ಮುಡಾ ಅಕ್ರಮ ತನಿಖಾ ನಡೆ ಬಿಜೆಪಿ ಕಡೆ
ಇಡಿ (ಜಾರಿ ನಿರ್ದೇಶನಾಲಯ) ನೀಡಿರುವ ಮಧ್ಯಂತರ ತನಿಖಾ ವರದಿಯಲ್ಲಿ ಕೂಡ ಹಿಂದಿನ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಡಿರುವ ಅಕ್ರಮಗಳನ್ನು ಒತ್ತಿ ಹೇಳಲಾಗಿದೆ. ಇದನ್ನು ಸರಕಾರ ಈಗ ಗಂಭೀರವಾಗಿ ಪರಿಗಣಿಸಿದ್ದು ಇಡೀ ವರದಿಯನ್ನೇ ಆಧರಿಸಿ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿದ್ದ ಅಧಿಕಾರಿಗಳು ಮತ್ತು ಅಂದಿನ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮುಂದಾಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

-

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಹಿಂದಿನ ಅಕ್ರಮಗಳನ್ನು ಉಲ್ಲೇಖಿಸಿದ ತನಿಖಾ ಸಂಸ್ಥೆಗಳು, ಸರಕಾರದಿಂದ ತಿರುಮಂತ್ರ
ಬಹು ಚರ್ಚಿತ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮ ಕುರಿತು ಈ ವರೆಗಿನ ಎಲ್ಲಾ ತನಿಖೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿದ ನಂತರ ಸರಕಾರಕ್ಕೆ ಹೊಸ ಅಸ್ತ್ರ ಸಿಕ್ಕಿದೆ. ಅಂದರೆ ಮುಂದೆ ನಡೆಯಬೇಕಾದ ತನಿಖೆಗಳು ಹೊಸ ದಿಕ್ಕಿನ ಕಡೆ ನಡೆಯುವಂತಾಗಿದ್ದು, ಅದು ಬಿಜೆಪಿಗೆ ತಿರುಮಂತ್ರಿವಾಗುವ ಸಾಧ್ಯತೆ ಇದೆ.
ಮುಡಾ ಕುರಿತು ನಡೆಸಿರುವ ಎಲ್ಲಾ ತನಿಖೆಗಳಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವನ್ನು ತಳ್ಳಿ ಹಾಕಿದೆಯಾದರೂ ಎಲ್ಲಿಯೂ ಅಕ್ರಮ ನಡೆದಿಲ್ಲ ಎಂದು ಹೇಳಿಲ್ಲ. ಹಾಗೆಯೇ ನಡೆದಿರುವ ಎಲ್ಲಾ ಅಕ್ರಮವನ್ನು ಅಧಿಕಾರಿಗಳೇ ನಡೆಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿವೆ. ಅದರಲ್ಲೂ ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಬೊಟ್ಟು ಮಾಡಿ ಅಂದಿನ ಅಧ್ಯಕ್ಷರು ಮತ್ತು ಆಯುಕ್ತರು ಮುಡಾ ನಿಯಮಗಳು ಹಾಗೂ ಕಾನೂನು ಉಲ್ಲಂಘಿಸಿ ಮತ್ತು ಮುಡಾ ನಿಯಮ ಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ತನಿಖೆ ನಡೆಸಿ ರುವ ಹಾಗೂ ವಿಚಾರಣೆ ನಡೆಸಿರುವ ಸಂಸ್ಥೆಗಳು ಸ್ಪಷ್ಟವಾಗಿ ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ.
ಇದರೊಂದಿಗೆ ತನಿಖಾ ಸಂಸ್ಥೆಗಳು ವರದಿ ಸಲ್ಲಿಸಿ, ಅದನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿದ ಮಾತ್ರಕ್ಕೆ ಮುಡಾ ಅಕ್ರಮಗಳ ಅಧ್ಯಾಯ ಇಲ್ಲಿಗೆ ಮುಕ್ತಾಯವಾಗಿಲ್ಲ. ಬದಲಾಗಿ ಹಿಂದಿನ ಬಿಜೆಪಿ ಸರಕಾರದಲ್ಲಿದ್ದ ಅಧಿಕಾರಿಗಳು ಮತ್ತು ಅಧ್ಯಕ್ಷರನ್ನು ಗುರಿಯಾರಿಸಿ ತನಿಖೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಬೇಕಾದಂತಾಗಿದೆ.
