ಹಬ್ಬದ ಸನಿಹದಲ್ಲಿ ವೀಳ್ಯದೆಲೆ ಬೆಲೆ ಪಾತಾಳಕ್ಕೆ
ಕರ್ನಾಟಕದಲ್ಲಿ ಪ್ರತೀ ವರ್ಷ ಅಂದಾಜು 28.77 ಲಕ್ಷ ಹೆಕ್ಟರ್ ನಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ, ಹವಾಮಾನಕ್ಕನುಗುಣವಾಗಿ 20.62 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಪ್ರಸಕ್ತ ಸಾಲಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಉತ್ತಮ ದರ್ಜೆ ವೀಳ್ಯದೆಲೆ ಹೊರೆಯ ದರ 14000 ರು.ಗೂ ಏರಿತ್ತು, ಆದರೆ ಈಗ ಅದರ ಬೆಲೆ ಕೇವಲ 2000 ರು.ಗೆ ಕುಸಿದಿದೆ. ಅಂದರೆ ಒಂದು ಹೊರೆಗೆ 12 ಸಾವಿರ ರು. ಕಡಿಮೆಯಾಗಿದೆ.


ಹೂವಪ್ಪ. ಐ. ಹೆಚ್
ರಫ್ತು ಕುಸಿತ
ಇಳುವರಿ ದುಪ್ಪಟ್ಟು
ಒಂದು ಹೊರೆಯ ದರದಲ್ಲಿ 12 ಸಾವಿರ ರು. ಕುಸಿತ
ಬೆಂಗಳೂರು: ಸಾಲು ಸಾಲು ಹಬ್ಬಗಳು ಇನ್ನೇನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತಿದೆ. ಮುಂದಿನ ವಾರ ನಾಗರಪಂಚಮಿಯ ಸುದಿನದ ಬಳಿಕ ನಿರಂತರವಾಗಿ ಆ ಬಳಿಕ ಹಬ್ಬಗಳದ್ದೇ ಸುಗ್ಗಿ. ಹಬ್ಬಗಳ ಪೂಜೆಗಳಲ್ಲಿ ವೀಳ್ಯದೆಲೆಗಳಿಗೆ ಬಹಳ ಪ್ರಾಧಾನ್ಯತೆ ಇದೆ. ಇಂತಹ ಸುಸಮಯದಲ್ಲಿ ವೀಳ್ಯದೆಲೆಯ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಹಬ್ಬಗಳಲ್ಲಿ ವೀಳ್ಯದೆಲೆ ಬಳಸುವವರಿಗೆ, ಎಲೆ-ಅಡಿಕೆ ಅಗೆಯುವ ಗ್ರಾಹಕರಿಗೆ ಭಾರೀ ಸಂತಸ ಮತ್ತು ಖುಷಿಯಾಗಿದೆ.
ಆದರೆ ಕರ್ನಾಟಕದ ಗ್ರಾಮೀಣ ಭಾಗದ ರೈತರ ಪ್ರಮುಖ ಆದಾಯದ ಮೂಲವಾಗಿರುವ ವೀಳ್ಯ ದೆಲೆಯ ದರವು ದಿಢೀರನೆ ಕುಸಿದಿರುವುದರಿಂದ ಅಲ್ಲಿನ ರೈತರು ಕಂಗಾಲಾಗಿದ್ದಾರೆ. ಉತ್ತಮ ಮಳೆ ಹಾಗೂ ತೇವಾಂಶ ಹೆಚ್ಚಳದಿಂದಾಗಿ ಉತ್ತಮ ಫಸಲು ಕೈ ಸೇರಿದರೂ, ಬೆಲೆ ಪಾತಾಳಕ್ಕೆ ಇಳಿದಿರು ವುದರಿಂದ ರೈತರು ಭಾರೀ ನಷ್ಟದ ಸುಳಿಗೆ ಸಿಲುಕಿದ್ದಾರೆ.
ಹಾವೇರಿ, ಕೋಲಾರ, ದಾವಣಗೆರೆ, ಗದಗ, ಕೊಪ್ಪಳ, ಗಂಗಾವತಿ ಹಾಗೂ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಸಾವಿರಾರು ರೈತರು ವೀಳ್ಯದೆಲೆ ಬೆಳೆಯನ್ನೇ ಹೆಚ್ಚಾಗಿ ಅವಲಂಬಿಸಿ ದ್ದಾರೆ. ಇಳಿಕೆಯಾಗುತ್ತಿರುವ ಬೆಲೆ, ಏರಿಕೆಯ ಹಾದಿಗೆ ಮರಳುವ ಲಕ್ಷಣಗಳು ಕಾಣದಿರುವುದರಿಂದ ಅಲ್ಲಿನ ರೈತರು ಕಂಗಾಲಾಗಿ ತಮ್ಮ ತಲೆ ಮೇಲೆ ಕೈ ಇರಿಸಿ ಆಕಾಶ ನೋಡುವ ಪರಿಸ್ಥಿತಿ ಎದುರಿಸು ವಂತಾಗಿದೆ.
