DA Hike: ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ- ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ. 3 ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ದೀಪಾವಳಿ ಹಬ್ಬದ ವೇಳೆಗೆ ಹೆಚ್ಚಿದ ತುಟ್ಟಿ ಭತ್ಯೆಯೊಂದಿಗೆ ಸಂಬಳ ಕೈ ಸೇರಲಿದ್ದು, ವರ್ಷದಿಂದ ವರ್ಷಕ್ಕೆ ಏರುತ್ತಿರುವ ಬೆಲೆಯಿಂದಾಗಿ ತೊಂದರೆಗೆ ಒಳಗಾಗಿರುವ ಸಾಕಷ್ಟು ಮಂದಿಗೆ ಇದರ ಪ್ರಯೋಜನ ದೊರೆಯಲಿದೆ.

-

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ (central government employees and pensioners) ಒಂದು ಶುಭಸುದ್ದಿ. ತುಟ್ಟಿ ಭತ್ಯೆಯನ್ನು (dearness allowance) ಶೇ. 3 ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ (Union Cabinet) ಅನುಮೋದನೆ ನೀಡಿದೆ. ಈ ವರ್ಷದ ಆರಂಭದಲ್ಲಿ ಸರ್ಕಾರ ಶೇ. 2 ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು. ಇದನ್ನು ಮೂಲ ವೇತನ ಮತ್ತು ಪಿಂಚಣಿಯೊಂದಿಗೆ ಸೇರಿಸಿ ಶೇ. 53 ರಿಂದ 55ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಬುಧವಾರ ನಡೆದ ಸಭೆಯಲ್ಲಿ ಅನುಮೋದಿಸಲಾಗಿದೆ. ಪರಿಷ್ಕೃತ ತುಟ್ಟಿ ಭತ್ಯೆ ಜುಲೈ 1 ರಿಂದ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ. 3 ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗಿದೆ. ಇದರಿಂದ ಸುಮಾರು ಒಂದು ಕೋಟಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ. ಹಣದುಬ್ಬರದಿಂದ ಉಂಟಾಗುವ ಮನೆಯ ವೆಚ್ಚಗಳನ್ನು ಸರಿದೂಗಿಸಲು ಸರ್ಕಾರ ತನ್ನ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. ಇದರಿಂದ ಸೇವೆ ಸಲ್ಲಿಸುತ್ತಿರುವ ನೌಕರರು ಮತ್ತು ನಿವೃತ್ತ ಸಿಬ್ಬಂದಿಗೆ ಭಾರಿ ಪ್ರಯೋಜನವಾಗಲಿದೆ ಎಂದು ಹೇಳಿದೆ.
ಈ ವರ್ಷದಲ್ಲಿ ಎರಡು ಬಾರಿ ತುಟ್ಟಿ ಭತ್ಯೆ ಪರಿಷ್ಕರಣೆ ಮಾಡಲಾಗಿದೆ. ಇದನ್ನು ಕೈಗಾರಿಕಾ ಕಾರ್ಮಿಕರಿಗೆ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ದತ್ತಾಂಶವನ್ನು ಆಧರಿಸಿ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ವರ್ಷದಿಂದ ವರ್ಷಕ್ಕೆ ಏರುತ್ತಿರುವ ಬೆಲೆಯಿಂದಾಗಿ ಯಾರಿಗೂ ತೊಂದರೆಯಾಗದಿರಲಿ ಎಂದು ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಸಹಾಯ ಮಾಡಲು ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ತುಟ್ಟಿಭತ್ಯೆಯನ್ನು ಪರಿಷ್ಕರಿಸುತ್ತದೆ.
ಈ ವರ್ಷದ ಆರಂಭದಲ್ಲಿ ಅಂದರೆ ಮಾರ್ಚ್ ತಿಂಗಳಲ್ಲಿ ಸರ್ಕಾರವು ತುಟ್ಟಿ ಭತ್ಯೆಯನ್ನು ಶೇ. 2ರಷ್ಟು ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಶೇ. 3 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ 50,000 ರೂ. ಮೂಲ ವೇತನ ಹೊಂದಿರುವ ನೌಕರರಿಗೆ 26,500 ರೂ. ತುಟ್ಟಿ ಭತ್ಯೆ ದೊರೆಯಲಿದೆ. ಇದರಿಂದ ವೇತನ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದ್ದು, ಹೆಚ್ಚಿನ ಜೀವನ ವೆಚ್ಚಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Dharmasthala case: ಗಡೀಪಾರಿಗೆ ತಡೆಯಾಜ್ಞೆ ಸಿಕ್ಕರೂ ಬಂಧನ ಭೀತಿ, ಕಾಣಿಸಿಕೊಳ್ಳದ ತಿಮರೋಡಿ
ಸಚಿವ ಸಂಪುಟವು ನಿರ್ಧಾರವನ್ನು ಅಂಗೀಕರಿಸಿದರೆ ತುಟ್ಟಿ ಭತ್ಯೆ ಹೆಚ್ಚಳವು ದೀಪಾವಳಿ ಹಬ್ಬಕ್ಕಿಂತ ಮುಂಚಿತವಾಗಿ ಕೇಂದ್ರ ಸರ್ಕಾರಿ ಸಿಬ್ಬಂದಿ ಮತ್ತು ಪಿಂಚಣಿದಾರರ ಕೈ ತಲುಪಲಿದೆ. ಇದು ಗ್ರಾಹಕರ ಖರ್ಚಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.