Keshav Prasad B Column: ಕಾಶ್ಮೀರಿಗರೇ, ʼಟೂರಿಸಂʼ ಮತ್ತು ʼಟೆರರಿಸಂʼ ಒಟ್ಟಿಗಿರಲು ಸಾಧ್ಯವೇ ?!
ಕಾಶ್ಮೀರದಲ್ಲೀಗ ಪ್ರವಾಸಿಗರು ಭಯಭೀತರಾಗಿ ದಿಕ್ಕೆಟ್ಟು ನಿರ್ಗಮಿಸುತ್ತಿರುವುದನ್ನು ಕಂಡು ಅಲ್ಲಿನ ವ್ಯಾಪಾರಿಗಳು, ಟ್ರಾವೆಲ್ ಏಜೆಂಟರು, ರೆಸ್ಟೊರೆಂಟ್ ಮಾಲೀಕರು ನಿರಾಸೆಗೊಂಡಿದ್ದಾರೆ. ಆದರೆ ಕಾಶ್ಮೀರಿ ಗರು ಒಂದನ್ನು ಮನವರಿಕೆ ಮಾಡಿಕೊಳ್ಳಲೇಬೇಕು. ಟೂರಿಸಂ ಮತ್ತು ಟೆರರಿಸಂ ಒಟ್ಟಿಗೆ ಇರಲು ಸಾಧ್ಯವೇ? ಸಾಮಾನ್ಯವಾಗಿ ಪ್ರವಾಸೋದ್ಯಮ ಇಲಾಖೆ ಎಂದರೆ ರಾಜಕಾರಣಿಗಳಿಗೆ ಅಷ್ಟಕ್ಕಷ್ಟೇ


ಮನಿ ಮೈಂಡೆಡ್
2024ರಲ್ಲಿ 66000ಕ್ಕೂ ಹೆಚ್ಚು ವಿದೇಶಿಗರು ಭೇಟಿ ಕೊಟ್ಟಿದ್ದರು. ರಾಜ್ಯದ ಜಿಡಿಪಿಯಲ್ಲಿ ಶೇ.9 ರಷ್ಟು ಪ್ರವಾಸೋದ್ಯಮದಿಂದ ಬರುತ್ತಿದೆ. ಸದ್ಯಕ್ಕೆ ರಾಜ್ಯಕ್ಕೆ ವಾರ್ಷಿಕ 12000 ಕೋಟಿ ರುಪಾಯಿ ಆದಾಯವು ಇದರಿಂದ ಸಿಗುತ್ತಿದ್ದು, 2030ರ ವೇಳೆಗೆ 30000 ಕೋಟಿ ರು.ಗೆ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಈ ಎಲ್ಲ ಆಶಯಗಳಿಗೆ ಟೆರರಿಸಂ ದೊಡ್ಡ ಧಕ್ಕೆಯಾಗಿದೆ. ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ, ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂಚ ದೇಹಿಮೇ’. ವಿದ್ಯಾಧಿ ದೇವತೆ ಶಾರದೆಯ ತವರು ಎಂಬ ಶ್ರದ್ಧೆ ಇರಬಹುದು, ಅಮರನಾಥ, ವೈಷ್ಣೋ ದೇವಿ ಕ್ಷೇತ್ರದ ಮೇಲಿನ ಭಕ್ತಿ ಇರಬಹುದು, ಭಾರತದ ಸ್ವಿಜರ್ಲೆಂಡ್ ಎಂಬ ಹೆಗ್ಗಳಿಕೆ ಇರಬಹುದು, ಜಮ್ಮು-ಕಾಶ್ಮೀರ ಎಂದರೆ ಅದೊಂದು ಭಾವನಾತ್ಮಕ ಬೆಸುಗೆ. ಅಲ್ಲಿ ಸಂಭವಿಸಿರುವ ಘೋರ ಭಯೋತ್ಪಾ ದನೆಯ ಇತಿಹಾಸದ ಕರಾಳ ಘಟನೆಗಳು ಎಂದಿಗೂ ದುಃ ಸ್ವಪ್ನವೇ ಆಗಿದ್ದರೂ, ಅಲ್ಲಿ ಪರಿಸ್ಥಿತಿ ಶಾಂತಿಯುತವಾಗಿದ್ದಾಗ ಪ್ರವಾಸಿಗರು ಎಲ್ಲವನ್ನೂ ಮರೆತು ಭೇಟಿ ನೀಡುತ್ತಾರೆ.
