ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?

ಮಹಾರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರದ ಅಡಿಯಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿ ಗಳಿಗೆ ತೃತೀಯ ಭಾಷೆಯಾಗಿ ಹಿಂದಿಯನ್ನು ಜಾರಿಗೊಳಿಸಲು ಮಹಾಯುತಿ ಮೈತ್ರಿಕೂಟ ಸರಕಾರ ನಿರ್ಧರಿಸಿತ್ತು. ಇದಕ್ಕೆ ಶಿವಸೇನೆ, ಎನ್‌ಸಿಪಿ ಸೇರಿದಂತೆ ಮಹಾರಾಷ್ಟ್ರದ ಪ್ರಾದೇಶಿಕ ಪಕ್ಷಗಳು ತೀವ್ರ ವಿರೋಧ ಮಾಡಿದ್ದು ಮಾತ್ರವಲ್ಲದೆ ಸ್ವತಃ ಉದ್ಧವ್ ಹಾಗೂ ರಾಜ್ ಠಾಕ್ರೆ ಸೇರಿ ಸರಕಾರದ ನೀತಿ ವಿರೋಧಿಸಿ ಬೃಹತ್ ರ‍್ಯಾಲಿ ಮಾಡುವುದಾಗಿ ಘೋಷಿಸುವಂತಾಯಿತು.

ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?

Profile Ashok Nayak Jul 15, 2025 7:13 AM

ರಾಜಬೀದಿ

ವಿನಾಯಕ ಮಠಪತಿ

ಚಿಕ್ಕಪ್ಪನ ಪುತ್ರಪ್ರೇಮಕ್ಕೆ ನೊಂದು ಶಿವಸೇನೆಯಿಂದ ಹೊರ ಬಂದಿದ್ದಾಗಿತ್ತು. ಅಪ್ಪಟ ಹಿಂದುತ್ವವಾದಿ ನಾಯಕ ತಿರುಗಿ ನೋಡುವಷ್ಟರಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆ ಹೆಸರಿನ ಪಕ್ಷ ಉದಯವಾಗಿತ್ತು. ‘ಗುಡಿಯೊಳಗಿನ ದೇವರು ಬೇಕು, ಆದರೆ ಹೊರಗಿರುವ ಪೂಜಾರಿ ಬೇಡ’ ಎಂಬ ಅಚಲ ನಿರ್ಧಾರಕ್ಕೆ ಬದ್ಧರಾಗಿದ್ದ ಇವರು ಕಳೆದ 20 ವರ್ಷಗಳಿಂದ ತಮ್ಮದೇ ಹಾದಿಯಲ್ಲಿ ಸಾಗಿಯಾಗಿತ್ತು. ಯಾವತ್ತೂ ತಮ್ಮ ಮರಾಠಿ ಅಸ್ಮಿತೆಯಿಂದ ಹೊರ ಬರದೆ ಈ ವ್ಯಕ್ತಿ ಮತ್ತೆ ರಕ್ತಸಂಬಂಧಗಳಿಗೆ ತಲೆ ಬಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಶಿವಸೇನೆಯ ಎರಡು ಮುಖಗಳು ಒಟ್ಟಿಗೆ ಸೇರಿವೆ.

ಹೌದು, ಇಷ್ಟೆಲ್ಲ ಪೀಠಿಕೆ ಹಾಕಿದ್ದು ಮಹಾರಾಷ್ಟ್ರದ ಸದ್ಯದ ಬೆಳವಣಿಗೆಯ ಕುರಿತು. ಕಳೆದ ಎರಡು ದಶಕಗಳಿಂದ ದೂರವಾಗಿದ್ದ ಸಹೋದರರು ಒಂದಾಗಲು ದೇವೇಂದ್ರ ಫಡ್ನವಿಸ್‌ ರವರ ಸರಕಾರ ಕ್ಷಣಕಾಲ ಒಂದು ಅದ್ಭುತ ಅವಕಾಶ ಒದಗಿಸಿ ಕೊಟ್ಟಂತಿತ್ತು.

