ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

ನಗರದ ಪ್ರಮುಖ ವಲಯಗಳಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆಯನ್ನು ನಿಯಂತ್ರಿಸಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ 15 ಸ್ಲೂಯಿಸ್ ಗೇಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೆ, 7 ಗೇಟ್‌ಗಳ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದೆ. ಇನ್ನು ಒಂದು ಗೇಟ್ ಅಳವಡಿಕೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿದ್ದು, ಈ ಮೂಲಕ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸಲು ಪಾಲಿಕೆ ಕಾರ್ಯಪ್ರವೃತ್ತವಾಗಿದೆ

ಪ್ರವಾಹ ತಡೆಗೆ ಸ್ಲೂಯಿಸ್‌ ಗೇಟ್

Ashok Nayak Ashok Nayak Jul 21, 2025 3:31 PM

ಅಪರ್ಣಾ ಎ.ಎಸ್ ಬೆಂಗಳೂರು

ಈಗಾಗಲೇ 14 ಗೇಟ್ ಅಳವಡಿಕೆ, ಹೆಚ್ಚುವರಿ ಗೇಟ್ ಅಳವಡಿಸಲು ಚಿಂತನೆ

ರಾಜಧಾನಿಯಲ್ಲಿರುವ ಪ್ರವಾಹಪೀಡಿತ ಪ್ರದೇಶದಲ್ಲಿ ಗೇಟ್‌ಗಳ ಅಳವಡಿಕೆ

ಕೆಲ ಗಂಟೆಗಳ ಕಾಲ ನಗರದಲ್ಲಿ ಮಳೆ ಸುರಿದರೂ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಯಾಗುವ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಉದ್ದೇಶದಿಂದ ಬಿಬಿಎಂಪಿ ಸ್ಲೂಯಿಸ್ ಗೇಟ್‌ಗಳ ಮೊರೆ ಹೋಗಿದೆ. ನಗರದಲ್ಲಿ ಅತಿ ಹೆಚ್ಚು ಪ್ರವಾಹ ಕಾಣಿಸಿಕೊಳ್ಳುವ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಕೆರೆಗಳಿಂದ ಏಕಾಏಕಿ ಭಾರಿ ಪ್ರಮಾಣದ ನೀರು ಹೊರಬರುವುದನ್ನು ತಡೆಯುವ ಉದ್ದೇಶದಿಂದ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲು ತೀರ್ಮಾನಿಸಿರುವ ಬಿಬಿಂಎಪಿ ಯು ನಗರದ ಹಲವು ಕೆರೆಗಳಿಗೆ ಈಗಾಗಲೇ 15 ಭಾಗದಲ್ಲಿ ಗೇಟ್ ಅಳವಡಿಕೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಇನ್ನೂ 14 ಭಾಗದಲ್ಲಿ ಅಳವಡಿಕೆಗೆ ಪ್ರಸ್ತಾವನೆ ಸಜ್ಜಾಗಿದೆ.

ನಗರದ ಪ್ರಮುಖ ವಲಯಗಳಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆಯನ್ನು ನಿಯಂತ್ರಿಸಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ 15 ಸ್ಲೂಯಿಸ್ ಗೇಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೆ, 7 ಗೇಟ್‌ಗಳ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದೆ. ಇನ್ನು ಒಂದು ಗೇಟ್ ಅಳವಡಿಕೆಯ ಪ್ರಸ್ತಾವನೆ ಯನ್ನು ಸರಕಾರಕ್ಕೆ ಕಳುಹಿಸಿದ್ದು, ಈ ಮೂಲಕ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಒದಗಿಸಲು ಪಾಲಿಕೆ ಕಾರ್ಯಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಷ್ಟು ಅನುದಾನ ಬಿಡುಗಡೆ: ಪಾಲಿಕೆಯು ನಗರದ ಕೆರೆಗಳಿಂದ ನೀರು ಹೊರಹೋಗುವುದನ್ನು ನಿಯಂತ್ರಿಸುವುದು ಮತ್ತು ಭಾರೀ ಮಳೆಯಾದಾಗಲೆ ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಿಲುಕದಂತೆ ನೋಡಿಕೊಳ್ಳುವ ಉದ್ದೇಶದಿಂದ ಸ್ಲೂಯಿಸ್ ಗೇಟ್‌ಗಳ ಅಳವಡಿಕೆ ಮಾಡಲಾಗುತ್ತಿದೆ. ಈ ಯೋಜನೆ ಯನ್ನು ಬಿಬಿಎಂಪಿ ಕೆರೆ ವಿಭಾಗವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆಯಡಿ 38 ಕೆರೆಗಳಿಗೆ ಸ್ಲೂಯಿಸ್ ಗೇಟ್ ಗಳನ್ನು ಅಳವಡಿ ಸಲು ಮುಖ್ಯ ಆಯುಕ್ತರಿಂದ 14 ಕೋಟಿ ರುಗಳ ಅನುದಾನ ಕ್ಕಾಗಿ ಮನವಿ ಮಾಡಿತ್ತು. ಇದಕ್ಕೆ ಅನುಮೋದನೆ ಸಿಕ್ಕಿರುವುದರಿಂದ ಆರಂಭವಾಗಿ 15 ಗೇಟ್‌ಗಳನ್ನು ಅಳವಡಿಸಲಾಗಿದ್ದು, ಇನ್ನುಳಿದ ಗೇಟ್‌ಗಳನ್ನು ಶೀಘ್ರವೇ ಅಳವಡಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: Kiran Upadhyay Column: ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್

