ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rangaswamy Mookanahalli Column: ಉತ್ತಮ ಬದುಕಿಗೆ ಬೇಕಿದೆ ಸಂಬಂಧಗಳ ಆಸರೆ !

ಯಾರೂ ನೇರವಾಗಿ ಹೇಳಲಿಲ್ಲ. ಆದರೆ ಏನೂ ಸಮಾಚಾರವಿಲ್ಲ ಎಂದ ಮೇಲೆ ಫೋನ್ ಇಡುತ್ತೇವೆ ಎನ್ನುವ ಅವರ ಧಾವಂತ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಿದ್ದಾನಲ್ಲ! ಕಾಲು ಶತಮಾನದ ಹಿಂದೆ ಬಾರ್ಸಿಲೋನಾ ನಗರಕ್ಕೆ ಕಾಲಿಟ್ಟಾಗ ಇದನ್ನು ನಾನು ಕಂಡಿದ್ದೇನೆ. ಅಲ್ಲಿ ಸುತ್ತ ಮುತ್ತ ಇರುವ ಜನರೇ ಎಲ್ಲಾ! ಹೌದು ಕೆಲಸದ ಜಾಗದಲ್ಲಿ ಸಿಗುವ ವ್ಯಕ್ತಿಗಳೇ ಸರ್ವಸ್ವ.

ಉತ್ತಮ ಬದುಕಿಗೆ ಬೇಕಿದೆ ಸಂಬಂಧಗಳ ಆಸರೆ !

-

ವಿಶ್ವರಂಗ

ತಂತ್ರಜ್ಞಾನ ಹೆಚ್ಚಾದಂತೆ ಸಂವಹನ ಸುಲಭವೂ ಮತ್ತು ಕಡಿಮೆ ಖರ್ಚಿನದೂ ಆಗಿದೆ. ನಾವೆಷ್ಟು ಜನರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬಹುದು? ನಾವು ಮಾತ್ರ ಎಲ್ಲರಿಗೂ ಕರೆ ಮಾಡಿ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಸಾಕೆ? ಅವರಲ್ಲೂ ಒಂದಂಶ ಇದರ ಬಗ್ಗೆ ಬದಲಾವಣೆ ಬರಬೇಕಲ್ಲವೇ?

ಕಳೆದ 25 ವರ್ಷದಲ್ಲಿ ಭಾರತ ಬದಲಾಗಿ ಬಿಟ್ಟಿದೆ. ಬದಲಾವಣೆ ಜಗದ ನಿಯಮ. ಕೆಲವು ಬದಲಾವಣೆಗಳು ಖುಷಿ ನೀಡುತ್ತವೆ. ಕೆಲವು ಬದಲಾವಣೆಗಳು ಅವಶ್ಯಕವಿರಲಿಲ್ಲ ಎನ್ನಿಸುತ್ತದೆ. ಬದಲಾವಣೆ ಆಗುತ್ತಿರುವ ಹಂತದಲ್ಲಿ ನಾವು ಅದನ್ನು ಗಮನಿಸಬೇಕು. ಆದರೆ ಬದಲಾವಣೆಯ ವೇಗದಲ್ಲಿ ಅದನ್ನು ಗಮನಿಸುವ ತಾಳ್ಮೆ ಮತ್ತು ಸಂಯಮ ನಮಗಿರುವುದಿಲ್ಲ.

ಬದಲಾದ ನಂತರ “ಅಯ್ಯೋ ಹಿಂದಿನ ಕಾಲವೇ ಚೆನ್ನಾಗಿತ್ತು" ಎನ್ನುವ ಮಾತುಗಳನ್ನು ಆಡುತ್ತಿರು ತ್ತೇವೆ. 25 ವರ್ಷದ ಹಿಂದೆ ಭಾರತ, ಬೆಂಗಳೂರು ಬಿಟ್ಟು ವಿದೇಶವಾಸಿಯಾದ ನಂತರ ಪ್ರತಿ ವರ್ಷ ಭಾರತಕ್ಕೆ ಬಂದಿದ್ದೇನೆ. ಕೆಲವೊಂದು ವರ್ಷಗಳು ಎರಡು ಅಥವಾ ಮೂರು ಬಾರಿ ಭೇಟಿ ನೀಡಿ ದ್ದೇನೆ. ಆಗೆ ಇಗುತ್ತಿದ್ದ ಬದಲಾವಣೆಯನ್ನು ಗಮನಿಸಿದ್ದೇನೆ. ಅದರಲ್ಲಿ ಅತ್ಯಂತ ಪ್ರಮುಖವಾದದ್ದು ನಮ್ಮ ಸಂಬಂಧಳಲ್ಲಿ ಆದ ಬದಲಾವಣೆ.

