ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಶಸ್ತ್ರಾಸ್ತ್ರ ಡೀಲರ್ ಪಾತ್ರದಲ್ಲಿ ಟ್ರಂಪ್‌ ಮಾಡುತ್ತಿರುವುದೇನು ?!

ಅಮೆರಿಕ ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಿರಬಹುದು, ಆದರೆ ಈಗ ಪ್ರಬಲ ಇಕಾನಮಿ ಯಾಗಿ ಉಳಿದಿಲ್ಲ. ಜಿಡಿಪಿ ಬೆಳವಣಿಗೆಯೂ ಸ್ಥಿರವಾಗಿಲ್ಲ. ಇದನ್ನು ಸ್ವತಃ ಅಮೆರಿಕ ಮೂಲದ ರೇಟಿಂಗ್ ಏಜೆನ್ಸಿಗಳೇ ತಮ್ಮ ವರದಿಗಳ ಮೂಲಕ ಎಚ್ಚರಿಸುತ್ತಿವೆ. ಮೂಡೀಸ್ ವರದಿಯನ್ನು ಟ್ರಂಪ್ ಅಲ್ಲ ಗಳೆಯುತ್ತಿರಬಹುದು. ಆದರೆ ವಾಸ್ತವವನ್ನು ಹೆಚ್ಚು ದಿನ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ.

ಶಸ್ತ್ರಾಸ್ತ್ರ ಡೀಲರ್ ಪಾತ್ರದಲ್ಲಿ ಟ್ರಂಪ್‌ ಮಾಡುತ್ತಿರುವುದೇನು ?!

ಮನಿ ಮೈಂಡೆಡ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಅತ್ಯಂತ ವಿಲಕ್ಷಣವಾಗಿ ವರ್ತಿಸಿದರು! ಟ್ರಂಪ್ ಒಬ್ಬ ರಾಜಕಾರಣಿಗಿಂತಲೂ, ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಡೀಲರ್‌ನಂತೆ ಕಂಡುಬಂದರು. ಅಮೆರಿಕದ ಮೇಲೆ ಟೈಮ್ ಬಾಂಬ್‌ನಂತಿರುವ 36 ಲಕ್ಷ ಕೋಟಿ ಡಾಲರ್ ಸಾಲ ವನ್ನು ತಗ್ಗಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಏನು ಮಾಡಲೂ ಸಿದ್ಧರಾಗಿದ್ದಾರೆ. ಅಲ್ ಖೈದಾದ ಮಾಜಿ ಉಗ್ರನಿಗೂ ಜೈ ಎನ್ನುತ್ತಿದ್ದಾರೆ. ಮುಖ್ಯವಾಗಿ ಶಸ್ತ್ರಾಸ್ತ್ರ ಮಾರಾಟದ ಅಂತಾ ರಾಷ್ಟ್ರೀಯ ದಳಿಯಾಗಿ ಹೊರಹೊಮ್ಮಿದ್ದಾರೆ. ಒಂದು ಕಡೆ ಸೌದಿ ಅರೇಬಿಯಾದ ಜತೆಗೆ 219 ಶತಕೋಟಿ ಡಾಲರ್ ಶಸ್ತ್ರಾಸ್ತ್ರ ಮಾರಾಟ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮತ್ತೊಂದು ಕಡೆ ಸೌದಿಯ ಮನವೊಲಿಸಲು ಐಸಿಸ್ ಟೆರರಿಸ್ಟ್‌ಗಳ ಹುಟ್ಟೂರಾದ ಸಿರಿಯಾ ವಿರುದ್ಧದ ನಿರ್ಬಂಧ ಗಳನ್ನು ತೆರವುಗೊಳಿಸಿzರೆ. ಇದರೊಂದಿಗೆ ಸೌದಿ ಅರೇಬಿಯಾಕ್ಕೆ ರಾಜತಾಂತ್ರಿಕವಾಗಿ ದೊಡ್ಡ ಗೆಲುವಾಗಿದೆ. ಅರಬ್ಬರ ನಾಡಿನಲ್ಲಿ ಸೌದಿ ಈಗ ಮತ್ತೊಮ್ಮೆ ಹೀರೊ ಆಗಿ ಮಿಂಚುತ್ತಿದೆ.

