ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ganapathi V Avadhani Column: ʼಹೌದುʼ ಒಂದೇ ಅಲ್ಲ; ʼಇಲ್ಲʼ ಎನ್ನಲೂ ಕಲಿಯಬೇಕು !

ನಾನು ‘ಇಲ್ಲ’ ಅಂದರೆ ಅವರು ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಾರೇನೋ ಎಂಬ ಭಯ. ನಿರಾಕರಿ ಸಿದ ನಂತರ ‘ನಾನು ತಪ್ಪು ಮಾಡಿದ್ದೇನೆ’ ಎಂಬ ಅಂತರಂಗದ ಒತ್ತಡ. ‘ಇಲ್ಲ’ ಎಂದರೆ ಸ್ನೇಹ, ಕೌಟುಂಬಿಕ ಅಥವಾ ವೃತ್ತಿಪರ ಸಂಬಂಧ ಹಾಳಾಗಬಹುದು ಎಂಬ ಆತಂಕ. ಸಮಾಜ ನಮ್ಮನ್ನು ಕೆಟ್ಟದಾಗಿ ನೋಡುತ್ತದೇನೋ ಎಂಬ ಗೊಂದಲ. ಆದರೆ, ‘ಇಲ್ಲ’ ಎನ್ನುವುದನ್ನು ಬಳಸದೇ ದಿಢೀರನೆ ‘ಹೌದು’ ಅನ್ನುವುದರಿಂದಲೇ ಬದುಕಿನಲ್ಲಿ ಶೇ.50ಕ್ಕೂ ಹೆಚ್ಚು ಬಿಕ್ಕಟ್ಟುಗಳು ಉದ್ಭವವಾಗುತ್ತವೆ, ಕಷ್ಟ ಗಳು ಎದುರಾಗುತ್ತವೆ ಎಂಬುದನ್ನು ಅರಿಯಬೇಕು.

ʼಹೌದುʼ ಒಂದೇ ಅಲ್ಲ; ʼಇಲ್ಲʼ ಎನ್ನಲೂ ಕಲಿಯಬೇಕು !

-

Ashok Nayak Ashok Nayak Sep 2, 2025 9:33 AM

ಹಿತೋಪದೇಶ

ಗಣಪತಿ ವಿ.ಅವಧಾನಿ

ಒಳ್ಳೆಯ ಅವಕಾಶಗಳು ಬಂದಾಗ ‘ಎಸ್’ ಎನ್ನುವುದು ಎಷ್ಟು ಮುಖ್ಯವೋ, ನಮಗೆ ಒಗ್ಗದ ಅಥವಾ ಹೊರೆಯಾಗಿ ಪರಿಣಮಿಸುವ ಕಾರ್ಯ‘ಭಾರ’ಗಳು(!) ಎದುರಾದಾಗ ‘ನೋ’ ಎನ್ನು ವುದೂ ಅಷ್ಟೇ ಮುಖ್ಯವಾಗುತ್ತದೆ. ಬೇಡದಿರುವ ಸಂಗತಿಗಳಿಗೆ, ಇಷ್ಟವಿಲ್ಲದ ವಿಷಯ ಗಳಿಗೆ ನೇರವಾಗಿ ‘ನೋ’ ಅನ್ನಬೇಕು.

ನೀವೊಂದು ಹೊಸ ಕಾರು ಕೊಂಡುಕೊಂಡಿದ್ದೀರಿ. ಅದು ದೊಡ್ಡ ಕಾರು. ಇನ್ನೂ ಒಂದು ತಿಂಗಳಾ ಗಿಲ್ಲ. ನೀವಿನ್ನೂ ಲಾಂಗ್ ಡ್ರೈವ್ ಹೋಗಿಲ್ಲ. ಅಷ್ಟರ ನಿಮ್ಮ ಒಬ್ಬ ಗೆಳೆಯರೋ ಅಥವಾ ಸಂಬಂಧಿ ಕರೋ ಬಂದು, “ನಿಮ್ಮ ಹೊಸ ಕಾರು ಬೇಕು, ಎರಡು ದಿನ ಕುಟುಂಬದೊಂದಿಗೆ ಪಿಕ್ನಿಕ್ ಹೋಗ ಬೇಕು" ಎನ್ನುತ್ತಾರೆ. ನಿಮಗೆ ಕೊಡಲು ಮನಸ್ಸಿಲ್ಲ. ಎಲ್ಲಿ ಸಂಬಂಧ ಹಾಳಾಗುತ್ತೋ ಎಂಬ ಗ್ರಹಿಕೆಯಲ್ಲಿ ‘ಇಲ್ಲ’ ಎನ್ನಲು ಹಿಂಜರಿಯುತ್ತೀರಿ.