ಮರಳಿ ಭಾರತಕ್ಕೆ ಬಂದು ನೆಲೆ ನಿಂತ ಮೇಲೆ ಸ್ನೇಹಿತರಿಗೆ ಕರೆ ಮಾಡಿದರೆ ಅವರೆ ಕೇಳುತ್ತಿದ್ದ ಪ್ರಶ್ನೆ ನನಗೆ ಇರಿಸುಮುರಿಸು ಉಂಟು ಮಾಡುತ್ತಿತ್ತು. “ಇನ್ನೇನು ಸಮಾಚಾರ? ಹೇಳು. ಏನು ಫೋನ್ ಮಾಡಿದ್ದು?" ಎನ್ನುವ ಅವರ ಮಾತುಗಳು ನನ್ನನ್ನು ಮೂಕನನ್ನಾಗಿಸುತ್ತಿದ್ದವು. ಏನಾದರೂ ಬೇಕಾದರೆ ಅಥವಾ ಏನಾದರೂ ಸಮಾಚಾರವಿದ್ದರೆ ಮಾತ್ರ ಕರೆ ಮಾಡುವುದು ಎನ್ನುವ ಮಟ್ಟಕ್ಕೆ ಭಾರತ ಬದಲಾಗಿ ಹೋಗಿತ್ತು.

ಸುಮ್ಮನೆ ಫೋನ್ ಮಾಡಿ ಕುಶಲವೇ? ಕ್ಷೇಮವೇ? ಬದುಕು ಹೇಗೆ ಸಾಗುತ್ತಿದೆ? ಎಂದು ವಿಚಾರಿಸುವ ನಾನು ಅವರ ಕಣ್ಣಿನಲ್ಲಿ ‘ಟೈಮ್‌ಪಾಸ್ ಗಿರಾಕಿ’ ಆಗಿಬಿಟ್ಟಿದ್ದೆ. ಕಾರಣವಿಲ್ಲದೆ ನಮಗೇಕೆ ಫೋನ್ ಮಾಡುತ್ತಿದ್ದೀಯಾ ಎನ್ನುವ ಮಟ್ಟಕ್ಕೆ ಜನ ಬದಲಾಗಿಬಿಟ್ಟಿದ್ದರು. ಯಾಂತ್ರಿಕತೆ, ಕೆಲಸದ ಒತ್ತಡ ಎನ್ನುವ ಕಾರಣಗಳು ಅವರೆಲ್ಲರ ನಡವಳಿಕೆಯನ್ನು ಸಮರ್ಥಿಸಿಕೊಳ್ಳಲು ಒಳ್ಳೆಯ ಕಾರಣಗಳಾಗಿ ದ್ದವು.

ಇದನ್ನೂ ಓದಿ: Rangaswamy Mookanahalli Column: ದೃಷ್ಟಿಕೋನ ಬದಲಾಗದೇ ಬದುಕು ಹೇಗೆ ಬದಲಾದೀತು ?

ಯಾರೂ ನೇರವಾಗಿ ಹೇಳಲಿಲ್ಲ. ಆದರೆ ಏನೂ ಸಮಾಚಾರವಿಲ್ಲ ಎಂದ ಮೇಲೆ ಫೋನ್ ಇಡುತ್ತೇವೆ ಎನ್ನುವ ಅವರ ಧಾವಂತ ಅರ್ಥ ಮಾಡಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಿದ್ದಾನಲ್ಲ! ಕಾಲು ಶತಮಾನದ ಹಿಂದೆ ಬಾರ್ಸಿಲೋನಾ ನಗರಕ್ಕೆ ಕಾಲಿಟ್ಟಾಗ ಇದನ್ನು ನಾನು ಕಂಡಿದ್ದೇನೆ. ಅಲ್ಲಿ ಸುತ್ತಮುತ್ತ ಇರುವ ಜನರೇ ಎಲ್ಲಾ! ಹೌದು ಕೆಲಸದ ಜಾಗದಲ್ಲಿ ಸಿಗುವ ವ್ಯಕ್ತಿಗಳೇ ಸರ್ವಸ್ವ.