ಅಮೆರಿಕ ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಿರಬಹುದು, ಆದರೆ ಈಗ ಪ್ರಬಲ ಇಕಾನಮಿಯಾಗಿ ಉಳಿದಿಲ್ಲ. ಜಿಡಿಪಿ ಬೆಳವಣಿಗೆಯೂ ಸ್ಥಿರವಾಗಿಲ್ಲ. ಇದನ್ನು ಸ್ವತಃ ಅಮೆರಿಕ ಮೂಲದ ರೇಟಿಂಗ್ ಏಜೆನ್ಸಿಗಳೇ ತಮ್ಮ ವರದಿಗಳ ಮೂಲಕ ಎಚ್ಚರಿಸುತ್ತಿವೆ. ಮೂಡೀಸ್ ವರದಿಯನ್ನು ಟ್ರಂಪ್ ಅಲ್ಲಗಳೆಯುತ್ತಿರಬಹುದು. ಆದರೆ ವಾಸ್ತವವನ್ನು ಹೆಚ್ಚು ದಿನ ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುವು ದಿಲ್ಲ.

ಇದನ್ನೂ ಓದಿ: Keshav Prasad B Column: ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!

ನೂರು ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕ ‘ಎಎಎ’ ಕ್ರೆಡಿಟ್ ರೇಟಿಂಗ್ ಕಳೆದುಕೊಂಡಿದೆ. ಆದರೆ ಇದುವೇ ಅಮೆರಿಕದ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕಾರಣವಾದರೆ ಎಲ್ಲರಿಗೂ ಸಮಸ್ಯೆ ಯಾಗಲಿದೆ. ಇದಕ್ಕಾಗಿ ಡೊನಾಲ್ಡ್ ಟ್ರಂಪ್ ಅವರನ್ನು ದೂರುವುದು ಸುಲಭ. ಆದರೆ ಜಗತ್ತಿನ‌ ಅತ್ಯಂತ ಹೆಚ್ಚು ಸಾಲ ಮಾಡಿರುವ ಅಮೆರಿಕದ ಈಗಿನ ಸಾಲದ ಹೊರೆಗೆ ಟ್ರಂಪ್ ಅವರೊಬ್ಬರೇ ಕಾರಣರಲ್ಲ.

ಡೌನ್ ಗ್ರೇಡ್ 2011ರಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗಲೇ ‘ಎಸ್ ಆಂಡ್ ಪಿ’ಯಿಂದ ನಡೆದಿತ್ತು. 2023ರಲ್ಲಿ ಬೈಡೆನ್ ಅವಧಿಯಲ್ಲೂ ‘ಫಿಚ್’ ಕೂಡ ತಗ್ಗಿಸಿತ್ತು. ಇದೀಗ ಮೂಡೀಸ್ ಸರದಿ. ಏನೆಲ್ಲ ಕಸರತ್ತುಗಳನ್ನು ಅಧ್ಯಕ್ಷರು ಮಾಡಿದರೂ, ಅಮೆರಿಕದ ಸಾಲ ಹುತ್ತದಂತೆ ಬೆಳೆಯುತ್ತಲೇ ಇದೆ. ಹೀಗಾಗಿ ಈ ರೇಟಿಂಗ್ ಕಡಿತವು ಅಮೆರಿಕಕ್ಕೆ ಸಾಲ ಕೊಡುತ್ತಿರುವವರಿಗೆ, ದೀರ್ಘಾವಧಿಗೆ ಅದು ಸುರಕ್ಷಿತವಲ್ಲ ಎಂಬ ಅಪಾಯದ ಕರೆಗಂಟೆಯನ್ನು ಬಾರಿಸಿದಂತಾಗಿದೆ.