ಮಹಾರಾಷ್ಟ್ರದಲ್ಲಿ ತ್ರಿಭಾಷಾ ಸೂತ್ರದ ಅಡಿಯಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ಹಿಂದಿಯನ್ನು ಜಾರಿಗೊಳಿಸಲು ಮಹಾಯುತಿ ಮೈತ್ರಿಕೂಟ ಸರಕಾರ ನಿರ್ಧರಿಸಿತ್ತು. ಇದಕ್ಕೆ ಶಿವಸೇನೆ, ಎನ್‌ಸಿಪಿ ಸೇರಿದಂತೆ ಮಹಾ ರಾಷ್ಟ್ರದ ಪ್ರಾದೇಶಿಕ ಪಕ್ಷಗಳು ತೀವ್ರ ವಿರೋಧ ಮಾಡಿದ್ದು ಮಾತ್ರವಲ್ಲದೆ ಸ್ವತಃ ಉದ್ಧವ್ ಹಾಗೂ ರಾಜ್ ಠಾಕ್ರೆ ಸೇರಿ ಸರಕಾರದ ನೀತಿ ವಿರೋಧಿಸಿ ಬೃಹತ್ ರ‍್ಯಾಲಿ ಮಾಡುವುದಾಗಿ ಘೋಷಿಸುವಂತಾಯಿತು.

ಇದನ್ನೂ ಓದಿ: Vinayaka Mathapathy Column: ಕೃಷ್ಣೆಗೆ ಅಂಟಿದ ದುಷ್ಟ ರಾಜಕಾರಣದ ರೋಗ

ಇದರಿಂದ ಮುಂದಾಗುವ ಪರಿಣಾಮ ಅರಿತ ಸಿಎಂ ಫಡ್ನವಿಸ್ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಇದೇ ಕಾರಣಕ್ಕೆ ವಿಜಯೋತ್ಸವ ಆಚರಣೆಗೆ ಠಾಕ್ರೆ ಕುಡಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಅವಕಾಶ ಬಂದೊದಗಿತು.

ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆಯ ಬಲಗೈನಂತಿದ್ದ ರಾಜ್ ಠಾಕ್ರೆ ಚಿಕ್ಕಪ್ಪನಂತೆ ಖಡಕ್ ಶೈಲಿಯ ಭಾಷಣದ ಮೂಲಕ ಶಿವಸೈನಿಕರಿಗೆ ನೆಚ್ಚಿನ ನಾಯಕ ರಾಗಿದ್ದರು.

ಆದರೆ ಪುತ್ರಪ್ರೇಮವೆಂಬುದು ಬಾಳ್ ಠಾಕ್ರೆ ಅವರನ್ನೂ ಬಿಡಲಿಲ್ಲ. 2003ರಲ್ಲಿ ತಮ್ಮ ಪುತ್ರ ಉದ್ಧವ್‌ರನ್ನು ಶಿವಸೇನೆ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದರು. ನಂತರ 2006ರಲ್ಲಿ, ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆ ಸಂಪಾದಕರಾಗಿಯೂ ಉದ್ಧವ್ ನೇಮಕಗೊಂಡರು.

Uddhav and raj

ಇವೆಲ್ಲದರಿಂದ ಬೇಸರಿಸಿಕೊಂಡ ರಾಜ್ ಠಾಕ್ರೆ ಶಿವಸೇನೆಯಿಂದ ಹೊರಬಂದು 2006ರಲ್ಲಿ ಮರಾಠಿ ಅಸ್ಮಿತೆ ಪ್ರತಿಪಾದಿಸುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಟ್ಟುವ ಮೂಲಕ ಬಾಳ್ ಠಾಕ್ರೆಯವರ ಜೀವಿತಾವಧಿಯ ಶಿವಸೇನೆಯನ್ನು ತೊರೆದರು. ಸ್ವಂತ ಪಕ್ಷ ಸ್ಥಾಪನೆ ನಂತರದಲ್ಲಿ ರಾಜ್ ಠಾಕ್ರೆ ಅಷ್ಟೇನೂ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಸಹೋದರ ಉದ್ಧವ್ ಠಾಕ್ರೆಯವರ ಶಿವಸೇನೆಗೆ ಯಾವತ್ತೂ ‌ಮಗ್ಗುಲುಮುಳ್ಳಾಗಿ ದ್ದಂತೂ ಸತ್ಯ.