ಅದರಾಚೆ ನಮ್ಮವರು ಎನ್ನುವವರ ಸಂಖ್ಯೆ ಬೆರಳೆಣಿಕೆ. ಇವತ್ತು ಇಲ್ಲೂ ಹೀಗೆ ಆಗಿ ಬಿಟ್ಟಿದೆ. ದಿನ ನಿತ್ಯ ನಮ್ಮ ಒಡನಾಟದಲ್ಲಿರುವವರು ಬಿಟ್ಟರೆ ಮಿಕ್ಕ ಬಂಧುಗಳ ಮತ್ತು ಮಿತ್ರರ ಕಥೆ ಅಷ್ಟಕಷ್ಟೇ. ಹೀಗಾಗಿ ಒಂದು ಸಮಾರಂಭ ಮಾಡಿದರೆ ಬರುವವರ ಸಂಖ್ಯೆ ಕ್ಷೀಣವಾಗಿದೆ. ಎಲ್ಲರಿಗೂ ಅವರದೇ ಆದ ಧಾವಂತಗಳು, ಒತ್ತಡ, ಕಮಿಟ್ಮೆಂಟ್ ಗಳಿರುತ್ತವೆ. ಎಲ್ಲರೂ ಅವರವರ ಬದುಕಿನ ತೇರು ಎಳೆಯುವುದರಲ್ಲಿ ವ್ಯಸ್ತರು. ಈ ಸಾಲುಗಳು ಯಾರನ್ನೂ ದೂರಲು ಬರೆಯುತ್ತಿಲ್ಲ.

ಬದುಕು ಕಾಲು ಶತಮಾನದಲ್ಲಿ ಬದಲಾದ ರೀತಿಯನ್ನು ಕಂಡು ಅಚ್ಚರಿಗೆ, ನೋವಿಗೆ ಬರೆಯು ತ್ತಿದ್ದೇನೆ. ಮದುವೆಯಂಥ ಸಮಾರಂಭದಲ್ಲೂ ನೂರು ಜನರ ಮೇಲೆ ಹೋದದ್ದು ಯುರೋಪಿನಲ್ಲಿ ಸಾಮಾನ್ಯ ವಾಗಿ ಕಾಣಸಿಗುವುದಿಲ್ಲ. ಆ ನೂರು ಜನರಲ್ಲಿ ಇಪ್ಪತ್ತು ಜನ ಮಾತ್ರ ಬಂಧುಗಳಿದ್ದಾರು, ಉಳಿದ ಎಂಬತ್ತು ನಿತ್ಯ ಜೀವನದಲ್ಲಿ ಹೆಗಲು ನೀಡುವ ಜನರಾಗಿರುತ್ತಿದ್ದರು. ಭಾರತ ಬದಲಾಗಿ ಹೋಗಿದೆ. ಇಲ್ಲೂ ಥೇಟ್ ಹಾಗೆ ಆಗಿದೆ. - ಕಸಿ ಜತೆ ಮಾತಾಡಿ ವರ್ಷಗಳು ಉರುಳಿರುತ್ತವೆ. ಸೆಕೆಂಡ್ ಮತ್ತು ಥರ್ಡ್ ಕಸಿ ಎದುರು ಬಂದರೂ ಗುರುತಿಸಲಾಗದ ಸಂಬಂಧವನ್ನು ನಾವು ಉಳಿಸಿಕೊಂಡಿ ದ್ದೇವೆ!

ತಂತ್ರಜ್ಞಾನ ಹೆಚ್ಚಾದಂತೆ ಸಂವಹನ ಸುಲಭವೂ ಮತ್ತು ಕಡಿಮೆ ಖರ್ಚಿನದೂ ಆಗಿದೆ. ಹೀಗಿದ್ದೂ ನಾವು ಮಾತಾಡುವುದು ಮಾತ್ರ ನಿತ್ಯದ ಅದದೇ ಜನರ ನಡುವೆ ಮಾತ್ರ. ವಿದೇಶದಲ್ಲಿದ್ದ ಕಾರಣ ಇಲ್ಲಿನ ಬಂಧು-ಮಿತ್ರರ ಪರಿಚಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಮಗಳು ಅನನ್ಯಳಿಗೆ ಎಲ್ಲರನ್ನೂ ಸೋಷಿಯಲ್ ಮೀಡಿಯಾದಲ್ಲಿ ತೋರಿಸಿ ಅವರ ಪರಿಚಯ ಮಾಡಿಕೊಟ್ಟಿದ್ದೆವು.