ಎಲ್ಲೆಲ್ಲಿ ಅಳವಡಿಕೆ ಕಾರ್ಯ?: ನಗರದ ಮಹದೇವಪುರ, ಬೊಮ್ಮನಹಳ್ಳಿವಲಯ, ಯಲಹಂಕ, ದಕ್ಷಿಣ, ಆರ್‌ಆರ್‌ನಗರ, ಪೂರ್ವ ವಲಯಗಳಲ್ಲಿ ಸ್ಲೂಯಿಸ್ ಗೇಟ್‌ಗಳನ್ನು ಅಳವಡಿಸಲು ಬಿಬಿಎಂಪಿ ಮುಂದಾಗಿದೆ. ಇದರಲ್ಲಿ ಮಹದೇವಪುರ ವಲಯದ ನಲ್ಲೂರಹಳ್ಳಿ ಕೆರೆ, ದೊಡ್ಡ ನೆಕ್ಕುಂದಿ ಕೆರೆ, ಭೋಗನಹಳ್ಳಿ ಕೆರೆ, ರಾಂಪುರ ಕೆರೆ, ಹೊರಮಾವು ಜಯಂತಿ, ಕೌಡೇನಹಳ್ಳಿಯ ಕೆರೆಗಳಿಗೆ, ಬೊಮ್ಮನಹಳ್ಳಿ ವಲಯದ ಬೇಗೂರ್, ಯಲಹಂಕ ವಲಯದ ಅಮೃತಹಳ್ಳಿ, ರಾಚೇನ ಹಳ್ಳಿ, ಜಕ್ಕೂರು, ಸಿಂಗಾಪುರ,ನಾಗವಾರ ಕೆರೆಗಳಿಗೆ ಹಾಗೂ ದಕ್ಷಿಣ ವಲಯದ ಮೇಸಿಪಾಳ್ಯ ಕೆರೆ ಮತ್ತು ಆರ್.ಆರ್. ನಗರದ ಹಂದ್ರಹಳ್ಳಿ ಕೆರೆಗಳಿಗೆ ಗೇಟ್ ಅಳವಡಿಕೆ ಮಾಡಲಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.

ಯಲಹಂಕದ ದೊಡ್ಡ ಬೊಮ್ಮಸಂದ್ರ, ಬೊಮ್ಮನಹಳ್ಳಿಯ ಬೆರೆ ಟೆನಾ ಅಗ್ರಹಾರ, ಕೊಥಬುರ್, ಪರಪ್ಪನ ಅಗ್ರಹಾರ, ಮಹದೇವಪುರ ವಲಯದ ವೆಂಗೈ ಆಗ್ನಕೆರೆ, ಪೂರ್ವ ವಲಯದ ಕಗ್ಗದಾಸ ಪುರ ಕೆರೆಗಳಿಗೆ ಗೇಟ್ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದ್ದರೆ, ಪೂರ್ವ ವಲಯದ ಉಲ್ಸೂರ್ ಕೆರೆಗೆ ಸ್ಲೂಯಿಸ್ ಗೇಟ್ ಅಳವಡಿಕೆಗಾಗಿ ಪ್ರಸ್ತಾಚವನೆಯನ್ನು ಇಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಸ್ಲೂಯಿಸ್ ಗೇಟ್?

ಕೆರೆಗಳಲ್ಲಿ ನೀರಿನ ಹರಿವನ್ನು ನಿಯಂತ್ರಿಸಲು ಹಾಗೂ ಹರಿವಿನ ಪ್ರಮಾಣವನ್ನು ಕಡಿಮೆಗೊಳಿಸಲು ಅಳವಡಿಸಲಾಗುವ ನಿಯಂತ್ರಕ ಗೇಟ್ ಇದಾಗಿದೆ. ನೀರಿನ ಮಟ್ಟವನ್ನು ಈ ಗೇಟ್‌ನ ಎತ್ತರವನ್ನು ಬದಲಾಯಿಸುವ ಮೂಲಕ ನಿಯಂತ್ರಿಸಬಹುದಾಗಿದೆ. ಬೇಸಿಗೆಯಲ್ಲಿ ಕೆರೆಗಳು ಒಣಗದಂತೆ ನೋಡಿ ಕೊಳ್ಳಲು ಈ ಗೇಟ್‌ಗಳು ಸಹಾಯ ಮಾಡುತ್ತದೆ.

ಹೇಗೆ ಕಾರ್ಯನಿರ್ವಹಿಸಲಿದೆ?

ಸ್ಲೂಯಿಸ್ ಗೇಟ್‌ಗಳು ಆಟೋಮ್ಯಾಟಿಕ್ ಅಥವಾ ಮಾನ್ಯುಯೆಲ್ ಆಗಿ ಕಾರ್ಯ ನಿರ್ವಹಿಸಲಿದೆ. ನೀರಿನ ಹರಿವಿನ ಪ್ರಮಾಣವನ್ನು ನೋಡಿಕೊಂಡು ಗೇಟ್ ತೆರೆಯುವ ಮುಚ್ಚುವ ಕಾರ್ಯ ವಾಗುತ್ತದೆ. ಏಕಾಏಕಿ ನೀರು ಹರಿಯುವುದನ್ನು ತಪ್ಪಿಸಲು ಈ ಗೇಟ್‌ಗಳು ಸಹಕಾರಿ. ಸಾಮಾನ್ಯವಾಗಿ ಈ ಗೇಟ್‌ಗಳನ್ನು ತ್ಯಾಜ್ಯ ನಿರ್ವಹಣಾ ಘಟಕ, ಪ್ರವಾಹ ನೀರು ನಿರ್ವಹಣೆಗೆ ಬಳಸಲಾಗುತ್ತದೆ.