ಇನ್ನೊಂದು ಪ್ರಸಂಗ: ನೀವು ಹೊಸ ಮನೆಯೊಂದನ್ನು ಕೊಂಡುಕೊಳ್ಳುತ್ತೀರಿ ಅಥವಾ ಕಟ್ಟಿಸು ತ್ತೀರಿ. ನಂತರ, ಹಳೆಯ ಮನೆಯನ್ನು ಬಾಡಿಗೆಗೆ ಕೊಟ್ಟು, ಹೊಸ ಮನೆಗೆ ಆದ ಖರ್ಚನ್ನು ಹೊಂದಿಸಿ ಕೊಳ್ಳಲು ನಿರ್ಧಾರ ಮಾಡುತ್ತೀರಿ. ಅಷ್ಟರಲ್ಲೇ ನಿಮ್ಮ ಸಂಬಂಧಿಕರು ಆ ಹಳೆಯ ಮನೆಯ ಮೇಲೆ ಕಣ್ಣು ಹಾಕುತ್ತಾರೆ, ತಮಗೇ ಬಿಟ್ಟು ಕೊಡುವಂತೆ ಪರೋಕ್ಷವಾಗಿ ಆಗ್ರಹಿಸುತ್ತಾರೆ. ‘ಕೊಡಲಾಗುವು ದಿಲ್ಲ’ ಎಂದು ಹೇಳಲು ಸಾಧ್ಯವಾಗದೇ ತೊಳಲಾಡುತ್ತೀರಿ.

ಮೇಲಿನವು ವೈಯಕ್ತಿಕ ನೆಲೆಯ ಸಂಗತಿಗಳಾದವು. ಇನ್ನು ಕಾರ್ಯಕ್ಷೇತ್ರದ ವಲಯಕ್ಕೆ ಬಂದರೆ, ಆಫೀಸಿನಲ್ಲಿ ಬಾಸ್ ಕೊಡುವ ಅತಿರೇಕದ ಪ್ರಮಾಣದ ಕೆಲಸವನ್ನು ನಿರಾಕರಿಸಲಾಗದೆ ಒದ್ದಾಡು ವವರು ಹಲವಾರು ಜನ. ಸರಕಾರಿ ಕೆಲಸವಿರಲಿ ಅಥವಾ ಖಾಸಗಿ ಕಂಪನಿಯ ಕೆಲಸವಿರಲಿ, ಉತ್ತಮ ವಾಗಿ ಕೆಲಸ ಮಾಡುವರಿಗೇ ಇನ್ನಷ್ಟು ಕೆಲಸವನ್ನು ಹಚ್ಚುವುದು ಹೊಸತೇನಲ್ಲ.

Ganapathi V A

ಕೆಲಸಗಳ್ಳರು ಆರಾಮಾಗಿದ್ದರೆ, ಉತ್ತಮವಾಗಿ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಹೀಗೆ ಇನ್ನಷ್ಟು ಹೊರೆ ಹೊರಬೇಕಾದಂಥ ಅನಿವಾರ್ಯತೆ. ಮಿತಿಗಿಂತ ಅಥವಾ ಸಹಜ ಸಾಮರ್ಥ್ಯ ಕ್ಕಿಂತ ಜಾಸ್ತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರ ಪ್ರಯುಕ್ತ ಊಟ-ನಿದ್ರೆಯನ್ನು ಸರಿಯಾಗಿ ಮಾಡಲಾಗದೇ (ಅಂದರೆ ಅದಕ್ಕೆ ಸಮಯ ಸಿಗದೇ), ಅವರಿವರ ಮೇಲೆ ರೇಗಾಡುವಂಥ ಚಿತ್ತಸ್ಥಿತಿ ಇಂಥ ಕೆಲಸಗಾರರಲ್ಲಿ ರೂಪುಗೊಳ್ಳಬಹುದು ಮತ್ತು ಅದಕ್ಕೆ ಪ್ರತಿಯಾಗಿ ಮನೆಯವರಿಂದಲೂ ಅಸಹನೆ ಎದುರಾಗಬಹುದು.