ಭಾರತಕ್ಕೆ ಬಂದ ಮೇಲೆ ಸಂವಹನ ಸುಲಭವಾಗುತ್ತದೆ ಎನ್ನುವ ಇರಾದೆ ನನ್ನದಾಗಿತ್ತು. ಆದರೆ ಇಲ್ಲಿನ ವಾಸ್ತವತೆ ಬೇರೆಯದಿದೆ. ವಸ್ತುಸ್ಥಿತಿ ಬದಲಾಗಿದೆ ಎಂದ ಮಾತ್ರಕ್ಕೆ ನಾವು ಅದನ್ನು ಪ್ರತಿ ರೋಧಿಸದೆ ಒಪ್ಪಿಕೊಳ್ಳಬೇಕು ಎಂದಿಲ್ಲ ಅಲ್ಲವೇ? ಹೀಗಾಗಿ ಅನನ್ಯಳಿಗೆ ಕುಟುಂಬದ ಸದಸ್ಯರ ಬಿಟ್ಟು ಕನಿಷ್ಠ ಐದು ಹೆಸರು ಒಂದು ನಿಮಿಷದಲ್ಲಿ ಹೇಳಬೇಕು, ಹೀಗೆ ಹೇಳಿದವರು ನಮ್ಮೆ ಕಷ್ಟ ಸುಖದಲ್ಲಿ ಭಾಗಿಯಾಗುವ ಮಟ್ಟದ ಸಂಬಂಧವನ್ನು ನಾವು ಹೊಂದಿರಬೇಕು ಎನ್ನುವುದು ಮೊದಲ ಕಂಡೀಷನ್.

ಅವರ ಬಗ್ಗೆ ಎಂದಿಗೂ ನಾವು ಋಣಾತ್ಮಕ ಮಾತುಗಳನ್ನು ಆಡಬಾರದು ಎನ್ನುವುದು ಎರಡನೇ ಕಂಡೀಷನ್. ಲಾಭ, ನಷ್ಟದ ಲೆಕ್ಕಾಚಾರ ಹಾಕುವುದನ್ನು ಮೀರಿದ ಸಂಬಂಧ ಅದಾಗಿರಬೇಕು ಎನ್ನುವುದು ಕೊನೆಯ, ಆದರೆ ಇನ್ನೊಂದು ಮುಖ್ಯವಾದ ನಿಬಂಧನೆ. ಕಳೆದ ಎಂಟು ವರ್ಷಗಳಿಂದ ನಾವು ಮಾಡಿದ ಈ ಪ್ರಯತ್ನ ಫಲಿತಾಂಶ ನೀಡಿದೆ.

ಇಂದಿಗೆ ಒಂದು ನಿಮಿಷದಲ್ಲಿ ಆ ರೀತಿಯ ಹದಿನೈದು ಜನರ ಹೆಸರನ್ನು ಅನನ್ಯ ಹೇಳಬಲ್ಲಳು. ನಮ್ಮ ಮನೆಯಲ್ಲಿ ಯಾರೊಬ್ಬರ ಬಗ್ಗೆಯೂ ಋಣಾತ್ಮಕ ಮಾತುಗಳನ್ನು ಆಡುವುದಿಲ್ಲ. ‘ಅಯ್ಯೋ ಕಾಲ ಬದಲಾಗಿದೆ’ ಎಂತಲೋ ಅಥವ ‘ಜನ ಬದಲಾಗಿದ್ದಾರೆ’ ಎಂದೋ ನಾವು ಸುಮ್ಮನೆ ಕುಳಿತಿದ್ದರೆ ಇಂದಿನ ಫಲಿತಾಂಶ ನಮಗೆ ಸಿಗುತ್ತಿರಲಿಲ್ಲ. ನನ್ನ ಪರಿಧಿಯಲ್ಲಿ ಬಂದ ಜನರನ್ನು ತಿಂಗಳಿಗೊಮ್ಮೆಯಾದರೂ ಕರೆ ಮಾಡಿ ಮಾತಾಡಿಸುತ್ತೇನೆ.