ಆದರೆ ಸಾಲದ ಹೊರೆಯನ್ನು ಕರಗಿಸಲು ಡೊನಾಲ್ಡ್ ಟ್ರಂಪ್ ಮಾಡುತ್ತಿರುವುದಾದರೂ ಏನು? ಅಲ್ ಖೈದಾ,‌ ಐಸಿಸ್ ಭಯೋತ್ಪಾದಕರ ಬಗ್ಗೆ ಗೊತ್ತಿದೆಯಲ್ಲವೇ. 2001ರಲ್ಲಿ ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳನ್ನು ಸ್ಪೋಟಿಸಿ, ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಉಗ್ರರಿವರು. ಇದೇ ಅಲ್ ಖೈದಾ ಪಡೆಯಲ್ಲಿದ್ದ ಟೆರರಿಸ್ಟ್ ಈಗ ಸಿರಿಯಾದ ಹಂಗಾಮಿ ಅಧ್ಯಕ್ಷ ಅಹಮದ್ ಅಲ್‌ ಷರಾ. ಸೌದಿ ಅರೇಬಿಯಾದ ಮರ್ಜಿಗೆ ಒಳಗಾಗಿ, ಸಿರಿಯಾದ ಹಂಗಾಮಿ ಅಧ್ಯಕ್ಷನನ್ನು ಭೇಟಿಯಾಗಿ ಟ್ರಂಪ್ ಹಾಡಿ ಹೊಗಳುತ್ತಿದ್ದಾರೆ.

ಒಂದು ಕಾಲದಲ್ಲಿ ಅಮೆರಿಕ ಈತನ ತಲೆಗೆ 1 ಕೋಟಿ ಡಾಲರ್ ಬಹುಮಾನ ಘೋಷಿಸಿತ್ತು! ಹಾಗಾ ದರೆ ಅಮೆರಿಕದ ಸಾಲ ಈ ಪರಿಯಲ್ಲಿ ಬೆಳೆದಿರುವುದೇಕೆ? ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಿರು ವುದೇ ಇದಕ್ಕೆ ಕಾರಣ. 2024ರಲ್ಲಿ ಅಮೆರಿಕವು ತನ್ನ ಆದಾಯಕ್ಕಿಂತ 1.8 ಲಕ್ಷ ಕೋಟಿ ಡಾಲರ್ ಹೆಚ್ಚು ಮೊತ್ತವನ್ನು ಖರ್ಚು ಮಾಡಿತ್ತು. ಈ ವರ್ಷ ಆದಾಯಕ್ಕಿಂತ ೨ ಲಕ್ಷ ಕೋಟಿ ಡಾಲರ್ ಕೊರತೆ ಉಂಟಾಗಿದೆ.

ಹೀಗಾಗಿ ಕಾಲಾಂತರದಲ್ಲಿ ಅಮೆರಿಕದ ಒಟ್ಟು ಸಾಲ ಈಗ 36 ಲಕ್ಷ ಕೋಟಿ ಡಾಲರ್ ಆಗಿದೆ. ಅಂದರೆ ಜಿಡಿಪಿಯ ಶೇ.125ಕ್ಕೂ ಹೆಚ್ಚು. ಅಮೆರಿಕವು ಕೇವಲ ಬಡ್ಡಿಯ ಸಲುವಾಗಿಯೇ ಸುಮಾರು 1 ಲಕ್ಷ ಕೋಟಿ ಡಾಲರ್ ಕೊಡಬೇಕಾಗಿದೆ. ಇದು ಅದರ ರಕ್ಷಣಾ ವೆಚ್ಚಕ್ಕಿಂತ ಅಥವಾ ಆರೋಗ್ಯ ಬಜೆಟ್‌ ಗಿಂತಲೂ ಜಾಸ್ತಿ.