ಭಾರತೀಯ ಸಂಸ್ಕೃತಿಯಲ್ಲಿ ಬೆಳೆದ ನಮಗೆ, ಯಾರಿಗಾದರೂ ‘ಇಲ್ಲ’ ಎಂಬ ಉತ್ತರವನ್ನು ಹೇಳುವುದು ಕಷ್ಟವಾಗುತ್ತದೆ. ಏಕೆಂದರೆ, ಚಿಕ್ಕಂದಿನಿಂದಲೂ ನಮಗೆ, “ದೊಡ್ಡವರಿಗೆ ಗೌರವ ಕೊಡಬೇಕು, ಅವರ ಎದುರು ‘ಇಲ್ಲ’ ಅನ್ನಬಾರದು" ಎಂದು ಕಲಿಸಿರುತ್ತಾರೆ. ಅದು ಸಹಜ ಕೂಡ. ನಾನು ಗಮನಿಸಿದಂತೆ, 5-6 ವರ್ಷದ ಮಗು ತನಗೆ ಸರಿಯಿಲ್ಲ ಎನಿಸಿದ್ದನ್ನು ಸುಲಭವಾಗಿ ಮತ್ತು ಸ್ಪಷ್ಟವಾಗಿ ‘ಇಲ್ಲ’, ‘ಬೇಡ’ ಎಂದು ಹೇಳುತ್ತದೆ. ಆ ಮಗು ದೊಡ್ಡದಾದಂತೆ ಈ ಗುಣ ಮಾಯವಾಗಿ ‘ಇಲ್ಲ’ ಎನ್ನಲು ತಡವರಿಸುತ್ತದೆ!

‘ನಾವು ಎಲ್ಲರಿಗೂ ಇಷ್ಟವಾಗಬೇಕು’ ಎಂಬ ಆಸೆ, ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಎಂಬ ಮನೋ ಭಾವನೆ ಮತ್ತು ಬೇರೆಯವರು ಏನಂದುಕೊಳ್ಳುತ್ತಾರೋ ಎಂಬ ಭಯದಿಂದಾಗಿ ‘ಇಲ್ಲ’ ಎಂಬ ಪದವನ್ನು ಹೇಳುವುದು ಕಷ್ಟವಾಗುತ್ತದೆ. ‘ಇಲ್ಲ’ ಎನ್ನಬೇಕಾದ ಪರಿಸ್ಥಿತಿಯಲ್ಲಿ ‘ಹೌದು’ ಎಂದಾಗ, ಅದು ದೀರ್ಘಕಾಲೀನ ಸ್ಥಿತಿಯಲ್ಲಿ ನಮ್ಮಲ್ಲಿ ಮಾನಸಿಕ ಒತ್ತಡವನ್ನು ಹುಟ್ಟುಹಾಕುತ್ತದೆ; ಮಾತ್ರ ವಲ್ಲದೆ, ನಮ್ಮಲ್ಲಿ ಋಣಾತ್ಮಕ ಶಕ್ತಿಯನ್ನು ಸೃಷ್ಟಿಸಿ, ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಇದನ್ನೂ ಓದಿ: Ganapathi V Avadhani Column: ಪ್ರತಿಭಾ ಪಲಾಯನ ನಿಲ್ಲಲಿ, ದೇಶದ ಯುವಶಕ್ತಿ ಗೆಲ್ಲಲಿ

ಸಕ್ಕರೆ ಕಾಯಿಲೆ, ರಕ್ತದೊತ್ತಡ, ಬೆನ್ನುನೋವು ಕಾಣಿಸಿಕೊಳ್ಳುವುದು, ಸಿಟ್ಟು ಜಾಸ್ತಿ ಬರುವುದು, ನಿದ್ರೆ ಬಾರದಿರುವುದು ಮುಂತಾದ ಲಕ್ಷಣಗಳ ಮೂಲಕ ಇದು ವ್ಯಕ್ತವಾಗಬಹುದು. ‘ಇಲ್ಲ’ ಎಂದು ಹೇಳುವುದು ಅನೇಕರಿಗೆ ಸುಲಭವಲ್ಲ. ‘ಇಲ್ಲ, ಸಾಧ್ಯವಿಲ್ಲ, ಗೊತ್ತಿಲ್ಲ, ಮಾಡುವುದಿಲ್ಲ, ಆಗುವುದಿಲ್ಲ’ ಇವನ್ನೆಲ್ಲ ನಕಾರಾತ್ಮಕ ಪದಗಳೆಂದು ನಾವು ಪರಿಗಣಿಸುತ್ತೇವೆ.