ಮಾತಾಡಲು, ಕರೆ ಮಾಡಲು ಕಾರಣ ಬೇಕಿಲ್ಲ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಕರೆ ಮಾಡಬೇಕು ಅಥವಾ ಮಾಡುತ್ತಾರೆ ಎನ್ನುವ ಮೆಂಟಾಲಿಟಿಯನ್ನು ನಾವು ಬದಲಿಸಬಹುದು. ಇವತ್ತಿಗೆ ನನ್ನ ಮಟ್ಟಿಗೆ ಆ ಜಯ ಸಿಕ್ಕಿದೆ. ನನ್ನ ವಲಯದಲ್ಲಿ ಬಂದಿರುವ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿ ದ್ದೇನೆ. ಬಿಡುತ್ತ ಹೋದರೆ ಕಾರಣವಿಲ್ಲದೆ ಬಿಟ್ಟು ಹೋಗುತ್ತದೆ.

ಅದೇ ರೀತಿ ಜತೆಯಲ್ಲಿರಬೇಕು ಎನ್ನುವ ಮನಸ್ಸು ಮಾಡಿದರೆ ಕಾರಣವಿಲ್ಲದೆ ಆ ಸಂಬಂಧ ನಳನಳಿಸುತ್ತದೆ. ಆಯ್ಕೆ ನಮ್ಮದು. ಇವತ್ತಿನ ದಿನದಲ್ಲಿ ಶಾಲೆ ಮತ್ತು ಕಾಲೇಜಿನಲ್ಲಿ ಹೇಳಿಕೊಡು ವುದು ಸರ್ಟಿಫಿಕೇಟ್ ಗಳಿಸಿ ಕೊಡುತ್ತದೆ. ಆ ನಂತರ ಕೆಲಸ ಮತ್ತು ಹಣವನ್ನು ಸಂಪಾದಿಸುವುದು ಮುಖ್ಯ ಗುರಿ ಎನ್ನುವಂತೆ ನಾವು ಮಕ್ಕಳನ್ನು ಬೆಳೆಸುತ್ತಿದ್ದೇವೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮುನ್ನೆಲೆಗೆ ಬರುತ್ತಿರುವ ಈ ಸಮಯದಲ್ಲಿ ನಾವು ನಮ್ಮ ಮಕ್ಕಳನ್ನು ಉತ್ತಮ ಸಂವಹನಕಾರರನ್ನಾಗಿ ಮಾಡುವುದು ಆಯ್ಕೆಯಾಗಿ ಉಳಿಯುವುದಿಲ್ಲ. ಅದು ಅನಿವಾರ್ಯವಾಗಲಿದೆ. ಆದರೆ ಇದರ ಬಗ್ಗೆ ಪೋಷಕರಿಗೆ ಇನ್ನೂ ಅರಿವಿನ ಕೊರತೆಯಿದೆ.

ಮೊಬೈಲಿನಲ್ಲಿ ಮುಖ ಹುದುಗಿರಿಸುವ ಮಕ್ಕಳು ಮನೆಗೆ ಬಂದವರನ್ನು ಕತ್ತೆತ್ತಿ ‘ಹಾಯ್’ ಹೇಳುವು ದನ್ನು ಕೂಡ ಅವರು ಕಲಿಸುತ್ತಿಲ್ಲ. ಹೆಸರಿಗೆ ವಿದ್ಯಾವಂತ ಪೋಷಕರು, ಆದರೆ ತಮ್ಮ ಮಕ್ಕಳಿಗೆ ಅವರು ನೀಡುತ್ತಿರುವ ಸಂಸ್ಕಾರ ನೆನೆದರೆ ನೋವಾಗುತ್ತದೆ. ನೆನಪಿರಲಿ ನಾವು ಪೋಷಕರು, ಸದಾ ನಮ್ಮ ಮಕ್ಕಳ ಜತೆಯಲ್ಲಿರಲು ಸಾಧ್ಯವಿಲ್ಲ. ಈ ಜಗತ್ತಿಗೆ ಅವರು ತೆರೆದುಕೊಳ್ಳಲು ನಾವು ಅವರನ್ನು ಸಿದ್ಧಪಡಿಸಬೇಕು.

