Bigg Boss Kannada: ಬಿಗ್ ಬಾಸ್ ಕನ್ನಡ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ; ಶೋ ಬಂದ್?
Bigg Boss Kannada Jollywood Studios Close: ಕನ್ನಡ ಬಿಗ್ ಬಾಸ್ ಸೀಸನ್ 12 ಬಂದ್ ಆಗುವ ಭೀತಿ ಎದುರಾಗಿದೆ. ನಿಯಮ ಉಲ್ಲಂಘಿಸಿರುವ ಆರೋಪದಲ್ಲಿ ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್‌ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಶೋ ಆರಂಭವಾಗಿ 2ನೇ ವಾರಕ್ಕೆ ಕಾಲಿಟ್ಟಿದ್ದು, ಈಗಲೇ ಅಂತ್ಯವಾಗುತ್ತ ಎನ್ನುವ ಅನುಮಾನ ವ್ಯಕ್ತವಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್ ಡಿಯೋಸ್ & ಎಂಟರ್‌ಟೈನ್‌ಮೆಂಟ್ ಪ್ರೈ.ಲಿ. ಇದೆ.

-

ಬೆಂಗಳೂರು: ಕನ್ನಡ ಬಿಗ್ ಬಾಸ್ ಸೀಸನ್ 12 (Bigg Boss Kannada) ಆರಂಭವಾಗಿ ಬೆರಳೆಣಿಕೆಯ ದಿನಗಳಷ್ಟೇ ಆಗಿದ್ದು, ಇದೀಗ ಶೋ ಬಂದ್ ಆಗುವ ಭೀತಿ ಎದುರಾಗಿದೆ. ನಿಯಮ ಉಲ್ಲಂಘಿಸಿರುವ ಆರೋಪದಲ್ಲಿ ಬಿಗ್ ಬಾಸ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್‌ಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ರಾಮನಗರ ತಹಶೀಲ್ದಾರ್ ತೇಜಸ್ವಿನಿ ಅವರ ಜತೆ ಅಧಿಕಾರಿಗಳು ತೆರಳಿ ಮಂಗಳವಾರ (ಅಕ್ಟೋಬರ್ 7) ಬೀಗ ಹಾಕಿದ್ದಾರೆ. ಹೀಗಾಗಿ ಶೋ ಆರಂಭವಾಗಿ 1 ವಾರ ಕಳೆದಿದ್ದು, ಈಗಲೇ ಅಂತ್ಯವಾಗುತ್ತ ಎನ್ನುವ ಅನುಮಾನ ವ್ಯಕ್ತವಾಗಿದೆ. ಸದ್ಯ ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ಅಧಿಕಾರಿಗಳು, ಪೊಲೀಸರು ಸ್ಪರ್ಧಿಗಳನ್ನು ಹೊರಗೆ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.
ಶೋ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೆ ಆಯೋಜಕರು ನೋಟಿಸ್ ಪಡೆದುಕೊಳ್ಳದ ಹಿನ್ನೆಲೆಯಲ್ಲಿ ಬೀಗ ಜಡಿಯಲಾಗಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಜಾಲಿವುಡ್ ಸ್ಟುಡಿಯೋಸ್ & ಎಂಟರ್‌ಟೈನ್‌ಮೆಂಟ್ ಪ್ರೈ.ಲಿ. ಇದೆ.
ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಜಡಿದ ಅಧಿಕಾರಿಗಳು:
ಈ ಸುದ್ದಿಯನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ಏನಿದು ವಿವಾದ?
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆಯೋಜಕರು ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ನೋಟಿಸ್ ನೀಡಿತ್ತು. ಜತೆಗೆ ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ಸೂಚಿಸಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ ನಿರ್ಮಿಸಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು, ನೂರಾರು ಮಂದಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಸಾಕಷ್ಟು ತಾಜ್ಯ ಉಂಟಾಗುತ್ತದೆ. ಆದರೆ ಸಮರ್ಪಕ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎನ್ನುವ ದೂರು ಕೇಳಿ ಬಂದಿದೆ.
ಜಾಲಿವುಡ್ ಸ್ಟುಡಿಯೋ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆದಿಲ್ಲ ಎನ್ನಲಾಗಿದ್ದು, ಈ ಕಾರಣದಿಂದ ಶೋ ಆಯೋಜಕರಿಗೆ ನೋಟಿಸ್ ನೀಡಿ ಶೋ ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಈ ನೋಟಿಸ್‌ಗೆ ಬಿಗ್ ಬಾಸ್ ಆಯೋಜಕರು, ಅಧಿಕೃತರು ಉತ್ತರ ನೀಡಿಲ್ಲ ಎನ್ನಲಾಗಿದೆ.
ಜಾಲಿವುಡ್ ಸ್ಟುಡಿಯೋದಿಂದ ದೊಡ್ಡ ಪ್ರಮಾಣದ ತಾಜ್ಯ ನೀರು ಹೊರಬರುತ್ತಿದೆ. ಅದನ್ನು ಸರಿಯಾಗಿ ಸಂಸ್ಕರಿಸದ ಕಾರಣ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ತ್ಯಾಜ್ಯವನ್ನು ಕೂಡ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂಬ ಆರೋಪ ಎದ್ದಿದೆ.
ಬಿಗ್ ಬಾಸ್ ಮನೆ ಬಳಿ ಪ್ರತಿಭಟನೆ
ಈ ಮಧ್ಯೆ ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಬಳಿಯಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರಿಂದ ಶೋ ಸ್ಥಗಿತಗೊಳಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಜಾಲಿವುಡ್ ಒಳಭಾಗದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಶೋ ಶೂಟಿಂಗ್ ಸ್ಥಗಿತಗೊಳಿಸುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಶೋ ಆರಂಭದಲ್ಲಿ ವಿಘ್ನ ಎದುರಾದಂತಾಗಿದೆ.