ನಾನು ‘ಇಲ್ಲ’ ಅಂದರೆ ಅವರು ನನ್ನ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಾರೇನೋ ಎಂಬ ಭಯ. ನಿರಾಕರಿಸಿದ ನಂತರ ‘ನಾನು ತಪ್ಪು ಮಾಡಿದ್ದೇನೆ’ ಎಂಬ ಅಂತರಂಗದ ಒತ್ತಡ. ‘ಇಲ್ಲ’ ಎಂದರೆ ಸ್ನೇಹ, ಕೌಟುಂಬಿಕ ಅಥವಾ ವೃತ್ತಿಪರ ಸಂಬಂಧ ಹಾಳಾಗಬಹುದು ಎಂಬ ಆತಂಕ. ಸಮಾಜ ನಮ್ಮನ್ನು ಕೆಟ್ಟದಾಗಿ ನೋಡುತ್ತದೇನೋ ಎಂಬ ಗೊಂದಲ. ಆದರೆ, ‘ಇಲ್ಲ’ ಎನ್ನುವುದನ್ನು ಬಳಸದೇ ದಿಢೀರನೆ ‘ಹೌದು’ ಅನ್ನುವುದರಿಂದಲೇ ಬದುಕಿನಲ್ಲಿ ಶೇ.50ಕ್ಕೂ ಹೆಚ್ಚು ಬಿಕ್ಕಟ್ಟುಗಳು ಉದ್ಭವವಾಗುತ್ತವೆ, ಕಷ್ಟಗಳು ಎದುರಾಗುತ್ತವೆ ಎಂಬುದನ್ನು ಅರಿಯಬೇಕು.

ಕಾರಣ, ‘ಇಲ್ಲ’ ಎಂಬ ಪ್ರತಿಸ್ಪಂದನೆಯು ಅಸಹಕಾರವಲ್ಲ, ಅದು ಆತ್ಮ ಸಂರಕ್ಷಣೆಯ ಒಂದು ರೂಪ. ಹಾಗೆ ನಿರಾಕರಿಸಿದೆವು ಎಂದ ಮಾತ್ರಕ್ಕೆ ನಾವು ಅಸಹಕಾರಿಯಾಗಿದ್ದೇವೆ ಎಂದು ಅರ್ಥವಲ್ಲ. ಅದು ನಮ್ಮ ಮೌಲ್ಯಗಳು, ಗುರಿಗಳು, ನಮ್ಮ ಸಂತೋಷ ಮತ್ತು ಆರೋಗ್ಯವನ್ನು ಕಾಪಾಡುವ ಒಂದು ಕ್ರಮವಷ್ಟೇ.

ಅಂಥದೊಂದು ‘ಪ್ರತ್ಯುತ್ತರ’ವು ನಮ್ಮ ವ್ಯಕ್ತಿತ್ವವನ್ನು ಬಲಪಡಿಸುತ್ತದೆ. 30 ಕೆ.ಜಿ. ಹೊರುವವನನ್ನು 35 ಕೆ.ಜಿ. ಹೊರಲು ಹೇಳಿದರೆ ಹೊರಬಹುದು; 40 ಕೆ.ಜಿ. ಹೊರು ಅಂದರೆ ಅದು ಹೇಗೋ ಒಮ್ಮೆ ಪ್ರಯಾಸಪಟ್ಟು ಹೊರಬಹುದು. ಆದರೆ 60 ಕೆ.ಜಿ. ಹೊರು ಅಂದರೆ ಅದು ಸಾಧ್ಯವಿಲ್ಲ. ಅಂಥ ಪರಿಸ್ಥಿತಿ ಬಂದರೆ ‘ಇಲ್ಲ’ ಎಂದೇ ಹೇಳಬೇಕು.