ಆದ್ದರಿಂದ ಡೊನಾಲ್ಡ್ ಟ್ರಂಪ್ ಈಗ ದೇಶದ ಆದಾಯವನ್ನು ಹೆಚ್ಚಿಸಲೇಬೇಕು. ಅದಕ್ಕಾಗಿ ಇತ್ತೀಚೆಗೆ ಸುಂಕ ಸಮರವನ್ನೂ ಸಾರಿದರು. ಆದರೆ ಅದೂ ಕೈಕೊಟ್ಟಂತಿದೆ. ಚೀನಾ ವಿರುದ್ಧ ಯದ್ವಾತದ್ವಾ ಏರಿಸಿದ್ದ ಸುಂಕವನ್ನು ಹಿಂತೆಗೆದುಕೊಂಡಿದ್ದಾರೆ. ಅಲ್ಲಿಗೆ ಪ್ರತಿಸುಂಕದ ಮೂಲಕ ಅಮೆರಿಕಕ್ಕೆ ಪ್ರತಿದಿನ 2 ಶತಕೋಟಿ ಡಾಲರ್ ಮೊತ್ತದ ಹಣದ ಹೊಳೆಯನ್ನೇ ಹರಿಸುತ್ತೇನೆ ಎಂಬ ಟ್ರಂಪ್ ಹೇಳಿಕೆ ‘ಶುದ್ಧ ಬುರುಡೆ’ ಎಂಬುದು ಸಾಬೀತಾಗಿದೆ.

ಹಾಗಾದರೆ ಟ್ರಂಪ್ ಸರಕಾರ ಆದಾಯವನ್ನು ತಕ್ಷಣ ಹೆಚ್ಚಿಸಲು ಏನು ಮಾಡಬೇಕು? ತೆರಿಗೆಯನ್ನು ಹೆಚ್ಚಿಸಬೇಕು ಅಥವಾ ಖರ್ಚುಗಳನ್ನು ಕಡಿಮೆ ಮಾಡಬೇಕು. ಪ್ರತಿಸುಂಕದಿಂದ ಬರುವ ಆದಾಯ ವನ್ನು ಬಳಸಿಕೊಂಡು ಅಮೆರಿಕನ್ನರ ಮೇಲಿನ ತೆರಿಗೆಯನ್ನು ಇಳಿಸುತ್ತೇನೆ ಎಂದು ಟ್ರಂಪ್ ಹೇಳುತ್ತಿದ್ದಾರೆ. ಆದರೆ ಇದು ಕಾರ್ಯಗತವಾಗದಿದ್ದರೆ ಭವಿಷ್ಯದಲ್ಲಿ ಇದೇ ಟ್ರಂಪ್ ತೆರಿಗೆ ಏರಿಸಲೂ ಬಹುದು.

ಎರಡನೆಯದಾಗಿ ಸರಕಾರದ ದಕ್ಷತೆಯನ್ನು ಹೆಚ್ಚಿಸಲು ಎಲಾನ್ ಮಸ್ಕ್‌ ನೇತೃತ್ವದ ವಿಭಾಗ ಸಿದ್ಧವಾಗಿದೆ. ಅದು ಸರಕಾರಿ ಇಲಾಖೆಗಳ ಖರ್ಚುಗಳನ್ನು ಕಡಿತಗೊಳಿಸುತ್ತಿದೆ. ಆದರೆ ಇದೆಲ್ಲ ತಾತ್ಕಾಲಿಕ ಕ್ರಮಗಳಷ್ಟೇ. ಒಂದು ವೇಳೆ ಟ್ರಂಪ್ ತೆರಿಗೆ ಕಡಿತಗೊಳಿಸಿದರೆ ಮತ್ತೆ ಮುಂದಿನ ಹತ್ತು ವರ್ಷಕ್ಕೆ 5 ಲಕ್ಷ ಕೋಟಿ ಡಾಲರ್ ಹೆಚ್ಚುವರಿ ಕೊರತೆಯಾಗಲಿದೆ.

ಹೀಗಾಗಿ ಅಮೆರಿಕದ ಸಾಲ ಹೆಚ್ಚುತ್ತಾ ಹೋದರೆ ಒಂದು ಹಂತದ ಬಳಿಕ ಕೇವಲ ರೇಟಿಂಗ್ ಏಜೆನ್ಸಿ ಗಳು ಮಾತ್ರವಲ್ಲದೆ, ಹೂಡಿಕೆದಾರರೂ ಚಿಂತೆಗೀಡಾಗಲಿದ್ದಾರೆ. ಅಮೆರಿಕದ ಬಾಂಡ್‌ಗಳಿಗೆ ಬೇಡಿಕೆ ಇಳಿಮುಖವಾಗಲಿದೆ. ಆಗ ಬಾಂಡ್ ಗಳ ಬೇಡಿಕೆಯನ್ನು ಹೆಚ್ಚಿಸಲು ಸರಕಾರ ಪ್ರತಿಯಾಗಿ ಹೂಡಿಕೆ ದಾರರಿಗೆ ಹೆಚ್ಚಿನ ಬಡ್ಡಿಯನ್ನು ನೀಡಬೇಕಾಗುತ್ತದೆ.

