅದು ಹೀಗೆ ನೆನಪಾಗಲಿಕ್ಕೂ ಕಾರಣವಿದೆ. 94ರ ಹರೆಯದ ಹಣ್ಣುಜೀವ ಎಸ್.ಎಲ್. ಭೈರಪ್ಪನವರು ಈಗೊಂದು ಸುಮಾರು ಏಳೆಂಟು ತಿಂಗಳ ಹಿಂದೆ ವಿಶ್ವೇಶ್ವರ ಭಟ್ಟರಿಗೆ ಕರೆ ಮಾಡಿ, ಅವರ ಮನೆಯಲ್ಲಿ ಕೆಲ ಕಾಲ ಇರುವುದಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದು, ಆ ಕೋರಿಕೆಗೆ ಹೃದಯಪೂರ್ವಕವಾಗಿ ಸ್ಪಂದಿಸಿದ ಭಟ್ಟರು, ಭೈರಪ್ಪನವರ ಬೆಂಗಳೂರು ವಾಸಕ್ಕೆ ಅನುವು ಮಾಡಿ ಕೊಟ್ಟಿದ್ದು ಇವೆಲ್ಲವೂ ಸದರಿ ಗ್ರಹಿಕೆಯು ನೆನಪಾಗಲು ಕಾರಣವಾದ ಬೆಳವಣಿಗೆಗಳು.

ಇದನ್ನೂ ಓದಿ: S. L. Bhyrappa: ಖ್ಯಾತ ಸಾಹಿತಿ ಎಸ್‌.ಎಲ್‌ ಭೈರಪ್ಪ ಇನ್ನಿಲ್ಲ

ಇಲ್ಲಿ ಇಬ್ಬರ ಕಾರ್ಯಕ್ಷೇತ್ರದಲ್ಲೂ ಕೊಂಚವೇ ಭಿನ್ನತೆಯಿದೆ. ಈ ಪೈಕಿ ಭೈರಪ್ಪನವರು ಜನಪ್ರಿಯ ಕಾದಂಬರಿಕಾರರಾದರೆ, ಭಟ್ಟರು ಪತ್ರಿಕೋದ್ಯಮವನ್ನು ಅಪ್ಪಿ ಹೆಸರುವಾಸಿಯಾದವರು, ತಮ್ಮದೇ ಆದ ನೂರಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದವರು. ಆದರೆ, ಆಳದಲ್ಲಿ ಅವರಿಬ್ಬರ ಕೆಲಸವೂ ಒಂದೇ- ಅಂದರೆ ಇಬ್ಬರೂ ಬರೆಯುವುದನ್ನೇ ನೆಚ್ಚಿಕೊಂಡವರು!

ಆದರೆ ‘ಕವಿಗೆ ಕವಿ ಮುನಿವಂ’ ಎಂಬ ಮಾತಿಗೆ ಆಸ್ಪದ ನೀಡದೆ ಇವರಿಬ್ಬರೂ ಪರಸ್ಪರ ಕಲೆತು ಮಾತಾಡುವ, ಸಾಕಷ್ಟು ಸಮಾರಂಭಗಳಲ್ಲಿ ಒಟ್ಟೊಟ್ಟಿಗೆ ಪಾಲ್ಗೊಳ್ಳುವ ನಡೆಯನ್ನು ತೋರಿದ್ದು ನನಗಂತೂ ವೈಯಕ್ತಿಕವಾಗಿ ಖುಷಿ ತಂದಿತು ಎನ್ನಬಲ್ಲೆ. ವಿಶ್ವೇಶ್ವರ ಭಟ್ಟರೇ ಸಾಕಷ್ಟು ಕಡೆ ಹೇಳಿ ಕೊಂಡಿರುವಂತೆ, ಅವರು ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವ ಹಿಸುತ್ತಿದ್ದಾಗಿನಿಂದ ಮೊದಲ್ಗೊಂಡು, ಇತ್ತೀಚಿನವರೆಗೂ ಭೈರಪ್ಪನವರ ಜತೆಗಿನ ಅವರ ಸಾಂಗತ್ಯವು, ದೂರವಾಣಿ ಕರೆಯ ರೂಪದಲ್ಲೋ, ಮುಖಾಮುಖಿ ಭೇಟಿಯ ಸ್ವರೂಪದಲ್ಲೋ ಮುಂದುವರಿದಿತ್ತು.

ಇದನ್ನು ಅರಿತಿದ್ದ ನನಗೆ, ಭೈರಪ್ಪನವರ ಹುಟ್ಟೂರು ಸಂತೇಶಿವರದ ಕೆರೆಯನ್ನು ತುಂಬಿಸುವ ವಿಷಯಕ್ಕೆ ಸಂಬಂಧಿಸಿಯೂ ಈ ನಂಟು ಮುಂದುವರಿದಿದ್ದನ್ನು ಪತ್ರಿಕೆಗಳಲ್ಲಿ ಓದಿದಾಗ, ಇಬ್ಬರು ಬರಹಗಾರರು ಹೀಗೆ ಆತ್ಮೀಯತೆಯನ್ನು ಕಾಪಿಟ್ಟುಕೊಂಡು ಹೋಗಲು ಸಾಧ್ಯವಿದೆಯಲ್ಲವೇ ಎನಿಸಿದ್ದು ನಿಜ.

