SV Rajendrasingh Babu: ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷ ಪೂರ್ಣ: ಅ.23ರಿಂದ 5 ದಿನಗಳ ಕಾಲ ʼಎಸ್‌ವಿಆರ್ 50ʼ ಸಮಾರಂಭ
SVR 50 Ceremony: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶಕರಾಗಿ ಇದೇ ಅಕ್ಟೋಬರ್ ತಿಂಗಳಿಗೆ 50 ವರ್ಷಗಳಾಗಿದೆ. ಈ ಸಂಭ್ರಮವನ್ನು ಸಂಭಮಿಸಲು ಕನ್ನಡ ಚಿತ್ರರಂಗದಿಂದ ʼಎಸ್‌ವಿಆರ್ 50ʼ ಎಂಬ ಅದ್ದೂರಿ ಸಮಾರಂಭ ಆಯೋಜಿಸಿ ರಾಜೇಂದ್ರಸಿಂಗ್ ಬಾಬು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಿದೆ. ಅ.23ರಿಂದ ಐದು ದಿನಗಳ ಕಾಲ ಅದ್ಧೂರಿಯಾಗಿ ಈ ಸಮಾರಂಭ ನಡೆಯಲಿದೆ.

-

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು (SV Rajendrasingh Babu) ನಿರ್ದೇಶಕರಾಗಿ ಇದೇ ಅಕ್ಟೋಬರ್ ತಿಂಗಳಿಗೆ 50 ವರ್ಷಗಳಾಗಿದೆ. ಈ ಸಂಭ್ರಮವನ್ನು ಸಂಭಮಿಸಲು ಕನ್ನಡ ಚಿತ್ರರಂಗದಿಂದ ʼಎಸ್‌ವಿಆರ್ 50ʼ ಎಂಬ ಅದ್ಧೂರಿ ಸಮಾರಂಭ ಆಯೋಜಿಸಿ ರಾಜೇಂದ್ರಸಿಂಗ್ ಬಾಬು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಿದೆ. ಐದು ದಿನಗಳ ಕಾಲ ಅದ್ಧೂರಿಯಾಗಿ ಈ ಸಮಾರಂಭ ನಡೆಯಲಿದೆ.
ಸಮಾರಂಭದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ನಂಜುಂಡೇಗೌಡ, ವಿಜಯಲಕ್ಷ್ಮಿ ಸಿಂಗ್, ಸಂಗೀತ ನಿರ್ದೇಶಕ ಹಂಸಲೇಖ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಪತ್ರಕರ್ತ ಗಂಗಾಧರ್ ಮೊದಲಿಯರ್, ಲಿಂಗದೇವರು, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ಸಂಕಲನಕಾರ ಕೆಂಪರಾಜ್ ಹಾಗೂ ಸಮಾರಂಭದ ಆಯೋಜಕ ಕೃಷ್ಣೇಗೌಡ (ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ) ಉಪಸ್ಥಿತರಿದ್ದರು.
ಕರ್ನಾಟಕ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈವರೆಗೂ 50 ವರ್ಷಗಳ ಸಕ್ರಿಯವಾಗಿ ನಿರ್ದೇಶಕರಾಗಿರುವವರು ಯಾರು ಇಲ್ಲ. ಅದು ರಾಜೇಂದ್ರಸಿಂಗ್ ಬಾಬು ಅವರು ಒಬ್ಬರೆ. ಈಗಲೂ ಅವರ ನಿರ್ದೇಶನದ ಎರಡು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಈ ಸುವರ್ಣ ಸಂಭ್ರಮವನ್ನು ಸಂಭ್ರಮಿಸಲು ಅಕ್ಟೋಬರ್ 23ರಿಂದ 5 ದಿನಗಳ ಕಾಲ ʼಎಸ್‌ವಿಆರ್ 50ʼ ಎಂಬ ಅದ್ಧೂರಿ ಸಮಾರಂಭ ನಡೆಸಲಾಗುತ್ತಿದೆ. 23ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಲ್ಲಿಂದ ನಾಲ್ಕು ದಿನಗಳ ಕಾಲ ಕಲಾವಿದರ ಸಂಘದಲ್ಲಿ ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಚಿತ್ರಗಳ ಚಿತ್ರೋತ್ಸವ ನಡೆಯಲಿದೆ. ದಿನಕ್ಕೆ ಎರಡು ಚಿತ್ರಗಳ ಪ್ರದರ್ಶನವಿರುತ್ತದೆ. ಈ ಸಂದರ್ಭದಲ್ಲಿ ಕನ್ನಡ ಹಾಗೂ ಇತರ ಭಾಷೆಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
27ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ರಾಜೇಂದ್ರಸಿಂಗ್ ಬಾಬು ಅವರಿಗೆ ಚಿತ್ರರಂಗದ ಪರವಾಗಿ ಆತ್ಮೀಯವಾಗಿ ಸನ್ಮಾನ ಸಮಾರಂಭ ನಡೆಯಲಿದೆ. ಅದಕ್ಕೂ ಮುನ್ನ ಬೆ.11ರಿಂದ ಮಧ್ಯಾಹ್ನ 3 ಗಂಟೆವರಗೂ ರಾಜೇಂದ್ರಸಿಂಗ್ ಬಾಬು ಅವರ ಜನಪ್ರಿಯ ಹಾಡುಗಳ ಥೀಮ್ ಮ್ಯೂಸಿಕ್ ಬಳಸಿಕೊಂಡು ನುರಿತ ಮಾಡಲ್‌ಗಳು ಫ್ಯಾಷನ್ ಶೋ ಸಹ ನಡೆಸಲಿದ್ದಾರೆ ಇದೇ ಸಂದರ್ಭದಲ್ಲಿ ಗಂಗಾಧರ್ ಮೊದಲಿಯರ್ ಅವರು ಬರೆದಿರುವ ಪುಸ್ತಕ ಸೇರಿದಂತೆ ಎರಡು ಪುಸ್ತಕಗಳ ಬಿಡುಗಡೆ ಹಾಗೂ ಲಿಂಗದೇವರು ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರದ ಪ್ರದರ್ಶನವಿರುತ್ತದೆ. ಹಂಸಲೇಖ ಅವರ ನೇತೃತ್ವದಲ್ಲಿ ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದ ಚಿತ್ರಗಳ ಜನಪ್ರಿಯ ಹಾಡುಗಳನ್ನು ಹಂಸಲೇಖ ಅವರ ತಂಡದವರು ಹಾಡಲಿದ್ದಾರೆ. ಮುಖ್ಯಮಂತ್ರಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಮಾರಂಭದ ಆಯೋಜಕ ಕೃಷ್ಣೇಗೌಡ ತಿಳಿಸಿದರು.
ರಾಜೇಂದ್ರಸಿಂಗ್ ಬಾಬು ಅವರು ಸಿನಿಮಾ ನಿರ್ದೇಶನವನ್ನು ಹೊರತುಪಡಿಸಿ, ಚಿತ್ರರಂಗಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪನೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ʼಬೆಳ್ಳಿ ಹೆಜ್ಜೆʼ ಅಂತಹ ಕಾರ್ಯಕ್ರಮದ ಮುಂದುವರಿಕೆ ಹಾಗೂ ವಿಧಾನಸೌಧದ ಮುಂದೆ ಚಲನಚಿತ್ರೋತ್ಸವದ ಉದ್ಘಾಟನೆ ಹಾಗೂ ಮೈಸೂರಿನ ಅರಮನೆ ಬಳಿ ಸಮರೋಪ ಸಮಾರಂಭದ ಆಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಬಾಬು ಅವರು ಮಾಡಿದ್ದಾರೆ. ತಮ್ಮ ಚಿತ್ರಗಳ ಮೂಲಕವೂ ಅವರು ಎಲ್ಲರ ಮನೆ ಮಾತಾಗಿದ್ದಾರೆ. ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶಕರಾಗಿ 50 ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.
ನಾನು ರಾಜೇಂದ್ರಸಿಂಗ್ ಬಾಬು ಅವರ ಆತ್ಮೀಯ ಸ್ನೇಹಿತ. ಆದರೆ ಈ ಕಾರ್ಯಕ್ರಮಕ್ಕೆ ಅಭಿಮಾನಿ. ಮೂರು ತಲೆಮಾರುಗಳಿಂದ ಅವರ ಕುಟುಂಬ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ವಿಶೇಷವೆಂದರೆ ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಬಂದ 'ಮಹಾಕ್ಷತ್ರಿಯ' ಚಿತ್ರದ ʼಈ ಭೂಮಿ ಬಣ್ಣದ ಬುಗುರಿʼ ಹಾಡು ಏಳನೇ ತರಗತಿಯ ಪಠ್ಯವಾಗಿತ್ತು. ಮತ್ತೊಂದು ವಿಷಯ ನಮ್ಮ ಐದನಿ ಸಂಸ್ಥೆಯಿಂದ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಮೊದಲ ಪದಕವನ್ನು ಶಿವರಾಜಕುಮಾರ್ ಅವರಿಗೆ ನೀಡಲಾಗಿದೆ. ಈಗ ಎರಡನೇ ಪದಕವನ್ನು ರಾಜೇಂದ್ರಸಿಂಗ್ ಬಾಬು ಅವರಿಗೆ ನೀಡಲಾಗುವುದು ಹಾಗೂ ಸಮಾರಂಭದ ದಿನ ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಚಿತ್ರಗಳ ಜನಪ್ರಿಯ ಹಾಡುಗಳನ್ನು ನಮ್ಮ ತಂಡದವರು ಹಾಡಲಿದ್ದಾರೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಈ ಸುದ್ದಿಯನ್ನೂ ಓದಿ | Fashion Trend 2025: ಫಂಕಿ ಲುಕ್ ನೀಡುವ ವ್ರಾಪ್ ಹೆಡ್ ಬ್ಯಾಂಡ್ಸ್
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ರಾಜೇಂದ್ರಸಿಂಗ್ ಬಾಬು ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯ ಕುರಿತು ಮಾತನಾಡಿದರು.