ಹೀಗಾಗಿಯೇ ಅಲ್ಲಿ ಟೂರಿಸಂ ಬೆಳವಣಿಗೆಗೆ ಉಳಿದೆಲ್ಲ ರಾಜ್ಯಗಳಿಗಿಂತಲೂ ಒಂದು ಬೊಗಸೆ ಹೆಚ್ಚೇ ಎನ್ನಿಸುವಷ್ಟು ಅವಕಾಶಗಳು ಇವೆ. ದುರದೃಷ್ಟವಶಾತ್ ಅವುಗಳನ್ನು ಉಳಿಸುವ ಯೋಗ್ಯತೆ ಬೇಡವೇ? ಕಾಶ್ಮೀರದಲ್ಲೀಗ ಪ್ರವಾಸಿಗರು ಭಯಭೀತರಾಗಿ ದಿಕ್ಕೆಟ್ಟು ನಿರ್ಗಮಿಸುತ್ತಿರುವುದನ್ನು ಕಂಡು ಅಲ್ಲಿನ ವ್ಯಾಪಾರಿಗಳು, ಟ್ರಾವೆಲ್ ಏಜೆಂಟರು, ರೆಸ್ಟೊರೆಂಟ್ ಮಾಲೀಕರು ನಿರಾಸೆಗೊಂಡಿ ದ್ದಾರೆ. ಆದರೆ ಕಾಶ್ಮೀರಿಗರು ಒಂದನ್ನು ಮನವರಿಕೆ ಮಾಡಿಕೊಳ್ಳಲೇಬೇಕು. ಟೂರಿಸಂ ಮತ್ತು ಟೆರರಿಸಂ ಒಟ್ಟಿಗೆ ಇರಲು ಸಾಧ್ಯವೇ? ಸಾಮಾನ್ಯವಾಗಿ ಪ್ರವಾಸೋದ್ಯಮ ಇಲಾಖೆ ಎಂದರೆ ರಾಜಕಾರಣಿಗಳಿಗೆ ಅಷ್ಟಕ್ಕಷ್ಟೇ. ಅದರಲ್ಲೇನಿದೆ ಎಂಬ ತಾತ್ಸಾರ ಭಾವನೆ. ಆದರೆ ಜಮ್ಮು-ಕಾಶ್ಮೀರ ದಲ್ಲಿ ಸ್ವತಃ ಅಲ್ಲಿನ ಮುಖ್ಯಮಂತ್ರಿ ಉಮರ್ ಅಬ್ದು ಅವರೇ ಈ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Keshav Prasad B Column: ಅಮೆರಿಕ-ಚೀನಾ ಮ್ಯಾಚ್ ಟೈ ಆದ್ರೆ, ಭಾರತಕ್ಕೆ ಕಪ್ ಸಿಗುತ್ತಾ ?!
ಏಕೆಂದರೆ ಅದುವೇ ಕಣಿವೆ ರಾಜ್ಯದ ಆರ್ಥಿಕತೆಯ ಆಧಾರಸ್ತಂಭ. ಈಗ ಅದುವೇ ಹಠಾತ್ ನೆಲ ಕಚ್ಚಿದೆ. ಕಾಶ್ಮೀರಿ ಭಾಷೆಯಲ್ಲಿ ಪಹಲ್ಗಾಮ್ ಎಂದರೆ ಕುರಿಗಾಹಿಗಳ ಗ್ರಾಮ ಎಂದರ್ಥ. ಹಿಮಾಲಯದ ನಿಸರ್ಗ ರಮಣೀಯ ಹಳ್ಳಿಯ ಹುಲ್ಲುಗಾವಲಿನಲ್ಲಿ ಆನಂದದಲ್ಲಿ ವಿಹರಿಸುತ್ತಿದ್ದ, ಭೇಲ್ಪುರಿ ತಿನ್ನುತ್ತ ಕುಟುಂಬದೊಡನೆ ಸಂತಸದಲ್ಲಿದ್ದ 26 ಅಮಾಯಕ ಪ್ರವಾಸಿಗರನ್ನು ಐದಾರು ಮಂದಿ ಮತಾಂಧ ಭಯೋತ್ಪಾದಕರು ತಲೆಗೆ ಗುಂಡಿಟ್ಟು ಭೀಕರ ಹತ್ಯೆ ಮಾಡಿ ಕಾಡಿನ ನಡುವೆ ಪರಾರಿಯಾಗಿದ್ದಾರೆ. ಈ ಭಯೋತ್ಪಾದಕ ಕೃತ್ಯಕ್ಕೆ ಇಡೀ ದೇಶ ಆಘಾತಕ್ಕೀಡಾಗಿದೆ.