ಈ ರೀತಿ ಬಾಂಡ್‌ಗಳಲ್ಲಿ ಹೂಡಿಕೆಗೆ ಬಡ್ಡಿ ಏರಿಕೆಯಾದರೆ ಸಾರ್ವಜನಿಕ-ಖಾಸಗಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳಲ್ಲಿಯೂ ಸಾಲಗಳಿಗೆ ಹೆಚ್ಚಿನ ಬಡ್ಡಿ ಕೊಡಬೇಕಾಗುತ್ತದೆ. ಆಗ ಆರ್ಥಿಕ ಚಟು ವಟಿಕೆಗಳು ಕಡಿಮೆಯಾಗುತ್ತವೆ. ಆರ್ಥಿಕ ಹಿಂಜರಿತವೂ ಸಂಭವಿಸಬಹುದು. ಟ್ರಂಪ್ ಅವರ ಪ್ರತಿ ಸುಂಕದ ಸಮರ ಈಗಾಗಲೇ ಜಾಗತಿಕ ಬೆಳವಣಿಗೆಯ ಲಯ ತಪ್ಪಿಸಿದೆ. ಹೇಗಾದರೂ ಬಡ್ಡಿ ದರಗ ಳನ್ನು ಇಳಿಸಬೇಕೆಂದು ಟ್ರಂಪ್ ಯತ್ನಿಸುತ್ತಿದ್ದಾರೆ.

ಏಕೆಂದರೆ ಬಡ್ಡಿ ದರ ಇಳಿದರೆ ಸಾಲದ ಮರುಪಾವತಿಯ ಬಾಬ್ತು ಖರ್ಚು ಕಡಿಮೆಯಾಗಲಿದೆ. ಆದರೆ ಬಡ್ಡಿ ದರ ತಗ್ಗಿದರೆ ಹಣದುಬ್ಬರ ಹೆಚ್ಚುವ ಸಾಧ್ಯತೆ ಇದೆ. ಟ್ರಂಪ್ ಅಮೆರಿಕದ ಸಾಲದ ಸಮಸ್ಯೆ ಯನ್ನು ಸೃಷ್ಟಿಸಿಲ್ಲ. ಆದರೆ ಅಧ್ಯಕ್ಷರಾಗಿರುವುದರಿಂದ ಆರ್ಥಿಕತೆಯ ಜವಾಬ್ದಾರಿ ಅವರ ಮೇಲಿದೆ. ಆದರೆ ಟ್ರಂಪ್ ಈಗ ನಡೆಯುತ್ತಿರುವ ದಾರಿ ಯಾವುದು? ಸೌದಿ ಅರೇಬಿಯಾದ ಮರ್ಜಿಯಿಂದ ಟ್ರಂಪ್ ಸಿರಿಯಾ ವಿರುದ್ಧದ ನಿರ್ಬಂಧಗಳನ್ನು ತೆರವುಗೊಳಿಸಿದ್ದಾರೆ.

ಇದರಿಂದ ಒಂದೆರಡು ವರ್ಷದ ಐಸಿಸ್ ಭಯೋತ್ಪಾದಕರ ಉಪಟಳ ಹೆಚ್ಚುವ ಆತಂಕ ಉಂಟಾಗಿದೆ. ಎರಡನೇ ಬಾರಿಗೆ ಅಧ್ಯಕ್ಷರಾದ ಬಳಿಕ ಟ್ರಂಪ್ ಅವರ ಮೊದಲ ಪ್ರಮುಖ ವಿದೇಶ ಪ್ರವಾಸ ಸೌದಿ ಅರೇಬಿಯಾಕ್ಕೆ ಆಗಿತ್ತು. ಮೊದಲ ಅವಧಿಯಲ್ಲೂ ಸೌದಿಗೇ ಮೊದಲು ಹೋಗಿದ್ದರು. ಕಾರಣ ರಹಸ್ಯ ವೇನಲ್ಲ. “ನಾನು ಸೌದಿ ಅರೇಬಿಯಾ ಜತೆಗೆ ಮಹತ್ವದ ಡೀಲ್ ಮಾಡಲಿದ್ದೇನೆ. ಸೌದಿಯವರು ಅಮೆರಿಕನ್ ಕಂಪನಿಗಳಿಗೆ ಮುಂದಿನ 4 ವರ್ಷದಲ್ಲಿ 1 ಟ್ರಿಲಿಯನ್ ಡಾಲರ್ ವಹಿವಾಟು ನೀಡಲಿ ದ್ದಾರೆ.