ಸುದೀರ್ಘ ಎರಡು ದಶಕಗಳ ನಂತರದಲ್ಲಿ ಮತ್ತೆ ಮಹಾರಾಷ್ಟ್ರದಲ್ಲಿ ಠಾಕ್ರೆ ಮನೆತನದ ಕುಡಿಗಳು ಒಂದಾಗಿವೆ. ಆದರೆ ಇವರಿಬ್ಬರ ಒಗ್ಗಟ್ಟಿನಿಂದ ಮಹಾರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಐತಿಹಾಸಿಕ ಗೆಲುವು ದಾಖಲಿಸಿ ಅಧಿಕಾರದಲ್ಲಿದೆ. ಇತ್ತ ಕಾಂಗ್ರೆಸ್ ಹಾಗೂ ಶರದ್ ಪವಾರ್ ಪಕ್ಷವೂ ಸುಸ್ಥಿತಿಯಲ್ಲಿದೆ. ಇವೆಲ್ಲದರ ನಡುವೆ ಸಹೋದರರ ಒಗ್ಗಟ್ಟು ರಾಜಕೀಯವಾಗಿ ಎಷ್ಟು ಲಾಭ ತರಲಿದೆ ಎಂಬುದನ್ನು ಈಗಲೇ ಊಹಿಸಲು ಅಸಾಧ್ಯ.

ಶಿವಸೇನೆಯ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ರಾಜ್ ಠಾಕ್ರೆ ಒಟ್ಟಾಗಿರುವುದು ಮುಂಬರುವ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರಬಹುದು. ಆದರೆ ಶಿವಸೇನೆಯ ಏಕನಾಥ ಶಿಂಧೆ ಬಣ ಹಾಗೂ ಆಡಳಿತಾರೂಢ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ರವರ ಶಕ್ತಿಯನ್ನು ಅಷ್ಟು ಸುಲಭಕ್ಕೆ ಕುಂಠಿತಗೊಳಿಸುವುದು ಕಷ್ಟಸಾಧ್ಯ.

227 ಸದಸ್ಯಬಲದ ಮುಂಬೈ ಮಹಾನಗರ ಪಾಲಿಕೆ ದೇಶದ ಅತ್ಯಂತ ಶ್ರೀಮಂತ ಪಾಲಿಕೆ ಯಾಗಿದೆ. ಇದರ ಆಡಳಿತ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹೆಣಗಾಡುತ್ತವೆ. ಸದ್ಯ ಮುಂಬೈ ನಗರ ಭಾಗದಲ್ಲಿ ಹಿಡಿತ ಹೊಂದಿರುವ ಠಾಕ್ರೆ ಕುಟುಂಬಕ್ಕೆ ಉದ್ಧವ್ ಹಾಗೂ ರಾಜ್ ಠಾಕ್ರೆ ಒಟ್ಟಾಗಿರುವುದು ಕೊಂಚ ಲಾಭ ನೀಡುವ ಸಾಧ್ಯತೆ ಇದೆ. ಈ ಹೋರಾಟವು ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟವನ್ನು ಸಂಕಷ್ಟಕ್ಕೆ ಸಿಲುಕಿಸ ಬಹುದು. ಈ ಮೂಲಕ ಇಬ್ಬರು ನಾಯಕರು ಅಧಿಕಾರಕ್ಕೆ ಹತ್ತಿರ ಬರಬಹುದಾಗಿದೆ.