ಅದೇನು ದೊಡ್ಡ ಕಷ್ಟದ ಕೆಲಸವಲ್ಲ. ನಾವು ಪಾಲಿಸಲು ಕಲಿಯಬೇಕು. ಮಕ್ಕಳು ನಾವು ಮಾಡಿ ದ್ದನ್ನು ನಕಲು ಮಾಡುತ್ತವೆ. ಇದರಲ್ಲಿ ಯಾವ ಸಂಶಯವೂ ಬೇಡ. ಬೇವನ್ನು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸುವುದು ತಪ್ಪಾಗುತ್ತದೆ ಅಲ್ಲವೇ? ನಾವೆಷ್ಟು ಜನರೊಂದಿಗೆ ಉತ್ತಮ ಸಂಬಂಧ ವನ್ನು ಇಟ್ಟುಕೊಳ್ಳಬಹುದು? ನಾವು ಮಾತ್ರ ಎಲ್ಲರಿಗೂ ಕರೆ ಮಾಡಿ ಸಂಬಂಧವನ್ನು ಉಳಿಸಿ ಕೊಳ್ಳುವ ಪ್ರಯತ್ನ ಮಾಡಿದರೆ ಸಾಕೆ? ಅವರಲ್ಲೂ ಒಂದಂಶ ಇದರ ಬಗ್ಗೆ ಬದಲಾವಣೆ ಬರಬೇಕಲ್ಲವೇ? ಎನ್ನುವ ಪ್ರಶ್ನೆ ಕೂಡ ಉದ್ಭವವಾಗುತ್ತದೆ.

ಗಮನಿಸಿ ನಮ್ಮ ಜೀವಿತಾವಧಿಯಲ್ಲಿ ಹತ್ತು ಸಾವಿರದಿಂದ ಎಂಬತ್ತು ಸಾವಿರ ಜನರನ್ನು ಭೇಟಿ ಮಾಡುತ್ತೇವೆ. ಈ ಸಂಖ್ಯೆ ವ್ಯಕ್ತಿಯ ಜೀವಿತಾವಧಿ ಮತ್ತು ವೃತ್ತಿ, ಪ್ರವೃತ್ತಿ ಮತ್ತು ಗುಣ ಸ್ವಭಾವಗಳ ಮೇಲೆ ಅವಲಂಬಿತವಾಗಿದೆ. ಕೋಟಿಗೊಬ್ಬರು ಇದಕ್ಕಿಂತ ಹೆಚ್ಚಿನ ಜನರನ್ನು ಭೇಟಿ ಮಾಡಬಹುದು.

ಇಲ್ಲಿನ ಸಂಖ್ಯೆ ಬಹುತೇಕರ ಲೆಕ್ಕಾಚಾರದ ಅಡಿಯಲ್ಲಿ ಬರುತ್ತದೆ. ಈ ಭೇಟಿ ಒಂದು ದಿನದ್ದು ಆಗಿರಬಹುದು. ಅಥವಾ ಒಂದೆರಡು ನಿಮಿಷದ್ದು ಕೂಡ ಆಗಿರಬಹುದು. ಇವತ್ತಿನ ದಿನದಲ್ಲಿ ಆನ್‌ಲೈನ್ ಭೇಟಿಗಳನ್ನೂ ಬೇಕಿದ್ದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬಹುದು. ಆದರೆ ಇಷ್ಟೊಂದು ಸಾವಿರ ಜನರೊಂದಿಗೆ ನಾವು ಸಂಬಂಧವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲ.

ರಾಬಿನ್ ಡನ್ಬರ್ ಎನ್ನುವ ಖ್ಯಾತ ಬ್ರಿಟಿಷ್ ಮನಃಶಾಸ್ತ್ರಜ್ಞ ‘ಡನ್ಬರ್ ನಂಬರ್ ಥಿಯರಿ’ ಎನ್ನುವ ಪರಿಕಲ್ಪನೆಯ ಜನಕ. ಈ ಥಿಯರಿಯ ಪ್ರಕಾರ ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ 120 ರಿಂದ 150 ಜನರೊಂದಿಗೆ ಮಾತ್ರ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗಲು ಸಾಧ್ಯ.