ಇಲ್ಲದಿದ್ದರೆ ಕಷ್ಟ ತಪ್ಪಿದ್ದಲ್ಲ. ಕೆಲಸದ ಸ್ಥಳದಲ್ಲಿ ನಮಗೆ ಮಾಡಲು ಸಾಧ್ಯವಾಗದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದಾಗ, ‘ಈಗಿನ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೇ ಸಮಯ ಬೇಕು, ಹೊಸದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ಹೇಳಬೇಕು. ಜೀವನದಲ್ಲಿ ಒಳ್ಳೆಯ ಅವಕಾಶಗಳು ಬಂದಾಗ ‘ಎಸ್’ ಅಂತಹೇಳುವುದು ಎಷ್ಟು ಮುಖ್ಯವೋ, ನಮಗೆ ಒಗ್ಗದ ಅಥವಾ ಹೊರೆಯಾಗಿ ಪರಿಣಮಿಸುವ ಕಾರ್ಯ‘ಭಾರ’ಗಳು(!) ಎದುರು ನಿಂತಾಗ ‘ನೋ’ ಅಂತ ಹೇಳುವುದೂ ಅಷ್ಟೇ ಮುಖ್ಯವಾಗುತ್ತದೆ.

ಬೇಡದಿರುವ ಸಂಗತಿಗಳಿಗೆ, ಇಷ್ಟವಿಲ್ಲದ ವಿಷಯಗಳಿಗೆ ನೇರವಾಗಿ ‘ನೋ’ ಅನ್ನಲು ಕಲಿಯಬೇಕು. ಜತೆಗೆ, ಇಷ್ಟವಿಲ್ಲದ ವಸ್ತು/ವ್ಯಕ್ತಿಗಳಿಗೂ ‘ನೋ’ ಎಂದು ಹೇಳುವುದನ್ನೂ ಅಭ್ಯಾಸ ಮಾಡಿ ಕೊಳ್ಳಬೇಕು. ಯಾವುದೇ ‘ಸಂವಹನ-ಸಾಂಗತ್ಯ-ಚಟುವಟಿಕೆ’ ಇತ್ಯಾದಿಗಳಿಂದ ನಾವೇ ಖುಷಿ ಯಾಗಿರದಿದ್ದರೆ, ನಮ್ಮಲ್ಲಿ ಏನು ಸಾಮರ್ಥ್ಯವಿದ್ದು ಏನು ಪ್ರಯೋಜನ ಹೇಳಿ? ‘ಹೌದು’ ಎನ್ನುವುದು ಸುಲಭವೇ.

ಆದರೆ ಕೆಲವೊಮ್ಮೆ, ‘ಹೌದು’ ಅನ್ನುವುದಕ್ಕಿಂತ ‘ಇಲ್ಲ’ ಅನ್ನುವುದೇ ಸಂಬಂಧವನ್ನು ಉಳಿಸುವ ಮಾರ್ಗೋಪಾಯವೂ ಆಗುತ್ತದೆ. ಏಕೆಂದರೆ ‘ಅಂತ್ಯ ನಿಷ್ಠುರಕ್ಕಿಂತ, ಆದಿ ನಿಷ್ಠುರ ಲೇಸು’ ಅಲ್ಲವೇ? ಆದರೆ ಹಾಗೆ ‘ಇಲ್ಲ’ ಎಂದು ಹೇಳುವುದೂ ಒಂದು ‘ಸಂವಹನ ಕಲೆ’. ಅದು ನಾಯಕತ್ವದ ಕಲೆಯೂ ಹೌದು. ನಾವು ‘ಇಲ್ಲ’ ಎಂದು ನೀಡುವ ಉತ್ತರವು ಮತ್ತೊಬ್ಬರ ಮುಖಕ್ಕೆ ಹೊಡೆದಂತೆ ಇರ ಬಾರದು, ಅವರನ್ನು ‘ಕನ್ವಿನ್ಸ್’ ಮಾಡುವ ರೀತಿಯಲ್ಲಿರಬೇಕು.

‘ಇಲ್ಲ’ ಎನ್ನಬೇಕಾದ ಪರಿಸ್ಥಿತಿಯಲ್ಲಿ ಹಾಗೆ ಹೇಳದೇ ಹೋದರೆ, ಶಾರೀರಿಕ ಮತ್ತು ಮಾನಸಿಕ ಒತ್ತಡ ಉಂಟಾಗಬಹುದು. ಸ್ವಂತ ಸಮಯ, ಗುರಿ ಮತ್ತು ಜೀವನದ ಆದ್ಯತೆಗಳನ್ನು ತ್ಯಜಿಸಬೇಕಾದ ಪರಿಸ್ಥಿತಿ ಬರಬಹುದು. ನಿರಾಕರಿಸದ ಕಾರಣದಿಂದಾಗಿ ಅಸಹನೆ ಉಂಟಾಗಬಹುದು. ‘ಇವರು ಹೇಳಿದ್ದಕ್ಕೆಲ್ಲಾ ಯಾವಾಗಲೂ ಒಪ್ಪಿಕೊಳ್ಳುತ್ತಾರೆ’ ಎಂಬ ಭಾವನೆ ಅಥವಾ ‘ಟೇಕನ್ ಫಾರ್ ಗ್ರ್ಯಾಂಟೆಡ್’ ರೀತಿಯ ಧೋರಣೆ ಇತರರಲ್ಲಿ ಬೆಳೆದು, ಅದು ನಮ್ಮ ಮೇಲೆ ಇನ್ನಷ್ಟು ಒತ್ತಡ ಬೀಳುವುದಕ್ಕೆ ಕಾರಣ ವಾಗಬಹುದು.