ಉಗ್ರ ಪೋಷಕ ಪಾಕಿಸ್ತಾನದ ವಿರುದ್ಧ ಭಾರತ ರಾಜತಾಂತ್ರಿಕ ಸಮರ ಸಾರಿದೆ. ಉಗ್ರರ ಸಂಹಾರಕ್ಕೆ ಮಿಲಿಟರಿ ಕಾರ್ಯಾಚರಣೆ ನಡೆಯುವ ನಿರೀಕ್ಷೆಯೂ ಇದೆ. ಪಾಕಿಸ್ತಾನ ತನ್ನ ದುಷ್ಕೃತ್ಯಕ್ಕೆ ಬೆಲೆ ತೆರಬೇಕಾದ ಕಾಲ ಬಂದಿದೆ. ಆದರೆ ಎಲ್ಲಿ ಭಯೋತ್ಪಾದನೆ ಇರುತ್ತದೆಯೋ, ಅಲ್ಲಿ ಆರ್ಥಿಕತೆ ಕುಸಿತಕ್ಕೀಡಾಗಿ ಅರಾಜಕತೆ ಸೃಷ್ಟಿಯಾಗುವುದು ಖಚಿತ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಅದಕ್ಕೆ ಪಹಲ್ಗಾಮ್‌ನಲ್ಲಿ ನಡೆದಿರುವ ಹಿಂದೂ ನರಮೇಧ ಸೇರ್ಪಡೆ ಯಾಗಿರುವುದು ದುರದೃಷ್ಟಕರ.

ಏಪ್ರಿಲ್ 22ರಂದು 26 ಮಂದಿ ಅಮೂಲ್ಯ ಜೀವಗಳು ಬಲಿಯಾಗಿರುವ ನಷ್ಟ ಒಂದೆಡೆಯಾದರೆ, ಇಡೀ ಕಾಶ್ಮೀರದ ಅರ್ಥವ್ಯವಸ್ಥೆಗೂ ಭಾರಿ ಪೆಟ್ಟು ಬಿದ್ದಿದೆ. ದಾಳಿ ಸಂಭವಿಸಿದ ಕೇವಲ 48 ಗಂಟೆ ಗಳಲ್ಲಿ ಕಣಿವೆ ರಾಜ್ಯ ಭಣಗುಡುತ್ತಿದೆ. ಶ್ರೀನಗರಕ್ಕೆ ಹೋಗುವ ವಿಮಾನಗಳು ಖಾಲಿ ಖಾಲಿ. ಇತಿಹಾಸ ಪ್ರಸಿದ್ಧ ದಾಲ್ ಸರೋವರದಲ್ಲಿ ಪ್ರವಾಸಿಗರ ಕಲರವ ಇಲ್ಲವಾಗಿದೆ. ಕಳೆದ 35 ವರ್ಷಗಳ ಮೊದಲ ಸಲ ಜಮ್ಮು-ಕಾಶ್ಮೀರ ಸಂಪೂರ್ಣ ಸ್ತಬ್ಧವಾಗಿದೆ. ಪ್ರವಾಸಿಗರಿಗೆ ಊಟೋಪಚಾರ, ವಸತಿ, ಸಾರಿಗೆ ವ್ಯವಸ್ಥೆ ಕಲ್ಪಿಸಿ ಆದಾಯ ಕಂಡುಕೊಂಡಿದ್ದವರಿಗೆ ಈಗ ಚಿಂತೆಯಾಗಿದೆ.
ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಿ, ನಾನಾ ಯೋಜನೆಗಳ ಮೂಲಕ ಪ್ರವಾಸೋದ್ಯಮವನ್ನೂ ಅಭಿವೃದ್ಧಿಪಡಿಸಲಾಗಿತ್ತು. ದಾಳಿಯಾಗುವ ತನಕ ಜಮ್ಮು-ಕಾಶ್ಮೀರದ ಆರ್ಥಿಕತೆ ವಿಕಸನದ ಹಾದಿಯಲ್ಲಿತ್ತು. 2024-25ರ ಜಿಎಸ್‌ಡಿಪಿ ಬೆಳವಣಿಗೆ ಶೇ.7.06 ಎಂದು ಅಂದಾಜಿಸಲಾಗಿತ್ತು. ಅದರ ಮೌಲ್ಯ 2.65 ಲಕ್ಷ ಕೋಟಿ ರುಪಾಯಿಗಳು. ಇದರಲ್ಲಿ ಪ್ರವಾಸೋದ್ಯಮದ ಪಾಲು 21,200 ಕೋಟಿ ರುಪಾಯಿಯಷ್ಟಿತ್ತು. ನಿರುದ್ಯೋಗದ ಪ್ರಮಾಣ ಇಳಿಕೆಯಾಗುತ್ತಿತ್ತು.
ಪುರಾಣಗಳ ಪ್ರಕಾರ ಮಹಾದೇವ ಅಮರನಾಥಕ್ಕೆ ತೆರಳುವ ಮಾರ್ಗದ ಮಧ್ಯೆ ಪಹಲ್ಗಾಮ್‌ನಲ್ಲಿ ನಂದಿಯನ್ನು ಬಿಟ್ಟು ಹೋಗುತ್ತಾನೆ. ಆದ್ದರಿಂದ ಈ ಪ್ರದೇಶವು ಅಮರನಾಥ ಪ್ರಯಾಣದ ಮಹಾ ದ್ವಾರ ಎಂಬ ನಂಬಿಕೆ ಇದೆ. ಧಾರ್ಮಿಕ ಮಹತ್ವವನ್ನೂ ಹೊಂದಿರುವ ಸ್ಥಳವಿದು. ಪಹಲ್ಗಾಮ್ ಮೂಲಕ ಪ್ರತಿ ವರ್ಷ ಸಾವಿರಾರು ಯಾತ್ರಿಕರು ಅಮರನಾಥ ಗುಹೆಗೆ ತೆರಳಿ ಮಹಾದೇವನ ದರ್ಶನ ಪಡೆಯುತ್ತಾರೆ. ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರದಿಂದ ಕೇವಲ 92 ಕಿಲೋಮೀಟರ್ ದೂರದಲ್ಲಿರುವ ಮತ್ತು ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ನಡೆದಿರುವ ಭಯೋತ್ಪಾದಕ ದಾಳಿ ಇಡೀ ಜಗತ್ತನ್ನು ದಿಗ್ಭ್ರಮೆಗೊಳಿಸಿದೆ.
ಪಹಲ್ಗಾಮ್‌ನಿಂದ 5 ಕಿಲೋಮೀಟರ್ ದೂರದಲ್ಲಿರುವ ಬೈಸರಾನ್ ಕಣಿವೆಯನ್ನು ಮಿನಿ ಸ್ವಿಜರ್ಲೆಂಡ್ ಎಂದು ಕರೆಯುತ್ತಾರೆ. ಸುತ್ತಲೂ ಹಿಮಾಚ್ಛಾದಿತ ಪರ್ವತಗಳು ಮತ್ತು ದೇವದಾರು ವೃಕ್ಷಗಳ ಕಾಡಿನ ನಯನ ಮನೋಹರ ದೃಶ್ಯ. ಪಹಲ್ಗಾಮ್ ಪಟ್ಟಣವು ದಕ್ಷಿಣ ಕಾಶ್ಮೀರದ ಅನಂತ ನಾಗ್ ಜಿಲ್ಲೆಯಲ್ಲಿದೆ. 2011ರ ಜನಗಣತಿಯ ಪ್ರಕಾರ ಪಹಲ್ಗಾಮ್‌ನಲ್ಲಿ ಶೇ.81ರಷ್ಟು ಮುಸ್ಲಿಮರು ಇದ್ದರೆ ಹಿಂದೂಗಳು ಶೇ.17ರಷ್ಟಿದ್ದಾರೆ.