ಇದು ಅಷ್ಟಕ್ಕೇ ನಿಲ್ಲದೆ, ಭೈರಪ್ಪ-ಕೇಂದ್ರಿತ ಪ್ರತಿಷ್ಠಾನವೊಂದನ್ನು ಹುಟ್ಟುಹಾಕುವವರೆಗೂ (ಎಸ್.ಎಲ್. ಭೈರಪ್ಪನವರ ಧ್ಯೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಶುರುವಾಗಿರುವಂಥದ್ದು) ಮುಂದುವರಿದಿದ್ದು ಮತ್ತಷ್ಟು ಸಂತಸವನ್ನು ತಂದ ಸಂಗತಿ ಎನ್ನಬೇಕು.

ಮನೆಗೆ ಅಚಾನಕ್ಕಾಗಿ ಅತಿಥಿಗಳು ಬಂದರೆ ಕಣ್ ಕಣ್, ಬಾಯಿ ಬಾಯಿ ಬಿಡುವವರೇ ಹೆಚ್ಚಾಗಿರುವ ಕಾಲಘಟ್ಟವಿದು. ಅಂಥದ್ದರಲ್ಲಿ, ತಮಗೆ ಕೇವಲ ಔಟ್‌ಹೌಸ್‌ನಲ್ಲಿ ಉಳಿದುಕೊಳ್ಳುವುದಕ್ಕೆ ಅವಕಾಶ ನೀಡಬಹುದು ಎಂದೇ ಭಾವಿಸಿಕೊಂಡಿದ್ದ ಭೈರಪ್ಪನವರನ್ನು, ಅವರ ಖಾಸಗಿತನಕ್ಕೆ ಧಕ್ಕೆಯಾಗ ಬಾರದು ಎಂಬ ಕಾರಣಕ್ಕೆ ಅವರಿಗಾಗಿಯೇ ತಮ್ಮದೊಂದು ಫ್ಲೈಟ್ ಅನ್ನು ಬಿಟ್ಟುಕೊಟ್ಟು ಬರೋಬ್ಬರಿ ಏಳೆಂಟು ತಿಂಗಳವರೆಗೆ ಊಟೋಪಚಾರ ಮತ್ತು ಇತರ ವಿಷಯಗಳ ನಿಗಾ ನೋಡಿ ಕೊಳ್ಳುವುದು ಸುಲಭದ ಮಾತಲ್ಲ.

ಆದರೆ ಭಟ್ಟರು ಅದನ್ನು ನೆರವೇರಿಸಿದ್ದು ಶ್ಲಾಘನೀಯ. ಇಷ್ಟು ಮಾತ್ರವಲ್ಲದೆ, ಭೈರಪ್ಪನವರು ತೀವ್ರ ಅಸ್ವಸ್ಥತೆಯ ಕಾರಣದಿಂದ ಆಸ್ಪತ್ರೆಗೆ ದಾಖಲಾದಾಗಿನಿಂದ ಮೊದಲ್ಗೊಂಡು, ಅವರ ಅಂತ್ಯ ಸಂಸ್ಕಾರದವರೆಗೂ ಜಾಗ ಬಿಟ್ಟು ಕದಲದ ವಿಶ್ವೇಶ್ವರ ಭಟ್ಟರ ಬದ್ಧತೆಗೆ ಒಂದು ಸಲಾಂ ಹೊಡೆಯ ಲೇಬೇಕು.

ಇವೆಲ್ಲವೂ ಹೃದಯವಂತಿಕೆ ಇರುವವರಿಂದ ಮಾತ್ರವೇ ಸಾಧ್ಯವಾಗುವಂಥ ಕೆಲಸಗಳು. ಇಂಥ ಕೆಲಸಕ್ಕೆ ಮುಂದಾದ ವಿಶ್ವೇಶ್ವರ ಭಟ್ಟರಿಗೆ ನನ್ನಂಥ ಅಭಿಮಾನಿಗಳ ಹೃದಯಪೂರ್ವಕ ನಮನಗಳು ಸಲ್ಲುತ್ತವೆ.