ಎಲ್ಲದಕ್ಕೂ ‘ಎಸ್’ ಎನ್ನುತ್ತಾ, ಎಲ್ಲವನ್ನೂ ತಲೆಯ ಮೇಲೆ ಹಾಕಿಕೊಳ್ಳುವ ಮನುಷ್ಯ ಕುಸಿದು ಹೋಗುತ್ತಾನೆ, ದಣಿವು ಮತ್ತು ಒತ್ತಡದಿಂದ ಸೋತುಹೋಗುತ್ತಾನೆ. ತನ್ನ ಸಹಜ ಸಾಮರ್ಥ್ಯ ಕ್ಕಿಂತಲೂ, ಮಿತಿಗಿಂತಲೂ ಹೆಚ್ಚಿನ ಕೆಲಸಗಳನ್ನು ಗಂಟುಹಾಕಿಕೊಂಡವನು ‘ಮೂರ್ಖ’ ಎನಿಸಿಕೊಳ್ಳುತ್ತಾನೆ.

ಆದರೆ ವಿವೇಕಿಯಾದವನು ತನ್ನ ಸಾಮರ್ಥ್ಯವನ್ನು ಅರಿತು, ಅದಕ್ಕೆ ತಕ್ಕನಾಗಿ ಕೆಲಸ-ಕಾರ್ಯ ಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಾನೆ. ಬೇರೆಯವರಿಗೆ ಸಹಾಯ ಮಾಡುವುದು ಖಂಡಿತ ಒಳ್ಳೆಯದು. ಆದರೆ ಅದಕ್ಕೂ ಒಂದು ಮಿತಿ ಇರಬೇಕು. ಅದರಲ್ಲೂ ನಿರ್ದಿಷ್ಟವಾಗಿ, ಪುಕ್ಕಟೆಯಾಗಿ ಮಾಡುವ ಸಹಾಯಕ್ಕೆ ಅನೇಕ ಸಂದರ್ಭಗಳಲ್ಲಿ ಬೆಲೆ ಇರುವುದಿಲ್ಲ. ಅಪಾತ್ರರಿಗೆ ದಾನ ಮಾಡುವುದು ಅಥವಾ ನೆರವಾಗುವುದು ತರವಲ್ಲ. ಅದರಿಂದ ಏನೂ ಲಾಭವಿಲ್ಲ.

ಕೆಲವು ಸಂದರ್ಭಗಳಲ್ಲಿ ಮಾಡುವ ಸಹಾಯ ಸರಿ; ಆದರೆ ಪ್ರತಿ ಸಲವೂ ಅದು ಅಭ್ಯಾಸ ವಾಗಬಾರದು. ಯಾವಾಗಲೂ ಎಲ್ಲರ ನಿರೀಕ್ಷೆಗಳನ್ನು ಪೂರೈಸುವುದು ಅಸಾಧ್ಯ. ಅಷ್ಟಕ್ಕೂ, ಈ ಜಗತ್ತಿನಲ್ಲಿ ಅತ್ಯಂತ ಒಳ್ಳೆಯವರ ತರಹ ಕಾಣಿಸಿಕೊಂಡು ಸಾಧಿಸಬೇಕಾದ್ದು ಅಥವಾ ದಾಖಲೆ ಬರೆಯುವಂಥದ್ದು ಏನಿದೆ ಎಂದು ನಾವು ವಿಚಾರ ಮಾಡಬೇಕು. ‘ಇಲ್ಲ’ ಎನ್ನುವುದೊಂದು ಪೂರ್ಣವಾಕ್ಯ, ಇದಕ್ಕೆ ವಿವರಣೆ, ಸ್ಪಷ್ಟೀಕರಣಗಳ ಅವಶ್ಯಕತೆಯಿಲ್ಲ.