‘ಪಹಲ್ಗಾಮ್ ಉಗ್ರ ದಾಳಿಯೊಂದಿಗೆ ಟೂರಿಸ್ಟ್ ಸೀಸನ್ ಅಂತ್ಯವಾಗಿದೆ’ ಎಂದು ಜಮ್ಮು-ಕಾಶ್ಮೀರದ ಟ್ರಾವೆಲ್ಸ್ ಏಜೆಂಟರು ಮರುಗುತ್ತಿದ್ದಾರೆ. ಈಗಾಗಲೇ ಸಾವಿರಾರು ಮಂದಿ ಕಾಶ್ಮೀರ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅವರು ನೀಡಿರುವ ಅಂಕಿ-ಅಂಶಗಳು ಜಮ್ಮು-ಕಾಶ್ಮೀರದ ಪ್ರವಾಸೋದ್ಯಮದ ವಿಹಂಗಮ ನೋಟವನ್ನು ನೀಡುತ್ತವೆ.
ಜಮ್ಮು-ಕಾಶ್ಮೀರಕ್ಕೆ 2024ರಲ್ಲಿ 2.35 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಬೇಸಗೆಯಲ್ಲಿ ಪ್ರತಿ ದಿನ ಸರಾಸರಿ 50 ರಿಂದ 55 ವಿಮಾನಗಳು ಅಲ್ಲಿಗೆ ಹಾರಾಟ ನಡೆಸುತ್ತವೆ. ಬೆಂಗಳೂರಿನಿಂದ ದಿಲ್ಲಿ, ಮುಂಬಯಿ, ಹೈದರಾಬಾದ್ ಮೊದಲಾದ ನಗರಗಳ ಮಾರ್ಗವಾಗಿ ಕಾಶ್ಮೀರಕ್ಕೆ ನಿತ್ಯ 30 ವಿಮಾನ ಗಳ ವ್ಯವಸ್ಥೆ ಇದೆ ಎಂದರೆ ಆಲೋಚಿಸಿ. ಇದಕ್ಕೂ ಒಂದು ಕಾರಣವಿದೆ. ಕಳೆದ 3 ವರ್ಷಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿತ್ತು.
2022ರಲ್ಲಿ 1.88 ಕೋಟಿ ಪ್ರವಾಸಿಗರ ಭೇಟಿ ನಡೆದಿತ್ತು. 2023ರಲ್ಲಿ 2.11 ಕೋಟಿಗೂ ಹೆಚ್ಚು ವಿಸಿಟ್ ಆಗಿತ್ತು. 2024ರಲ್ಲಿ 2.35 ಕೋಟಿಗೆ ಏರಿಕೆಯಾಗಿತ್ತು. ವೈಷ್ಣೋದೇವಿ ಮತ್ತು ಅಮರನಾಥ ಕ್ಷೇತ್ರಕ್ಕೆ ತೆರಳುವ ಲಕ್ಷಾಂತರ ಮಂದಿಯೂ ಇದ್ದಾರೆ. ಹೀಗಾಗಿ ಪ್ರವಾಸೋದ್ಯಮ ಜಮ್ಮು-ಕಾಶ್ಮೀರದ ಆರ್ಥಿಕತೆಯ ಆಧಾರ ಸ್ತಂಭ. ಅದು ಅಲ್ಲಿನ ಜನರಿಗೆ ಜೀವನೋಪಾಯಕ್ಕೆ ದಾರಿಯಾಗಿದೆ. ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಆದರೆ ಈಗ ಪ್ರಯಾಣಿಕರು ಜಮ್ಮು-ಕಾಶ್ಮೀರ ಪ್ರಯಾಣಕ್ಕೆ ಬುಕ್ ಮಾಡುವುದು ಬಿಡಿ, ಯೋಚಿಸಲೂ ಹಿಂಜರಿಯುತ್ತಾರೆ.
ದಾಳಿಗೆ ಮೊದಲೇ ಮಾಡಿದ್ದ ಬುಕಿಂಗ್‌ಗಳನ್ನು ರದ್ದುಗೊಳಿಸುತ್ತಿದ್ದಾರೆ. ನಾನಾ ಆನ್‌ಲೈನ್ ಟೂರಿಸಂ ವೆಬ್ ಪೋರ್ಟಲ್‌ಗಳಲ್ಲಿ ಈ ಟ್ರೆಂಡ್ ಕಂಡುಬಂದಿದೆ. ವರದಿಗಳ ಪ್ರಕಾರ ಶೇ.40ರಷ್ಟು ಬುಕಿಂಗ್ ಗಳು ರದ್ದಾಗಿವೆ.