ಇದನ್ನೂ ಓದಿ:Roopa Gururaj Column: ನಾಗರ ಪಂಚಮಿ ಹಬ್ಬದ ಐತಿಹ್ಯ
ಕರ್ನಾಟಕದಲ್ಲಿ ಪ್ರತೀ ವರ್ಷ ಅಂದಾಜು 28.77 ಲಕ್ಷ ಹೆಕ್ಟರ್ ನಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ, ಹವಾಮಾನಕ್ಕನುಗುಣವಾಗಿ 20.62 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಪ್ರಸಕ್ತ ಸಾಲಿನ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಂದು ಉತ್ತಮ ದರ್ಜೆ ವೀಳ್ಯದೆಲೆ ಹೊರೆಯ ದರ 14000 ರು.ಗೂ ಏರಿತ್ತು, ಆದರೆ ಈಗ ಅದರ ಬೆಲೆ ಕೇವಲ 2000 ರು.ಗೆ ಕುಸಿದಿದೆ. ಅಂದರೆ ಒಂದು ಹೊರೆಗೆ 12 ಸಾವಿರ ರು. ಕಡಿಮೆಯಾಗಿದೆ. ಮೂಡಣ ದಿಕ್ಕಿನಿಂದ ಗಾಳಿ ಬೀಸುತ್ತಿದ್ದಾಗ ವೀಳ್ಯದೆಲೆ ಇಳುವರಿ ಕುಂಠಿತ ವಾಗುತ್ತದೆ, ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿ ಬೆಲೆ ಹೆಚ್ಚಾಗಿತ್ತು. ಈ ವರ್ಷ ಏಪ್ರಿಲ್ ಬಳಿಕ ಮಳೆ ಆರಂಭವಾಗಿದ್ದರಿಂದ ವೀಳ್ಯದೆಲೆಗೆ ಪೂರಕ ವಾತಾವರಣ ನಿರ್ಮಾಣ ವಾಗಿದ್ದು, ದುಪ್ಪಟ್ಟು ಬೆಳೆ ಬಂದಿದೆ, ಹೀಗಾಗಿ ಬೆಲೆ ಇಳಿಯುತ್ತ ಸಾಗಿತು.
ಜೂನ್-ಜುಲೈಯಲ್ಲಿ ಅದು ಕನಿಷ್ಠಕ್ಕೆ ದರ ತಲುಪಿ, ಪ್ರತಿ ಹೊರೆಗೆ ಮಾರುಕಟ್ಟೆಯಲ್ಲಿ 2000 ದರ ತಲುಪಿದೆ. ರೈತರಿಗೆ ಕನಿಷ್ಠ ಒಂದು ಪೆಂಡಿ ಎಲೆ ಒಕ್ಕಣೆ ಬಳಿಕ ಮಾರುಕಟ್ಟೆಗೆ ತಲುಪಿಸಲು ಸಾವಿರ ರೂ.ಖರ್ಚು ತಗುಲುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕನಿಷ್ಠ 2000 ರು. ವರೆಗೆ ಬೆಲೆ ಸಿಗುತ್ತಿರುವುದು ಅವರನ್ನು ಭಾರೀ ನಷ್ಟಕ್ಕೆ ದೂಡಿದಂತಾಗುತ್ತದೆ. ಇನ್ನು ಸಾಧಾರಣ ದರ್ಜೆ ವೀಳ್ಯದೆಲೆ ಕೇವಲ 1000 ರು. ರಿಂದ 1200 ರು.ಗೆ ಮಾರಾಟವಾಗುತ್ತಿದೆ. ಅತ್ಯಂತ ಉತ್ಕೃಷ್ಠ ಗುಣಮಟ್ಟದ ಒಂದೆರೆಡು ಪೆಂಡಿಗಳು ಮಾತ್ರ ಗರಿಷ್ಠ 2 ಸಾವಿರ ರು. ಬೆಲೆಗೆ ಮಾರಾಟವಾಗುತ್ತವೆ.