ಹೀಗಾಗಿ ಅದಕ್ಕೇ ನನ್ನ ಆದ್ಯತೆ" ಎಂದು ಟ್ರಂಪ್ ಹೇಳಿದ್ದರು. ಹೇಳಿ ಕೇಳಿ ಅಮೆರಿಕ ಜಗತ್ತಿನ ಅತಿ ದೊಡ್ಡ ಶಸ್ತ್ರಾಸ್ತ್ರಗಳ ರಫ್ತುದಾರ. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿ ಟ್ಯೂಟ್ ವರದಿಯ ಪ್ರಕಾರ, 2020-2024ರಲ್ಲಿ ಜಾಗತಿಕ ಶಸ್ತ್ರಾಸ್ತ್ರ ರಫ್ತಿನಲ್ಲಿ ಶೇ.43ರ ಪಾಲನ್ನು ಅಮೆರಿಕವೊಂದೇ ತನ್ನದಾಗಿಸಿಕೊಂಡಿತ್ತು. ಇದು ಎರಡನೇ ದೊಡ್ಡ ರಫ್ತುದಾರ ಫ್ರಾನ್ಸ್‌ಗಿಂತ ನಾಲ್ಕು ಪಟ್ಟು ಹೆಚ್ಚು.

ನೂರಾರು ದೇಶಗಳಿಗೆ ಅಮೆರಿಕ ಪ್ರಮುಖ ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರವಾಗಿದೆ. ಹೀಗಾಗಿಯೇ ಜಗತ್ತಿನ ಯಾವುದೇ ಭಾಗದಲ್ಲಿ ಸಂಘರ್ಷ, ಯುದ್ಧದ ವಾತಾವರಣ ಅಥವಾ ಸಮರವೇ ಶುರು ವಾದರೆ, ಅಲ್ಲಿಗೆ ಅಮೆರಿಕ ದೌಡಾಯಿಸುತ್ತದೆ. 2024ರಲ್ಲಿ ನಾನಾ ದೇಶಗಳಿಗೆ ಮಿಲಿಟರಿ ಯುದ್ಧೋ ಪಕರಣಗಳ ರಫ್ತು ಮೂಲಕ 318 ಶತಕೋಟಿ ಡಾಲರ್ ವ್ಯಾಪಾರವನ್ನು ಅದು ನಡೆಸಿತ್ತು.

ಇತ್ತೀಚೆಗೆ ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಅವರು ಶಾಂತಿದೂತನ ಪೋಷಾಕು‌ ಧರಿಸಿ ರಂಗಪ್ರವೇಶಕ್ಕೆ ಯತ್ನಿಸಿದ್ದರು. “ನನ್ನಿಂದಾಗಿಯೇ ಕದನವಿರಾಮ ಸಂಭವಿಸಿದೆ" ಎಂಬ ಹೇಳಿಕೆಯನ್ನೂ ಕೊಟ್ಟರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಟ್ರಂಪ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಿಲ್ಲ. ಬಳಿಕ ಟ್ರಂಪ್ ಕೂಡ ಕದನವಿರಾಮದಲ್ಲಿ ತಮ್ಮ ಪಾತ್ರ ಇಲ್ಲ ಎಂದು ‘ಯೂ-ಟರ್ನ್’ ತೆಗೆದುಕೊಂಡರು ಎಂಬುದು ಬೇರೆ ವಿಚಾರ.