‘ಈ ಆಘಾತದಿಂದ ಚೇತರಿಸಿಕೊಳ್ಳಲು ಕಾಶ್ಮೀರಕ್ಕೆ ಹಲವಾರು ವರ್ಷಗಳೇ ಬೇಕಾದೀತು’ ಎನ್ನುತ್ತಾರೆ ಇಂಡಿಯಾ ಟೂರಿಸಂ ಫೋರಮ್‌ನ ಅಧ್ಯಕ್ಷ ಅಜಿತ್ ಕುಮಾರ್. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕೇಂದ್ರ ಸರಕಾರವು ಮುತುವರ್ಜಿ ವಹಿಸಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಿತ್ತು.
2023ರ ಮೇನಲ್ಲಿ ಕೇಂದ್ರ ಸರಕಾರವು ಜಿ-20 ಶೃಂಗಸಭೆಯ ಭಾಗವಾಗಿ ಪ್ರವಾಸೋದ್ಯಮ ಕುರಿತ ಸಭೆಯನ್ನು ಶ್ರೀನಗರದಲ್ಲಿ ಬಿಗಿ ಭದ್ರತೆಯ ನಡುವೆ ಆಯೋಜಿಸಿತ್ತು. ಕಾಶ್ಮೀರದಲ್ಲಿ ಅಂಥದ್ದೊಂದು ಕಾರ್ಯಕ್ರಮ ಅದೇ ಮೊದಲ ಬಾರಿಗೆ ನಡೆದಿತ್ತು. ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಮತ್ತು ಶಾಂತಿ ನೆಲೆಸಿದೆ ಎಂಬುದನ್ನು ಬಿಂಬಿಸುವ ಮತ್ತು ಪ್ರವಾಸೋದ್ದಿಮೆಗೆ ಪುಷ್ಟಿ ನೀಡುವ ಸದುದ್ದೇಶ ಕೇಂದ್ರ ಸರಕಾರಕ್ಕಿತ್ತು.
ಇದಾದ ಬಳಿಕ ಕಾಶ್ಮೀರಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿತ್ತು. ವಿದೇಶಿ ಪ್ರವಾಸಿಗರೇ ಬಂದು ಹೋಗುತ್ತಿರುವುದನ್ನು ಕಂಡ ದೇಶೀಯ ಪ್ರವಾಸಿಗರೂ ಉತ್ಸಾಹದಿಂದ ಆಗಮಿಸತೊಡಗಿದರು. ದೂರದ ಸ್ವಿಜರ್ಲೆಂಡ್ ಏಕೆ ಬೇಕು? ಕಾಶ್ಮೀರವೇ ಇದೆಯಲ್ಲವೇ ಎಂಬ ಭಾವನೆ ಗಟ್ಟಿಯಾಗುತ್ತಿತ್ತು.
2024ರಲ್ಲಿ 66000ಕ್ಕೂ ಹೆಚ್ಚು ವಿದೇಶಿಗರು ಭೇಟಿ ಕೊಟ್ಟಿದ್ದರು. ರಾಜ್ಯದ ಜಿಡಿಪಿಯಲ್ಲಿ ಶೇ.9ರಷ್ಟು ಪ್ರವಾಸೋದ್ಯಮದಿಂದ ಬರುತ್ತಿದೆ. ಸದ್ಯಕ್ಕೆ ರಾಜ್ಯಕ್ಕೆ ವಾರ್ಷಿಕ 12000 ಕೋಟಿ ರುಪಾಯಿ ಆದಾಯವು ಇದರಿಂದ ಸಿಗುತ್ತಿದ್ದು, 2030ರ ವೇಳೆಗೆ 30000 ಕೋಟಿ ರುಪಾಯಿಗೆ ಏರಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಈ ಎಲ್ಲ ಆಶಯಗಳಿಗೆ ಟೆರರಿಸಂ ದೊಡ್ಡ ಧಕ್ಕೆಯಾಗಿದೆ. ಭಯೋತ್ಪಾದಕ ದಾಳಿ ನಡೆದಾಗ ಪ್ರವಾಸೋದ್ದಿಮೆಗೆ ದೊಡ್ಡ ಹೊಡೆತ ಬೀಳುತ್ತದೆ.
