ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹಾಡು ನಿಲ್ಲಿಸಿದ ʻಕೋಗಿಲೆʼ; ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

Singer S. Janaki: ಖ್ಯಾತ ಗಾಯಕಿ ಎಸ್‌.ಜಾನಕಿ ಅವರು (88) ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಶನಿವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಇವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48,000 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಸಿನಿರಸಿಕರನ್ನು ರಂಜಿಸಿದ್ದಾರೆ.

ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

-

Prabhakara R
Prabhakara R Jul 11, 2026 9:30 PM

ಬೆಂಗಳೂರು: ಖ್ಯಾತ ಗಾಯಕಿ ಎಸ್. ಜಾನಕಿ (singer S. Janaki) ಅವರ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯದ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17 ಭಾಷೆಗಳಲ್ಲಿ ತಮ್ಮ ಇಂಪಾದ ಕಂಠದ ಮೂಲಕ ಸಾವಿರಾರು ಹಾಡುಗಳನ್ನು ಹಾಡಿದ ಅವರ ಅಗಲಿಕೆ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ.

ಗಾಯನವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಮ್ಮನವರು, ಅವರ ಹಾಡುಗಳ ಮೂಲಕ ಸದಾ ಸಂಗೀತಪ್ರಿಯರ ಮನಸ್ಸಿನಲ್ಲಿ ಹಸಿರಾಗಿರುತ್ತಾರೆ. ಅವರ ಅಸಂಖ್ಯಾತ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ. ಓಂ ಶಾಂತಿ ಎಂದು ಸಿಎಂ ತಿಳಿಸಿದ್ದಾರೆ.



ಗಾನಕೋಗಿಲೆ, ಬಹುಭಾಷಾ ಗಾಯಕಿಯಾಗಿದ್ದ ಎಸ್. ಜಾನಕಿ ಅವರು ನಿಧನರಾದರು ಎಂಬ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು.

ಕನ್ನಡಿಗರಿಗೆ ಬಹು ಅಚ್ಚುಮೆಚ್ಚಿನ ಗಾಯಕಿ: ಎಚ್‌ಡಿಕೆ

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ತಮ್ಮ ಮಧುರ ಕಂಠದಿಂದ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್ ಗಾಯಕಿ ಎಸ್.ಜಾನಕಿ ಅವರು, ಕನ್ನಡಿಗರಿಗೆ ಬಹು ಅಚ್ಚುಮೆಚ್ಚಿನ ಗಾಯಕರಾಗಿದ್ದರು.

ಮೈಸೂರಿನಲ್ಲಿ ನೆಲೆಸಿದ್ದ ಅವರು ನಿಧನ ಗಾನಲೋಕದಲ್ಲಿ ಬಹುದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಆದರೂ ಅವರು ಬಿಟ್ಟು ಹೋಗಿರುವ ಸಂಗೀತ ಸಂಪತ್ತು ಅಮರ, ಅಜರಾಮರ. ಆ ಗಾನ ಸರಸ್ವತಿಯ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ಅವರ ಬಂಧುಗಳು ಮತ್ತು ಅಭಿಮಾನಿ ಹಿತೈಷಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೃದಯಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ತಿಳಿಸಿದ್ದಾರೆ.



ಕಲಾ ಜಗತ್ತಿಗೆ ತುಂಬಲಾರದ ನಷ್ಟ: ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ನಿಧನದ ಸುದ್ದಿ ನೋವುಂಟು ಮಾಡಿದೆ. ಕನ್ನಡ ಭಾಷೆಯೂ ಸೇರಿದಂತೆ 20 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ, 6 ದಶಕಗಳ ಕಾಲ‌ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗಾಗಿರುವ ತುಂಬಲಾರದ ನಷ್ಟ. ಜಾನಕಿಯಮ್ಮನವರ ಧ್ವನಿಯಿಲ್ಲದ ಚಿತ್ರಗಳೇ ಅಪರೂಪ ಎನ್ನುವ ಕಾಲವೊಂದಿತ್ತು, ಆ ಮಟ್ಟಿನ ಬೇಡಿಕೆಯನ್ನು ತಮ್ಮ ಅನನ್ಯ ಕಂಠದ ಮೂಲಕ ಸೃಷ್ಟಿಸಿದ್ದ ಸಂಗೀತಶಾರದೆಯ ವರಪುತ್ರಿ ಅವರು. ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ, ಅವರ ಕುಟುಂಬವರ್ಗ ಮತ್ತು ಕೋಟ್ಯಂತರ ಸಂಗೀತ ಪ್ರಿಯರಿಗೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

ಚಿತ್ರರಂಗದ ಸಂಗೀತ ಲೋಕಕ್ಕೆ ಅನನ್ಯ ಕೊಡುಗೆ: ವಿಜಯೇಂದ್ರ

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ತಮ್ಮ ಸುಮಧುರ ಹಾಗೂ ಅತಿ ವಿಶಿಷ್ಟವಾದ ಕೋಗಿಲೆ ಕಂಠದ ಮೂಲಕ ದಶಕಗಳ ಕಾಲ ಕೋಟ್ಯಂತರ ಸಂಗೀತ ಪ್ರೇಮಿಗಳ, ಚಲನಚಿತ್ರ ಅಭಿಮಾನಿಗಳ ಹೃದಯವನ್ನು ಆಳಿದ ಪ್ರಖ್ಯಾತ ಹಿನ್ನಲೆ ಗಾಯಕಿ, ಬಹುಭಾಷಾ ಸಂಗೀತ ತಪಸ್ವಿನಿ, ನಮ್ಮ ಹೆಮ್ಮೆಯ 'ಗಾನಕೋಗಿಲೆ' ಶ್ರೀಮತಿ ಎಸ್. ಜಾನಕಿ ಅಮ್ಮನವರು ವಿಧಿವಶರಾದ ಸುದ್ದಿ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ. ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಹಾಗೂ ಅಜರಾಮರ.



Singer S Janaki: ಗಾನ ಕೋಗಿಲೆ ಎಸ್.ಜಾನಕಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳಿವು!

ಅವರ ನಿಧನದಿಂದಾಗಿ ದೇಶದ ಸಂಗೀತ ಸಾಮ್ರಾಜ್ಯದ ಒಂದು ಮಹೋನ್ನತ ಸಾಧನೆಯ ಸುವರ್ಣ ಅಧ್ಯಾಯ ಅಂತ್ಯಗೊಂಡಂತಾಗಿದೆ, ಅದ್ಭುತ ಕಂಠಸಿರಿ ತನ್ನ ಅಸಾಧಾರಣ ಸಂಗೀತ ಸಾಧನೆಯನ್ನು ಮುಗಿಸಿದೆ. ಆ ದೇವರು ಪೂಜ್ಯ ಜಾನಕಿ ಅಮ್ಮನವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬಸ್ಥರು ಮತ್ತು ನಾಡಿನ ಲಕ್ಷಾಂತರ ಅಭಿಮಾನಿಗಳಿಗೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಹೇಳಿದ್ದಾರೆ.