ಮಿಕ್ಕೆ ಆಯಾ ಕ್ಷಣದ ಸಂಬಂಧಗಳು, ದೀರ್ಘಕಾಲ ಉಳಿಯುವುದಲ್ಲ. ಈ 120 ಅಥವಾ 150 ಸಂಖ್ಯೆ ಕೂಡ ಒಂದೇ ಸಮಯದಲ್ಲಿ ಉಳಿಸಿಕೊಂಡು ಹೋಗುವ ಸಂಬಂಧವಲ್ಲ. ಜೀವಿತಾವಧಿಯಲ್ಲಿ ಒಟ್ಟಾರೆ ಇರಿಸಿಕೊಳ್ಳಬಹುದಾದ ಸಂಖ್ಯೆಯದು. ಹೀಗಾಗಿ ಈತ ಇದನ್ನು ಎರಡು ವಿಭಾಗವನ್ನಾಗಿ ಮಾಡಿದ್ದಾರೆ.

ಒಂದು ಆಂತರಿಕ ವಲಯ. ಇನ್ನೊಂದು ಬಾಹ್ಯ ವಲಯ. ಆಂತರಿಕ ವಲಯದಲ್ಲಿ ಕುಟುಂಬದ ಸದ್ಯಸರು, ರಕ್ತ ಸಂಬಂಧಿಗಳು ಬರುತ್ತಾರೆ. ಅಚ್ಚರಿ ಎನ್ನುವಂತೆ ಇಲ್ಲಿ ಕನಿಷ್ಠ ಐದಾರು ಜನ ಸ್ನೇಹಿತರು ಕೂಡ ಬರುತ್ತಾರೆ. ಉಳಿದೆಲ್ಲರೂ ಬಾಹ್ಯ ವಲಯದಲ್ಲಿ ಬರುತ್ತಾರೆ. ಹೀಗಾಗಿ ಆಂತರಿಕ ವಲಯ ಎನ್ನುವುದು 5 ರಿಂದ 25 ಜನರನ್ನು ಹೊಂದಿರುತ್ತದೆ. ಉಳಿದ 120/130 ಜನರನ್ನು ಹೊಂದಿ ರುವ ಬಾಹ್ಯ ವಲಯದಲ್ಲಿ ಪಲ್ಲಟಗಳಾಗುತ್ತಿರುತ್ತವೆ. ಅಂದರೆ ಬಾಲ್ಯದಲ್ಲಿ ಹದಿನೈದು ಸ್ನೇಹಿತ ರಿದ್ದರೆ ಅವರಲ್ಲಿ ಒಂದಿಬ್ಬರು ಆಂತರಿಕ ವಲಯದಲ್ಲಿ ಇರುತ್ತಾರೆ.

ಉಳಿದವರು ಬಾಹ್ಯ ವಲಯದಲ್ಲಿದ್ದವರು ಸಮಯ ಕಳೆದಂತೆ ದೂರಾಗುತ್ತಾರೆ. ಆ ಜಾಗಕ್ಕೆ ಹೈಸ್ಕೂಲ್ ಅಥವಾ ಕಾಲೇಜು ಮಿತ್ರರು ಬರುತ್ತಾರೆ, ಹಾಗೆ ಹೋಗುತ್ತಾರೆ. ಅವರಲ್ಲಿ ಒಬ್ಬರು ಅಥವಾ ಇಬ್ಬರು ಆಂತರಿಕ ವಲಯದಲ್ಲಿ ಸೇರಿಕೊಳ್ಳುತ್ತಾರೆ. ಒಟ್ಟಾರೆ ಆಂತರಿಕ ವಲಯದಲ್ಲಿ ನೆಲ ನಿಂತವರೊಂದಿಗೆ ನಾವು ಉತ್ತಮ ಸಂಬಂಧವನ್ನು ಹೊಂದುವುದು ತೀರಾ ಅವಶ್ಯಕ.

ಬಾಲ್ಯದಲ್ಲಿ ಸ್ನೇಹ ಬೆಳೆಸಿಕೊಳ್ಳುವುದು ಸುಲಭ, ಅಲ್ಲಿ ಲೆಕ್ಕಾಚಾರವಿರುವುದಿಲ್ಲ. ಹೀಗಾಗಿ ಎಳವೆ ಯಲ್ಲಿ ಸಿಗುವ ಸ್ನೇಹಿತರು ಕೊನೆಯವರೆಗೂ ಬರುವ ಸಾಧ್ಯತೆ ಹೆಚ್ಚು. ಇದೇ ಕಾರಣಕ್ಕೆ ಕುಟುಂಬದ ಸದಸ್ಯರನ್ನು ಬಿಟ್ಟು ಐದು ಜನರ ಹೆಸರೇಳುವಂತೆ ಅನನ್ಯಳನ್ನು ಪ್ರೇರೇಪಿಸುವುದು.