ದೇವೇಂದ್ರ ಫಡ್ನವೀಸ್‌ ಚಾಣಾಕ್ಷ ನಡೆ

ಮಹಾರಾಷ್ಟ್ರದಲ್ಲಿ ಒಂದನೇ ತರಗತಿಯಿಂದ ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯಗೊಳಿಸುವ ನಿರ್ಧಾರಕ್ಕೆ ಮಹಾರಾಷ್ಟ್ರ ಸರಕಾರ ಬಂದಿದ್ದನ್ನು ನೆಪವಾಗಿಸಿ ಕೊಂಡ ಶಿವಸೇನೆ ಹಾಗೂ ಎಮಎನ್‌ಎಸ್ ನಾಯಕರು ಸರಕಾರದ ವಿರುದ್ಧ ಮುಗಿ ಬೀಳಲು ಸಿದ್ಧರಾಗಿದ್ದರು. ದಶಕಗಳ ನಂತರ ಉದ್ಧವ್ ಹಾಗೂ ರಾಜ್ ಠಾಕ್ರೆ ಜಂಟಿಯಾಗಿ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಇದರ ಸೂಕ್ಷ್ಮತೆ ಅರಿತ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ವಿವಾದಿತ ಕಾನೂ ನನ್ನು ವಾಪಸ್ ಪಡೆದುಕೊಂಡರು. ಗಡಿ, ಭಾಷೆಯಂಥ ಸೂಕ್ಷ್ಮ ವಿಷಯಗಳನ್ನು ಹಿಡಿದುಕೊಂಡು ವಿಪಕ್ಷಗಳು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗುತ್ತಿದ್ದಂತೆ ಸಿಎಂ ಫಡ್ನವಿಸ್ ವಿರೋಧಿಗಳಿಗೆ ಶಾಕ್ ನೀಡಿದರು.

ಹಾಗೆ ನೋಡಿದರೆ, ಉದ್ಧವ್ ಹಾಗೂ ರಾಜ್ ಠಾಕ್ರೆ ಸಹೋದರರು ರಾಜಕೀಯವಾಗಿ ಏನಾದರೂ ಪಡೆಯಬೇಕೆಂದರೆ ಬಿಜೆಪಿ ಹಾಗೂ ಏಕನಾಥ ಶಿಂಧೆ ಬಣದ ವಿರುದ್ಧವೇ ಹೋರಾಟ ಮಾಡಬೇಕು. ಇದೇ ಕಾರಣಕ್ಕೆ ಎಂಬಂತೆ ವಿಜಯೋತ್ಸವ ಸಮಾವೇಶದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ ಮುಂಬರುವ ರಾಜಕೀಯ ಸ್ಥಾನಮಾನದ ಕುರಿತು ಸಾಕಷ್ಟು ಒತ್ತು ನೀಡಿದ್ದರು.

ಈ ವೇಳೆ ರಾಜ್ ಠಾಕ್ರೆ ಕೂಡ, ‘ನಮ್ಮಿಬ್ಬರನ್ನು ಒಂದಾಗಿಸಲು ಸ್ವತಃ ಬಾಳ್ ಠಾಕ್ರೆಗೆ ಸಾಧ್ಯ ವಾಗಿರಲಿಲ್ಲ. ಆ ಕೆಲಸವನ್ನು ದೇವೇಂದ್ರ ಫಡ್ನವಿಸ್ ಮಾಡಿದ್ದಾರೆ’ ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಫಡ್ನವಿಸ್, ‘ಬಾಳಾಸಾಹೇಬ್ ಠಾಕ್ರೆ ನನಗೆ ಆಶೀರ್ವದಿಸಿರ ಬಹುದು’ ಎಂದು ಹೇಳುವ ಮೂಲಕ ಠಾಕ್ರೆ ಸಹೋದರರ ಕುರಿತು ವ್ಯಂಗ್ಯವಾಡಿದ್ದಾರೆ.