ಇದನ್ನೂ ಓದಿ: MUDA sites: ಮುಡಾದ 63 ನಿವೇಶನಗಳನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಸಿಎಂ ಆದೇಶ
ಇದೆಲ್ಲರ ಮಧ್ಯೆ, ಇಡಿ (ಜಾರಿ ನಿರ್ದೇಶನಾಲಯ) ನೀಡಿರುವ ಮಧ್ಯಂತರ ತನಿಖಾ ವರದಿಯಲ್ಲಿ ಕೂಡ ಹಿಂದಿನ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಡಿರುವ ಅಕ್ರಮಗಳನ್ನು ಒತ್ತಿ ಹೇಳಲಾಗಿದೆ. ಇದನ್ನು ಸರಕಾರ ಈಗ ಗಂಭೀರವಾಗಿ ಪರಿಗಣಿಸಿದ್ದು ಇಡೀ ವರದಿಯನ್ನೇ ಆಧರಿಸಿ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿದ್ದ ಅಧಿಕಾರಿಗಳು ಮತ್ತು ಅಂದಿನ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮುಂದಾಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ಆದರೆ ಹಿಂದೆ ಅಕ್ರಮ ನಡೆಸಿದರು ಎನ್ನಲಾದ ಅನೇಕ ರಾಜಕೀಯ ಮುಖಂಡರು ಈಗ ಕಾಂಗ್ರೆಸ್ ಸೇರಿ ಆರೋಪಗಳಿಂದ ರಕ್ಷಣೆ ಪಡೆಯುತ್ತಿದ್ದು, ಇದು ಸರಕಾರಕ್ಕೆ ಕೊಂಚ ತಲೆನೋವಾಗಿದೆ ಎಂದು ಪಕ್ಷದ ಹಿರಿಯರೊಬ್ಬರು ಹೇಳಿದ್ದಾರೆ.
ಹಾಗಿದ್ದರೆ ಬಿಜೆಪಿ ಕಾಲ ಅಕ್ರಮವೇನು?: ಹಿಂದಿನ ಬಿಜೆಪಿ ಕಾಲದಲ್ಲಿದ್ದ ಅಧ್ಯಕ್ಷರು ಮತ್ತು ಅಧಿಕಾರಿ ಗಳು ಮುಡಾದಿಂದ ಬಡಾವಣೆಗಳನ್ನು ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬದಲು ಖಾಸಗಿ ಬಡಾವಣೆಗಳ ರಚನೆಗೆ ಒತ್ತು ನೀಡಿದ್ದರು ಎನ್ನುವ ಆರೋಪಗಳಿವೆ. ಆ ಖಾಸಗಿ ಬಡಾವಣೆ ಗಳು ಸರಕಾರಿ ಜಾಗಗಳನ್ನೇ ಒತ್ತುವರಿ ಮಾಡಿದ್ದರೂ ತನಿಖೆ ಮಾಡಿಸದೆ ಜಾಣಮೌನ ವಹಿಸಿದ್ದು ಹಾಗೂ ಈ ಖಾಸಗಿ ಬಡಾವಣೆಗಳಲ್ಲಿ ತಮ್ಮ ಪರೋಕ್ಷ ಪಾಲುದಾರಿಕೆಗಳನ್ನೂ ಹೊಂದಿರುವ ಬಗ್ಗೆ ತನಿಖಾ ವರದಿಗಳು ಶಂಕಿಸಿವೆ.
ಅದರಲ್ಲೂ ಗಂಗಾ ಎನ್ನುವ ಹೆಸರಿನಲ್ಲಿ ಸುಮಾರು 10 ಸಾವಿರ ನಿವೇಶನಗಳ ಖಾಸಗಿ ಬಡಾವಣೆ ನಿರ್ಮಿಸಿದ್ದು ಅದಕ್ಕೆ ಸರಕಾರಿ ಜಾಗವನ್ನೂ ಒತ್ತುವರಿ ಮಾಡಿರುವ ಆರೋಪಗಳೂ ಇವೆ. ಇನ್ನು ಇಲ್ಲಿನ ನಿವೇಶನಗಳಿಗೆ ಎನ್ಒಸಿ, ಖಾತೆ ಹಾಗೂ ಇತರ ದಾಖಲೆಗಳೂ ಸಿಗದಂತಾಗಿ ಕಚೇರಿಗಳಿಗೆ ಜನ ಅಲೆಯುವಂತಾಗಿದೆ. ಇದರ ಬಗ್ಗೆ ಹಿಂದಿನ ಆಯುಕ್ತರಾಗಿದ್ದ ನಟೇಶ್ ಅವರು ಸರಕಾರಕ್ಕೆ ಪತ್ರ ಬರೆದು ಅಕ್ರಮಗಳನ್ನು ವಿವರಿಸಿದ್ದರು ಕೂಡ. ಇಂಥ ಹತ್ತುಹಲವು ಅಕ್ರಮಗಳನ್ನು ಈವರೆಗೂ ತನಿಖೆ ನಡೆಸಿರುವ ಸಂಸ್ಥೆಗಳು ಉಲ್ಲೇಖಿಸಿರುವುದು ಸರಕಾರಕ್ಕೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.