ಇಂಥ ಸ್ನೇಹಗಳು ಜಾಗ ಬದಲಾಗುವುದರಿಂದ ಅಥವಾ ಭೌತಿಕವಾಗಿ ದೂರಾಗುವುದರಿಂದ ಎಂದಿಗೂ ಬದಲಾಗುವುದಿಲ್ಲ. ಅಂಥ ಗಟ್ಟಿ ಸ್ನೇಹ, ಸಂಬಂಧ ಪಡೆದುಕೊಳ್ಳುವುದು ಇಂದಿನ ದಿನದ ಅಗತ್ಯತೆಗಳಲ್ಲಿ ಪ್ರಮುಖವಾದದ್ದು. ಇದನ್ನು ಕೂಡ ನಾವು ಇಂದಿಗೆ ಹೇಳಿಕೊಡಬೇಕಾಗಿ ಬಂದಿರು ವುದು ಸಮಾಜದಲ್ಲಿ ಆಗಿರುವ ಬದಲಾವಣೆಯನ್ನು ತೋರಿಸುತ್ತದೆ.

ಯಾವುದು ಸಹಜವಾಗಿ, ಸರಳವಾಗಿ ಆಗಬೇಕಿತ್ತೋ ಅದಕ್ಕೂ ಇಂದು ನಾವು ಥಿಯರಿಗಳನ್ನು ಅನುಸರಿಸಬೇಕಾದ ಪರಿಸ್ಥಿತಿ ತಂದುಕೊಂಡಿದ್ದೇವೆ. ಇದಕ್ಕಿಂತ ವಿಪರ್ಯಾಸ ಬೇರೇನಿದ್ದೀತು ? ಬದುಕಿನಲ್ಲಿ ಅತ್ಯಂತ ಜಟಿಲವಾದ ಅಂಶವೇನಾದರೂ ಇದ್ದರೆ ಅದು ಸಂಬಂಧಗಳನ್ನು ಕಾಯ್ದು ಕೊಳ್ಳುವುದೇ ಆಗಿದೆ. ಏಕೆಂದರೆ ನಾವು ಒಬ್ಬರಂತೆ ಒಬ್ಬರಿಲ್ಲ. ಮನುಷ್ಯನ ಗುಣ ಸ್ವಭಾವಗಳು ಬದಲಾಗುತ್ತದೆ. ಆತನ ಅಥವಾ ಆಕೆಯ ಬೇಕು ಬೇಡಗಳು, ಆದ್ಯತೆಗಳು ಬದಲಾಗುತ್ತವೆ. ಅದಕ್ಕೆ ತಕ್ಕಂತೆ ಅವರು ಬದಲಾಗುತ್ತ ಹೋಗುತ್ತಾರೆ.

ಬದಲಾಣೆಯ ಭರದಲ್ಲಿ ಆಂತರಿಕ ವಲಯದಲ್ಲಿನ ವ್ಯಕ್ತಿಗಳನ್ನು ಕಳೆದುಕೊಳ್ಳುವುದು ಮೂರ್ಖ ತನ. ಆದರೆ ಲೆಕ್ಕಾಚಾರದ ಇಂದಿನ ದಿನಗಳಲ್ಲಿ ಕೆಲವೊಮ್ಮೆ ಆಂತರಿಕ ವಲಯದಲ್ಲೂ ಬದಲಾವಣೆ ಆಗಿ ಬಿಡುತ್ತದೆ. ಬದುಕು ಎಂದಿಗೂ ನಿಂತ ನೀರಲ್ಲ. ಬದಲಾವಣೆಯೊಂದೇ ಶಾಶ್ವತ ಎನ್ನುವುದು ಪರಮಸತ್ಯ.

ಆದರೆ ಎಲ್ಲಾ ಬದಲಾವಣೆಗಳೂ ಅವಶ್ಯಕವೂ ಅಲ್ಲ, ಅವು ಈ ದಿನದ ಬೇಡಿಕೆಯೂ ಆಗಿರುವು ದಿಲ್ಲ. ಮನುಷ್ಯನ ಮನಸ್ಸಿನ ಚಂಚಲತೆಗೆ ಸಂಬಂಧವನ್ನು ಕಾಪಿಡುವ ಶಕ್ತಿ ಇನ್ನಷ್ಟು ವೃದ್ಧಿಸ ಬೇಕಿದೆ.