ರಾಷ್ಟ್ರೀಯತೆ ಹಾಗೂ ಸ್ಥಳೀಯ ಮರಾಠಿಗರ ಅಸ್ಮಿತೆಯನ್ನು ಸದಾಕಾಲವೂ ಗೌರವಿಸಿ ಕೊಂಡು ಸಾಗುತ್ತಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸದ್ಯ ಠಾಕ್ರೆ ಸಹೋದರರು ಒಡ್ಡುವ ಸವಾಲುಗಳನ್ನು ಎದುರಿಸುವ ಶಕ್ತಿ ಇದೆ. ಆದರೆ ರಾಜ್ ಠಾಕ್ರೆ ಯವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಇತ್ತೀಚಿನ ದಿನಗಳಲ್ಲಿ ಮರಾಠಿ ಭಾಷೆ ವಿಷಯಕ್ಕೆ ಹಿಂದಿ ಭಾಷಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯ ವನ್ನು ತಡೆಗಟ್ಟುವ ಸವಾಲು ಸರಕಾರಕ್ಕಿದೆ.

ಭಾಷೆಯ ವಿಚಾರವೇ ಶಿವಸೇನೆ ಹಾಗೂ ಎಮ್‌ ಎನ್‌ಎಸ್ ಪಕ್ಷದ ಪ್ರಮುಖ ಅಸ್ತ್ರ ವಾಗಿರುವಾಗ ಇದೆಲ್ಲವನ್ನೂ ಮೆಟ್ಟಿ ನಿಲ್ಲುವ ಧೈರ್ಯವನ್ನು ಫಡ್ನವಿಸ್ ತೋರಬೇಕಷ್ಟೇ.

ಭಾಷೆ ವಿಚಾರವಾಗಿ ಎಚ್ಚೆತ್ತರೆ ಒಳಿತು

ಮಹಾರಾಷ್ಟ್ರದಲ್ಲಿ ಹಿಂದಿಯನ್ನು ಕಡ್ಡಾಯ ತೃತೀಯ ಭಾಷೆಯಾಗಿ ಜಾರಿಗೆ ತರಲು ಹೊರಟಿದ್ದ ರಾಜ್ಯ ಸರಕಾರದ ನಡೆಯ ವಿರುದ್ಧ ಹೊತ್ತಿಕೊಂಡ ಬೆಂಕಿ ಇಡೀ ರಾಜಕೀಯ ಸಮೀಕರಣವನ್ನೇ ಬುಡಮೇಲು ಮಾಡಿದೆ.

ಮಹಾರಾಷ್ಟ್ರದಲ್ಲಿ ಭಾಷೆ ವಿಚಾರವಾಗಿ ಅಲ್ಲಿನ ರಾಜಕೀಯ ಪಕ್ಷಗಳು ಹಾಗೂ ಮುಖಂಡರು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ರಾಜ್ಯದಲ್ಲಿ ಏಕೆ ಸಾಧ್ಯವಿಲ್ಲ ಎಂಬುದು ಯಕ್ಷಪ್ರಶ್ನೆ. ಚುನಾವಣೆ ಸಂದರ್ಭ ಇರಲಿ, ಇಲ್ಲದಿರಲಿ ಮಹಾರಾಷ್ಟ್ರದ ರಾಜಕಾರಣಿಗಳು ಗಡಿಯಲ್ಲಿ ಮರಾಠಿ ಅಸ್ಮಿತೆ ಕುರಿತು ತಗಾದೆ ಎತ್ತುತ್ತಾರೆ. ಅದನ್ನು ‘ರಾಜಕೀಯ ಚರ್ಚಾವಿಷಯ’ವಾಗಿ ಇಟ್ಟುಕೊಳ್ಳುವ ಮೂಲಕ ಸಮಸ್ಯೆಯನ್ನು ಎತ್ತಿ ತೋರಿಸುವ ಪ್ರಯತ್ನ ಸದಾಕಾಲವೂ ನಡೆದಿರುತ್ತದೆ.