ಪ್ರವಾಸಿಗರು ಅಪಾಯವನ್ನು ಮೈಳೆದುಕೊಳ್ಳಲು ಬಯಸುವುದಿಲ್ಲ. ಆ ಸ್ಥಳದ ಚಾರಿತ್ರ್ಯಕ್ಕೆ ಮಸಿ ಬಳಿದಂತಾಗುತ್ತದೆ. ಭಾರಿ ಆರ್ಥಿಕ ನಷ್ಟವೂ ಉಂಟಾಗುತ್ತದೆ. ಉದ್ಯೋಗಗಳು ಕಡಿಮೆಯಾಗುತ್ತದೆ. ಟೂರಿಸಂ ಎಂದರೆ ಕೇವಲ ಒಂದು ಸ್ಥಳಕ್ಕೆ ಭೇಟಿ ನೀಡುವುದಲ್ಲ, ಭಿನ್ನ ಪ್ರದೇಶದಲ್ಲಿ ಮುಕ್ತವಾಗಿ ಸಂಚರಿಸುವ ಸ್ವಾತಂತ್ರ್ಯ, ಅಲ್ಲಿನ ಸಂಸ್ಕೃತಿಯನ್ನು ತಿಳಿಯುವುದು, ಜನಜೀವನದೊಂದಿಗೆ ಬೆರೆತು ಕೊಳ್ಳುವುದು. ಇದನ್ನು ಎರಡು ಭಿನ್ನ ಸಂಸ್ಕೃತಿಗಳ ಆತ್ಮೀಯ ಕುಶಲೋಪರಿ ಎಂದೂ ಕರೆಯ ಬಹುದು. ಟೆರರಿಸಂ ಎಂದರೆ ಮತಾಂಧತೆ, ಕ್ರೌರ್ಯ, ಹಿಂಸೆಯ ಅಟ್ಟಹಾಸ. ಅದರ ನೆರಳನ್ನೂ ಸಹಿಸಲು ಹೇಗೆ ಸಾಧ್ಯ ಕಾಶ್ಮೀರಿಗರೇ?!
ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳು, ಹೈಪ್ರೊಫೈಲ್ ನಗರಗಳು ಉಗ್ರರ ಕೆಂಗಣ್ಣಿಗೆ ಗುರಿಯಾಗಿವೆ. ಇಂಡೋನೇಷ್ಯಾದ ಬಾಲಿಯಲ್ಲಿ 2002ರಲ್ಲಿ ಸಂಭವಿಸಿದ ಕಾರ್ ಬಾಂಬಿಂಗ್‌ನಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ಹತರಾಗಿದ್ದರು. ಬೂಸ್ಟನ್ನಿಂದ ಮುಂಬಯಿ ತನಕ ಪ್ರಮುಖ ನಗರಗಳೂ ಟೆರರಿಸಂಗೆ ಟಾರ್ಗೆಟ್ ಆಗಿದ್ದವು.
ಹಾಗಂತ ಉಗ್ರರನ್ನು ಮಟ್ಟ ಹಾಕದೆ ಶಾಂತಿ ನೆಲೆಸದು. ಕಾಶ್ಮೀರ ಕಣಿವೆಯೂ ಅದಕ್ಕೆ ಹೊರತಾ ಗಿಲ್ಲ. ಎರಡನೆಯದಾಗಿ ಪ್ರವಾಸಿಗರಿಗೆ ಈಗ ಕಾಶ್ಮೀರಕ್ಕಿಂತಲೂ ಸೊಗಸಾದ ಹಿಮಾಲಯ ಪರ್ವತ ಶ್ರೇಣಿಗಳನ್ನು, ನಿಸರ್ಗ ಸೌಂದರ್ಯವನ್ನು ಉತ್ತರಾಖಂಡ್, ಹಿಮಾಚಲದಲ್ಲೂ ನಿಶ್ಚಿಂತೆ ಯಿಂದ ವೀಕ್ಷಿಸಬಹುದು. ಆದ್ದರಿಂದ ಕಣಿವೆ ರಾಜ್ಯವು ಪ್ರವಾಸಿಗರಿಗೆ ಸ್ವರ್ಗವಾಗಲಿ ಹೊರತು, ಟೆರರಿಸಂ ನಿಂದ ನರಕವಾಗದಿರಲಿ.