ಭೈರಪ್ಪ-ಕೇಂದ್ರಿತ ಪ್ರತಿಷ್ಠಾನದ ಮೂಲಕ ಏನೇನು ಕೆಲಸಗಳು ಜರುಗಲಿವೆ ಎಂಬುದರ ಬಗ್ಗೆ ನನಗಿನ್ನೂ ಸ್ಪಷ್ಟ ಮಾಹಿತಿಯಿಲ್ಲ, ಆದರೆ ನಾಡಿಗೆ ನಾಡೇ ಮೆಚ್ಚಿಕೊಳ್ಳುವ ರೀತಿಯ ಕಾರ್ಯ ಚಟುವಟಿಕೆಗಳನ್ನು ಈ ಪ್ರತಿಷ್ಠಾನವು ಹಮ್ಮಿಕೊಳ್ಳಲಿದೆ ಎಂಬ ವಿಶ್ವಾಸವಂತೂ ನನಗಿದೆ. ಇಂದಿನ ಪೀಳಿಗೆಯವರಿಗೆ ಭೈರಪ್ಪನವರ ಕೃತಿಗಳ ಪರಿಚಯ ಅಷ್ಟಾಗಿ ಇಲ್ಲದಿರಬಹುದು.

ಆದ್ದರಿಂದ, ಭೈರಪ್ಪನವರ ಕೃತಿಗಳನ್ನು ಓದುವ ಪರಿಯೇನು? ಅದಕ್ಕೆ ಮಾಡಿಕೊಳ್ಳಬೇಕಾದ ಮಾನಸಿಕ ಸಿದ್ಧತೆಗಳೇನು? ವರ್ತಮಾನದ ಸಜ್ಜಿಕೆಗಳಿಗೆ ಅವನ್ನು ಅನ್ವಯಿಸಲು ಸಾಧ್ಯವೇ? ಎಂಬೆಲ್ಲ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ಪ್ರತಿಷ್ಠಾನದ ವತಿಯಿಂದ ಬಲ್ಲವರಿಂದ ವಿಚಾರ ವಿನಿಮಯವನ್ನು ನಡೆಸಿದರೆ, ಇಂದಿನ ಪೀಳಿಗೆಯವರಿಗೂ ಭೈರಪ್ಪನವರ ಮತ್ತು ಅವರ ಕೃತಿಗಳ ಪರಿಚಯವಾದಂತಾಗುತ್ತದೆ ಹಾಗೂ ಈಗಾಗಲೇ ಅವರ ಅಭಿಮಾನಿಗಳಾಗಿರುವವರಿಗೆ ಮತ್ತಷ್ಟು ಆಳಕ್ಕಿಳಿಯಲು ಅವಕಾಶ ಸಿಕ್ಕಂತಾಗುತ್ತದೆ.

ಈ ನಿಟ್ಟಿನಲ್ಲಿ ಯತ್ನಗಳಾಗಲಿ ಎಂಬುದು ನನ್ನ ಕೋರಿಕೆ... ಜತೆಗೆ, ಕನ್ನಡ ಸಾರಸ್ವತ ಲೋಕದಲ್ಲಿ ಬಹಳಷ್ಟು ಪ್ರತಿಭೆಗಳಿದ್ದರೂ, ತಮ್ಮ ಕೃತಿಗಳನ್ನು ಪ್ರಕಟಿಸಬಲ್ಲಷ್ಟು ಶಕ್ತಿ-ಸಾಮರ್ಥ್ಯಗಳು ಅವರಿಗಿಲ್ಲ ಎಂಬುದು ಗೊತ್ತಿರುವ ಸಂಗತಿಯೇ. ಕೃತಿಕಾರರಿಗೆ ಪ್ರಸಿದ್ಧಿಯೂ, ಕೃತಿಗೆ ‘ಸೇಲಬಿಲಿಟಿ’ ಯೂ ದಕ್ಕುವವರೆಗೂ ಕೆಲವು ಪುಸ್ತಕ ಪ್ರಕಾಶಕರು ಇಂಥವರಿಗೆ ಒತ್ತಾಸೆಯಾಗಿ ನಿಲ್ಲುವುದಕ್ಕೆ (ವ್ಯಾವಹಾರಿಕ ಕಾರಣಗಳಿಂದಾಗಿ) ಸಾಧ್ಯವಾಗದಿರಬಹುದು.

ಆದ್ದರಿಂದ, ಇಂಥ ಚಿಗುರು ಪ್ರತಿಭೆಗಳು ಸೃಷ್ಟಿಸುವ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಬೆನ್ನು ತಟ್ಟುವ ಕೆಲಸಕ್ಕೆ ‘ಭೈರಪ್ಪ-ಕೇಂದ್ರಿತ’ ಪ್ರತಿಷ್ಠಾನವು ಮುಂದಾಗುವುದಾದರೆ, ಅದು ನಿಜಕ್ಕೂ ಶ್ಲಾಘನೀಯ ಕೆಲಸವಾಗುವುದರಲ್ಲಿ ಸಂದೇಹವಿಲ್ಲ. ಪ್ರಾಯಶಃ ಅದು ಭೈರಪ್ಪನವರ ಆತ್ಮಕ್ಕೆ ಖುಷಿ ತರುವ ಸಂಗತಿಯೂ ಆಗಬಹುದು...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)