ಯುದ್ಧೋಪಕರಣಗಳ ವ್ಯಾಪಾರವು ಅಮೆರಿಕದ ವಿದೇಶಾಂಗ ನೀತಿಯ ಭಾಗವಾಗಿದೆ. ಬೈಡೆನ್ ಅವಧಿಯಲ್ಲೂ ಇಸ್ರೇಲ್ ಮತ್ತು ಉಕ್ರೇನ್‌ಗೂ ಭಾರಿ ಶಸ್ತ್ರಾಸ್ತ್ರಗಳನ್ನು ಅಮೆರಿಕ ಕೊಟ್ಟಿದೆ. ಶಸ್ತ್ರಾಸ್ತ್ರಗಳ ವ್ಯಾಪಾರ ತಪ್ಪಲ್ಲ. ಆದರೆ ಅದಕ್ಕಾಗಿಯೇ ಕದನಗಳನ್ನು ಜೀವಂತವಾಗಿಡಲು ಯತ್ನಿಸಿ ದರೆ ತಪ್ಪಾಗುತ್ತದೆ. ಮಾತ್ರವಲ್ಲದೆ ಇದರಿಂದ ಶಾಂತಿ ಸ್ಥಾಪನೆ ಅಸಾಧ್ಯ.

ಈ ನಡುವೆ ಚೀನಾ ಮತ್ತು ರಷ್ಯಾದ ಬೆದರಿಕೆಯನ್ನು ಎದುರಿಸಲು, ಅಮೆರಿಕವು 175 ಶತಕೋಟಿ ಡಾಲರ್ ಮೌಲ್ಯದ ‘ಗೋಲ್ಡನ್ ಡೋಮ್ ಮಿಸೈಲ್ ಡಿಫೆನ್ಸ್ ಶೀಲ್ಡ್’ ಅನ್ನು ವ್ಯವಸ್ಥೆಗೊಳಿಸಲು ಮುಂದಾಗಿದೆ. ಚೀನಾ ಮತ್ತು‌ ರಷ್ಯಾ ಒಂದು ವೇಳೆ ಅಮೆರಿಕದ ಮೇಲೆ ಕ್ಷಿಪಣಿ ದಾಳಿ ನಡೆಸಿದರೆ, ಆಕಾಶದಲ್ಲಿಯೇ ತಡೆಯಲು, ಹೊಡೆದುರುಳಿಸಲು ಈ ಗೋಲ್ಡನ್ ಡೋಮ್ ಸಹಕರಿಸಲಿದೆ.

ಬಾಹ್ಯಾಕಾಶದಿಂದ ಕ್ಷಿಪಣಿ ದಾಳಿ ನಡೆಸಿದರೂ, ಅಣ್ವಸ್ತ್ರವಾಗಲಿ, ಬಗೆಬಗೆಯ ಕ್ಷಿಪಣಿಗಳು, ಡ್ರೋನ್, ಯಾವುದೇ ಅಪ್ಪಳಿಸಿದರೂ ಇದು ತಡೆಯಲಿದೆ. ಇನ್ನು ಮೂರು ವರ್ಷದಲ್ಲಿ ಇದು ರೆಡಿಯಾಗಲಿದೆ ಯಂತೆ. ಈ ಗೋಲ್ಡನ್ ಡೋಮ್ ಟ್ರಂಪ್ ಅವರ ರಾಷ್ಟ್ರೀಯವಾದ ಅಧರಿತ ರಾಜಕಾರಣಕ್ಕೂ ಬಹುಶಃ ಪುಷ್ಟಿದಾಯಕ. ಕೆನಡಾಕ್ಕೂ ಬೇಕಾದರೂ ಕಡಿಮೆ ಖರ್ಚಿನಲ್ಲಿ ಮಾಡಿ ಕೊಡಲು ಟ್ರಂಪ್ ಸಿದ್ಧರಾಗಿದ್ದಾರೆ! ಎಂಥಾ ಬಿಸಿನೆಸ್ ಮ್ಯಾನ್ ಅಲ್ಲವೇ ಅಮೆರಿಕದ ಈಗಿನ ಅಧ್ಯಕ್ಷರು!