Sumona Chakravarti: ಮರಾಠ ಪ್ರತಿಭಟನಾಕಾರರ ವಿರುದ್ಧ ಪೋಸ್ಟ್ ಹಂಚಿಕೊಂಡು ಬಳಿಕ ಡಿಲೀಟ್ ಮಾಡಿದ ನಟಿ ಸುಮೋನಾ ಚಕ್ರವರ್ತಿ
ನಟಿ ಸುಮೋನಾ ಚಕ್ರವರ್ತಿ ಮರಾಠ ಪ್ರತಿಭಟನೆಯಿಂದಾಗಿ ದಕ್ಷಿಣ ಮುಂಬೈಯಲ್ಲಿ ತಾವು ಎದುರಿಸಿದ ಭಯಾನಕ ಅನುಭವದ ಬಗ್ಗೆ ಆಗಸ್ಟ್ 31ರಂದು ತಮ್ಮ ಇನ್ ಸ್ಟಾಗ್ರಾಮ್ನ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಹಂಚಿಕೊಂಡ ಒಂದೇ ದಿನಕ್ಕೆ ಅವರು ಅದನ್ನು ಡಿಲಿಟ್ ಮಾಡಿದ್ದಾರೆ.

Sumona Chakravarti -

ಮುಂಬೈ: ಹಿಂದಿ ಕಿರುತೆರೆ ಜನಪ್ರಿಯ ಕಾರ್ಯಕ್ರಮ ಕಪಿಲ್ ಶರ್ಮಾ ಶೋ ಮೂಲಕ ಖ್ಯಾತಿ ಪಡೆದ ನಟಿ ಸುಮೋನಾ ಚಕ್ರವರ್ತಿ (Sumona Chakravarti) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸಖತ್ ಕಾಮಿಡಿ ಮೂಲಕ ಜನರನ್ನು ರಂಜಿಸುವ ಸುಮೋನಾ ಚಕ್ರವರ್ತಿ ಸೋಶಿಯಲ್ ಮೀಡಿಯಾದಲ್ಲಿಬಹಳ ಆ್ಯಕ್ಟಿವ್ ಆಗಿರುತ್ತಾರೆ. ತಮ್ಮ ವೈಯಕ್ತಿಕ ಜೀವನ, ಲೈಫ್ ಸ್ಟೈಲ್, ವೃತ್ತಿ ಬದುಕಿನ ಬಗ್ಗೆ ಆಗಾಗ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅವರು ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಅಂತೆಯೇ ಈ ಬಾರಿ ಅವರು ಮರಾಠರ ಪ್ರತಿಭಟನೆಯಿಂದ ದಕ್ಷಿಣ ಮುಂಬೈಯಲ್ಲಿ ಎದುರಿಸಿದ್ದ ಭಯಾನಕ ಅನುಭವದ ಬಗ್ಗೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಪ್ರತಿಭಟನಾಕಾರರು ಅವರು ಸಂಚರಿಸುತ್ತಿದ್ದ ವಾಹನವನ್ನು ತಡೆಹಿಡಿದು ನಿಲ್ಲಿಸಿದ ಬಗ್ಗೆ ಪೋಸ್ಟ್ನಲ್ಲಿ ತಿಳಿಸಿದ್ದರು. ಇದೀಗ ಈ ಪೋಸ್ಟ್ ಅನ್ನು ಅವರು ಡಿಲಿಟ್ ಮಾಡಿದ್ದಾರೆ.
ನಟಿ ಸುಮೋನಾ ಚಕ್ರವರ್ತಿ ಮರಾಠ ಪ್ರತಿಭಟನೆಯಿಂದಾಗಿ ದಕ್ಷಿಣ ಮುಂಬೈನಲ್ಲಿ ತಾವು ಎದುರಿಸಿದ ಭಯಾನಕ ಅನುಭವದ ಬಗ್ಗೆ ಆಗಸ್ಟ್ 31ರಂದು ತಮ್ಮ ಇನ್ಸ್ಟಾಗ್ರಾಮ್ನ ಪೋಸ್ಟ್ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್ ಹಂಚಿಕೊಂಡ ಒಂದೇ ದಿನಕ್ಕೆ ಅವರು ಅದನ್ನು ಡಿಲೀಟ್ ಮಾಡಿದ್ದಾರೆ. ನಟಿ ಅದನ್ನು ಏಕೆ ಅಳಿಸಿದ್ದಾರೆ ಎಂಬುದನ್ನು ಎಲ್ಲಿಯೂ ಕೂಡ ಬಹಿರಂಗ ಪಡಿಸಿಲ್ಲ. ಅವರಿಗೆ ಏನಾದರು ಬೆದರಿಕೆ ಬಂದಿರಬಹುದೇ ಎಂಬ ಶಂಕೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತವಾಗಿದೆ.
