Hamsalekha: ಓಂ ಪ್ರಕಾಶ್ ರಾವ್ ನಿರ್ದೇಶನದ ʼಫೀನಿಕ್ಸ್ʼ, ʼಗೆರಿಲ್ಲಾ ವಾರ್ʼ ಚಿತ್ರಗಳಿಗೆ ಹಂಸಲೇಖ ಸಂಗೀತ ಸಂಯೋಜನೆ
Hamsalekha: ಓಂ ಪ್ರಕಾಶ್ ರಾವ್ ನಿರ್ದೇಶನದ ʼಫೀನಿಕ್ಸ್ʼ ಹಾಗೂ ʼಗೆರಿಲ್ಲಾ ವಾರ್ʼ ಚಿತ್ರಗಳಿಗೆ ಕನ್ನಡ ಚಿತ್ರರಂಗದ ಲೆಜೆಂಡ್ ಸಂಗೀತ ನಿರ್ದೇಶಕ ಹಂಸಲೇಖ ಅವರು ಸಂಗೀತ ನೀಡಲಿದ್ದಾರೆ. ಇದು ಓಂ ಪ್ರಕಾಶ್ ರಾವ್ ನಿರ್ದೇಶನದ 49 ಹಾಗೂ 50ನೇ ಚಿತ್ರಗಳಾಗಿದೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ಕನ್ನಡ ಚಿತ್ರರಂಗದ ಲೆಜೆಂಡ್ ಸಂಗೀತ ನಿರ್ದೇಶಕ ಹಂಸಲೇಖ ಅವರು ಓಂ ಪ್ರಕಾಶ್ ರಾವ್ ನಿರ್ದೇಶನದ ʼಫೀನಿಕ್ಸ್ʼ (Phoenix Movie) ಹಾಗೂ ʼಗೆರಿಲ್ಲಾ ವಾರ್ʼ ಚಿತ್ರಗಳಿಗೆ (Guerrilla War movie) ಸಂಗೀತ ನೀಡಲಿದ್ದಾರೆ. ಇವು ಓಂ ಪ್ರಕಾಶ್ ರಾವ್ ನಿರ್ದೇಶನದ 49 ಹಾಗೂ 50ನೇ ಚಿತ್ರಗಳಾಗಿವೆ. ಈ ಬಗ್ಗೆ ನಿರ್ದೇಶಕ ಓಂಪ್ರಕಾಶ್ ರಾವ್ ಮಾಹಿತಿ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಅವರ ಕೊಡುಗೆ ಅಪಾರ. ಅವರಿಗೆ ಅವರೆ ಸಾಟಿ. ನನ್ನ ನಿರ್ದೇಶನದ ʼಲಾಕಪ್ ಡೆತ್ʼ, ʼಸಿಂಹದ ಮರಿʼ, ʼAK 47ʼ, ʼಪಾಳೆಗಾರʼ ಹೀಗೆ ಒಂದಕ್ಕಿಂತ ಒಂದು ಸೂಪರ್ ಹಿಟ್ ಚಿತ್ರಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟವರು ಗುರುಗಳಾದ ಹಂಸಲೇಖ ಅವರು. ಈಗ ನನ್ನ ನಿರ್ದೇಶನದ ʼಫೀನಿಕ್ಸ್ʼ ಹಾಗೂ ʼಗೆರಿಲ್ಲಾ ವಾರ್ʼ ಚಿತ್ರಗಳಿಗೂ ಹಂಸಲೇಖ ಅವರು ಸಂಗೀತ ಸಂಯೋಜಿಸಲು ಒಪ್ಪಿಕೊಂಡಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ನಿರ್ದೇಶಕ ಓಂಪ್ರಕಾಶ್ ರಾವ್ ತಿಳಿಸಿದ್ದಾರೆ.
ಈ ಪೈಕಿ ಚಿತ್ರೀಕರಣ ಮುಕ್ತಾಯ ಹಂತದಲ್ಲಿರುವ ʼಫೀನಿಕ್ಸ್ʼ ಚಿತ್ರವನ್ನು ಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ನಿರ್ಮಿಸುತ್ತಿದ್ದಾರೆ. ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ʼಗೆರಿಲ್ಲಾ ವಾರ್ʼ ಚಿತ್ರವನ್ನು ಎಂ.ಆರ್. ಟಾಕೀಸ್ ಲಾಂಛನದಲ್ಲಿ ನಯನ ಗೌಡ ಅವರು ನಿರ್ಮಿಸುತ್ತಿದ್ದು, ಮಂಡ್ಯ ಲೋಕಿ ನಾಯಕನಾಗಿ ಹಾಗೂ ನಿಮಿಕ ರತ್ನಾಕರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರವಾಗಿದ್ದು, ಆಗಸ್ಟ್ನಲ್ಲಿ ಆರಂಭವಾಗಲಿದೆ.
ಈ ಸುದ್ದಿಯನ್ನೂ ಓದಿ | LV Autorikshaw Handbag 2025: ಆಟೋರಿಕ್ಷಾ ಹ್ಯಾಂಡ್ಬ್ಯಾಗ್ ಅನಾವರಣಗೊಳಿಸಿದ ಲೂಯಿಸ್ ವ್ಯುಟನ್; ಬೆಲೆ ಕೇಳಿದ್ರೆ ದಂಗಾಗುತ್ತೀರಾ!