ಇದೇ ರೀತಿಯ ಕನಿಷ್ಟ ಬೆಲೆ ಸಿಕ್ಕರೆ ವೀಳ್ಯದೆಲೆ ಬೆಳೆಯಿಂದ ರೈತರು ವಿಮುಖರಾಗುವುದು ಸಹಜ ಎಂದು ಪೋಲೇನಹಳ್ಳಿ ರೈತ ಗೋವಿಂದಪ್ಪ ಅಳಲು ತೋಡಿಕೊಂಡರು. ಇತ್ತೀಚಿನ ದಿನಗಳಲ್ಲಿ ಹೈನುಗಾರಿಯ ಜೊತೆಗೆ, ರೈತರು 10 ಗುಂಟೆಯಿಂದ ಒಂದೂವರೆ ಎಕರೆ ವರೆಗೆ ವೀಳ್ಯದೆಲೆ ತೋಟ ವನ್ನು ಹೊಂದಿದ್ದಾರೆ. ಕಾಮಸಮುದ್ರ, ಬಂಗಾರಪೇಟೆ, ಬೂದಿಕೋಟೆ ಮತ್ತು ಆಂಧ್ರ ಪ್ರದೇಶದ ಕುಪ್ಪಂ, ತಮಿಳುನಾಡಿನ ವೆಪನಪೆಲ್ಲಿ ಮಾರುಕಟ್ಟೆಗೆ ಸಾಗಿಸುತ್ತಾರೆ.
ಖರ್ಚು ಮತ್ತು ಶ್ರಮ ಹೆಚ್ಚು
ವೀಳ್ಯದೆಲೆ ಬಳ್ಳಿಯ ಪೋಷಣೆಗೆ ಹೆಚ್ಚು ನಿಗಾ ವಹಿಸಬೇಕು, ನಿತ್ಯವೂ ತೋಟದಲ್ಲಿದ್ದು ಬಳ್ಳಿಯನ್ನು ಆರೈಕೆ ಮಾಡಬೇಕು. ಕಳೆ ತೆಗೆಯುವುದು, ಬಳ್ಳಿ ಕಟ್ಟುವುದು, ನೀರು ಹಾಯಿಸುವ ಕೆಲಸ ಪ್ರತೀದಿನ ಇರುತ್ತದೆ. ವೀಳ್ಯದೆಲೆ ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ದಿನವೊಂದಕ್ಕೆ 600 ರು. ಕೂಲಿ ನೀಡಬೇಕು. ಮಾರುಕಟ್ಟೆಯಲ್ಲಿ ಈಗಿನ ಸಿಗುವ ದರದಲ್ಲಿ ನಿರ್ವಹಣಾ ವೆಚ್ಚ ಕೂಡ ಸಿಗುತ್ತಿಲ್ಲ ಎಂಬ ಅಳಲು ಇದೀಗ ಹೆಚ್ಚಿನ ರೈತರದ್ದಾಗಿದೆ.
ದಿಢೀರ್ ರಫ್ತು ಕುಸಿತ
ಉತ್ತರ ಕರ್ನಾಟಕದಲ್ಲಿ ಬೆಳೆದ ವೀಳ್ಯದೆಲೆಗಳು ಪಂಜಾಬ್, ಮಧ್ಯಪ್ರದೇಶ, ಚಂಡೀಗಢ, ಸೇರಿದಂತೆ ಪಾಕ್ ಗಡಿಯಲ್ಲಿರುವ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಆದರೆ ಇದೀಗ ಪಾಕಿಸ್ತಾನ ಮತ್ತು ಭಾರತದ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂದಾಗಿ ಎರಡು ದೇಶಗಳ ನಡುವೆ ವ್ಯಾಪಾರ-ವಹಿ ವಾಟು ಸರಿಯಾಗಿ ನಡೆಯುತ್ತಿಲ್ಲ. ಹಾಗಾಗಿ ಸವಣೂರಿನ ವೀಳ್ಯದೆಲೆಗಳು ಮೊದಲಿನಂತೆ ಸಲೀಸಾಗಿ ರಫ್ತಾಗುತ್ತಿಲ್ಲ. ಇದರಿಂದಾಗಿ ವೀಳ್ಯದೆಲೆಗೆ ಬೇಡಿಕೆ ಇಲ್ಲದಂತಾಗಿದ್ದು, ದರವೂ ಸಹ ಪಾತಾಳಕ್ಕೆ ಕುಸಿದಿದೆ.
*
ಒಕ್ಕಣೆ, ಸಾಗಣೆ ವೆಚ್ಚ ಕಳೆದರೆ ವೀಳ್ಯದೆಲೆ ರೈತರು ಬರಿಗೈಲಿಯಲ್ಲಿ ಹಿಂದಿರುಗುವಂತಾಗಿದೆ. ಶ್ರಾವಣ ಬರುವವರೆಗೆ ಕಾಯುತ್ತೇವೆ. ಆಗಲಾದರೂ ಬೇಡಿಕೆ ಹೆಚ್ಚಾಗುತ್ತದೆಯೋ ಇಲ್ಲವೋ ನೋಡುತ್ತೇವೆ. ಈಗಂತೂ ಯಾಕಾದ್ರೂ ಎಲೆ ಕಟಾವು ಮಾಡೀವಿ ಎನ್ನುವಂತಾಗಿದೆ.
-ಲೋಕೇಶ್ ಬಸೆಟ್ಟಿ, ವೀಳ್ಯದೆಲೆ ಬೆಳೆಗಾರ, ಹಗರಿಬೊಮ್ಮನಹಳ್ಳಿ