ತನಿಖೆಗಳು ತೋರಿಸಿದ ಹೊಸ ದಾರಿ
ಮುಡಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ಏಕ ಸದಸ್ಯ ಆಯೋಗ ತನ್ನ ವರದಿ ಸಲ್ಲಿಸಿದ್ದು, ಅದರಲ್ಲಿ ಮುಖ್ಯಮಂತ್ರಿ ಹಾಗೂ ಅವರ ಕುಟುಂಬ ದವರಿಂದ ಯಾವುದೇ ಅಕ್ರಮಗಳಾಗಿಲ್ಲ ಎಂದು ಹೇಳಿದೆ. ಆದರೆ ಹಿಂದಿನ ಮುಡಾ ಅಧಿಕಾರಿಗಳು, ಅಧ್ಯಕ್ಷರು ಸ್ವಾಧೀನ ಮಾಡಿಕೊಳ್ಳದ ಭೂಮಿಯನ್ನು ಬಳಸುವಾಗ ಕಾನೂನು ಕ್ರಮ ಅನುಸರಿಸಿಲ್ಲ ಹಾಗೆಯ ಡಿನೋಟಿಫೈ ಮಾಡಿದ ಭೂಮಿ ಬಳಕೆಯಲ್ಲೂ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಹೇಳಲಾಗಿದೆ.
ಹಾಗೆಯೇ ಲೋಕಾಯುಕ್ತ ಎಸ್ಪಿ. ಉದೇಶ್ ನೇತೃತ್ವದ ತಂಡ ನಡೆಸಿದ ತನಿಖಾ ವರದಿಯಲ್ಲಿ ಕೂಡ ಮುಖ್ಯಮಂತ್ರಿ ಹಾಗೂ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿ, ಕೆಲವು ಹಂತದಲ್ಲಿ ಅಧಿಕಾರಿಗಳು ತಪ್ಪು ಮಾಡಿರುವುದನ್ನು ಉಲ್ಲೇಖಿಸಲಾಗಿದೆ. ಇನ್ನು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾ ಲಯ 2025ರ ಜೂನ್ 9ರಂದು ನಿರ್ದೇಶಕರಿಗೆ ನೀಡಿರುವ ಮಧ್ಯಂತರ ವರದಿಯಲ್ಲಿ ಕೂಡ ಹಿಂದಿನ ಅಧ್ಯಕ್ಷರು ಹಾಗೂ ಅಧಿಕಾರಿಗಳ ಅಕ್ರಮಗಳ ಬಗ್ಗೆ ಶಂಕಿಸಿರುವ ಅಂಶಗಳಿವೆ.
ಅಷ್ಟೇ ಅಲ್ಲದೆ, ಇಡಿ ವರದಿಯಲ್ಲಿ 390ಕ್ಕೂ ಹೆಚ್ಚು ನಿವೇಶನಗಳನ್ನು ಬ್ಲಾಕ್ ಮಾಡುವಂತೆ ಸೂಚಿ ಸಿದ್ದು, ಈ ನಿವೇಶನಗಳನ್ನು ಯಾವುದೇ ಕಾರಣಕ್ಕೂ ನೋಂದಣಿ ಮಾಡಿಸಬಾರದು, ಬೋಗ್ಯಕ್ಕೂ ನೀಡುವುದು, ಮಾರಾಟ ಮಾಡುವುದು, ಹಾಗೂ ಅಡಮಾನ ಇಡಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಹೀಗಾಗಿ ಹಿಂದಿನ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವ ಅನಿವಾರ್ಯ ಸರಕಾರಕ್ಕೆ ಎದುರಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ಮೂಲ ಗಳು ತಿಳಿಸಿವೆ.