ಕ್ಷಮೆಯನ್ನು ಕೋರುವ ಅಗತ್ಯವೂ ಇಲ್ಲ. ‘ಇಲ್ಲ’ ಎಂಬುದು ಕೇವಲ ನಿರಾಕರಣೆ ಅಷ್ಟೇ. ನಿರಾಕರಣೆಗೆ ನಮ್ಮ ಮನಸ್ಸು ಸಮ್ಮತಿಸಿದೆ ಅಂದರೆ ತೊಂದರೆಯಿಲ್ಲ; ಆದರೆ ‘ಇಲ್ಲ’ ಎನ್ನುವಲ್ಲಿ ನಮ್ಮಲ್ಲಿ ಗೊಂದಲಗಳು ಇರಬಾರದು. ‘ಇಲ್ಲ’ ಎನ್ನುವುದನ್ನು ಕಠಿಣವಾಗಿ ಹೇಳುವ ಅಗತ್ಯವಿಲ್ಲ, ಆದರೆ ಅದನ್ನು ಸ್ಪಷ್ಟವಾಗಿ, ನೇರವಾಗಿ, ಆತ್ಮವಿಶ್ವಾಸದಿಂದ ಹೇಳಬೇಕು.

ಅಷ್ಟಕ್ಕೂ, ‘ಇಲ್ಲ’ ಎನ್ನುವುದು ಒಂದು ಶಕ್ತಿಶಾಲಿ ಪದ. ಅದರ ಬಳಕೆಯು ನಮ್ಮ ಆತ್ಮವಿಶ್ವಾಸಕ್ಕೆ, ಆತ್ಮಗೌರವಕ್ಕೆ ಮತ್ತು ಸಮತೋಲನದ ಜೀವನಕ್ಕೆ ದಾರಿ ತೋರಿಸುತ್ತದೆ. ಆದರೆ ಅದಕ್ಕೂ ಮೊದಲು ನಮ್ಮ ಆದ್ಯತೆಗಳು ಮತ್ತು ಗುರಿಗಳು ಸ್ಪಷ್ಟವಾಗಿರಬೇಕು. ನಮ್ಮ ಜೀವನದ ನಿಯಂತ್ರಣ ನಮ್ಮ ಕೈಯಲ್ಲೇ ಇರಬೇಕು. ‘ಹೌದು’ ಎಂದರೆ ಅವಕಾಶ, ‘ಇಲ್ಲ’ ಎಂದರೆ ನಮ್ಮ ಗಡಿಗಳ/ಮಿತಿಗಳ ಅರಿವು.

ಖZqsಜ್ಞಿಜ ಘೆಟ ಞಛಿZo qsಟ್ಠ hಟಡಿ qsಟ್ಠ್ಟ ಜಿಞಜಿಠಿo. ‘ಹೌದು’ ಮತ್ತು ‘ಇಲ್ಲ’ ಎರಡೂ ಸಮಾನವಾಗಿ ಮುಖ್ಯ. ನಾವೆಲ್ಲರೂ ಆಯಾ ಪರಿಸ್ಥಿತಿಗೆ ತಕ್ಕಂತೆ ‘ಹೌದು’ ಅಥವಾ ‘ಇಲ್ಲ’ ಎನ್ನುವುದನ್ನು ಕಲಿಯಬೇಕು, ಅಭ್ಯಾಸ ಮಾಡಬೇಕು. ಅದರಲ್ಲೂ ನಿರ್ದಿಷ್ಟವಾಗಿ ನಮಗೆ ಒಗ್ಗದ ಪ್ರಸ್ತಾವನೆ/ಹೊಣೆಗಾರಿಕೆ ಎದುರಾದಾಗ ‘ಇಲ್ಲ’ ಎನ್ನುವುದೇ ಹೆಚ್ಚು ಸೂಕ್ತ. ಅದು ನಮ್ಮ ಜೀವನವನ್ನು, ಆರೋಗ್ಯವನ್ನು ಇನ್ನಷ್ಟು ಸಮೃದ್ಧಗೊಳಿಸುತ್ತದೆ.

(ಲೇಖಕರು ಸಾಫ್ಟ್‌ ವೇರ್ ಕಂಪನಿಯೊಂದರಲ್ಲಿ ಸಹಾಯಕ ಉಪಾಧ್ಯಕ್ಷರು)