ನಮ್ಮ ರಾಜ್ಯದ ರಾಜಕಾರಣದಲ್ಲಿ ಭಾಷೆ ಹಾಗೂ ಗಡಿ ಸಮಸ್ಯೆಗಳು ರಾಜಕೀಯ ಚರ್ಚಾ ವಿಷಯವಾಗುವುದೇ ಇಲ್ಲ. ಎಷ್ಟು ಜನ ರಾಜಕಾರಣಿಗಳು ಭಾಷೆ, ಗಡಿ ಭಾಗದ ಸಮಸ್ಯೆ ವಿಚಾರವಾಗಿ ಮಹಾರಾಷ್ಟ್ರದ ರಾಜಕಾರಣಿಗಳ ರೀತಿಯಲ್ಲಿ ವಿರೋಧ ಮಾಡುತ್ತಾರೆ. ಅಷ್ಟೇ ಅಲ್ಲದೆ ಹಿಂದಿ ಹೇರಿಕೆ ವಿಚಾರವಾಗಿಯೂ ಈವರೆಗೂ ನಮ್ಮಲ್ಲಿ ಒಗ್ಗಟ್ಟಿನ ವಿರೋಧ ಕಾಣಸಿಗುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ವಿದ್ಯಾರ್ಥಿಗಳು ಕಡ್ಡಾಯ ತೃತೀಯ ಭಾಷಾ ಶಿಕ್ಷೆಯನ್ನು ಅನುಭವಿಸುವಂತಾಗಿದೆ. ಇದೇ ವಿಚಾರವಾಗಿ ತಮಿಳುನಾಡಿನಲ್ಲಿ ರಾಜಕೀಯ ನಾಯಕರು ಹಿಂದಿ ಹೇರಿಕೆ ವಿರೋಧಿಸಿ ನಿರಂತರ ಹೋರಾಟ ಮುಂದುವರಿಸಿzರೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಒಕ್ಕೊರಲಿನ ವಿರೋಧ ವ್ಯಕ್ತವಾಗದಿರುವುದು ವಿಪರ್ಯಾಸ.

ಹಿಂದಿ ಹೇರಿಕೆ ವಿರೋಧಿ ಹೋರಾಟಕ್ಕೆ ದಶಕಗಳ ಇತಿಹಾಸ ಇದೆ. 1937ರಲ್ಲಿ ತಮಿಳುನಾಡಿ ನಲ್ಲಿ ಇಂಥ ಮೊದಲ ಹೋರಾಟ ನಡೆಯಿತು. ಪೆರಿಯಾರ್ ಸೇರಿದಂತೆ ಅನೇಕರು ಈ ಹೋರಾಟದ ಭಾಗವಾಗಿದ್ದರು. ಅಂದಿನಿಂದ ಈವರೆಗೂ ನಿರಂತರವಾಗಿ ಹಿಂದಿ ಹೇರಿಕೆ ವಿರೋಧಿ ಹೋರಾಟಗಳು ನಡೆಯುತ್ತಿವೆ. ಹಿಂದಿ ಕಲಿಕೆಯು ವಿದ್ಯಾರ್ಥಿಗಳ ಆಯ್ಕೆ ಆಗಬೇಕೇ ಹೊರತು ಕಡ್ಡಾಯವಾಗಬಾರದು. ಈ ಕುರಿತು ರಾಜ್ಯ ಸರಕಾರಗಳು ಕೇಂದ್ರದ ಗಮನಸೆಳೆದು ಸ್ಥಳೀಯ ಭಾಷೆಯನ್ನು ಉಳಿಸಿ ಬೆಳೆಸಲು ಸಹಕಾರ ಕೊಡುವಂತೆ ಕೇಳಬೇಕು. ಇಲ್ಲವಾದರೆ ವೈವಿಧ್ಯಮಯ ದೇಶವಾದ ಭಾರತವು, ಭಾರತವಾಗಿರಲು ಸಾಧ್ಯವಾಗುವುದಿಲ್ಲ.

(ಲೇಖಕರು ಪತ್ರಕರ್ತರು)