ನಟಿ ಸುಮೋನಾ ಚಕ್ರವರ್ತಿ ಹಂಚಿಕೊಂಡ ಪೋಸ್ಟ್ನಲ್ಲಿ ಪ್ರತಿಭಟನಾಕಾರರು ತನ್ನನ್ನು ತಡೆದು ವಾಹನದ ಗ್ಲಾಸ್ ಬಡಿಯುತ್ತಾ ಜೈ ಮಹಾರಾಷ್ಟ್ರ ಎಂದು ಕೂಗುತ್ತಿದ್ದ ಬಗ್ಗೆ ಬರೆದುಕೊಂಡಿದ್ದರು. ʼʼಆಗಸ್ಟ್ 31ರ ಮಧ್ಯಾಹ್ನ 12.30ಕ್ಕೆ ನಾನು ಕೊಲಾಬಾದಿಂದ ಕೋಟೆ ಪ್ರದೇಶಕ್ಕೆ ತೆರಳುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಕಾರನ್ನು ಮಾರ್ಗ ಮಧ್ಯೆ ಪ್ರತಿಭಟನಾಕಾರರ ಗುಂಪೊಂದು ತಡೆ ಹಿಡಿದಿದೆ. ಕೆಲವೊಂದಿಷ್ಟು ಜನ ಕಾರಿನ ಕಿಟಕಿಗಳನ್ನು ಬಡಿಯುತ್ತಾ, ಜೈ ಮಹಾರಾಷ್ಟ್ರ ಎಂದು ಕೂಗುತ್ತ ನಗುತ್ತಿದ್ದರು. ನಾವು ಸ್ವಲ್ಪ ಮುಂದೆ ಸಾಗಿ ಅದೇ ವಿಷಯವನ್ನು ಮತ್ತೆ ಕಾರಿನಲ್ಲಿ ಚರ್ಚಿಸಿದೆವು. ಘಟನೆ ನಡೆದಾಗ ಪೊಲೀಸರು ಅಲ್ಲಿ ಇರಲಿಲ್ಲ. ಅನಂತರ ಸ್ವಲ್ಪ ದೂರದಲ್ಲಿ ಕೆಲವು ಪೊಲೀಸರನ್ನು ನೋಡಿದಾಗ ಅವರು ಕೂಡ ಕುಳಿತು ಹರಟೆ ಹೊಡೆಯುತ್ತಿದ್ದರುʼʼ ಎಂದು ಸುಮೋನಾ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ʼʼನಮ್ಮಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿ ಇಲ್ಲ. ಇಲ್ಲಿ ಹಗಲು ಹೊತ್ತಿನಲ್ಲಿ ಅಸುರಕ್ಷಿತ ಭಾವನೆ ಕಾಡಿದೆ. ಇಲ್ಲಿನ ಬೀದಿಗಳು ಸ್ವಚ್ಛತೆಯಿಂದ ಕೂಡಿಲ್ಲ. ಬಾಳೆಹಣ್ಣಿನ ಸಿಪ್ಪೆಗಳು, ಪ್ಲಾಸ್ಟಿಕ್ ಬಾಟಲಿ ಗಳು, ಹೊಲಸುಗಳಿಂದ ಈ ಬೀದಿ ಸ್ವಚ್ಛತೆಯನ್ನೇ ಮರೆತಿದೆ. ಪ್ರತಿಭಟನಾಕಾರರು ತಿನ್ನುತ್ತಿದ್ದಾರೆ, ಮಲಗುತ್ತಿದ್ದಾರೆ, ಸ್ನಾನ ಮಾಡುತ್ತಿದ್ದಾರೆ, ಅಡುಗೆ ಮಾಡುತ್ತಿದ್ದಾರೆ, ಮೂತ್ರ ವಿಸರ್ಜಿಸುತ್ತಿದ್ದಾರೆ, ಮಲ ವಿಸರ್ಜನೆ ಮಾಡುತ್ತಿದ್ದಾರೆ, ವಿಡಿಯೊ ಕರೆ ಮಾಡುತ್ತಿದ್ದಾರೆ, ರೀಲ್ಸ್ಗಳನ್ನು ಮಾಡುತ್ತಿದ್ದಾರೆ, ಪ್ರತಿಭಟನೆಯ ಹೆಸರಿನಲ್ಲಿ ಮುಂಬೈ ದರ್ಶನ ಮಾಡುತ್ತಿದ್ದಾರೆʼʼ ಎಂದು ಸುಮೋನಾ ಅಸಮಾಧಾನ ವ್ಯಕ್ತಪಡಿಸಿದ್ದರು.
ಸುಮೋನಾ ಪ್ರವಾಸದಲ್ಲಿಯೂ ಬಹಳ ಆಸಕ್ತಿ ಹೊಂದಿದ್ದು ಇತ್ತೀಚೆಗಷ್ಟೆ ಬಾಲಿಗೆ ತೆರಳಿದ್ದರು. ಅವರು ʼಖತ್ರೋಂ ಕೆ ಖಿಲಾಡಿ 14ʼ ಶೋದಲ್ಲಿ ಭಾಗವಹಿಸಿದ್ದರು.